ಬಿಜೆಪಿ-ಆರೆಸ್ಸೆಸ್ ಸಭೆ: ಪರಿಷತ್​ನಲ್ಲಿ ಉತ್ತರ ಕರ್ನಾಟಕಕ್ಕೆ ಪ್ರಾಶಸ್ತ್ಯ ಕೊಡುವಂತೆ ಆರೆಸ್ಸೆಸ್ ಸಲಹೆ


Updated:June 23, 2018, 9:31 AM IST
ಬಿಜೆಪಿ-ಆರೆಸ್ಸೆಸ್ ಸಭೆ: ಪರಿಷತ್​ನಲ್ಲಿ ಉತ್ತರ ಕರ್ನಾಟಕಕ್ಕೆ ಪ್ರಾಶಸ್ತ್ಯ ಕೊಡುವಂತೆ ಆರೆಸ್ಸೆಸ್ ಸಲಹೆ
ಯಡಿಯೂರಪ್ಪನವರ ಪ್ರಾತಿನಿಧಿಕ ಚಿತ್ರ

Updated: June 23, 2018, 9:31 AM IST
- ರಮೇಶ್ ಹಿರೇಜಂಬೂರು, ನ್ಯೂಸ್18 ಕನ್ನಡ

ಬೆಂಗಳೂರು(ಜೂನ್ 23): ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ನೇಮಕ ಸಂಬಂಧ ಉತ್ತರ ಕರ್ನಾಟಕದ ಪರ ಆರ್​ಎಸ್​ಎಸ್ ಬ್ಯಾಟಿಂಗ್ ಮಾಡಿದೆ. ವಾಯುವ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ್​ಗೆ ಪರಿಷತ್ ವಿಪಕ್ಷ ನಾಯಕ ಸ್ಥಾನ ಹಾಗೂ ರಘುನಾಥ್ ರಾವ್ ಮಲ್ಕಾಪುರೆ ಅವ್ರನ್ನ ಉಪನಾಯಕ ಸ್ಥಾನಕ್ಕೆ ನೇಮಕ ಮಾಡುವಂತೆ ಬಿಜೆಪಿಗೆ ಆರ್​ಎಸ್​ಎಸ್ ಸಲಹೆ ಕೊಟ್ಟಿದೆ. ನಿನ್ನೆ ಬೆಂಗಳೂರಿನ ಆರ್​ಎಸ್​​ಎಸ್ ಕಚೇರಿ ಕೇಶವಕೃಪಾದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ನಾಯಕರಿಗೆ ಸಂಘ ಈ ಅಭಿಪ್ರಾಯ ತಿಳಿಸಿದೆ. ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಮತ್ತು ವಿಪಕ್ಷ ಮುಖ್ಯ ಸಚೇತಕ ಎರಡು ಸ್ಥಾನ‌ ದಕ್ಷಿಣ ಕರ್ನಾಟಕಕ್ಕೆ ನೀಡಲಾಗಿದೆ. ಹೀಗಾಗಿ ಪರಿಷತ್​ನಲ್ಲಿ ಪ್ರತಿಪಕ್ಷ ನಾಯಕ ಮತ್ತು ಉಪನಾಯಕ ಸ್ಥಾನಗಳನ್ನು ಉತ್ತರ ಕರ್ನಾಟಕಕ್ಕೆ ನೀಡುವಂತೆ ಸೂಚನೆ ಕೊಟ್ಟಿದ್ದಾರೆ.

ಚುನಾವಣಾ ಸೋಲಿನ ಪರಾಮರ್ಶೆ:
ರಾಜ್ಯದಲ್ಲಿ ಅಧಿಕಾರ ಹಿಡಿಯಲು ವಿಫಲವಾಗಿದ್ದು, ಹಾಗೂ ಮುಂದಿನ ಲೋಕಸಭಾ ಚುನಾವಣಾ ತಯಾರಿ ಬಗ್ಗೆ ಬಿಜೆಪಿ ನಾಯಕರ ಜೊತೆ ಆರ್​​ಎಸ್​ಎಸ್ ಮಹತ್ವದ ಮಾತುಕತೆ ನಡೆಸಿದೆ. ಜೊತೆಗೆ ಜಯನಗರ ಮತ್ತು ಆರ್.ಆನ್. ನಗರ ಚುನಾವಣೆಯಲ್ಲಾದ ಸೋಲಿನ ಬಗ್ಗೆಯೂ ಈ ಸಭೆಯಲ್ಲಿ ಪರಾಮರ್ಶೆ ನಡೆಸಲಾಯಿತು. ಜಯನಗರವು ಬಿಜೆಪಿಯ ಭದ್ರಕೋಟೆಯಾಗಿದ್ದರೂ, ಅಲ್ಲಿ ಅನುಕಂಪದ ಅಲೆಯಿದ್ದರೂ ಸೋಲುಂಟಾಗಿದ್ದಕ್ಕೆ ಆರೆಸ್ಸೆಸ್ ಮುಖಂಡರು ಅಚ್ಚರಿ ವ್ಯಕ್ತಪಡಿಸಿದರು. ಕೆಲ ಪ್ರಮುಖ ಬಿಜೆಪಿ ಮುಖಂಡರ ನಿರಾಸಕ್ತಿಯಿಂದಾಗಿ ಈ ಕ್ಷೇತ್ರಗಳಲ್ಲಿ ಬಿಜೆಪಿಗೆ ಸೋಲುಂಟಾಯಿತು ಎಂದು ಸಂಘದ ಮುಖಂಡರು ಅಭಿಪ್ರಾಯಪಟ್ಟರು.

ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್, ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ಸಂಸದೆ ಶೋಭಾಕರಂದ್ಲಾಜೆ ಸೇರಿದಂತೆ ಬಿಜೆಪಿಯ ಪ್ರಮುಖ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.
First published:June 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ