ಕೊಪ್ಪಳ: ಸಿದ್ದರಾಮಯ್ಯ (Siddaramaiah) ನನಗೆ ಜೋಕರ್ ಎನ್ನುತ್ತಾರೆ. ಹಾಗಾಗಿ ನಾನು ಸಿದ್ದರಾಮಯ್ಯ ಅವರನ್ನು ಬ್ರೋಕರ್ ಎನ್ನುತ್ತೇನೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ವ್ಯಂಗ್ಯವಾಡಿದ್ದಾರೆ. ಕೊಪ್ಪಳದಲ್ಲಿ ಇಂದು ಮಾತನಾಡಿದ ಅವರು, ಜೋಕರ್‌ಗಳಿಂದ ಆರೋಗ್ಯಕ್ಕೆ ಒಳ್ಳೆಯದು. ಆದರೆ ವಿಲನ್‌ಗಳಾದರೆ ಕಷ್ಟ. ಕತ್ತೆಗೂ ಕಾಂಗ್ರೆಸ್ ಬೇಡವಾಗಿದೆ ಎಂದು ನಳಿನ್ ಕುಮಾರ್ ಹೇಳಿದರು.
ಸಿದ್ದರಾಮಯ್ಯ ತಾಕತ್ತು ಇದ್ದರೆ ಬದಾಮಿಯಲ್ಲಿ ಚುನಾವಣೆಗೆ ನಿಲ್ಲಲಿ ಎಂದ ನಳಿನ್ ಕುಮಾರ್ ಕಟೀಲ್ ಈ ಬಾರಿ ಹುಲಿಯಾ ಕಾಡಿಗೆ ಹೋಗುತ್ತದೆ. ಸಿದ್ದರಾಮಣ್ಣ ಮತ್ತೆ ಮುಖ್ಯಮಂತ್ರಿಯಾಗುವುದಿಲ್ಲ. ಈ ಹಿಂದೆ ಸೋನಿಯಾ ಗಾಂಧಿ ಕಾಲು ಹಿಡಿದು ಮುಖ್ಯಮಂತ್ರಿಯಾದರು. ದೇವೇಗೌಡರಿಂದ ಬೆಳೆದು ಈಗ ಅವರನ್ನು ಸಿದ್ದರಾಮಣ್ಣ ತುಳಿದರು ಎಂದು ವ್ಯಂಗ್ಯವಾಡಿದರು.
ಇನ್ನು ಕ್ಷೇತ್ರಗಳಿಗೆ ಜನಪ್ರಿಯ ಶಾಸಕರಲ್ಲ, ಜನಪರ ಶಾಸಕರು ಎಂದ ನಳಿನ್ ಕುಮಾರ್, ವಿಜಯ ಸಂಕಲ್ಪ ಮಾಡಿಸುವ ಯಾತ್ರೆ ಇದು. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತವಾಗುತ್ತದೆ. ನಾವು ರಾಮಭಕ್ತರು, ಆಂಜನೇಯ ಭಕ್ತರು ಸೇರಿ ಈ ನೆಲದಲ್ಲಿ ಟಿಪ್ಪು ಭಜನೆ ಮಾಡುವವರನ್ನು ಹೊರ ಕಳುಹಿಸಬೇಕು. 2024ಕ್ಕೆ ಶ್ರೀರಾಮನ ಪಟ್ಟಾಭಿಷೇಕವಾಗುತ್ತದೆ ಎಂದರು.
ಇನ್ನು ರಾಹುಲ್ ಗಾಂಧಿ ಕೊರೊನಾ ಲಸಿಕೆ ಹಾಕಿಕೊಂಡರೆ ಮಕ್ಕಳಾಗುವುದಿಲ್ಲ ಎಂದಿದ್ದರು ಆದರೆ ಅವರಿಗೆ ಈಗಲೂ ಮದುವೆಯಾಗಿಲ್ಲ ಎಂದು ರಾಹುಲ್ ಗಾಂಧಿ ಬಗ್ಗೆ ಅಪಹಾಸ್ಯ ಮಾಡಿದ ನಳಿನ್ ಕುಮಾರ್ ಕಟೀಲ್, ಸಿದ್ದರಾಮಣ್ಣ ಹಿಜಾಬ್ ಪರ ಇದ್ದಾರೆ. ಡಿಜೆಹಳ್ಳಿಯಲ್ಲಿ ಕಲ್ಲು ಹೊಡೆದವರ ಪರ ಇದ್ದಾರೆ. ಸಿದ್ದರಾಮಯ್ಯನವರ ಆಡಳಿತದ ಕಾಲದಲ್ಲಿ 220 ಪಿಎಫ್ಐ ಕಾರ್ಯಕರ್ತರ ಕೇಸ್ ವಾಪಸ್ ತೆಗೆದರು. ನಿಮ್ಮ ಕಾಲದಲ್ಲಿ 24 ಹಿಂದು ಕಾರ್ಯಕರ್ತರ ಹತ್ಯೆ ಆಯಿತು. ಹೀಗಾಗಿ ಕಾಂಗ್ರೆಸ್ ಭಯೋತ್ಪಾದಕರ ಪರವಾಗಿರುವ ಪಕ್ಷ ಎಂದು ಟೀಕಿಸಿದರು.
ಇನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನಪರ ಕೆಲಸ ಮಾಡಿದ್ದಾರೆ ಎಂದ ನಳಿನ್ ಕುಮಾರ್ ಕಟೀಲ್, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಜನವಿರೋಧಿ, ದೇಶವಿರೋಧಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಭ್ರಷ್ಟಾಚಾರಿಗಳ ಪರವಾಗಿದೆ. ಸಿದ್ದರಾಮಯ್ಯ ಜನತಾದಳದಲ್ಲಿ ಬ್ರೋಕರ್ ಕೆಲಸ ಮಾಡಿ ಅದೇ ಪಕ್ಷದ ನಾಯಕರನ್ನು ತುಳಿದು ಕಾಂಗ್ರೆಸ್‌ಗೆ ಬಂದು ಸೋನಿಯಾ ಗಾಂಧಿ ಕಾಲು ಹಿಡಿದು ಮುಖ್ಯಮಂತ್ರಿ ಆದರು ಎಂದು ಹರಿಹಾಯ್ದರು.
2024ರಲ್ಲಿ ಅಯೋಧ್ಯೆಯಲ್ಲಿ ರಾಮನ ಪಟ್ಟಾಭಿಷೇಕಕ್ಕೂ ಮೊದಲು, ಮೊದಲು ಅಂಜನಾದ್ರಿ ಕ್ಷೇತ್ರ ಅಭಿವೃದ್ಧಿ ಆಗುತ್ತದೆ. ಬಿಜೆಪಿಗೆ ಅಂಜನಾದ್ರಿ ಹಾಗೂ ದತ್ತಮಾಲಾ ಇಬ್ಬರೂ ಭಕ್ತರು ಬೇಕು. ಕಾಂಗ್ರೆಸ್ ಪಕ್ಷಕ್ಕೆ ಟಿಪ್ಪು ಸುಲ್ತಾನ್ ಬೇಕು ಎಂದರು.
ನಿನ್ನೆ ಬಳ್ಳಾರಿಯಲ್ಲಿ ಮಾತನಾಡಿದ್ದ ನಳಿನ್ ಕುಮಾರ್ ಕಟೀಲ್, ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ನಿರುದ್ಯೋಗಿ ಆಗುತ್ತಾರೆ. ಕಾಂಗ್ರೆಸ್ ಹಡಗು ಮುಳುಗುತ್ತಿದೆ. ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯ ಅಭಿವೃದ್ಧಿ ಆಗುತ್ತಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಜಗಳ, ಬೀದಿ ಕಾಳಗ ನಡೆಯುತ್ತಿದೆ. ಇಬ್ಬರನ್ನು ಮನೆ ಕಳುಹಿಸಿ ಮಲ್ಲಿಕಾರ್ಜುನ ಖರ್ಗೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ ಎಂದರು. ರಾಜ್ಯದಲ್ಲಿ ಪರಿವರ್ತನೆ ಗಾಳಿ ಬೀಸುತ್ತಿದೆ. ಬಿಜೆಪಿ ಸಂಘಟನಾತ್ಮಕ ಆಧಾರದಲ್ಲಿ ಪೇಜ್ ಪ್ರಮುಖರ ಸಭೆ ನಡೆಯುತ್ತಿದೆ ಎಂದು ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ