• Home
  • »
  • News
  • »
  • state
  • »
  • ಬಿಜೆಪಿಗೆ ಚಿಂತಕರು ಬೇಕಿಲ್ಲ; ಹಂತಕರ ಪಡೆ ಬೇಕಿದೆ: ಕಮ್ಯೂನಿಸ್ಟ್ ಮುಖಂಡ ಸಿದ್ಧನಗೌಡ ಪಾಟೀಲ ಕಿಡಿ

ಬಿಜೆಪಿಗೆ ಚಿಂತಕರು ಬೇಕಿಲ್ಲ; ಹಂತಕರ ಪಡೆ ಬೇಕಿದೆ: ಕಮ್ಯೂನಿಸ್ಟ್ ಮುಖಂಡ ಸಿದ್ಧನಗೌಡ ಪಾಟೀಲ ಕಿಡಿ

ಸಿದ್ದನಗೌಡ ಪಾಟೀಲ್

ಸಿದ್ದನಗೌಡ ಪಾಟೀಲ್

ಬಸನಗೌಡ ಪಾಟೀಲರಂತಹ ಫ್ಯೂಡಲ್ ರಾಜಕಾರಣಿಯನ್ನು ದೊರೆಸ್ವಾಮಿ ಅಂತಹ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಎತ್ತಿಕಟ್ಟಲಾಗ್ತಿದೆ. ಆ ಮೂಲಕ ಹಂತಕರ ಪಡೆಯನ್ನು ಬೆಳೆಸುತ್ತಿದ್ದಾರೆ ಎಂದು ಸಿದ್ಧನಗೌಡ ಪಾಟೀಲ ಆಪಾದಿಸಿದರು.

  • Share this:

ಕಲಬುರ್ಗಿ(ಮಾ. 02): ಬಿಜೆಪಿಗೆ ಚಿಂತಕರು ಬೇಕಿಲ್ಲ, ಹಂತಕರ ಪಡೆ ಮಾತ್ರ ಬೇಕಿದೆ ಎಂದು ಸಿಪಿಐ ಮುಖಂಡ ಸಿದ್ಧನಗೌಡ ಪಾಟೀಲ ಆರೋಪಿಸಿದ್ದಾರೆ. ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಪೌರತ್ವ ವಿರೋಧಿ ಹೋರಾಟ ನೆಪಮಾಡಿಕೊಂಡು ದೇಶದ ಮೂಲಭೂತ ಸಮಸ್ಯೆಗಳನ್ನು ಬದಿಗೆ ಸರಿಸುವ ಕೆಲಸ ಬಿಜೆಪಿಯಿಂದ ನಡೆದಿದೆ. ದೇಶಾದ್ಯಂತ ಭಯ ಹುಟ್ಟಿಸೋ ಕೆಲಸ ನಡೆದಿದೆ ಎಂದು ಕಿಡಿಕಾರಿದರು.


ಆಡಳಿತವನ್ನು ಮತ್ತು ಆಡಳಿತಾರೂಢ ಪಕ್ಷವನ್ನು ಪ್ರಶ್ನೆಯೇ ಮಾಡಬಾರದೆಂಬ ವಾತಾವರಣ ಸೃಷ್ಟಿಸಲಾಗುತ್ತಿದೆ. ಕೇಂದ್ರ ಸರ್ಕಾರ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದೆ. ದೇಶ ಅಭಿವೃದ್ಧಿಯಾಗಬೇಕಾದರೆ ಚಿಂತಕರ ಪಡೆ ಅವಶ್ಯ. ಚಿಂತಕರಿಂದಲೇ ದೇಶ ನಡೆಯುತ್ತದೆ. ಆದ್ರೆ ಬಿಜೆಪಿಗೆ ಚಿಂತಕರ ಪಡೆ ಬೇಕಿಲ್ಲ. ಅವರಿಗೆ ಹಂತಕರ ಪಡೆ ಮಾತ್ರ ಬೇಕಿದೆ. ಅದಕ್ಕಾಗಿಯೇ ಫ್ಯೂಡಲ್ ರಾಜಕಾರಣಿಗಳನ್ನು ಎತ್ತಿಕಟ್ಟುವ ಕೆಲಸ ನಡೆದಿದೆ. ದೊರೆಸ್ವಾಮಿ ವಿರುದ್ಧ ಬಸನಗೌಡ ಪಾಟೀಲರನ್ನ ಎತ್ತಿಕಟ್ಟಲಾಗುತ್ತಿದೆ ಎಂದು ಭಾರತೀಯ ಕಮ್ಯೂನಿಸ್ಟ್ ಪಕ್ಷದ ಮುಖಂಡ ಆಕ್ರೋಶ ವ್ಯಕ್ತಪಡಿಸಿದರು.


ಇದನ್ನೂ ಓದಿ: ದೊರೆಸ್ವಾಮಿ ಸ್ವಾತಂತ್ರ್ಯ ಹೋರಾಟಕ್ಕೆ ಸಾಕಷ್ಟು ಸಾಕ್ಷಿ ಇದೆ, ಯತ್ನಾಳ್ ಉಚ್ಛಾಟನೆ ಆಗಲೇಬೇಕು; ಸಿದ್ದರಾಮಯ್ಯ ಕಿಡಿ


ಯತ್ನಾಳರ ಹೇಳಿಕೆಯನ್ನು ಪ್ರಹ್ಲಾದ್ ಜೋಷಿ, ಈಶ್ವರಪ್ಪ ಮತ್ತಿತರ ಹಿರಿಯ ನಾಯಕರು ಸಮರ್ಥಿಸುತ್ತಾರೆ. ಆ ಮೂಲಕ ಆರಾಜಕತೆ ಸೃಷ್ಟಿಸಲು ಯತ್ನಿಸಲಾಗುತ್ತಿದೆ. ದೊರೆಸ್ವಾಮಿ ಅವರನ್ನು ಟೀಕಿಸುವ ಹಕ್ಕಿದೆ. ಹಾಗೆಂದು ಟೀಕಿಸುವ ಭರದಲ್ಲಿ ಪಾಕಿಸ್ತಾನ್ ಏಜೆಂಟ್ ಇತ್ಯಾದಿಯಾಗಿ ಬಾಯಿಗೆ ಬಂದಂತೆ ಮಾತನಾಡೋದು ಸರಿಯಲ್ಲ. ಬಸನಗೌಡ ಪಾಟೀಲರಂತಹ ಫ್ಯೂಡಲ್ ರಾಜಕಾರಣಿಯನ್ನು ದೊರೆಸ್ವಾಮಿ ಅಂತಹ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಎತ್ತಿಕಟ್ಟಲಾಗ್ತಿದೆ. ಆ ಮೂಲಕ ಹಂತಕರ ಪಡೆಯನ್ನು ಬೆಳೆಸುತ್ತಿದ್ದಾರೆ ಎಂದು ಸಿದ್ಧನಗೌಡ ಪಾಟೀಲ ಆಪಾದಿಸಿದರು.


ಯತ್ನಾಳ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ...


ಇದೇ ವೇಳೆ, ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೋರೆಸ್ವಾಮಿ ವಿರುದ್ಧ ಅವಹೇಳನಕಾರಿ ಮಾತನಾಡಿದ ಶಾಸಕ‌ ಬಸನಗೌಡ ಪಾಟೀಲ್ ಯತ್ನಾಳರ ರಾಜಿನಾಮೆಗೆ ‌ಆಗ್ರಹಿಸಿ ಕಲಬುರ್ಗಿಯಲ್ಲಿ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ಜಗತ್ ವೃತ್ತದಿಂದ ಟೌನ್​ಹಾಲ್​ವರೆಗೆ “ದೊರೆಸ್ವಾಮಿ ಅವರು ನಮ್ಮ ಹೆಮ್ಮೆ‌” ಎಂಬ ಭಾವಚಿತ್ರ ಹಿಡಿದು ಮೆರವಣಿಗೆ ಮಾಡುತ್ತಾ, ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ಶಾಸಕ ಯತ್ನಾಳ ಹಾಗೂ ಬಿಜೆಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ದೇಶ ವಿರೋಧಿ ಬರಹ; ಶಿವಾಜಿನಗರದಲ್ಲಿ ಕಾಣಿಸಿದ ಫ್ರೀ ಕಾಶ್ಮೀರ್


ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೆ ಇರುವ ಆರ್.ಎಸ್.ಎಸ್ ಮತ್ತು ಬಿಜೆಪಿ ನಾಯಕರಿಗೆ ದೊರೆಸ್ವಾಮಿ ಅವರ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ. ದೊರೆಸ್ವಾಮಿ ಬಗ್ಗೆ ಅವಹೇಳನಕಾರಿ ಮಾತನಾಡುತ್ತಿದ್ದರೂ, ಬಿಜೆಪಿ ನಾಯಕರು ಮಾತ್ರ ಯತ್ನಾಳ ವಿರುದ್ದ ಯಾವುದೇ ಕ್ರಮ ಕೈಗೊಳ್ಳದೆ ಹೇಳಿಕೆಯನ್ನು ಸಮರ್ಥಿಸಿಕೋಳ್ಳುತ್ತಿದ್ದಾರೆ. ಕೂಡಲೇ ಯತ್ನಾಳ ವಿರುದ್ದ ಕ್ರಮ ಕೈಗೊಳ್ಳಬೇಕು, ದೊರೆಸ್ವಾಮಿ ವಿರುದ್ಧದ ಅವಹೇಳನಕಾರಿ ಹೇಳಿಕೆಗಳಿಗೆ ಕಡಿವಾಣ ಹಾಕಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.


ಸಿಪಿಐ ಮುಖಂಡ ಸಿದ್ಧನಗೌಡ ಪಾಟೀಲ, ಜನವಾದಿ ಮಹಿಳಾ ಸಂಘಟನೆಯ ಕೆ. ನೀಲಾ, ಸಾಹಿತಿ ಆರ್.ಕೆ. ಹುಡಗಿ ಮತ್ತಿತರರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.


(ವರದಿ: ಶಿವರಾಮ ಅಸುಂಡಿ)


ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.


Published by:Vijayasarthy SN
First published: