HOME » NEWS » State » BJP WON IN KALABURGI AND YADAGIRI DCC BANK ELECTION CONGRESS DEFEAT SAKLB HK

ಕಾಂಗ್ರೆಸ್ ಬಹುಮತವಿದ್ದ ಡಿಸಿಸಿ ಬ್ಯಾಂಕ್ ಬಿಜೆಪಿ ತೆಕ್ಕೆಗೆ : ವಾಮ ಮಾರ್ಗಕ್ಕೆ ಕಾಂಗ್ರೆಸ್ ಆಕ್ರೋಶ

ಬಹುಮತಕ್ಕೆ ಒಂಬತ್ತು ಸದಸ್ಯರ ಬೆಂಬಲ ಬೇಕಿದ್ದರಿಂದ ಕಾಂಗ್ರೆಸ್ ಅಧಿಕಾರ ಗದ್ದುಗೆ ಏರುತ್ತದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ರಾತ್ರೋರಾತ್ರಿ ತಂತ್ರ ಹೆಣೆದ ಬಿಜೆಪಿ ಮೂವರು ಚುನಾಯಿತ ಸದಸ್ಯರ ಅನರ್ಹತೆ ಅಸ್ತ್ರ ಬಳಸಿ, ಅಧಿಕಾರ ಗದ್ದುಗೆ ಏರಲು ಹಾದಿ ಸುಗಮ ಮಾಡಿಕೊಂಡಿದೆ

news18-kannada
Updated:January 8, 2021, 7:09 PM IST
ಕಾಂಗ್ರೆಸ್ ಬಹುಮತವಿದ್ದ ಡಿಸಿಸಿ ಬ್ಯಾಂಕ್ ಬಿಜೆಪಿ ತೆಕ್ಕೆಗೆ : ವಾಮ ಮಾರ್ಗಕ್ಕೆ ಕಾಂಗ್ರೆಸ್ ಆಕ್ರೋಶ
ನೂತನ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ,ಉಪಾಧ್ಯಕ್ಷರಾಗಿ ಸುರೇಶ್ ಸಜ್ಜನ್
  • Share this:
ಕಲಬುರ್ಗಿ (ಜನವರಿ.08): ಕಲಬುರ್ಗಿ - ಯಾದಗಿರಿ ಡಿಸಿಸಿ ಬ್ಯಾಂಕ್ ಬಿಜೆಪಿ ತೆಕ್ಕೆಗೆ ಬಂದಿದೆ. ಕಾಂಗ್ರೆಸ್ ಪಕ್ಷ ಬಹುಮತ ಗಳಿಸಿದ್ದರೂ, ಕೊನೆಯ ಕ್ಷಣದಲ್ಲಿ ಅನರ್ಹತೆ ತಂತ್ರ ಹೆಣೆದ ಬಿಜೆಪಿ ಅಧಿಕಾರಿ ಗದ್ದುಗೆ ಏರುವಲ್ಲಿ ಯಶಸ್ವಿಯಾಗಿದೆ. ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅಧ್ಯಕ್ಷರಾಗಿ, ಸುರೇಶ್ ಸಜ್ಜನ್ ಉಪಾಧ್ಯಕ್ಷರಾಗಿ, ಶಿವಾನಂದ ಮಾನಕರ್ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ವಾಮ ಮಾರ್ಗದ ಮೂಲಕ ಅಧಿಕಾರ ಗದ್ದುಗೆ ಏರಿದೆ ಎಂದು ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ. ದಶಕಗಳ ಕಾಲ ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಕಲಬುರ್ಗಿ - ಯಾದಗಿರಿ ಡಿಸಿಸಿ ಬ್ಯಾಂಕ್ ನಲ್ಲಿ ಕಮಲ ಅರಳಿದೆ. ನೂತನ ಅಧ್ಯಕ್ಷರಾಗಿ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಹಾಗೂ ಉಪಾಧ್ಯಕ್ಷರಾಗಿ ಸುರೇಶ್ ಸಜ್ಜನ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನ ಒಂಬತ್ತು ಸದಸ್ಯರು ಆಯ್ಕೆಯಾಗಿದ್ದರೆ ಬಿಜೆಪಿ ಕೇವಲ ನಾಲ್ಕು ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು. ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಸೇರಿ ಮೂವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ಮಾಡಲಾಗಿತ್ತು.

ನಾಮನಿರ್ದೇಶಿತ ಸದಸ್ಯರೂ ಸೇರಿ ಬಿಜೆಪಿಯ ಸಂಖ್ಯೆ ಏಳಕ್ಕೆ ಏರಿಕೆಯಾಗಿತ್ತು. ಬಹುಮತಕ್ಕೆ ಒಂಬತ್ತು ಸದಸ್ಯರ ಬೆಂಬಲ ಬೇಕಿದ್ದರಿಂದ ಕಾಂಗ್ರೆಸ್ ಅಧಿಕಾರ ಗದ್ದುಗೆ ಏರುತ್ತದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ರಾತ್ರೋರಾತ್ರಿ ತಂತ್ರ ಹೆಣೆದ ಬಿಜೆಪಿ ಮೂವರು ಚುನಾಯಿತ ಸದಸ್ಯರ ಅನರ್ಹತೆ ಅಸ್ತ್ರ ಬಳಸಿ, ಅಧಿಕಾರ ಗದ್ದುಗೆ ಏರಲು ಹಾದಿ ಸುಗಮ ಮಾಡಿಕೊಂಡಿದೆ. ಕಾಂಗ್ರೆಸ್ ನಿಂದ ಬಸವರಾಜ ಅಣ್ಣಾರಾವ್ ಪಾಟೀಲ ಅಧ್ಯಕ್ಷ ಸ್ಥಾನಕ್ಕೆ, ಸಿದ್ಧರಾಮರೆಡ್ಡಿ ಪಾಟೀಲ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದರು. ಬಿಜೆಪಿ ಅಭ್ಯರ್ಥಿಗಳಿಗೆ ಒಂಬತ್ತು ಮತ್ತು ಕಾಂಗ್ರೆಸ್ ಅಭ್ಯರ್ಥಿಗಳಿಗೆ ನಾಲ್ಕು ಮತ ಬಿದ್ದಿದ್ದು, ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳು ಕ್ರಾಸ್ ಓಟಿಂಗ್ ಮಾಡಿರೋದು ಬೆಳಕಿಗೆ ಬಂದಿದೆ.

ಐದು ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಗಳಿಗೆ ಗೆಲುವಾಗಿದ್ದು, ವಿಜೇತ ಅಭ್ಯರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಡಿಸಿಸಿ ಬ್ಯಾಂಕ್ ಮೂಲಕ ರೈತರ ಕಲ್ಯಾಣ ಮಾಡಲು ಅಧ್ಯಕ್ಷ ಸ್ಥಾನಕ್ಕೇರಿದ್ದೇನೆ. ಬ್ಯಾಂಕ್ ಸದ್ಯ ಆರ್ಥಿಕ ಸಂಕಷ್ಟದಲ್ಲಿದ್ದು, ರಾಜ್ಯ ಸರ್ಕಾರದ ನೆರವು ಪಡೆಯುತ್ತೇನೆ. ಡಿಸಿಸಿ ಬ್ಯಾಂಕ್ ಗೆ 500 ಕೋಟಿ ರೂಪಾಯಿ ನೆರವು ನೀಡುವಂತೆ ಸಿಎಂ ಬಳಿ ನಿಯೋಗ ಕೊಂಡೊಯ್ಯುತ್ತೇನೆ. ರೈತರ ಕಲ್ಯಾಣಕ್ಕೆ ಶ್ರಮಿಸುತ್ತೇನೆ ಎಂದು ನೂತನ ಅಧ್ಯಕ್ಷ ರಾಜಕುಮಾರ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಎಫ್​​ಐಆರ್​ ದಾಖಲು

ಬಿಜೆಪಿಯ ಅನರ್ಹತೆಯ ಅಸ್ತ್ರಕ್ಕೆ ಕಾಂಗ್ರೆಸ್ ನಾಯಕರು ಕಿಡಿ ಕಾರಿದ್ದಾರೆ. ಗೌತಮ ಪಾಟೀಲ್, ಸೋಮಶೇಖರ ಗೋನಾಯಕ್, ಬಾಪುಗೌಡ ಪಾಟೀಲ್ ಸದಸ್ಯತ್ವ ಅನರ್ಹಗೊಳಿಸಲಾಗಿದೆ.  ಬಿಜೆಪಿ ಬಹುಮತ ಗಳಿಸುವಲ್ಲಿ ವಿಫಲವಾಗಿತ್ತು. ಹೀಗಾಗಿ ಅಧಿಕಾರಕ್ಕಾಗಿ ವಾಮ ಮಾರ್ಗ ಅನುಸರಿಸಿದೆ. ರಾತ್ರೋರಾತ್ರಿ ಮುವ್ವರು ಸದಸ್ಯರನ್ನು ಅನರ್ಹಗೊಳಿಸಿದೆ. ಅಧಿಕಾರ ದಾಹದಲ್ಲಿ ಬಿಜೆಪಿ ಹೊಲಸು ರಾಜಕೀಯ ಮಾಡುತ್ತಿದೆ. ಅನರ್ಹತೆ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲು ಏರುವುದಾಗಿ ಅನರ್ಹಗೊಂಡ ನಿರ್ದೇಶಕ ಸೋಮಶೇಖರ ಗೋನಾಯಕ್ ತಿಳಿಸಿದ್ದಾರೆ.

ಸಿಎಂ ಬೀಗ ಮಾನಕರ್ ಅಪೆಕ್ಸ್ ಬ್ಯಾಂಕ್ ನಿರ್ದೇಶಕ

ಸಿಎಂ ಯಡಿಯೂರಪ್ಪ ಅವರ ಬೀಗ, ವಿಜಯೇಂದ್ರ ಅವರ ಮಾವ ಶಿವಾನಂದ ಮಾನಕರ್ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಇದೇ ವೇಳೆ ಆಯ್ಕೆಯಾಗಿದ್ದಾರೆ. ಶಿವಾನಂದ ಮಾನಕರ್ ಟಿಎಪಿಸಿಎಂಎಸ್ ಹಾಗೂ ಸಂಸ್ಕರಣಾ ಸಹಕಾರ ಸಂಘದಿಂದ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಇಂದು ನಡೆದ ಚುನಾವಣೆಯಲ್ಲಿ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾನೆ. ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಡಿಸಿಸಿ ಬ್ಯಾಂಕ್ ಎದುರು ವಿಜಯೋತ್ಸವ ಆಚರಿಸಿದರು.

ಸ್ಥಳದಲ್ಲಿ ಉಪಸ್ಥಿತರಿದ್ದ ಸಂಸದ ಉಮೇಶ್ ಜಾಧವ್, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಮತ್ತಿತರರು ನೂತನ ಅಧ್ಯಕ್ಷ, ಉಪಾಧ್ಯಕ್ಷ, ಅಪೆಕ್ಸ್ ಬ್ಯಾಂಕ್ ನಿರ್ದೇಶಕರನ್ನು ಅಭಿನಂದಿಸಿದರು.

ವರದಿ: ಶಿವರಾಮ ಅಸುಂಡಿ
Published by: G Hareeshkumar
First published: January 8, 2021, 7:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories