• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • ವಸತಿ ಯೋಜನೆ: ಗುಂಡ್ಲುಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದಲೇ ಫಲಾನುಭವಿಗಳ ಪಟ್ಟಿ ತಯಾರು ಆರೋಪ

ವಸತಿ ಯೋಜನೆ: ಗುಂಡ್ಲುಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದಲೇ ಫಲಾನುಭವಿಗಳ ಪಟ್ಟಿ ತಯಾರು ಆರೋಪ

ಗುಂಡ್ಲುಪೇಟೆ ತಾಲೂಕು ಕಚೇರಿ

ಗುಂಡ್ಲುಪೇಟೆ ತಾಲೂಕು ಕಚೇರಿ

ಈ ಬಗ್ಗೆ ಪ್ರತಿಕ್ರಿಯಿಸಿರುವ ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್, ನಮಗೆ ಗಿಮಿಕ್ ಮಾಡುವ ಅನಿವಾರ್ಯತೆ ಇಲ್ಲ. ಅದನ್ನು ಕೆಲಸ ಇಲ್ಲದವರು  ಮಾಡಬೇಕಷ್ಟೆ, ನಮ್ಮ ಕ್ಷೇತ್ರದಲ್ಲಿ ಇನ್ನು ಗುಡಿಸಲುಗಳಿವೆ.

 • Share this:

ಚಾಮರಾಜನಗರ (ನ.02) ಗ್ರಾಮೀಣ ಪ್ರದೇಶದಲ್ಲಿ ವಸತಿ ರಹಿತರಿಗೆ  ಮನೆ ಮಂಜೂರು ಮಾಡಲು ಫಲಾನುಭವಿಗಳನ್ನು ಗ್ರಾಮ ಸಭೆಯಲ್ಲೇ ಆಯ್ಕೆ ಮಾಡಬೇಕೆಂಬ ನಿಯಮವಿದೆ. ಆದರೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರೆ ಫಲಾನುಭವಿಗಳ ಪಟ್ಟಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ಈ ಪಟ್ಟಿಗೆ  ಗ್ರಾಮಪಂಚಾಯ್ತಿ ಆಡಳಿತಾಧಿಕಾರಿ ಹಾಗೂ ಪಿಡಿಒಗಳಿಂದ  ಬಲವಂತವಾಗಿ ಸಹಿ ಹಾಕಿಸಲಾಗುತ್ತಿದೆ  ಎಂಬ ಗಂಭೀರ ಆರೋಪ ಕೇಳಿಬಂದಿದೆ. ವಸತಿ ಯೋಜನೆಗೆ ಫಲಾನುಭವಿಗಳನ್ನು ಆಯ್ಕೆ ಮಾಡುವಂತೆ  ವಸತಿ ಸಚಿವ ವಿ.ಸೋಮಣ್ಣ ಕಳೆದ ಆಗಸ್ಟ್ 27 ರಂದು ರಾಜ್ಯದ ಎಲ್ಲಾ ಶಾಸಕರುಗಳಿಗೆ  ಪತ್ರ ಬರೆದಿದ್ದರು.  ನಿಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪ್ರತಿ  ಗ್ರಾಮಪಂಚಾಯ್ತಿಗೆ  ತಲಾ 20 ಮನೆಗಳಂತೆ ಅರ್ಹ ಹಾಗೂ ನೈಜ ಫಲಾನುಭವಿಗಳ ಪಟ್ಟಿಯನ್ನು  ಸಂಬಂಧಪಟ್ಟ ಅಧಿಕಾರಿಗಳ ಸಮನ್ವಯದೊಂದಿಗೆ ತಮ್ಮ ಉಸ್ತುವಾರಿಯಲ್ಲಿ ತಯಾರಿಸಿ ನೀಡಿ, ಆಗ ಪ್ರಧಾನಮಂತ್ರಿ ಆವಾಸ್ ಯೋಜನೆ(ಗ್ರಾಮೀಣ) ಯಡಿ ಗ್ರಾಮೀಣ ಭಾಗದ ವಸತಿ ರಹಿತರಿಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ ಮನೆ ಮಂಜೂರಾತಿಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದರು. 


ಅಲ್ಲದೆ  ವಸತಿರಹಿತರ ಆಯ್ಕೆಪಟ್ಟಿಯನ್ನು  ಸಂಬಂಧಪಟ್ಟ ಅಧಿಕಾರಿಗಳ ವಸ್ತುನಿಷ್ಠ ಹಾಗೂ ದೃಢೀಕೃತ ವರದಿಯೊಂದಿಗೆ ಸಮುಚಿತ ಮಾರ್ಗದಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕೆಂದು ಅವರು ತಿಳಿಸಿದ್ದರು.  ಆದರೆ ಗುಂಡ್ಲುಪೇಟೆ ಕ್ಷೇತ್ರದಲ್ಲಿ   ಬಿಜೆಪಿ ಶಾಸಕ ನಿರಂಜನ್ ಕುಮಾರ್ ತಮ್ಮ ಕಾರ್ಯಕರ್ತರ ಮೂಲಕ ಅಕ್ರಮವಾಗಿ ಫಲಾನುಭವಿಗಳ ಪಟ್ಟಿ ತಯಾರಿಸುತ್ತಿದ್ದಾರೆಂದು  ಗುಂಡ್ಲುಪೇಟೆ ತಾಲೂಕು ಪಂಚಾಯ್ತಿ ಅಧ್ಯಕ್ಷ ಮಧುಶಂಕರ್ ಆರೋಪಿಸಿದ್ದಾರೆ.


ಆರ್​ಆರ್​​ ನಗರ ಉಪಚುನಾವಣೆ: ನ.4ರವರೆಗೆ ನಿಷೇಧಾಜ್ಞೆ, ನಾಳೆವರೆಗೆ ಮದ್ಯ ಮಾರಾಟ ನಿಷೇಧ


ಫಲಾನುಭವಿಗಳನ್ನು ವಾರ್ಡ್ ಮಟ್ಟದಲ್ಲಿ ಆಯ್ಕೆ ಮಾಡಿ, ನಂತರ ಅದನ್ನು ಗ್ರಾಮ ಸಭೆಯಲ್ಲಿ ಓದಿ, ಬಳಿಕ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆದು ಸರ್ಕಾರಕ್ಕೆ ಕಳುಹಿಸಬೇಕು. ಆದರೆ ಇಲ್ಲಿ  ಸಚಿವರ ಪತ್ರ ಹೊರತುಪಡಿಸಿದರೆ ಸರ್ಕಾರದ ಯಾವುದೇ  ಅಧಿಕೃತ ಅಧಿಸೂಚನೆಯಾಗಲಿ, ಮಾರ್ಗಸೂಚಿಯಾಗಲಿ  ಇಲ್ಲ, ಮುಂಬರುವ ಗ್ರಾಮಪಂಚಾಯ್ತಿ ಚುನಾವಣೆ ಹಿನ್ನಲೆಯಲ್ಲಿ ಶಾಸಕರು ಗಿಮಿಕ್ ಮಾಡಲು ಹೊರಟಿದ್ದಾರೆ ಎಂದು ಅವರು ಆಪಾದಿಸಿದ್ದಾರೆ.


ಈ ಬಗ್ಗೆ ನ್ಯೂಸ್ 18ನೊಂದಿಗೆ ಮಾತನಾಡಿದ ಹೆಸರು ಹೇಳಲಿಚ್ಚಿಸದ ಗ್ರಾ.ಪಂ. ಪಿಡಿಓ ಒಬ್ಬರು, ಬಿಜೆಪಿ ಕಾರ್ಯಕರ್ತರೇ ಪಟ್ಟಿ ತಯಾರಿಸುತ್ತಿರುವುದು ನಿಜ, ಅಲ್ಲದೆ ಈ  ಪಟ್ಟಿಗೆ ಸಹಿ ಹಾಕುವಂತೆ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ. ಅಲ್ಲದೆ ಶಾಸಕರೇ ಫೋನ್ ಮಾಡಿ ಒತ್ತಡ ತರುತ್ತಿದ್ದಾರೆ. ಇವರ ಒತ್ತಡಕ್ಕೆ ಮಣಿದು ಸಹಿ ಹಾಕಿ ಮುಂದಿನ ದಿನಗಳಲ್ಲಿ  ಕಾನೂನು ತೊಡಕಾದರೆ,  ನಾವೇ ಬಲಿಪಶುಗಳಾಗಬೇಕಾಗುತ್ತದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.


ಈ ಬಗ್ಗೆ ಪ್ರತಿಕ್ರಿಯಿಸಿರುವ ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್, ನಮಗೆ ಗಿಮಿಕ್ ಮಾಡುವ ಅನಿವಾರ್ಯತೆ ಇಲ್ಲ. ಅದನ್ನು ಕೆಲಸ ಇಲ್ಲದವರು  ಮಾಡಬೇಕಷ್ಟೆ, ನಮ್ಮ ಕ್ಷೇತ್ರದಲ್ಲಿ ಇನ್ನು ಗುಡಿಸಲುಗಳಿವೆ. ಈಗ ಸಚಿವರು ನನ್ನ ಕೋರಿಕೆ ಮೇರೆಗೆ ಹೆಚ್ಚುವರಿ ಮನೆಗಳನ್ನು ನೀಡುವುದಾಗಿ ತಿಳಿಸಿದ್ದಾರೆ. ಹಾಗಾಗಿ ನಿಜವಾದ ವಸತಿಹೀನರು ಯಾರಿದ್ದಾರೆ ಎಂಬುದರ ಬಗ್ಗೆ ನಮ್ಮ ಕಾರ್ಯಕರ್ತರ ಮೂಲಕ ಪಟ್ಟಿ ಮಾಡಿಸುತ್ತಿದ್ದೇವೆ, ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶಗಳಿಲ್ಲ ಎಂದು ತಿಳಿಸಿದ್ದಾರೆ.

top videos


  ನಾನು ಯಾರ ಮೇಲೂ ಒತ್ತಡ ತಂದಿಲ್ಲ, ಇಷ್ಟು ವರ್ಷ ಆಡಳಿತ ನಡೆಸಿದವರು ನಿಷ್ಪಕ್ಷಪಾತವಾಗಿಯೇ ಮಾಡಿದ್ದಾರಾ? ಅವರು ರಾಜಕೀಯ ಮಾಡೇ ಇಲ್ವಾ? ಅವರು ರಾಜಕೀಯ ಮಾಡಿದಂತೆ ತಾನೆ ಬೇರೆಯವರು ಮಾಡ್ತಾರೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡ ಶಾಸಕ ನಿರಂಜನ್ ಕುಮಾರ್, ನಾವು ನಿಜವಾದ ಬಡವರನ್ನೇ ಅಯ್ಕೆ ಮಾಡುತ್ತೇವೆ,ಇಲ್ಲಿ  ರಾಜಕೀಯ ಮಾಡುವ ಅವಶ್ಯಕತೆ ಎಲ್ಲ ಎಂದು ತಿಳಿಸಿದ್ದಾರೆ.


  ಒಟ್ಟಾರೆ ಗ್ರಾಮಪಂಚಾಯ್ತಿ ಚುನಾವಣೆ ಸಮೀಪಿಸುತ್ತಿರುವ  ಈ ಸಂದರ್ಭದಲ್ಲಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ವಸತಿಹೀನ ಫಲಾನುಭವಿಗಳ ಆಯ್ಕೆಯು ಸಹ ರಾಜಕೀಯ ಮೇಲಾಟಗಳಿಗೆ ಕಾರಣವಾಗಿರುವುದು ವಿಪರ್ಯಾಸವಾಗಿದೆ.

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು