ನಿಗಮ ಮಂಡಳಿ ನೇಮಕ: ಸಿಎಂ ಯಡಿಯೂರಪ್ಪ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷರುಗಳ ಅಸಮಾಧಾನ; ಹೈಕಮಾಂಡ್​ಗೆ ಕಟೀಲ್ ದೂರು ಸಾಧ್ಯತೆ

ಪಕ್ಷದ ಕಾರ್ಯಕರ್ತರು, ಕೋರ್ ಕಮಿಟಿ ಸದಸ್ಯರು ಇವರೆಲ್ಲರ ಅಭಿಪ್ರಾಯ ಸಂಗ್ರಹಿಸಿರುವ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಹೈಕಮಾಂಡ್ಗೆ ದೂರು ನೀಡಲು ನಿರ್ಧರಿಸಿದ್ಧಾರೆನ್ನಲಾಗಿದೆ.

ಬಿಎಸ್ ಯಡಿಯೂರಪ್ಪ

ಬಿಎಸ್ ಯಡಿಯೂರಪ್ಪ

  • Share this:
ಬೆಂಗಳೂರು(ಜುಲೈ 28): ಬಿಜೆಪಿಯೊಳಗೆ ನೆಲೆ ನಿಂತಿರುವ ಅತೃಪ್ತಿಯನ್ನು ಕೊನೆಗಾಣಿಸುವ ಉದ್ದೇಶದಿಂದ ಸಿಎಂ ಬಿಎಸ್ ಯಡಿಯೂರಪ್ಪ ಅವರು ನಿನ್ನೆ ಅನೇಕ ನಿಗಮ ಮಂಡಳಿಗಳ ನೇಮಕಾತಿ ಮಾಡಿ ವಿವಿಧ ಶಾಸಕರಿಗೆ ಹಂಚಿದ್ದಾರೆ. ಸರ್ಕಾರಕ್ಕೆ ವರ್ಷ ತುಂಬಿದ ಸಂಭ್ರಮದಲ್ಲಿ ಈ ನಿಗಮ ಮಂಡಳಿ ಉಡುಗೊರೆಗಳಿಂದ ಪಕ್ಷದೊಳಗೆ ಅಸಮಾಧಾನದ ಹೊಗೆ ನಿಂತೀತು ಎಂಬುದು ಅವರ ಎಣಿಕೆ. ಆದರೆ, ಲೆಕ್ಕಾಚಾರ ಉಲ್ಟಾ ಹೊಡೆಯುವ ಹಾಗಿದೆ. ನಿಗಮ ಮಂಡಳಿ ನೇಮಕಾತಿ ಬಗ್ಗೆ ಪಕ್ಷದ ಕಾರ್ಯಕರ್ತರುಗಳಿಂದಲೇ ಅಸಮಾಧಾನ ವ್ಯಕ್ತವಾಗುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಹೈಕಮಾಂಡ್ ಗಮನಕ್ಕೆ ತರಲು ನಿರ್ಧರಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಈ ನಿಗಮ ಮಂಡಳಿ ನೇಮಕಾತಿಯು ಎರಡು ರೀತಿಯಲ್ಲಿ ತಲೆನೋವು ತಂದಿದೆ. ಪ್ರಬಲ ಸಚಿವಾಕಾಂಕ್ಷಿಗಳಾಗಿದ್ದ ಕೆಲ ಶಾಸಕರು ತಮಗೆ ನೀಡಲಾಗಿರುವ ನಿಗಮ ಮಂಡಳಿ ಸ್ಥಾನವನ್ನು ತಿರಸ್ಕರಿಸುತ್ತಿದ್ದಾರೆ. ಕೊಟ್ಟರೆ ಸಚಿವ ಸ್ಥಾನ ಕೊಡಿ, ನಿಮ್ಮ ನಿಗಮ ಮಂಡಳಿ ಕೊಟ್ಟು ನಮ್ಮನ್ನು ಅವಮಾನಿಸಬೇಡಿ ಎಂದವರು ಕೋಪೋದ್ರಿಕ್ತಗೊಂಡಿದ್ದಾರೆ. ಇದು ಒಂದು ತಲೆನೋವಾದರೆ, ಹಿಂದುಳಿದ ವರ್ಗಗಳ ಆಯೋಗದ ನೇಮಕದಲ್ಲಿ ಸಿಎಂ ಯಡವಟ್ಟು ಮಾಡಿಕೊಂಡಿದ್ಧಾರೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಸ್ಥಾನವನ್ನು ಶಾಸಕ ಲಾಲಾಜಿ ಮೆಂಡನ್​ಗೆ ನೀಡಲಾಗಿತ್ತು. ಅದು ಸಾಂವಿಧಾನಿಕ ಹುದ್ದೆಯಾಗಿದ್ದು ಶಾಸಕರಿಗೆ ಕೊಡುವ ಹಾಗಿಲ್ಲ. ಅಲ್ಲದೇ, ಅದು ರಾಜ್ಯಪಾಲರ ಮೂಲಕ ನೇಮಕ ಆಗಬೇಕಿತ್ತು. ಈ ತಪ್ಪಿನ ಅರಿವಾದ ಬಳಿಕ ಸರ್ಕಾರ ಹಿಂದುಳಿದ ಆಯೋಗದ ನೇಮಕದ ಆದೇಶವನ್ನು ವಾಪಸ್ ಪಡೆದಿದೆ.

ಇದನ್ನೂ ಓದಿ: ನನಗೆ ನಿಗಮ ಮಂಡಳಿ ಘೋಷಿಸಿ ಅವಮಾನ: ಚಿತ್ರದುರ್ಗದ ಶಾಸಕ ಜಿಹೆಚ್ ತಿಪ್ಪಾರೆಡ್ಡಿ

ಇದು ಒಂದು ಕಡೆಯಾದರೆ, ನಿಗಮ ಮಂಡಳಿಗಳ ಒಟ್ಟಾರೆ ನೇಮಕಾತಿಗೆ ಪಕ್ಷದ ತಳಮಟ್ಟದಲ್ಲಿ ಅಸಮಾಧಾನದ ಹೊಗೆ ದಟ್ಟವಾಗಿ ಎದ್ದಿದೆ. ಎಲ್ಲಾ ನಿಗಮ ಮಂಡಳಿ ಸ್ಥಾನಗಳನ್ನ ಶಾಸಕರಿಗೇ ಕೊಟ್ಟುಬಿಟ್ಟರೆ ಕಾರ್ಯಕರ್ತರು ಏನು ಮಾಡುವುದು ಎಂದು 30 ಜಿಲ್ಲೆಗಳ ಬಿಜೆಪಿ ಅಧ್ಯಕ್ಷರು ಕುದಿದುಹೋಗಿದ್ದಾರೆನ್ನಲಾಗಿದೆ. ಶಾಸಕರಿಗೆ ಶಾಸಕ ಸ್ಥಾನ ಇದೆ. ಕೆಲಸ ಮಾಡಲು ಅವರ ಕ್ಷೇತ್ರ ಇದೆ. ಆದರೆ, ನಮಗೆ ಏನಿದೆ? ನಾವು ಪಕ್ಷಕ್ಕಾಗಿ ದುಡಿಯಲು ಮಾತ್ರ ಇರುವುದಾ? ಎಂದು ಈ ಜಿಲ್ಲಾಧ್ಯಕ್ಷರುಗಳು ಬಿಜೆಪಿ ರಾಜ್ಯಾಧ್ಕ್ಷಕ್ಷ ನಳಿನ್ ಕುಮಾರ್ ಕಟೀಲ್ ಅವರಲ್ಲಿ ಪ್ರಶ್ನಿಸಿದ್ದಾರೆ.

ತಮ್ಮ ಗಮನಕ್ಕೆ ತಾರದೆ ನಿಗಮ ಮಂಡಳಿ ನೇಮಕಾತಿ ಮಾಡಿದ್ದರಿಂದ ಬೇಸರಗೊಂಡಿದ್ದ ಕಟೀಲ್ ಅವರನ್ನು ಪಕ್ಷದ ಕಾರ್ಯಕರ್ತರ ಅಸಮಾಧಾನ ಇನ್ನಷ್ಟು ರೊಚ್ಚಿಗೆಬ್ಬಿಸಿದೆ.

ಪಕ್ಷದ ಕೋರ್ ಕಮಿಟಿ ಸದಸ್ಯರೂ ಯಡಿಯೂರಪ್ಪ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಕೋರ್ ಕಮಿಟಿ ಸಭೆ ಕರೆದು ನಿಗಮ ಮಂಡಳಿಗಳಿಗೆ ನೇಮಕಾತಿ ಆಗಬೇಕಿತ್ತು. ಆದರೆ, ಇದ್ಯಾವುದನ್ನೂ ಪಾಲಿಸಿಲ್ಲ. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮುಖ್ಯಮಂತ್ರಿಗಳು ಒಮ್ಮುಖ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಅಸಮಾಧಾನ ಕೋರ್ ಕಮಿಟಿ ಸದಸ್ಯರಲ್ಲಿ ಇದೆ ಎನ್ನಲಾಗಿದೆ.

ಇದನ್ನೂ ಓದಿ: ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನಿರಾಕರಿಸಿದ ತೇರದಾಳ ಶಾಸಕ ಸಿದ್ದು ಸವದಿ

ಇದರ ಜೊತೆಗೆ, ನಿಗಮ ಮಂಡಳಿ ನೇಮಕದ ಹಿಂದ ಮುಖ್ಯಮಂತ್ರಿಗಳ ಮಗ ಬಿ.ವೈ. ವಿಜಯೇಂದ್ರ ಅವರ ಕೈವಾಡ ಇದೆ. ವಿಜಯೇಂದ್ರ ಅವರೇ ನಿಗಮ ಮಂಡಳಿ ನೇಮಕಾತಿಯ ಪಟ್ಟಿ ಸಿದ್ಧ ಮಾಡಿ ಸಿಎಂ ಮೂಲಕ ಆದೇಶ ಹೊರಡಿಸಿದ್ದಾರೆ ಎಂಬ ಆರೋಪ ಇದೆ. ಇದು ಪಕ್ಷದೊಳಗೆ ಅಸಮಾಧಾನ ಹೆಚ್ಚಿಸಿದೆ.

ಪಕ್ಷದ ಕಾರ್ಯಕರ್ತರು, ಕೋರ್ ಕಮಿಟಿ ಸದಸ್ಯರು ಇವರೆಲ್ಲರ ಅಭಿಪ್ರಾಯ ಸಂಗ್ರಹಿಸಿರುವ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಹೈಕಮಾಂಡ್​ಗೆ ದೂರು ನೀಡಲು ನಿರ್ಧರಿಸಿದ್ಧಾರೆನ್ನಲಾಗಿದೆ. ಅನೇಕ ಬಿಕ್ಕಟ್ಟುಗಳ ಮಧ್ಯೆ ಒಂದು ವರ್ಷ ಆಡಳಿತ ಪೂರ್ಣಗೊಳಿಸಿದ ಬಿಎಸ್ ಯಡಿಯೂರಪ್ಪ ಈಗ ಈ ಹೊಸ ತಲೆನೋವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಕುತೂಹಲ. ಹಾಗೆಯೇ, ಹೈಕಮಾಂಡ್​ನವರು ಯಡಿಯೂರಪ್ಪಗೆ ಅಂಕುಶ ಹಾಕಲು ಯತ್ನಿಸುತ್ತಾ ಎಂಬುದೂ ಕುತೂಹಲ.

ವರದಿ: ಚಿದಾನಂದ ಪಟೇಲ್
Published by:Vijayasarthy SN
First published: