news18-kannada Updated:January 15, 2021, 12:09 PM IST
ಬಸನಗೌಡ ಪಾಟೀಲ ಯತ್ನಾಳ ಮತ್ತು ಸಿಎಂ ಬಿಎಸ್ವೈ
ಬೆಂಗಳೂರು (ಜನವರಿ 15); ಬಿಜೆಪಿ ಪಕ್ಷದೊಳಗೆ ಕಳೆದ ಕೆಲ ದಿನಗಳಿಂದ ಒಳಬೇಗುದಿ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದಂತೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಮಾತನಾಡುವವರ ಸಂಖ್ಯೆಯೂ ಏರುತ್ತಲೇ ಇದೆ. ಈ ನಡುವೆ ಗುರುವಾರ ಹೊಸ ಬಾಂಬ್ ಸಿಡಿಸಿದ್ದ ಮಾಜಿ ಕೇಂದ್ರ ಸಚಿವ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್, "ಕಣ್ಣಿನಿಂದ ನೋಡಲಾಗದಂತಹ ಸಿಡಿ ಇದೆ. ಬಿಎಸ್ ಯಡಿಯೂರಪ್ಪ ಮನೆಯಲ್ಲಿ ಆ ಸಿಡಿಯನ್ನು ಮಾಡಿದ್ದೇ ಅವರ ಮೊಮ್ಮಗ. ಹಿಂದೆ ಇದ್ದದ್ದೇ ಆ ಸಿಡಿ, ಯಾರೊಂದಿಗೆ ಇದೆ ಅಂತ ತಮಗೆಲ್ಲಾ ಅದು ಗೊತ್ತೇ ಇದೆ. ನಾನು ಆ ಬಗ್ಗೆ ಏನು ಹೇಳಬೇಕಿಲ್ಲ. ಈ ಸಿಡಿಯನ್ನು ಮುಂದಿಟ್ಟು ಯಡಿಯೂರಪ್ಪನವರನ್ನು ಬ್ಲ್ಯಾಕ್ಮೇಲ್ ಮಾಡಿ ಹಲವರು ಸಚಿವರಾಗುತ್ತಿದ್ದಾರೆ" ಎಂದು ಆರೋಪಿಸಿದ್ದರು. ಇದರ ಬೆನ್ನಿಗೆ ರಾಜ್ಯ ರಾಜಕೀಯದಲ್ಲಿ ಸಿಡಿ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದಾಗುತ್ತಿದ್ದು, ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಈ ಕುರಿತು ಯಾರೂ ಬಹಿರಂಗ ಹೇಳಿಕೆ ನೀಡಬಾರದು ಎಂದು ಎಲ್ಲಾ ಶಾಸಕರಿಗೂ ಎಚ್ಚರಿಕೆ ನೀಡಿದೆ.
ಬಸನಗೌಡ ಪಾಟೀಲ್ ಯತ್ನಾಳ್ ಕಳೆದ ಹಲವು ದಿನಗಳಿಂದ ಬಿ.ಎಸ್. ಯಡಿಯೂರಪ್ಪ ವಿರುದ್ಧ ಕಿಡಿಕಾರುತ್ತಲೇ ಇದ್ದಾರೆ. ಬಿಎಸ್ವೈ ಹಾಗೂ ಯತ್ನಾಳ್ ಜಟಾಪಟಿ ಪಕ್ಷದ ಮುಜುಗುರಕ್ಕೂ ಕಾರಣವಾಗಿದೆ. ಆದರೆ, ಗುರುವಾರ ಮತ್ತೂ ಒಂದು ಹೆಜ್ಜೆ ಮುಂದಿಟ್ಟಿದ್ದ ಯತ್ನಾಳ್, "ಕಣ್ಣಿನಿಂದ ನೋಡಲಾಗದ ಸಿಡಿ ಒಂದು ರಾಜ್ಯ ರಾಜಕೀಯದಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಆ ಸಿಡಿಯನ್ನೇ ಮೂವರು ನನ್ನ ಬಳಿ ತೆಗೆದುಕೊಂಡು ಬಂದಿದ್ದರು. ಅದರಲ್ಲಿ ಇಬ್ಬರು ಈಗ ಸಚಿವರಾಗಿದ್ದಾರೆ.
ನನ್ನ ಬಳಿ ಆ ಸಿಡಿ ಇದ್ದಿದ್ದರೆ ನಾನೇ ಉಪ ಮುಖ್ಯಮಂತ್ರಿ ಆಗಿರುತ್ತಿದ್ದೆ. ಆದರೆ ಅಂತಹ ಕೆಳಮಟ್ಟಕ್ಕೆ ಹೋಗುವವನು ನಾನಲ್ಲ. ಮೌಲ್ಯಾಧಾರಿತ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಸಿಡಿಯನ್ನು ಇಟ್ಟುಕೊಂಡೇ ಕಾಂಗ್ರೆಸ್ಸಿಗರು ಅನುದಾನ ತೆಗೆದುಕೊಳ್ಳುತ್ತಿದ್ದಾರೆ. ಆ ಸಿಡಿ ಡಿಕೆಶಿ ಬಳಿಯೇ ಇದೆ. ನಿಜವಾಗಲೂ ರಾಜ್ಯದಲ್ಲಿ ವಿರೋಧ ಪಕ್ಷ ಆಗಿದ್ದರೆ ಸಿಡಿ ಬಿಡುಗಡೆ ಮಾಡಲಿ. ಡಿಕೆಶಿ ಮಾತನಾಡುವ ಧಾಟಿಯಲ್ಲೇ ಅವರ ಬಳಿ ಸಿಡಿ ಇದೆ ಅನ್ನೋದು ಗೊತ್ತಾಗುತ್ತೇ. ಸಿಡಿ ಕುರಿತು ಸಿಬಿಐ ತನಿಖೆ ಆಗಲಿ.
ಸಿದ್ದರಾಮಯ್ಯ, ಜಾಜ್೯, ಜಮೀರ್, ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರಕ್ಕೆ ಹೆಚ್ಚು ಅನುದಾನ ಹೋಗೋದೆ ಆ ಸಿಡಿ ಬ್ಲ್ಯಾಕ್ ಮೇಲ್ ನಿಂದ. ಸಿಡಿ ಬಗ್ಗೆ ತನಿಖೆಯಾಗಲಿ, ಸಿಬಿಐ ನನ್ನ ಬಳಿ ಬರುತ್ತಾರೋ ಆಗ ನನ್ನ ಬಳಿ ಸಿಡಿ ಬಗ್ಗೆ ಮಾತನಾಡಿದವರ ಬಗ್ಗೆ ತಿಳಿಸುತ್ತೇನೆ. ರಾಜ್ಯ ಪೊಲೀಸರಿಂದ ತನಿಖೆ ಸಾಧ್ಯವಿಲ್ಲ. ಯಡಿಯೂರಪ್ಪ ಪಾರದರ್ಶಕತೆ ಬಗ್ಗೆ ಮಾತನಾಡುತ್ತಾರೆ. ಸಿಡಿ ಬಗ್ಗೆ ತನಿಖೆ ಆಗಲಿ. ಅವರ ಮನೆಯಲ್ಲೇ ಸಿಡಿ ಆಗಿವೆ. ಹೊರಗಿನವರು ನಮ್ಮಂತಹವರು ನಿಮ್ಮಂತಹವರು ಮಾಡಿಲ್ಲ" ಎಂದು ಕಿಡಿಕಾರಿದ್ದರು.
ಇದನ್ನೂ ಓದಿ : ಕಣ್ಣಿನಿಂದ ನೋಡಲಾಗದ ಸಿಡಿ ಇದೆ, ಅದು ಈಗ ಡಿಕೆ ಶಿವಕುಮಾರ್ ಬಳಿ ಇದೆ; ಯತ್ನಾಳರಿಂದ ಮತ್ತೊಂದು ಸ್ಫೋಟಕ ಹೇಳಿಕೆ
ಬಸನಗೌಡ ಪಾಟೀಲ್ ಯತ್ನಾಳ್ ಅವರ ಈ ಹೇಳಿಕೆಯಿಂದಾಗಿ ಇದೀಗ ಬಿಜೆಪಿ ಪಕ್ಷದಲ್ಲಿ ಬಿರುಗಾಳಿಯೇ ಎದ್ದಿದೆ. ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಸಹ ಇಕ್ಕಟ್ಟಿಗೆ ಸಿಲುಕಿದ್ದಾರೆ. ಈ ವಿಚಾರ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದ್ದು ಪಕ್ಷಕ್ಕೂ ಮುಜುಗರದ ಸಂಗತಿಯಾಗಿ ಪರಿಣಮಿಸಿದೆ. ಹೀಗಾಗಿ ಇಂದು ಪಕ್ಷದ ಎಲ್ಲಾ ಶಾಸಕರಿಗೆ ಸೂಚನೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, "ಸಿಡಿ ವಿಚಾರದ ಬಗ್ಗೆ ಯಾವ ಶಾಸಕರೂ ಬಹಿರಂಗ ಹೇಳಿಕೆ ನೀಡಬಾರದು. ಹೇಳಿಕೆ ನೀಡಿದರೆ ಸೂಕ್ತ ಶಿಸ್ತುಕ್ರಮ ಜರುಗಿಸಲಾಗುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ.
ಹೀಗಾಗಿ ಸಿಡಿ ವಿಚಾರದ ಬಗ್ಗೆ ಯಾವೊಬ್ಬ ಶಾಸಕ ಮತ್ತು ಬಿಜೆಪಿ ನಾಯಕರು ಮಾಧ್ಯಮಗಳ ಪ್ರಶ್ನೆಗೆ ಸದ್ಯಕ್ಕೆ ತುಟಿಬಿಚ್ಚುತ್ತಿಲ್ಲ. ಪಕ್ಷದಿಂದ ಸೂಚನೆ ಬೆನ್ನೆಲ್ಲೆ ಎಲ್ಲಾ ಸಚಿವರು ಸಹ ಈ ವಿಚಾರದಲ್ಲಿ ಮೌನ ಸಾಧಿಸುತ್ತಿದ್ದಾರೆ. ಆದರೆ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತ್ರ ಬಿಎಸ್ವೈ ವಿರುದ್ಧ ನಿರಂತರವಾಗಿ ಕಿಡಿಕಾರುತ್ತಿದ್ದು ಈ ಹೊಸ ಸಿಡಿ ಬಾಂಬ್ ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಯಾವ ರೀತಿಯ ಸಂಚಲ ಸೃಷ್ಟಿಸಲಿದೆ? ಎಂಬುದು ಕಾದು ನೋಡಬೇಕಿದೆ.
Published by:
MAshok Kumar
First published:
January 15, 2021, 12:09 PM IST