ನಾವು ಆಪರೇಷನ್ ಕಮಲ ನಿಲ್ಲಿಸಿದ್ದೇವೆ, ಹಾಗೆಂದು ಪಕ್ಷಕ್ಕೆ ಬರುವವರನ್ನು ಬೇಡ ಅನ್ನಲ್ಲ; ನಳಿನ್ ಕುಮಾರ್ ಕಟೀಲ್

ಜಿ.ಟಿ. ದೇವೇಗೌಡ ಬಿಜೆಪಿ ಸೇರುವ ಬಗ್ಗೆ ಪ್ರತಿಕ್ರಿಯಿಸಿರುವ ನಳಿನ್ ಕುಮಾರ್ ಕಟೀಲ್, ನಾವೀಗ ಆಪರೇಷನ್ ಕಮಲ ನಿಲ್ಲಿಸಿದ್ದರೂ ಬಾಗಿಲು ತೆರೆದೇ ಇದೆ. ಯಾರೇ ಪಕ್ಷಕ್ಕೆ ಬಂದರೂ ನಾವು ಸ್ವಾಗತಿಸುತ್ತೇವೆ. ರಾಜೀನಾಮೆ ನೀಡಿ ಬಂದರೂ ಸ್ವಾಗತವಿದೆ ಎಂದಿದ್ದಾರೆ.

news18-kannada
Updated:February 20, 2020, 2:24 PM IST
ನಾವು ಆಪರೇಷನ್ ಕಮಲ ನಿಲ್ಲಿಸಿದ್ದೇವೆ, ಹಾಗೆಂದು ಪಕ್ಷಕ್ಕೆ ಬರುವವರನ್ನು ಬೇಡ ಅನ್ನಲ್ಲ; ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್​ ಕಟೀಲ್​
  • Share this:
ಯಾದಗಿರಿ (ಫೆ. 20): ಆಪರೇಷನ್ ಕಮಲದ ಸಹಾಯದಿಂದಲೇ ಬಿ.ಎಸ್​. ಯಡಿಯೂರಪ್ಪ ಬಿಜೆಪಿ ಸರ್ಕಾರ ರಚಿಸಿದ್ದಾರೆ ಎಂದು ಕಾಂಗ್ರೆಸ್​-ಜೆಡಿಎಸ್​ ನಾಯಕರು ಆರಂಭದಿಂದಲೂ ಆರೋಪಿಸುತ್ತಲೇ ಬಂದಿದ್ದಾರೆ. ಬಿಜೆಪಿ ನಾಯಕರೂ ಸಹ ಇದನ್ನು ಸಾರಾಸಗಟಾಗಿ ತಳ್ಳಿಹಾಕುತ್ತಲೇ ಬಂದಿದ್ದರು. ಆದರೆ, ಈ ವಿಚಾರವಾಗಿ ಇಂದು ಯಾದಗಿರಿಯಲ್ಲಿ ವ್ಯತಿರೀಕ್ತ ಹೇಳಿಕೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ "ನಾವೀಗ ಆಪರೇಷನ್ ಕಮಲವನ್ನು ನಿಲ್ಲಿಸಿದ್ದೇವೆ. ಆದರೆ, ನಮ್ಮ ಪಕ್ಷದ ಬಾಗಿಲು ಎಲ್ಲರಿಗೂ ತೆರೆದೇ ಇದ್ದು ಬರುವವರನ್ನು ಬೇಡ ಎನ್ನುವುದಿಲ್ಲ" ಎನ್ನುವ ಮೂಲಕ ಸರ್ಕಾರ ರಚನೆಗಾಗಿ ಆಪರೇಷನ್ ಕಮಲ ಮಾಡಿದ್ದನ್ನು ಬಹಿರಂಗವಾಗಿ ಒಪ್ಪಿಕೊಂಡಂತಾಗಿದೆ.

ಜೆಡಿಎಸ್ ನಾಯಕ ಜಿ.ಟಿ. ದೇವೇಗೌಡ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಳಿನ್ ಕುಮಾರ್ ಕಟೀಲ್, "ನಾವೀಗ ಆಪರೇಷನ್ ಕಮಲ ನಿಲ್ಲಿಸಿದ್ದರೂ, ಬಾಗಿಲು ತೆರೆದೇ ಇದೆ. ಯಾರೇ ಪಕ್ಷಕ್ಕೆ ಬಂದರೂ ನಾವು ಸ್ವಾಗತಿಸುತ್ತೇವೆ. ರಾಜೀನಾಮೆ ಕೊಟ್ಟು ಬಂದರೂ ಸ್ವಾಗತವಿದೆ. ನಮ್ಮ ಪಕ್ಷಕ್ಕೆ ಬನ್ನಿ ಎಂದು ನಾವು ಯಾರನ್ನೂ ಕರೆಯುವುದಿಲ್ಲ. ಆದರೆ, ಅವರಾಗೇ ಪಕ್ಷಕ್ಕೆ ಸೇರ್ಪಡೆಯಾದರೆ ನಮ್ಮದೇನೂ ಅಭ್ಯಂತರವಿಲ್ಲ" ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಿಶ್ವದ ಶ್ರೀಮಂತ ಕನ್ನಡಿಗ ಬಿ.ಆರ್​. ಶೆಟ್ಟಿಗೆ ಸಂಕಷ್ಟ; ತಾನೇ ಕಟ್ಟಿದ ಸಂಸ್ಥೆಗೆ ರಾಜೀನಾಮೆ ನೀಡಿದ ಉದ್ಯಮಿ

ಬಿ.ಎಸ್​. ಯಡಿಯೂರಪ್ಪನವರದ್ದು ಜನಾದೇಶದ ಸರ್ಕಾರ ಅಲ್ಲ ಎನ್ನುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕಾಂಗ್ರೆಸ್ ಹಾಗೂ ಜೆಡಿಎಸ್​ಗಿಂತ ಹೆಚ್ಚಿನ ಜನಾದೇಶ ಬಿಜೆಪಿಗಿದೆ ಎಂದು ಲೇವಡಿ ಮಾಡಿದ್ದಾರೆ.

ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿಯವರನ್ನು ಬಿಜೆಪಿ ಶಾಸಕ ಉಮೇಶ್ ಕತ್ತಿ ಭೇಟಿಯಾಗಿರುವ ಬಗ್ಗೆ ಸ್ಪಷ್ಟನೆ ನೀಡಿರುವ ನಳಿನ್ ಕುಮಾರ್, ಇವೆಲ್ಲ ಊಹಾಪೋಹಗಳು. ರಾಜ್ಯದಲ್ಲಿ ನಮ್ಮ ಸರ್ಕಾರ 3 ವರ್ಷ ಸುಭದ್ರವಾಗಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 2017ರ ಉತ್ತರ ಪ್ರದೇಶ ಚುನಾವಣೆ ವೇಳೆ ಅತ್ಯಾಚಾರ; ಬಿಜೆಪಿ ಶಾಸಕ ಸೇರಿ 6 ಜನರ ಮೇಲೆ ಕೇಸ್ ದಾಖಲು

ರಾಷ್ಟ್ರ ವಿರೋಧಿ ಹೇಳಿಕೆ ನೀಡಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಈ ಹಿಂದೆ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಸೋಷಿಯಲ್ ಮೀಡಿಯಾದಲ್ಲಿ ಟೀಕೆ ಮಾಡಿದ್ದಾರೆ ಎಂದು ಹತ್ತಾರು ಜನರನ್ನು ಬಂಧಿಸಿದ್ದರು. ಅದು ಪ್ರಜಾಪ್ರಭುತ್ವದ ಕಗ್ಗೊಲೆ ಅಲ್ಲವೇ? ಯಾರು ಗನ್ ತೋರಿಸಿದ್ದಾರೋ, ಯಾರು ಕಲ್ಲು ಹೊಡೆದಿದ್ದಾರೋ, ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದಿದ್ದಾರೋ? ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದೇವೆ. ಕವನ ಓದಿದವರನ್ನೆಲ್ಲ ನಾವು ಬಂಧಿಸಿಲ್ಲ ಎಂದಿದ್ದಾರೆ.ಯಾದಗಿರಿಗೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರಿಗೆ ಝೀರೋ ಟ್ರಾಫಿಕ್ ನೀಡಿದ ಪೊಲೀಸರ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದೆ. ಪಕ್ಷದ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಳಿನ್ ಕುಮಾರ್​ಗೆ ಝೀರೋ ಟ್ರಾಫಿಕ್ ನೀಡಿ, ಸಾರ್ವಜನಿಕರಿಗೆ ತೊಂದರೆ ನೀಡಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

(ವರದಿ: ನಾಗಪ್ಪ ಮಾಲಿಪಾಟೀಲ್)
First published:February 20, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading