ಕಲಬುರಗಿ(ಆ.21): ಸಮಾಜದ ಕಟ್ಟಕಡೆ ವ್ಯಕ್ತಿಗೆ ಸಮಾನತೆ ಸಿಗಬೇಕೆಂದು ನಮ್ಮ ಸಂವಿಧಾನ ಹೇಳಿದೆ. ವಿಶೇಷವಾಗಿ ಎಸ್ಸಿ, ಎಸ್ಟಿ ಹಾಗೂ ಮಹಿಳೆಯರಿಗೆ ವಿಶೇಷ ಸ್ಥಾನಮಾನ ಸಿಗಬೇಕಿದೆ. ಕೇಂದ್ರ ಮಂತ್ರಿ ಮಂಡಲದಲ್ಲಿ ಈ ಎಲ್ಲಾ ವರ್ಗದವರಿಗೆ ನ್ಯಾಯಸಮ್ಮತ ಸ್ಥಾನಮಾನ ಸಿಕ್ಕಿದೆ. ಮೋದಿ ನೇತೃತ್ವದಲ್ಲಿ ವಿಶ್ವಮಟ್ಟದಲ್ಲಿ ಮಾನ್ಯತೆ ಸಿಕ್ಕಿದೆ. ಹಿಂದೆಂದೂ ಕಾಣದ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿವೆ. ದೇಶದಲ್ಲಿ ಕೊರೊನಾ ನಿಯಂತ್ರಣ ಮಾಡುವಲ್ಲಿ ಕೇಂದ್ರ ಯಶಸ್ವಿ ಆಗಿದೆ. ಆತ್ಮನಿರ್ಭಾರ್ ಯೋಜನೆಯಲ್ಲಿ ಆರ್ಥಿಕ ಚೇತರಿಕೆಗೆ ಒತ್ತು ನೀಡಲಾಗಿದೆ. ಕಾಂಗ್ರೆಸ್ ಪಕ್ಷ ವಿರೋಧ ಪಕ್ಷಕ್ಕೂ ನಾಲಾಯಕ್ ಅಂತಾ ಜನ ಮನೆಗೆ ಕಳುಹಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಲೇವಡಿ ಮಾಡಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅಫ್ಘಾನಿಸ್ತಾನ ವಿಚಾರದಲ್ಲಿ ಕಾಂಗ್ರೆಸ್ ಏನ್ ಹೇಳಬೇಕೋ ಅದನ್ನು ಹೇಳ್ತಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣ ಮೌನಕ್ಕೆ ಜಾರಿದೆ. ಕಾಂಗ್ರೆಸ್ ಪಕ್ಷದಲ್ಲಿ ಚರ್ಚೆಗೆ ವಿಚಾರಗಳಿಲ್ಲ, ವಿರೋಧಿಸುವ ವಿಚಾರಗಳಿವೆ. ಸಿಎಎ, ಎನ್ಆರ್ಸಿ ಸೇರಿದಂತೆ ಪ್ರತಿಯೊಂದು ವಿಷಯಗಳಲ್ಲಿ ಗಲಭೆ ಎಬ್ಬಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಜನರ ಮಧ್ಯೆ ಬೆಂಕಿ ಹಚ್ಚುವ ಕೆಲಸವನ್ನು ಕಾಂಗ್ರೆಸ್ ನಿರಂತರವಾಗಿ ಮಾಡುತ್ತಿದೆ ಎಂದು ಕಿಡಿಕಾರಿದರು.
ಮುಂದುವರೆದ ಅವರು, ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಉತ್ತಮ ಆಡಳಿತ ನೀಡಲಾಗ್ತಿದೆ. ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯುತ್ತಿವೆ. ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಹಾಗೂ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ-ಈ ಮೂರು ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಲಿದೆ. ಬೆಳಗಾವಿಯಲ್ಲಿ 25 ವರ್ಷದಿಂದ ಪಕ್ಷದ ಚಿಹ್ನೆ ಅಡಿಯಲ್ಲಿ ನಿಂತಿಲ್ಲ, ಆದರೆ ಈ ಬಾರಿ ಚಿಹ್ನೆ ಅಡಿಯಲ್ಲಿ ಅಖಾಡಕ್ಕೆ ಇಳಿಯಲಿದ್ದೇವೆ ಎಂದರು.
ಸರ್ಕಾರ ಬಹಳಷ್ಟು ದಿನ ಇರಲ್ಲ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಟೀಲ್, ಸಿದ್ದರಾಮಯ್ಯಗೆ ಶಾಶ್ವತವಾಗಿ ವಿಪಕ್ಷ ಸ್ಥಾನದಲ್ಲಿ ಕೊಡುತ್ತೇವೆ ಅಂತಾ ಖಾತ್ರಿಯಾಗಿದೆ. ಅದಕ್ಕಾಗಿ ಜ್ಯೋತಿಷ್ಯ ಹೇಳುವ ಕೆಲಸವನ್ನು ಮಾನ್ಯ ಸಿದ್ದರಾಮಯ್ಯನವರು ಮಾಡ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಂಪುಟದಲ್ಲಿ ಕಲಬುರಗಿ ಜಿಲ್ಲೆಗೆ ಸ್ಥಾನಮಾನ ಸಿಗದ ವಿಚಾರವಾಗಿ, ಇನ್ನೂ ನಾಲ್ಕು ಸಚಿವ ಸ್ಥಾನಗಳು ಖಾಲಿ ಇವೆ. ಆ ನಾಲ್ಕು ಸ್ಥಾನಗಳಲ್ಲಿ ಕಲಬುರಗಿ ಜಿಲ್ಲೆಗೆ ಸಚಿವ ಸ್ಥಾನ ನೀಡಲಾಗುವುದು ಎಂದರು.
ಯಾದಗಿರಿಯಲ್ಲಿ ಕೇಂದ್ರ ಸಚಿವರಿಗೆ ನಾಡಬಂದೂಕಿನಿಂದ ಸ್ವಾಗತಿಸಿದ ಪ್ರಕರಣ ಕುರಿತು, ಮಡಿಕೇರಿ ಹಾಗೂ ಯಾದಗಿರಿಯಲ್ಲಿ ನಾಡಬಂದೂಕಿನಿಂದ ಸ್ವಾಗತಕೋರುವ ಪದ್ದತಿಯಿದೆ. ಹಾಗಾಗಿ ತಮ್ಮ ನಾಯಕರು ಬಂದವೇಳೆ ಬೆಂಬಲಿಗರು ನಾಡಬಂದೂಕಿನಿಂದ ಗುಂಡು ಹಾರಿಸಿದ್ದಾರೆ ಎಂದು ನಳೀನ್ ಕುಮಾರ್ ಕಟೀಲ್ ಗುಂಡು ಹಾರಿಸಿದ್ದನ್ನು ಸಮರ್ಥಿಸಿಕೊಂಡರು.
ಆದರೆ ಪೊಲೀಸರ ತಲೆದಂಡವೇಕೆ ಎಂಬ ಪ್ರಶ್ನೆಗೆ ಕಟೀಲ್ ಗಲಿಬಿಲಿಗೊಂಡರು. ಈ ಬಗ್ಗೆ ಗೃಹ ಇಲಾಖೆ ತನಿಖೆ ನಡೆಸುತ್ತಿದೆ ಎಂದು ಹೇಳಿ ಜಾರಿಕೊಂಡರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ