Karnataka Politics: ಪ್ರಕರಣ ಮುಚ್ಚಿ ಹಾಕುತ್ತಿದ್ದೀರಾ? ಆರಗ ಜ್ಞಾನೇಂದ್ರ ಮೇಲೆ ಹರಿಹಾಯ್ದ ಹರಿಪ್ರಸಾದ್

ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿದ್ದಾರೆ. ನಂತರ ಅತ್ಯಾಚಾರಕ್ಕೆ ಯತ್ನಿಸಿರುವ ಅಮಾನವೀಯ, ವಿಕೃತ ಘಟನೆಯನ್ನ ತೀವ್ರವಾಗಿ ಖಂಡಿಸುತ್ತೇನೆ ಎಂದು ಬಿ.ಕೆ. ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರಗ ಜ್ಞಾನೇಂದ್ರ, ಬಿಕೆ ಹರಿಪ್ರಸಾದ್​

ಆರಗ ಜ್ಞಾನೇಂದ್ರ, ಬಿಕೆ ಹರಿಪ್ರಸಾದ್​

  • Share this:
    ಬೆಂಗಳೂರು (ಮೇ 12): ‘‘ಸ್ವಗ್ರಾಮದಲ್ಲೇ ನಡೆದಿರುವ ಅಮಾನವೀಯ ಘಟನೆ ಇಲ್ಲಿವರೆಗೆ ಗೃಹ ಸಚಿವರ (Home Minister) ಗಮನಕ್ಕೇ ಬಂದಿಲ್ಲವೇ? ಅಪಘಾತದಲ್ಲಿ ಗಲಾಟೆಯಾಗಿ ಯುವಕನ ಕೊಲೆ (Murder) ಎರಡೇ ನಿಮಿಷಕ್ಕೆ ಮಾಹಿತಿ ಸಿಗುತ್ತದೆ. ಪರಿಶಿಷ್ಟ ಜಾತಿಯವರ (Scheduled Caste) ಮೇಲೆ ನಡೆಯುವ ದೌರ್ಜನ್ಯಗಳಿಗೆ ನಿಮ್ಮ ‘ಮಾಹಿತಿಯ ಮೂಲ’ ಇನ್ನೂ ಮಾಹಿತಿಯೇ ನೀಡಿಲ್ಲವೇ? ಅಥವಾ ಸ್ಥಳೀಯ ದಲಿತ ಸಂಘರ್ಷ (Dalit Conflict) ಸಮಿತಿಯ ಮುಖಂಡರ ಆರೋಪದಂತೆ ಪ್ರಕರಣ ಮುಚ್ಚಿ ಹಾಕುವ ಯತ್ನವೇ?’’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಮೇಲೆ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಹರಿಹಾಯ್ದಿದ್ದಾರೆ.

    ಆರೋಪಿಗಳನ್ನು ಬಂಧಿಸುವಲ್ಲಿ ವಿಫಲ

    ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಸ್ವಗ್ರಾಮದಲ್ಲಿಯೇ ಪರಿಶಿಷ್ಟ ಜಾತಿಗೆ ಸೇರಿದ ದಂಪತಿಯ ಮೇಲೆ ಹಲ್ಲೆ ನಡೆಸಿ, ಅತ್ಯಾಚಾರಕ್ಕೆ ಪ್ರಯತ್ನ ನಡೆಸಲಾಗಿತ್ತು. ಈ ಪ್ರಕರಣ ನಡೆದು ಆಗಲೇ ಒಂದು ದಿನವಾಗುತ್ತ ಬಂದಿದೆ. ಆದರೂ ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಪರಿಶಿಷ್ಟ ಜಾತಿಗೆ ಸೇರಿರುವ ಕುಟುಂಬದ ಮೇಲಿನ ದಾಳಿಯನ್ನು ನ್ಯೂಸ್ 18 ಎಕ್ಸ್​ಕ್ಲೂಸಿವ್​ ಆಗಿ ಪ್ರಸಾರ ಮಾಡಿತ್ತು. ಆ ಮೂಲಕ ಇಡೀ ಪ್ರಕರಣದ ಬಗ್ಗೆ ಗೃಹಸಚಿವರ ಗಮನ ಸೆಳೆದಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಿ.ಕೆ. ಹರಿಪ್ರಸಾದ್ ರಾಜ್ಯ ಗೃಹ ಸಚಿವರನ್ನು ಇವತ್ತು ತರಾಟೆಗೆ ತೆಗೆದುಕೊಂಡಿದ್ದಾರೆ.

    2 ದಿನಗಳಾದರೂ ಪ್ರಕರಣ ದಾಖಲಿಸದ ಪೊಲೀಸರು

    ಗೃಹ ಸಚಿವ ಆರಗ ಜ್ಞಾನೇಂದ್ರರ ಸ್ವಗ್ರಾಮ, ತೀರ್ಥಹಳ್ಳಿ ತಾಲೂಕಿನ ಆರಗ ಗ್ರಾಮದಲ್ಲಿ ಪತಿ ಎದುರೇ ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿದ್ದಾರೆ. ನಂತರ ಅತ್ಯಾಚಾರಕ್ಕೆ ಯತ್ನಿಸಿರುವ ಅಮಾನವೀಯ, ವಿಕೃತ ಘಟನೆಯನ್ನ ತೀವ್ರವಾಗಿ ಖಂಡಿಸುತ್ತೇನೆ ಎಂದು ಬಿ.ಕೆ. ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇದನ್ನು ಓದಿ: ಮಳೆಗೆ ಮುರಿದು ಬಿತ್ತು ದೊಡ್ಡ ಆಲದ ಮರದ ಕೊಂಬೆ; 400 ವರ್ಷಗಳ ಇತಿಹಾಸ ಪ್ರಸಿದ್ಧ ಮರಕ್ಕೆ ಕಂಟಕ

    ಘಟನೆ ನಡೆದು 2 ದಿನಗಳಾದರೂ ಪೊಲೀಸರು ಪ್ರಕರಣ ದಾಖಲಿಸಲು ವಿಳಂಬ ಮಾಡಿರುವುದು ಯಾಕೆ? ಘಟನೆಯಲ್ಲಿ ಸಂತ್ರಸ್ತೆಯ ಪತಿಯ ಮೇಲೂ ದುಷ್ಕ್ರರ್ಮಿಗಳು ಹಲ್ಲೆ ನಡೆಸಿದ್ದಾರೆ. ಸಂಪತ್, ಆದರ್ಶ ಹಾಗೂ ಇನ್ನಿಬ್ಬರು ಯುವಕರಿಬ್ಬರು ಬೈಕ್ ಮೇಲೆ ಬಂದು ದುಷ್ಕ್ರತ್ಯ ಎಸೆಗಿದ್ದಾರೆಂದು ಸಂತ್ರಸ್ತರೇ ಗುರುತಿಸಿರುವಾಗ ಇಲ್ಲಿವರೆಗೂ ಪೊಲೀಸರು ಬಂಧಿಸದಿರುವುದಕ್ಕೆ ಕಾರಣವೇನು? ಎಂದು ಬಿ.ಕೆ. ಹರಿಪ್ರಸಾದ್ ಅವರು ಗೃಹ ಇಲಾಖೆಯನ್ನು ಪ್ರಶ್ನೆ ಮಾಡಿದ್ದಾರೆ.

    ಪ್ರಕರಣ ಮುಚ್ಚಿ ಹಾಕುತ್ತಿದ್ದೀರಾ?

    ಸ್ವಗ್ರಾಮದಲ್ಲೇ ನಡೆದಿರುವ ಅಮಾನವೀಯ ಘಟನೆ ಇಲ್ಲಿವರೆಗೆ ಗೃಹ ಸಚಿವರ ಗಮನಕ್ಕೇ ಬಂದಿಲ್ಲವೇ? ಅಪಘಾತದಲ್ಲಿ ಗಲಾಟೆಯಾಗಿ ಯುವಕನ ಕೊಲೆ ಎರಡೇ ನಿಮಿಷಕ್ಕೆ ಮಾಹಿತಿ ಸಿಗುತ್ತೆ. ದಲಿತರ ಮೇಲೆ ನಡೆಯುವ ದೌರ್ಜನ್ಯಗಳಿಗೆ ನಿಮ್ಮ ‘ಮಾಹಿತಿಯ ಮೂಲ’ ಇನ್ನೂ ಮಾಹಿತಿಯೇ ನೀಡಿಲ್ಲವೇ? ಅಥವಾ ಸ್ಥಳೀಯ ದಲಿತ ಸಂಘರ್ಷ ಸಮಿತಿಯ ಮುಖಂಡರ ಆರೋಪದಂತೆ ಪ್ರಕರಣ ಮುಚ್ಚಿ ಹಾಕುವ ಯತ್ನವೇ?

    ದುಷ್ಕ್ರರ್ಮಿಗಳ ಅಟ್ಟಹಾಸವನ್ನ ಮಟ್ಟ ಹಾಕಬೇಕಿದೆ. ಸಂತ್ರಸ್ತರ ಶೋಷಿತ ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಎಸ್​ಸಿ, ಎಸ್​​ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕೂಡಲೇ ಆರೋಪಿಗಳನ್ನ ಬಂಧಿಸಬೇಕು. ಸಂತ್ರಸ್ತೆ ಹಾಗೂ ಕುಟುಂಬಸ್ಥರಿಗೆ ಸೂಕ್ತ ರಕ್ಷಣೆ ಕೊಡಬೇಕು. ಹಾಗೂ ಮಹಿಳಾ ಆಯೋಗ ಸುಮೋಟೋ ಪ್ರಕರಣ ದಾಖಲಿಸಿಕೊಂಡು ಮಹಿಳೆ ರಕ್ಷಣೆಗೆ ಧಾವಿಸಬೇಕೆಂದು ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಆಗ್ರಹಿಸಿದ್ದಾರೆ.

    ಇದನ್ನು ಓದಿ:  ಗೋವಾದ ರೆಸಾರ್ಟ್‌ನಲ್ಲಿ ರಷ್ಯಾ ಬಾಲಕಿ ಮೇಲೆ ಅತ್ಯಾಚಾರ; ಗದಗದಲ್ಲಿ ಸಿಕ್ಕಿಬಿದ್ದ ಆರೋಪಿ

    ಪ್ರಕರಣದ ಹಿನ್ನೆಲೆ ಏನು?

    ಆರಗದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ದಂಪತಿಯನ್ನು ಥಳಿಸಿ, ಪತ್ನಿಯನ್ನು ಬೆತ್ತಲೆಗೊಳಿಸಿ ಅತ್ಯಾಚಾರಕ್ಕೆ ದುಷ್ಕರ್ಮಿಗಳು ಯತ್ನಿಸಿದ್ದ ಪ್ರಕರಣ ನಡೆದಿತ್ತು. ಆ ಪ್ರಕರಣ ತಡವಾಗಿ ನಿನ್ನೆ ಬೆಳಕಿಗೆ ಬಂದಿತ್ತು. ಅತ್ಯಾಚಾರಕ್ಕೆ ಯತ್ನಿಸಿದವರು ಮೇಲ್ವರ್ಗಕ್ಕೆ ಸೇರಿದ ದುಷ್ಕರ್ಮಿಗಳು ಎಂಬ ಮಾಹಿತಿಯಿದೆ. ಗಂಡನ ಮೇಲೆ ಆಗುತ್ತಿದ್ದ ಹಲ್ಲೆ ತಪ್ಪಿಸಲು ಹೋದ ಮಹಿಳೆಯನ್ನು ರಬ್ಬರ್ ಪ್ಲಾಟೆಂಷನ್ ಎಳೆದುಕೊಂಡು ಹೋಗಿ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಾಗ ಆ ಮಹಿಳೆ ಕೂಗಿಕೊಂಡಿದ್ದರಿಂದ ಬಚಾವಾಗಿದ್ದಳು. ನಂತರ ನಮಗೆ ರಕ್ಷಣೆ ಹಾಗೂ ನ್ಯಾಯ ಕೊಡಿ ಎಂದು ಪೊಲೀಸರಿಗೆ ಕುಟುಂಬ ದೂರು ನೀಡಿದೆ. ಜೊತೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಪಡೆದುಕೊಳ್ಳುತ್ತಿದೆ ಎಂಬ ಮಾಹಿತಿಯಿದೆ.

    ವರದಿ; ಅನಿಲ್​ ಬಾಸೂರು
    Published by:Pavana HS
    First published: