ಗೃಹ ಮಂಡಳಿ ಅಧ್ಯಕ್ಷ ಸ್ಥಾನ ತಿರಸ್ಕರಿಸಿದ ಶರತ್ ಬಚ್ಚೇಗೌಡ; ಹೊಸಕೋಟೆಯಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ

ಹೊಸಕೋಟೆಯಲ್ಲಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರಿಗೆ ಟಿಕೆಟ್ ನೀಡಿದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆಂದು ಓಪನ್ ಚಾಲೆಂಜ್ ಹಾಕಿದ್ದ ಶರತ್ ಬಚ್ಚೇಗೌಡಗೆ ಗೃಹ ಮಂಡಳಿ ಅಧ್ಯಕ್ಷ ಸ್ಥಾನ ಕಲ್ಪಿಸಲಾಗಿತ್ತು. ಆದರೆ, ಆ ಹುದ್ದೆಯನ್ನು ಶರತ್ ಬಚ್ಚೇಗೌಡ ತಿರಸ್ಕರಿಸಿದ್ದಾರೆ.

ಶರತ್ ಬಚ್ಚೇಗೌಡ

ಶರತ್ ಬಚ್ಚೇಗೌಡ

  • Share this:
ಬೆಂಗಳೂರು(ಅ. 09):  ಸಚಿವ ಸಂಪುಟ ವಿಸ್ತರಣೆ ಬಳಿಕ ಅಸಮಾಧಾನಗೊಂಡಿದ್ದ ಅತೃಪ್ತ ಶಾಸಕರ ಮನವೊಲಿಸಲು ಕಮಲಪಾಳಯದ ನಾಯಕರು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ಬಚ್ಚೇಗೌಡ ಅವರ ಮಗ ಶರತ್ ಬಚ್ಚೇಗೌಡಗೆ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಆದರೆ, ಗೃಹ ಮಂಡಳಿ ಅಧ್ಯಕ್ಷ ಸ್ಥಾನವನ್ನು ಶರತ್ ಬಚ್ಚೇಗೌಡ ತಿರಸ್ಕರಿಸಿದ್ದಾರೆ. 

ಮಾಧ್ಯಮದ ಜತೆ ಹೊಸಕೋಟೆ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಶರತ್​ ಬಚ್ಚೇಗೌಡ, ಮುಂಬರುವ ದಿನಗಳಲ್ಲಿ ಹೊಸಕೋಟೆ ಉಪಚುನಾವಣೆ ಇರುವ ಹಿನ್ನೆಲೆಯಲ್ಲಿ ಗೃಹ ಮಂಡಳಿ ಅಧ್ಯಕ್ಷ ಸ್ಥಾನ ತಿರಸ್ಕರಿಸುತ್ತಿರುವುದಾಗಿ ತಿಳಿಸಿದರು.

ಮುಂದುವರೆದ ಅವರು, "ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ಗೃಹ ಮಂಡಳಿ ಅಧ್ಯಕ್ಷರಾಗಿ ನನ್ನನ್ನು ನೇಮಿಸಿದ್ದಾರೆ. ಇದಕ್ಕೆ ನಾನು ಅಭಾರಿಯಾಗಿದ್ದೇನೆ. ಆದರೆ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಈ ಜವಾಬ್ದಾರಿಯನ್ನು ತಿರಸ್ಕರಿಸುತ್ತಿದ್ದೇನೆ," ಎಂದರು. ಈ ಮೂಲಕ ಉಪಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂಬುದನ್ನು ಶರತ್​ ಮತ್ತೆ ಪುನರುಚ್ಛರಿಸಿದ್ದಾರೆ.

ಬಿಜೆಪಿಯ ಅತೃಪ್ತರಿಗೆ 8 ನಿಗಮ-ಮಂಡಳಿ; ಶರತ್ ಬಚ್ಚೇಗೌಡಗೆ ಗೃಹ ಮಂಡಳಿ, ನಂದೀಶ್ ರೆಡ್ಡಿಗೆ ಬಿಎಂಟಿಸಿ

ಒಂದು ವೇಳೆ ಸುಪ್ರೀಂ ಕೋರ್ಟ್​ ವಿಚಾರಣೆಯಲ್ಲಿ ಅನರ್ಹ ಶಾಸಕರಿಗೆ ಗೆಲುವು ಸಿಕ್ಕರೆ, ಬಿಜೆಪಿ ಪಕ್ಷದಿಂದ ಎಂ.ಟಿ.ಬಿ. ನಾಗರಾಜ್​ ಹೊಸಕೋಟೆ ಕ್ಷೇತ್ರದ ಅಭ್ಯರ್ಥಿಯಾಗಲಿದ್ದಾರೆ. ಹಾಗಾದಲ್ಲಿ ಶರತ್​ ಬಚ್ಚೇಗೌಡ ಬಂಡಾಯ ಅಭ್ಯರ್ಥಿಯಾಗಿ ನಾಗರಾಜ್​ ವಿರುದ್ಧ ಸ್ಪರ್ಧಿಸಲಿದ್ದಾರೆ. 2018ರಲ್ಲಿ ನಡೆದ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲೂ ಬಿಜೆಪಿಯಿಂದ ಶರತ್​ ಸ್ಪರ್ಧಿಸಿದ್ದರು. ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಎಂ.ಟಿ.ಬಿ. ನಾಗರಾಜ್​ ಗೆಲುವು ಸಾಧಿಸಿದ್ದರು.

ನಡೆದದ್ದೇನು?:

ಪಕ್ಷದೊಳಗೆ ಎದ್ದಿರುವ ಅಸಮಾಧಾನದ ಹೊಗೆಯನ್ನು ಶಮನ ಮಾಡಲು ಬಿಜೆಪಿಯು ನಿಗಮ-ಮಂಡಳಿ ಸ್ಥಾನಗಳನ್ನು ಗಾಳವಾಗಿ ಬಳಸಿಕೊಳ್ಳಲು ಮುಂದಾಗಿತ್ತು. ಎಂಟು ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ಅತೃಪ್ತರಿಗೆ ನೀಡಿದೆ. ಹೊಸಕೋಟೆಯಲ್ಲಿ ಬಂಡಾಯದ ಬಾವುಟ ಹಾರಿಸಿರುವ ಶರತ್ ಬಚ್ಚೇಗೌಡ ಅವರಿಗೆ ಕರ್ನಾಟಕ ಗೃಹ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಉಪ-ಚುನಾವಣೆಯಲ್ಲಿ ಅನರ್ಹ ಶಾಸಕರಿಗೆ ಟಿಕೆಟ್ ನೀಡಿದರೆ ಬಿಜೆಪಿಯೊಳಗೆ ಬಂಡಾಯ ಏಳುವ ಸೂಚನೆ ಅದಾಗಲೇ ಸಿಕ್ಕಿರುವ ಹಿನ್ನೆಲೆಯಲ್ಲಿ ಪಕ್ಷವು ಅತೃಪ್ತರನ್ನು ಈ ರೀತಿಯಾಗಿ ಓಲೈಸುವ ಪ್ರಯತ್ನ ಮಾಡಿತ್ತು.

ಹೊಸಕೋಟೆ, ಹಿರೇಕೆರೂರು, ಕೆಆರ್ ಪುರಂ, ಹೊಸಪೇಟೆ, ಕಾಗವಾಡ, ಮಸ್ಕಿ, ಗೋಕಾಕ್ ಮತ್ತು ಯಲ್ಲಾಪುರದಲ್ಲಿ ಅಸಮಾಧಾನಗೊಂಡಿದ್ದ ಸ್ಥಳೀಯ ಬಿಜೆಪಿ ನಾಯಕರಿಗೆ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ನೀಡಲಾಗಿತ್ತು.

ಎಂಟು ನಿಗಮ-ಮಂಡಳಿ ಹಾಗೂ ಅಧ್ಯಕ್ಷರ ಪಟ್ಟಿ:

1) ಅಶೋಕ್ ಪೂಜಾರಿ: ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು – ಗೋಕಾಕ್, ಬೆಳಗಾವಿ
2) ರಾಜು ಕಾಗೆ: ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮತ್ತು ಮಲಪ್ರಭಾ-ಘಟಪ್ರಭಾ ಯೋಜನೆ – ಕಾಗವಾಡ, ಬೆಳಗಾವಿ
3) ಯು.ಬಿ. ಬಣಕಾರ್: ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಮತ್ತು ಸಂಸ್ಕರಣ ನಿಗಮ – ಹಿರೇಕೆರೂರು, ಹಾವೇರಿ ಜಿಲ್ಲೆ
4) ಬಸನಗೌಡ ತುರವಿಹಾಳ: ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ(ತುಂಗ ಭದ್ರ ಯೋಜನೆ) – ಮಸ್ಕಿ, ರಾಯಚೂರು
5) ವಿಎಸ್ ಪಾಟೀಲ: ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ – ಹುಬ್ಬಳ್ಳಿ
6) ಹೆಚ್.ಆರ್. ಗವಿಯಪ್ಪ: ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ, ಬೆಂಗಳೂರು
7) ನಂದೀಶ್ ರೆಡ್ಡಿ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ – ಬೆಂಗಳೂರು
8) ಶರತ್ ಬಚ್ಚೇಗೌಡ: ಕರ್ನಾಟಕ ಗೃಹ ಮಂಡಳಿ - ಬೆಂಗಳೂರು

ಹೊಸಕೋಟೆಯಲ್ಲಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರಿಗೆ ಟಿಕೆಟ್ ನೀಡಿದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆಂದು ಓಪನ್ ಚಾಲೆಂಜ್ ಹಾಕಿದ್ದ ಶರತ್ ಬಚ್ಚೇಗೌಡಗೆ ಗೃಹ ಮಂಡಳಿ ಅಧ್ಯಕ್ಷ ಸ್ಥಾನ ಕಲ್ಪಿಸಲಾಗಿತ್ತು.

(ವರದಿ: ಮುನಿರಾಜು)

 

 

 

 
First published: