ಬೆಂಗಳೂರು: ರಾಜ್ಯ ಬಿಜೆಪಿ ಪಾಲಿಗೆ ಮಾಜಿ ಸಿಎಂ ಯಡಿಯೂರಪ್ಪ (Former CM BS Yediyurappa) ಅವರೇ ಈಗಲೂ ಹೆಡ್ಮಾಸ್ಟರ್. ಕುರ್ಚಿಯಿಂದ ಕೆಳಗಿಳಿದಿದರೂ ರಾಜಾಹುಲಿ (Raja Huli) ಡಿಮ್ಯಾಂಡ್ ಏನೂ ಕಮ್ಮಿ ಆಗಿಲ್ಲ. 2023 ವಿಧಾನಸಭಾ ಚುನಾವಣೆ (Karnataka Elections 2023) ಸಮೀಪಿಸುತ್ತಿದ್ದಂತೆ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಕರೆದುಕೊಂಡು ಹೋಗಿ ಎಲೆಕ್ಷನ್ ಕ್ಯಾಂಪೇನ್ (Election Campaign) ಮಾಡಬೇಕು ಅಂತ ಟಿಕೆಟ್ ಆಕಾಂಕ್ಷಿಗಳು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಆದರೆ 'ರಾಜಾಹುಲಿ' ಮಾತ್ರ ಬೇಸರದಲ್ಲಿದೆ. ಮಾಜಿ ಸಿಎಂ ಬೇಸರಕ್ಕೆ ಕಾರಣವೇನು? ಟಿಕೆಟ್ ಆಕಾಂಕ್ಷಿಗಳೂ ಬಿಎಸ್ವೈಗೆ ದುಂಬಾಲು ಬೀಳ್ತಿರೋದು ಏಕೆ? ಅಂತ ನಾವು ಹೇಳ್ತೀವಿ ಓದಿ.
ಬಿಜೆಪಿಯಲ್ಲಿ ಬಿಎಸ್ವೈಗೆ ಸಖತ್ ಡಿಮ್ಯಾಂಡ್!
ಕಳೆದ ವಾರವಷ್ಟೇ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲೂ ಖುದ್ದು ಪ್ರಧಾನಿ ಮೋದಿ ಅವರೆ ಬಿಎಸ್ ಯಡಿಯೂರಪ್ಪ ಜೊತೆ ಗಂಟೆಗಟ್ಟಲೆ ಚರ್ಚೆ ನಡೆಸಿದ್ದರು. ಅಲ್ಲದೇ ಕರ್ನಾಟಕದಲ್ಲಿ ಕಮಲ ಅರಳಿಸಲು ಬಿಎಸ್ ಯಡಿಯೂರಪ್ಪ ಅವರಿಗೆ ಹೊಣೆಗಾರಿಕೆ ಕೊಟ್ಟಿದ್ದರು. ಅದರಂತೆಯೇ ಈಗ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಈಗಿನಿಂದಲೇ ಬಿಎಸ್ವೈ ದುಂಬಾಲು ಬಿದ್ದಿದ್ದಾರೆ. ಟಿಕೆಟ್ ಹಂಚಿಕೆ ಆಗುವ ಮುನ್ನವೇ ಬಿಎಸ್ವೈರನ್ನ ತಮ್ಮ ಕ್ಷೇತ್ರಕ್ಕೆ ಕರೆಸಿಕೊಂಡು ಪ್ರಚಾರ ಮಾಡಿಸಬೇಲು ಅಂತ ಪ್ಲಾನ್ನಲ್ಲಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಪಡೆ ಪ್ರಜಾಧ್ವನಿ, ಬಸ್ ಯಾತ್ರೆ ನಡೆಸಿ ಅಬ್ಬರದ ಪ್ರಚಾರ ನಡೆಸಿದೆ. ಇನ್ನೊಂದ್ಕಡೆ ಜೆಡಿಎಸ್ ಕೂಡ ಪಂಚರತ್ನ ಯಾತ್ರೆ ನಡೆಸುತ್ತಿದೆ. ಹೀಗಾಗಿ ಟೆನ್ಷನ್ ಆಗಿರುವ ಬಿಜೆಪಿ ನಾಯಕರು ಯಡಿಯೂರಪ್ಪ ಮೊರೆ ಹೋಗಿದ್ದಾರೆ. ಪ್ರಚಾರಕ್ಕೆ ಬನ್ನಿ ಅಂತ ದುಂಬಾಲುಬಿದ್ದಿದ್ದಾರೆ. ಯಡಿಯೂರಪ್ಪ ಬಂದರಷ್ಟೇ ನಮಗೆ ಲಾಭ ಅಂತಿದ್ದಾರೆ.
ಬಿಎಸ್ವೈಗೆ ಇಷ್ಟು ಡಿಮ್ಯಾಂಡ್ ಏಕೆ?
ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಒಬ್ಬರೇ ಮಾಸ್ ಲೀಡರ್. ಅಲ್ಲದೆ ಯಡಿಯೂರಪ್ಪ ಎಲ್ಲಾ ಸಮುದಾಯ ಕೂಡ ಒಪ್ಪುತ್ತೆ. ಇನ್ನು ಲಿಂಗಾಯತ ಪ್ರಭಾವದ ಕ್ಷೇತ್ರಗಳಲ್ಲೂ ಬಿಎಸ್ ವೈಗೆ ಹೆಚ್ಚು ಡಿಮ್ಯಾಂಡ್ ಇದೆ. ಯಡಿಯೂರಪ್ಪ ಬಂದರೆ ವೋಟ್ ಬೀಳುತ್ತೆ ಎನ್ನುವ ಲೆಕ್ಕಾಚಾರವೂ ಅಭ್ಯರ್ಥಿಗಳಿಗಿದೆ. ಇದರ ಜೊತೆಗೆ ಬಿಎಸ್ವೈ ಮುಖ್ಯಮಂತ್ರಿಗಳಗಿದ್ದಾಗ ಕೊಟ್ಟಿದ್ದ ಯೋಜನೆಗಳು ಶ್ರೀರಕ್ಷೆ ಆಗುತ್ತೆ ಅಂತ ಸಂಭಾವ್ಯ ಅಭ್ಯರ್ಥಿಗಳು ಲೆಕ್ಕಾಚಾರ ಹಾಕುತ್ತಿದ್ದಾರೆ.
ಬಿಜೆಪಿಯಲ್ಲಿ ಸೈಲೆಂಟ್ ಆಗಿದ್ದಾರಾ ಬಿಎಸ್ವೈ?
ಒಂದ್ಕಡೆ ಬಿಎಸ್ವೈಗೆ ಪಕ್ಷದಲ್ಲಿ ಸಖತ್ ಡಿಮ್ಯಾಂಡ್ ಇದ್ದರೂ ಇನ್ನೊಂದ್ಕಡೆ ಯಡಿಯೂರಪ್ಪ ಅವರೇ ಸೈಲೆಂಟ್ ಆಗಿದ್ದಾರಾ ಎನ್ನಲಾಗುತ್ತಿದೆ. ಬಿಎಸ್ವೈ ಬೇಜಾರಿಗೆ ಕಾರಣ ಏನು ಅನ್ನೋದನ್ನ ನೋಡುವುದಾದರೆ, ಹೈಕಮಾಂಡ್ ತಮ್ಮನ್ನು ನಿರ್ಲಕ್ಷಿಸಿದೆ ಅಂತ ಬಿಎಸ್ವೈಗೆ ಸಿಟ್ಟು ಇದೆ ಎನ್ನಲಾಗುತ್ತಿದೆ. ಮೋದಿ, ಅಮಿತ್ ಶಾ ಸೇರಿ ವರಿಷ್ಠರು ಬಂದರೂ ಕೆಲ ಕಾರ್ಯಕ್ರಮಗಳಿಗೆ ತಮ್ಮನ್ನ ಆಹ್ವಾನಿಸಿರಲಿಲ್ಲ ಅಂತ ಬೇಸರವೂ ಇದೆ. ಅಲ್ಲದೇ ವಿಜಯೇಂದ್ರಗೆ ಆದ್ಯತೆ ನೀಡುತ್ತಿಲ್ಲ ಅನ್ನೋ ಬೇಸರವೂ ಇದೆ. ಹಾಗೇ ಪಕ್ಷದಲ್ಲಿ ನಾಯಕರುಗಳು ತಮ್ಮನ್ನ ಮೂಲೆಗುಂಪು ಮಾಡಿದ್ದಾರೆಂಬ ಅಸಮಾಧಾನ ಇದೆ. ಜೊತೆಗೆ ಜನಸಂಕಲ್ಪ ಯಾತ್ರೆಗಷ್ಟೇ ಸೀಮಿತ ಮಾಡಿದ್ದಾರೆ ಅಂತ ಬಿಎಸ್ವೈ ಸಿಟ್ಟಾಗಿದ್ದಾರೆ.
ಇವೆಲ್ಲದರ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತೆ ಯಡಿಯೂರಪ್ಪರನ್ನ ಹಾಡಿ ಹೊಗಳಿದ್ದಾರೆ. ಯಡಿಯೂರಪ್ಪನವರೇ ನಮ್ಮ ಸರ್ವೋಚ್ಛ ನಾಯಕ ಎಂದಿದ್ದಾರೆ. ಅವರಿಗೆ ಏನೆಲ್ಲಾ ಜವಾಬ್ದಾರಿಗಳನ್ನು ಕೊಡಬೇಕು ಪಾರ್ಟಿ ಕೊಡುತ್ತಿದೆ, ಅವರ ಮಾರ್ಗದಲ್ಲೇ ಸರ್ಕಾರ ನಡೀತಿದೆ ಅಂತ ಚಿಕ್ಕಮಗಳೂರಲ್ಲಿ ಕಟೀಲ್ ಹೇಳಿದ್ದರು.
ಇನ್ನು ಎಲೆಕ್ಷನ್ ಪ್ರಚಾರಕ್ಕೆ ಬಿಎಸ್ವೈರನ್ನ ಕರೆಸಲು ಶಾಸಕರು ಮುಗಿಬಿದ್ದಿರುವ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಪ್ರತಿಕ್ರಿಯಿಸಿದ್ದಾರೆ. ಯಡಿಯೂರಪ್ಪ ಅವರು 4 ಬಾರಿ ಸಿಎಂ ಆಗಿದ್ದರು. ಈ ವಯಸ್ಸಲ್ಲೂ ಅವರು ನಾಡಿನೆಲ್ಲಡೆ ಸಂಚಾರ ಮಾಡುತ್ತಿರುವುದು ನಮಗೆ ಆಶ್ಚರ್ಯ ತಂದಿದೆ. ಅಲ್ಲದೇ ಅವರು ಎಲ್ಲೆಲ್ಲಿ ಅವಶ್ಯಕತೆ ಇದೆ ಅಲ್ಲಿ ಎಲ್ಲ ಕಡೆಗಳಲ್ಲೂ ಓಡಾಡಿ ಪ್ರಚಾರ ಮಾಡುತ್ತಾರೆ ಎಂದು ಹೇಳಿದರು.
‘ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋಗಲ್ಲ’
ಒಂದ್ಕಡೆ ಬಿಎಸ್ವೈಗೆ ಪಕ್ಷದಲ್ಲಿ ಡಿಮ್ಯಾಂಡ್ ಇದ್ದರೆ, ಅವರ ಬೆಂಬಲಿಗರು ಸಿಎಂ ಬೊಮ್ಮಾಯಿ ನಾಯಕತ್ವದಲ್ಲಿ ನಂಬಿಕೆ ಇಲ್ಲ ಅಂತ ಅಂದಿದ್ದಾರಂತೆ. ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಈ ಸ್ಫೋಟಕ ಹೇಳಿಕೆ ನೀಡಿದ್ದಾರೆ. 40ರಿಂದ 50 ಶಾಸಕರು ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋಗಲ್ಲ ಅಂತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾಗೆ ಪತ್ರ ಬರೆದಿದ್ದಾರಂತೆ ಎಂದು ಆರೋಪಿಸಿದ್ದಾರೆ.
ಒಟ್ಟಿನಲ್ಲಿ ರಾಜಾಹುಲಿ ಸೈಲೆಂಟ್ ಆಗಿದ್ರೂ, ಪಕ್ಷದಲ್ಲಿ ಮಾತ್ರ ಅವರಿಗೆ ಸಖತ್ ಡಿಮ್ಯಾಂಡ್ ಇದೆ. ಅವರನ್ನು ತಮ್ಮ ಕ್ಷೇತ್ರಕ್ಕೆ ಕರೆಸಿ ಪ್ರಚಾರ ಮಾಡಬೇಕು ಅನ್ನೋದು ಟಿಕೆಟ್ ಆಕಾಂಕ್ಷಿಗಳ ಆಕಾಂಕ್ಷೆ. ಆದರೆ ಹೈಕಮಾಂಡ್ ಹೇಳಿಲ್ಲ ಅಂತ ಯಡಿಯೂರಪ್ಪ ಇನ್ನೂ ಸೈಲೆಂಟ್ ಆಗಿದ್ದಾರೆ. ಯಾವಾಗಿಂದ ಕ್ಷೇತ್ರ ಸಂಚಾರ ಶುರುಮಾಡುತ್ತಾರೋ ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ