ದೇವೇಗೌಡರ ತವರು, ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮುತ್ತಿರುವ ಕಮಲ

ಬಿಜೆಪಿ ನೂತನ ಜಿಲ್ಲಾಧ್ಯಕ್ಷರಾಗಿ ಬೇಲೂರು ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಹುಲ್ಲಹಳ್ಳಿ ಸುರೇಶ್ ಎಂಬುವರು ಅಧಿಕಾರ ವಹಿಸಿಕೊಂಡ ಬಳಿಕ ಬಿಜೆಪಿ ಪಕ್ಷ ಸಂಘಟನೆ ಹೆಚ್ಚಾಗಿದೆ. ಬಿಜೆಪಿಯು ಬೂತ್ ಸಂಚಾಲಕ್ ಎಂಬ ಅಭಿಯಾನದಿಂದ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡುತ್ತಿದೆ. 

ಮಾಜಿ ಸಚಿವ ಎ. ಮಂಜು, ಮಾಜಿ ಪ್ರಧಾನಿ ಹೆಚ್​​ ಡಿ ದೇವೇಗೌಡ ಹಾಗೂ ಪ್ರಜ್ವಲ್​ ರೇವಣ್ಣ

ಮಾಜಿ ಸಚಿವ ಎ. ಮಂಜು, ಮಾಜಿ ಪ್ರಧಾನಿ ಹೆಚ್​​ ಡಿ ದೇವೇಗೌಡ ಹಾಗೂ ಪ್ರಜ್ವಲ್​ ರೇವಣ್ಣ

  • Share this:
ಹಾಸನ(ಮಾ.11): ಹಾಸನ ಎಂದಾಕ್ಷಣ ತಕ್ಷಣ ನೆನಪಾಗೋದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ. ಜೆಡಿಎಸ್ ಭದ್ರಕೋಟೆ ಎಂದು ಕರೆಸಿಕೊಳ್ಳುವ ಹಾಸನದಲ್ಲಿ ಈಗ ಆ ಕೋಟೆ ಅಲುಗಾಡುತ್ತಿದ್ದು, ಮಾಜಿ ಪ್ರಧಾನಿ ತವರಿನಲ್ಲಿ ಕಮಲ ಚಿಗುರೊಡೆಯಲು ಆರಂಭಿಸಿದೆ. ಮಾಜಿ ಸಚಿವ ಎ.ಮಂಜು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರ್ಪಡೆಯಾದ ಬಳಿಕ ಜೆಡಿಎಸ್​ನ ಸಾಂಪ್ರದಾಯಿಕ ಎದುರಾಳಿಯಾಗಿದ್ದ ಕಾಂಗ್ರೆಸ್ ನಾಯಕರಿಲ್ಲದೇ ಸೊರಗಿದೆ. ಈಗ ದಳಕ್ಕೆ ಪ್ರಬಲ ಪೈಪೋಟಿ ನೀಡುತ್ತಿರುವುದು ಬಿಜೆಪಿ. 


ಜೆಡಿಎಸ್ ಭದ್ರಕೋಟೆ ಹಾಸನ ಜಿಲ್ಲೆ ಈಗ ಹಂತ ಹಂತವಾಗಿ ಕುಸಿಯುತ್ತಿದೆ. ದಳಕ್ಕೆ ಪ್ರಬಲ ಎದುರಾಳಿ ಬಿಜೆಪಿಯಾಗಿದ್ದು, ಬಿಜೆಪಿಯು ಎಲ್ಲೆಡೆ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದೆ. ಬೂತ್ ಮಟ್ಟದಲ್ಲಿ ಸಂಪೂರ್ಣವಾಗಿ ಸಂಘಟಿತವಾಗಿದೆ. ಈ ಹಿಂದೆ ಬಿಜೆಪಿಯಲ್ಲಿ ಸರಿಯಾದ ನಾಯಕರಿರಲಿಲ್ಲ. ಆದರೆ ಈಗ ಹಾಸನ ಕ್ಷೇತ್ರದಲ್ಲಿ ಬಿಜೆಪಿಯ ಶಾಸಕ ಪ್ರೀತಮ್ ಗೌಡ ಮತ್ತು ಪ್ರಭಾವಿ ಮುಖಂಡ ಮಾಜಿ ಸಚಿವ ಎ.ಮಂಜು ಇದ್ದಾರೆ. ಎ.ಮಂಜು ಈ ಹಿಂದಿನಿಂದಲೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬದ್ದ ವೈರಿ ಮತ್ತು ಸಾಂಪ್ರದಾಯಿಕ ಎದುರಾಳಿಯಾಗಿದ್ದಾರೆ.


ಎ.ಮಂಜು ಬಿಜೆಪಿಗೆ ಸೇರ್ಪಡೆಯಾದಾಗಿನಿಂದ ಇಡೀ ಜಿಲ್ಲೆಯಲ್ಲಿ ಬಿಜೆಪಿ ಸಂಪೂರ್ಣವಾಗಿ ಸಂಘಟಿತವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎ.ಮಂಜು 4 ಲಕ್ಷದ 50 ಸಾವಿರ ಮತ ಪಡೆದುಕೊಂಡು ಬಿಜೆಪಿ ಎರಡನೇ ಸ್ಥಾನದಲ್ಲಿತ್ತು. ಆದರೆ ಸಾಂಪ್ರದಾಯಿಕ ಮತಗಳು ಬಿಜೆಪಿಗೆ ಕೇವಲ 2 ಲಕ್ಷ ಮತಗಳಿವೆ. ಎ.ಮಂಜು ಬಿಜೆಪಿಗೆ ಸೇರ್ಪಡೆಯಾದ ಬಳಿಕ ನಾಲ್ಕೂವರೆ ಲಕ್ಷ ಮತಗಳನ್ನು ಪಡೆದುಕೊಂಡರು.

ಹಾಸನದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಪೈಪೋಟಿಯಲ್ಲಾ. ಎಚ್.ಡಿ.ದೇವೇಗೌಡರ ಕುಟುಂಬದ ವಿರುದ್ದ ಇಡೀ ಜಿಲ್ಲೆಯ ಶೇ.70ರಷ್ಟು ಮತದಾರರಿದ್ದಾರೆ. ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ದ ಇಡೀ ಜಿಲ್ಲೆಯ ಮತದಾರರಿದ್ದಾರೆ. ಮುಂದಿನ ದಿನಗಳಲ್ಲಿ ಹಾಸನ ಜಿಲ್ಲೆ ಬಿಜೆಪಿಮಯವಾಗಲಿದೆ ಎಂದು ಎ.ಮಂಜು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಹಾಸನ ಜಿಲ್ಲೆಯಲ್ಲಿ ದಳಕ್ಕೆ ಕಮಲ ಪ್ರಬಲ ಪೈಪೋಟಿ ಕೊಡಲು ಕಾರಣಗಳು ಇಂತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರ ಬಿಜೆಪಿ ಗೆದ್ದಿದೆ. ಸಕಲೇಶಪುರದಲ್ಲಿ ಕೇವಲ 5 ಸಾವಿರ ಮತಗಳ ಅಂತರದಿಂದ ಜೆಡಿಎಸ್ ಗೆದ್ದಿದೆ. ಬೇಲೂರಿನಲ್ಲಿ ಕೇವಲ 9 ಸಾವಿರ ಮತಗಳ ಅಂತರದಲ್ಲಿ ಜೆಡಿಎಸ್ ಗೆದ್ದಿದೆ. ಹೀಗೆ ಜಿಲ್ಲೆಯ ಎಲ್ಲಾ 7 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಎರಡನೇ ಸ್ಥಾನ ಪಡೆದುಕೊಂಡಿದೆ. ಹಾಸನ ನಗರಸಭೆಯಲ್ಲಿ ಒಟ್ಟು 35  ವಾರ್ಡ್​ಗಳಲ್ಲಿ 13 ಮಂದಿ ಬಿಜೆಪಿ ಸದಸ್ಯರು ಗೆಲುವು ಸಾಧಿಸಿದ್ದಾರೆ. ಜೆಡಿಎಸ್ 15 ಸ್ಥಾನವಿದ್ದು, ನಗರಸಭೆಯಲ್ಲಿಯೂ ಬಿಜೆಪಿ ಎರಡನೇ ಸ್ಥಾನದಲ್ಲಿದೆ.


ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ನೋಡಿದರೆ ಅರಕಲಗೂಡು ತಾಲ್ಲೂಕಿನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ತಾಲೂಕು ಅಧ್ಯಕ್ಷರಾಗಿ ಮಾಜಿ ಸಚಿವ ಎ,ಮಂಜು ಗೆಲುವು ಸಾಧಿಸಿದ್ದು ಬಿಜೆಪಿ ಅಧಿಕಾರದಲ್ಲಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಇಡೀ ಜಿಲ್ಲೆಯಲ್ಲಿ ಶೇ.30 ರಷ್ಟು ಬಿಜೆಪಿ ಅಧಿಕಾರದಲ್ಲಿದೆ. ಇನ್ನೂ ಕಾಂಗ್ರೆಸ್ ಜಿಲ್ಲೆಯಲ್ಲಿ ನಾಯಕರಿಲ್ಲದೇ ಸೊರಗಿದ್ದು, ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್ ಅನ್ನು ದುರ್ಬೀನು ಹಾಕಿಕೊಂಡು ಹುಡುಕುವಂತಹ ಪರಿಸ್ಥಿತಿಯಲ್ಲಿದೆ.
ಬಿಜೆಪಿ ನೂತನ ಜಿಲ್ಲಾಧ್ಯಕ್ಷರಾಗಿ ಬೇಲೂರು ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಹುಲ್ಲಹಳ್ಳಿ ಸುರೇಶ್ ಎಂಬುವರು ಅಧಿಕಾರ ವಹಿಸಿಕೊಂಡ ಬಳಿಕ ಬಿಜೆಪಿ ಪಕ್ಷ ಸಂಘಟನೆ ಹೆಚ್ಚಾಗಿದೆ. ಬಿಜೆಪಿಯು ಬೂತ್ ಸಂಚಾಲಕ್ ಎಂಬ ಅಭಿಯಾನದಿಂದ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡುತ್ತಿದೆ.


ಒಟ್ಟಾರೆ ಈ ಎಲ್ಲಾ ಬೆಳವಣಿಗೆಗಳಿಂದ ದೇವೇಗೌಡರ ತವರು ಜಿಲ್ಲೆಯಲ್ಲಿ ಬಿಜೆಪಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮುತ್ತಿರುವುದು ಗೊತ್ತಾಗುತ್ತಿದೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಭದ್ರಕೋಟೆಯನ್ನು ಬಿಜೆಪಿ ಸಂಪೂರ್ಣವಾಗಿ ವಶಕ್ಕೆ ಪಡೆದರೂ ಅಚ್ಚರಿ ಪಡಬೇಕಾಗಿಲ್ಲ.
First published: