• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಇಂದು ಸಂಜೆಯೇ ಆಗಮನ; ತವಕದಲ್ಲಿ ಸಚಿವಾಕಾಂಕ್ಷಿಗಳು

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಇಂದು ಸಂಜೆಯೇ ಆಗಮನ; ತವಕದಲ್ಲಿ ಸಚಿವಾಕಾಂಕ್ಷಿಗಳು

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್

ಶಿವಮೊಗ್ಗದಲ್ಲಿ ಶನಿವಾರ ನಡೆಯಲಿರುವ ಬಿಜೆಪಿ ಕೋರ್ ಕಮಿಟಿ ಸಭೆ ಮತ್ತು ಭಾನುವಾರ ನಡೆಯಲಿರುವ ಕಾರ್ಯಕಾರಿಣಿ ಸಭೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೊತ್ತು ತರುತ್ತಿರುವ ಸಂದೇಶದತ್ತ ಕುತೂಹಲದ ಕಿವಿ ನೆಟ್ಟಿವೆ.

  • Share this:

ಬೆಂಗಳೂರು(ಜ. 01): ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶದಿಂದ ನವೋತ್ಸಾಹದಲ್ಲಿರುವ ರಾಜ್ಯ ಬಿಜೆಪಿ ಮುಖಂಡರು ಇದೀಗ ಸಂಪುಟ ವಿಸ್ತರಣೆಯ ಕುತೂಹಲದಲ್ಲಿದ್ದಾರೆ. ನಾಳೆ ಕೋರ್ ಕಮಿಟಿ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ವಿಚಾರದ ಚರ್ಚೆಗಳು ಗರಿಗೆದರಿವೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಇಂದು ಸಂಜೆಯೇ ಬೆಂಗಳೂರಿಗೆ ಆಗಮಿಸಿದ್ದಾರೆ. ಶಿವಮೊಗ್ಗದಲ್ಲಿ ನಾಳೆ ನಡೆಯಲಿರುವ ಕೋರ್ ಕಮಿಟಿ ಸಭೆಯಲ್ಲಿ ಅರುಣ್ ಸಿಂಗ್ ಏನು ಸಂದೇಶ ತಂದಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ನಿನ್ನೆ ಈ ಬಗ್ಗೆ ಮಾತನಾಡಿ, ಅರುಣ್ ಸಿಂಗ್ ಏನು ಸಂದೇಶ ತಂದಿದ್ದಾರೆ ಕಾದುನೋಡಬೇಕು ಎಂದು ಹೇಳುವ ಮೂಲಕ ಸಂಪುಟ ವಿಸ್ತರಣೆ ವಿಚಾರ ಟಾಪ್ ಸೀಕ್ರೆಟ್ ಆಗಿರುವ ಸುಳಿವು ನೀಡಿದ್ದಾರೆ.


ಇಂದು ಸಂಜೆ 5:45ರ ವಿಮಾನದಲ್ಲಿ ದೆಹಲಿಯಿಂದ ಬೆಂಗಳೂರಿಗೆ ಹೊರಡುವ ಅರುಣ್ ಸಿಂಗ್ ರಾತ್ರಿ ಕುಮಾರಕೃಪ ಗೆಸ್ಟ್ ಹೌಸ್​ನಲ್ಲಿ ಉಳಿದುಕೊಳ್ಳಲಿದ್ದಾರೆ. ಬೆಳಗ್ಗೆ ಇಲ್ಲಿಂದ ರಸ್ತೆ ಮೂಲಕ ಹೊರಟು ಶಿವಮೊಗ್ಗಕ್ಕೆ ನಾಳೆ ಶನಿವಾರ ಮಧ್ಯಾಹ್ನ 1 ಗಂಟೆಗೆ ತಲುಪಲಿದ್ದಾರೆ. ಅಲ್ಲಿ ಜಿಲ್ಲಾ ಪದಾಧಿಕಾರಿಗಳ ಸಭೆ ನಡೆಸಲಿದ್ದಾರೆ. ಸಂಜೆ 6ಕ್ಕೆ ಗ್ರಾಮ ಸೇವಕ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ನಂತರ ರಾತ್ರಿ 8ಕ್ಕೆ ಶಿವಮೊಗ್ಗದಲ್ಲಿ ನಡೆಯುವ ಕೋರ್ ಕಮಿಟಿ ಸಭೆ ನಡೆಸಲಿದ್ದಾರೆ. ಇಲ್ಲಿ ಸಂಪುಟ ವಿಸ್ತರಣೆ ವಿಚಾರವಾಗಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ನಂತರ ನಾಳೆ ರಾತ್ರಿ ಖಾಸಗಿ ಹೋಟೆಲ್​ನಲ್ಲಿ ಉಳಿದುಕೊಳ್ಳಲಿದ್ದಾರೆ.


ಇದನ್ನೂ ಓದಿ: Grama Panchayat Result: ರಾಮನಗರದಲ್ಲಿ ಕಾಂಗ್ರೆಸ್​ ಕೈಹಿಡಿದ ಡಿ.ಕೆ.ಬ್ರದರ್ಸ್ ತಂತ್ರಗಾರಿಕೆ


ಜ. 3, ಭಾನುವಾರ ಬೆಳಗ್ಗೆ 10:30ರಿಂದ ಸಂಜೆ 5ರವರೆಗೆ ಅವರು ಶಿವಮೊಗ್ಗದ ಪಿಇಎಸ್ ಕಾಲೇಜಿನಲ್ಲಿ ನಡೆಯುವ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಿದ್ದಾರೆ. ಸಭೆ ಮುಗಿದ ಬಳಿಕ ರಸ್ತೆ ಮೂಲಕವೇ ಬೆಂಗಳೂರಿಗೆ ವಾಪಸ್ ಬಂದು ಕುಮಾರಕೃಪಾ ಅತಿಥಿ ಗೃಹದಲ್ಲಿ ರಾತ್ರಿ ಉಳಿದುಕೊಂಡು ಸೋಮವಾರ ಬೆಳಗ್ಗೆ 8:20ರ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ.


ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೂಡ ನಾಳೆ ಶನಿವಾರ ಮಧ್ಯಾಹ್ನ 12ಕ್ಕೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 1:15ಕ್ಕೆ ಶಿವಮೊಗ್ಗ ತಲುಪಲಿದ್ದಾರೆ. ಕೋರ್ ಕಮಿಟಿ ಸಭೆ ಮತ್ತು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ಮುಗಿಸಿ ಭಾನುವಾರ ಸಂಜೆ 6ಕ್ಕೆ ಬೆಂಗಳೂರಿಗೆ ಮರಳಲಿದ್ದಾರೆ.


ವರದಿ: ಕೃಷ್ಣ ಜಿ.ವಿ.

top videos
    First published: