ಬೆಂಗಳೂರು: ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಅವಕಾಶ ನೀಡುವ ವ್ಯವಸ್ಥೆ ಇರುವುದು ಭಾರತೀಯ ಜನತಾ ಪಕ್ಷದಲ್ಲಿ ಮಾತ್ರ. ಸಾಮಾನ್ಯ ಕಾರ್ಯಕರ್ತರಿಗೂ ಅವಕಾಶ ಸಿಕ್ಕಾಗ ಅಧಿಕಾರ ನೀಡಲಾಗುತ್ತದೆ ಎಂಬುದಕ್ಕೆ ರಾಜ್ಯಸಭೆ ಅಭ್ಯರ್ಥಿ ಆಯ್ಕೆಯೇ ನಿದರ್ಶನ. ನಿಷ್ಠೆ, ಪ್ರಾಮಾಣಿಕತೆ ಮತ್ತು ನಂಬಿಕೆಗೆ ಬಿಜೆಪಿ ಪ್ರಾಮುಖ್ಯತೆ ನೀಡುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚುವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಲಾಲ್ ಬಾಗ್ ನ ಡಾ. ಎಂ.ಎಚ್. ಮರೀಗೌಡ ಸಭಾಂಗಣದಲ್ಲಿ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕೆ.ವಿ. ನಾಗರಾಜು ಪದಗ್ರಹಣ ಸಮಾರಂಭದಲ್ಲಿ ಬುಧವಾರ ಪಾಲ್ಗೊಂಡು ಅವರು ಮಾತನಾಡಿದರು. ಪಕ್ಷದ ನಾನಾ ಹಂತಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಕಾರ್ಯಕರ್ತರ ಕಾರ್ಯ ವೈಖರಿಯನ್ನು ಗಮನಿಸಲಾಗುತ್ತಿರುತ್ತದೆ. ಅವಕಾಶ ಸಿಕ್ಕಾಗ ಆದ್ಯತೆ ಮೇರೆಗೆ ಪ್ರತಿಯೊಬ್ಬರಿಗೂ ಅವಕಾಶ ಕಲ್ಪಿಸಲಾಗುತ್ತದೆ. ಎಲ್ಲರಿಗೂ ಒಂದೇ ಸಲ ಅವಕಾಶ ಸಾಧ್ಯವಿಲ್ಲ. ಆದರೆ ಎಲ್ಲರಿಗೂ ಒಂದಲ್ಲಾ ಒಂದು ಅವಕಾಶ ಸಿಕ್ಕೇ ಸಿಗುತ್ತದೆ ಎಂದರು.
ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಥಳೀಯ ನಾಯಕರಿಗೆ ಅವಕಾಶ ನೀಡಲಾಗುತ್ತಿದೆ. ಅಭ್ಯರ್ಥಿಗಳನ್ನು ನೀವೇ ಆಯ್ಕೆ ಮಾಡಿಕೊಳ್ಳಬೇಕು. ಶಿಕ್ಷಿತರು, ಸಮಾಜಮುಖಿ ಚಿಂತನೆ ಇದ್ದವರನ್ನು ಆಯ್ಕೆ ಮಾಡಿದರೆ ಅಭಿವೃದ್ಧಿ ಸಾಧ್ಯವಿದೆ. ಮೇಲಿನಿಂದ ಅಭ್ಯರ್ಥಿಗಳನ್ನು ಹೇರಿಕೆ ಮಾಡುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಎರಡು ವರ್ಷಗಳ ಹಿಂದೆ ಹಾಲು ಒಕ್ಕೂಟದ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಲ್ಲಿ ನಾಗರಾಜು ಅವರು ಸೋಲು ಅನುಭವಿಸಿದಾಗ ಮನಸ್ಸಿಗೆ ನೋವಾಗಿತ್ತು. ಅವರನ್ನು ಅದಕ್ಕಿಂತಲೂ ದೊಡ್ಡ ಮಟ್ಟದ ವೇದಿಕೆಯ ಅಧಿಕಾರ ದೊರಕಿಸಬೇಕು ಎಂದು ನಿಶ್ಚಯಿಸಿದ್ದೆ. ಮುಖ್ಯಮಂತ್ರಿ ಯವರ ಬಳಿ ಮನವಿಯನ್ನು ಮಾಡಿದ್ದೆ. ಕೃಷಿ ಹಿನ್ನೆಲೆಯ ಅವರನ್ನು ಮುಖ್ಯಮಂತ್ರಿ ಅವರು ಮಾವು ನಿಗಮಕ್ಕೆ ನೇಮಕ ಮಾಡಿದ್ದಾರೆ. ಇವತ್ತು ತಮಗೆ ಸಮಾಧಾನವಾಗಿದೆ. ಇದೇ ರೀತಿ ಎಲ್ಲಾ ನಿಷ್ಠಾವಂತರಿಗೆ ಅವಕಾಶವನ್ನು ನೀಡಲಾಗುವುದು ಎಂದರು.
ರಾಜ್ಯದಲ್ಲಿ ಮಾವು ಬೆಳೆಗಾರರಿಗೆ ನಿಗಮದಿಂದ ಹೆಚ್ಚಿನ ಪ್ರಯೋಜನ ಆಗಬೇಕಿದೆ. ತಳಿ ಆಯ್ಕೆಯಿಂದ ಮಾರುಕಟ್ಟೆ ಒದಗಿಸುವತನಕ ನಿಗಮವು ಬೆಳೆಗಾರ ಮತ್ತು ಗ್ರಾಹಕರಿಗೆ ಸೇತುವೆಯಂತೆ ಕಾರ್ಯ ನಿರ್ವಹಿಸಬೇಕಿದೆ. ವಯಸ್ಸಿನ ಬೇಧವಿಲ್ಲದೆ ಎಲ್ಲರೂ ತಿನ್ನುವ ಮಾವಿನಹಣ್ಣಿಗೆ ವಿದೇಶಿ ಮಾರುಕಟ್ಟೆ ಒದಗಿಸುವ ಕೆಲಸ ಆಗಬೇಕು. ನಿಗಮಕ್ಕೆ ಹೆಚ್ವಿನ ಅನುದಾನ ಸೇರಿದಂತೆ ಎಲ್ಲಾ ರೀತಿಯ ನೆರವನ್ನೂ ದೊರಕಿಸಿಕೊಡುವುದಾಗಿ ಸಚಿವ ಸುಧಾಕರ್ ಭರವಸೆ ನೀಡಿದರು.
ಇದನ್ನು ಓದಿ: ಕೋವಿಡ್ ಲಸಿಕೆ ವಿತರಣೆಗೆ ರಾಜ್ಯದಲ್ಲಿ ಸಿದ್ಧತೆ ಪೂರ್ಣ, ಉಚಿತ ಚಿಕಿತ್ಸೆ; ಆರೋಗ್ಯ ಸಚಿವ ಡಾ.ಕೆ.ಸುಧಾಕರ್
ನಿಗಮದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಾಗರಾಜು ಅವರು ಮಾತನಾಡಿ, ಸಹಕಾರ ಕ್ಷೇತ್ರದಲ್ಲಿನ ಅನುಭವ ಮತ್ತು ಮಾವು ಬೆಳೆಗಾರರ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು ಕರ್ತವ್ಯ ನಿರ್ವಹಿಸುವುದಾಗಿ ಹೇಳಿದರು. ತಮಗೆ ಈ ಅವಕಾಶ ದೊರಕಿಸಿಕೊಟ್ಟಿರುವ ಸಿಎಂ ಮತ್ತು ಸಚಿವ ಸುಧಾಕರ್ ಅವರ ನಂಬಿಕೆಗೆ ಚ್ಯುತಿಯಾಗದಂತೆ ಕಾರ್ಯ ನಿರ್ವಹಿಸುತ್ತೇನೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ