ಬಿಜೆಪಿಯ ಅತೃಪ್ತರಿಗೆ 8 ನಿಗಮ-ಮಂಡಳಿ; ಶರತ್ ಬಚ್ಚೇಗೌಡಗೆ ಗೃಹ ಮಂಡಳಿ, ನಂದೀಶ್ ರೆಡ್ಡಿಗೆ ಬಿಎಂಟಿಸಿ

ಕೆಆರ್ ಪುರಂನಲ್ಲಿ ಅನರ್ಹ ಶಾಸಕ ಭೈರತಿ ಬಸವರಾಜು ಅವರ ಕಟ್ಟಾ ವಿರೋಧಿ ಎನಿಸಿರುವ ಬಿಜೆಪಿಯ ನಂದೀಶ್ ರೆಡ್ಡಿ ಅವರಿಗೆ ಮಹತ್ವದ ಬಿಎಂಟಿಸಿ ನಿಗಮದ ಅಧ್ಯಕ್ಷ ಸ್ಥಾನ ಕೊಡಲಾಗಿದೆ. ಇನ್ನು, ಹೊಸಪೇಟೆಯಲ್ಲಿ ಆನಂದ್ ಸಿಂಗ್ ಅವರ ಹಾದಿಯನ್ನು ಸುಗಮಗೊಳಿಸಲು ಗವಿಯಪ್ಪ ಅವರಿಗೆ ಒಂದು ನಿಗಮ ಮಂಡಳಿ ಸ್ಥಾನ ಕೊಡಲಾಗಿದೆ.

news18-kannada
Updated:October 9, 2019, 3:58 PM IST
ಬಿಜೆಪಿಯ ಅತೃಪ್ತರಿಗೆ 8 ನಿಗಮ-ಮಂಡಳಿ; ಶರತ್ ಬಚ್ಚೇಗೌಡಗೆ ಗೃಹ ಮಂಡಳಿ, ನಂದೀಶ್ ರೆಡ್ಡಿಗೆ ಬಿಎಂಟಿಸಿ
ಸಿಎಂ ಬಿ.ಎಸ್.ಯಡಿಯೂರಪ್ಪ
  • Share this:
ಬೆಂಗಳೂರು(ಅ. 09): ಪಕ್ಷದೊಳಗೆ ಎದ್ದಿರುವ ಅಸಮಾಧಾನದ ಹೊಗೆಯನ್ನು ಶಮನ ಮಾಡಲು ಬಿಜೆಪಿಯು ನಿಗಮ-ಮಂಡಳಿ ಸ್ಥಾನಗಳನ್ನು ಗಾಳವಾಗಿ ಬಳಸಿಕೊಂಡಿದೆ. ಎಂಟು ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ಅತೃಪ್ತರಿಗೆ ನೀಡಿದೆ. ಹೊಸಕೋಟೆಯಲ್ಲಿ ಬಂಡಾಯದ ಬಾವುಟ ಹಾರಿಸಿರುವ ಶರತ್ ಬಚ್ಚೇಗೌಡ ಅವರಿಗೆ ಕರ್ನಾಟಕ ಗೃಹ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಉಪ-ಚುನಾವಣೆಯಲ್ಲಿ ಅನರ್ಹ ಶಾಸಕರಿಗೆ ಟಿಕೆಟ್ ನೀಡಿದರೆ ಬಿಜೆಪಿಯೊಳಗೆ ಬಂಡಾಯ ಏಳುವ ಸೂಚನೆ ಅದಾಗಲೇ ಸಿಕ್ಕಿರುವ ಹಿನ್ನೆಲೆಯಲ್ಲಿ ಪಕ್ಷವು ಅತೃಪ್ತರನ್ನು ಈ ರೀತಿಯಾಗಿ ಓಲೈಸುವ ಪ್ರಯತ್ನ ಮಾಡಿದೆ.

ಹೊಸಕೋಟೆ, ಹಿರೇಕೆರೂರು, ಕೆಆರ್ ಪುರಂ, ಹೊಸಪೇಟೆ, ಕಾಗವಾಡ, ಮಸ್ಕಿ, ಗೋಕಾಕ್ ಮತ್ತು ಯಲ್ಲಾಪುರದಲ್ಲಿ ಅಸಮಾಧಾನಗೊಂಡಿದ್ದ ಸ್ಥಳೀಯ ಬಿಜೆಪಿ ನಾಯಕರಿಗೆ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದೆ.

ಇದನ್ನೂ ಓದಿ: ಶರತ್ ಬಚ್ಚೇಗೌಡ ಬಂಡಾಯವಾಗಿ ಸ್ಪರ್ಧೆ ಮಾಡಿದ್ರೂ ನಾನು ಹೆದರಲ್ಲ; ಅನರ್ಹ ಶಾಸಕ ಎಂಟಿಬಿ ನಾಗರಾಜ್​​

ಎಂಟು ನಿಗಮ-ಮಂಡಳಿ ಹಾಗೂ ಅಧ್ಯಕ್ಷರ ಪಟ್ಟಿ:

1) ಅಶೋಕ್ ಪೂಜಾರಿ: ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು – ಗೋಕಾಕ್, ಬೆಳಗಾವಿ
2) ರಾಜು ಕಾಗೆ: ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮತ್ತು ಮಲಪ್ರಭಾ-ಘಟಪ್ರಭಾ ಯೋಜನೆ – ಕಾಗವಾಡ, ಬೆಳಗಾವಿ
3) ಯು.ಬಿ. ಬಣಕಾರ್: ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಮತ್ತು ಸಂಸ್ಕರಣ ನಿಗಮ – ಹಿರೇಕೆರೂರು, ಹಾವೇರಿ ಜಿಲ್ಲೆ4) ಬಸನಗೌಡ ತುರವಿಹಾಳ: ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ(ತುಂಗ ಭದ್ರ ಯೋಜನೆ) – ಮಸ್ಕಿ, ರಾಯಚೂರು
5) ವಿಎಸ್ ಪಾಟೀಲ: ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ – ಹುಬ್ಬಳ್ಳಿ
6) ಹೆಚ್.ಆರ್. ಗವಿಯಪ್ಪ: ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ, ಬೆಂಗಳೂರು
7) ನಂದೀಶ್ ರೆಡ್ಡಿ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ – ಬೆಂಗಳೂರು
8) ಶರತ್ ಬಚ್ಚೇಗೌಡ: ಕರ್ನಾಟಕ ಗೃಹ ಮಂಡಳಿ - ಬೆಂಗಳೂರು

ಹೊಸಕೋಟೆಯಲ್ಲಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರಿಗೆ ಟಿಕೆಟ್ ನೀಡಿದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆಂದು ಓಪನ್ ಚಾಲೆಂಜ್ ಹಾಕಿದ್ದ ಶರತ್ ಬಚ್ಚೇಗೌಡಗೆ ಗೃಹ ಮಂಡಳಿ ಅಧ್ಯಕ್ಷ ಸ್ಥಾನ ಕಲ್ಪಿಸಲಾಗಿದೆ.

ಇದನ್ನೂ ಓದಿ: ಹೈಕಮಾಂಡ್​​ ಒಪ್ಪಿಯೇ ಯಡಿಯೂರಪ್ಪರನ್ನು ಸಿಎಂ ಮಾಡಿರುವಾಗ, ಮುಗಿಸುವ ಯತ್ನ ಎಲ್ಲಿಂದ ಬಂತು; ರಾಮುಲು

ಬೆಳಗಾವಿಯ ಗೋಕಾಕ್​ನಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿರುವ ಅಶೋಕ್ ಪೂಜಾರಿ ಅವರಿಗೆ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರವನ್ನು ದಯಪಾಲಿಸಲಾಗಿದೆ. ಇದೇ ಜಿಲ್ಲೆಯ ಕಾಗವಾಡದಲ್ಲಿ ತೀವ್ರತರದಲ್ಲೇ ಅತೃಪ್ತಿ ವ್ಯಕ್ತಪಡಿಸಿದ್ದ ಮಾಜಿ ಶಾಸಕ ರಾಜು ಕಾಗೆ ಅವರಿಗೆ ಮಲಪ್ರಭ-ಘಟಪ್ರಭಾ ಯೋಜನೆಯ ಅಧ್ಯಕ್ಷ ಸ್ಥಾನವನ್ನು ನೀಡಿ ಸಮಾಧಾನಿಸಲು ಯತ್ನಿಸಲಾಗಿದೆ.

ಕೆಆರ್ ಪುರಂನಲ್ಲಿ ಅನರ್ಹ ಶಾಸಕ ಭೈರತಿ ಬಸವರಾಜು ಅವರ ಕಟ್ಟಾ ವಿರೋಧಿ ಎನಿಸಿರುವ ಬಿಜೆಪಿಯ ನಂದೀಶ್ ರೆಡ್ಡಿ ಅವರಿಗೆ ಮಹತ್ವದ ಬಿಎಂಟಿಸಿ ನಿಗಮದ ಅಧ್ಯಕ್ಷ ಸ್ಥಾನ ಕೊಡಲಾಗಿದೆ. ಇನ್ನು, ಹೊಸಪೇಟೆಯಲ್ಲಿ ಆನಂದ್ ಸಿಂಗ್ ಅವರ ಹಾದಿಯನ್ನು ಸುಗಮಗೊಳಿಸಲು ಗವಿಯಪ್ಪ ಅವರಿಗೆ ಒಂದು ನಿಗಮ ಮಂಡಳಿ ಸ್ಥಾನ ಕೊಡಲಾಗಿದೆ. ಗವಿಯಪ್ಪ ಅವರು ಆನಂದ್ ಸಿಂಗ್ ಅವರಿಗೆ ಟಿಕೆಟ್ ನೀಡಲು ಬಲವಾಗಿ ವಿರೋಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಮಂಡಳಿ ಸ್ಥಾನ ನೀಡಲಾಗಿದೆ.

(ವರದಿ: ಕೃಷ್ಣ ಜಿ.ವಿ.)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:October 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ