ವಿಧಾನಪರಿಷತ್ ಚುನಾವಣೆಯಲ್ಲಿ ನಾಲ್ಕೂ ಸ್ಥಾನಗಳನ್ನ ಗೆದ್ದು ಕ್ಲೀನ್ ಸ್ವೀಪ್ ಮಾಡಿದ ಬಿಜೆಪಿ ಇದೀಗ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ರಣತಂತ್ರ ರೂಪಿಸಿದೆ.
ಬೆಂಗಳೂರು(ನ. 19): ಇತ್ತೀಚಿನ ಪರಿಷತ್ ಚುನಾವಣೆಯಲ್ಲಿ ಕ್ಲೀನ್ ಸ್ವೀಪ್ ಮಾಡಿದ ಬಿಜೆಪಿ ಇದೀಗ ಪರಿಷತ್ ಸಭಾಪತಿ ಸ್ಥಾನದ ಮೇಲೆ ಕಣ್ಣಿಟ್ಟಿದೆ. ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ಯೋಜಿಸಿದೆ. ಅದಕ್ಕಾಗಿ ತಯಾರಿ ಕೂಡ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ. ಸದ್ಯ, ವಿಧಾನಪರಿಷತ್ನಲ್ಲಿ ಕಾಂಗ್ರೆಸ್ನ ಪ್ರತಾಪ್ ಚಂದ್ರ ಶೆಟ್ಟಿ ಅವರು ಸಭಾಪತಿ ಸ್ಥಾನದಲ್ಲಿದ್ಧಾರೆ. ಜೆಡಿಎಸ್ನ ಧರ್ಮೇಗೌಡ ಉಪಸಭಾಪತಿ ಆಗಿದ್ದಾರೆ. ಸಭಾಪತಿ ಸ್ಥಾನಕ್ಕೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನ ಕೂರಿಸುವುದು ಬಿಜೆಪಿ ಉದ್ದೇಶವೆನ್ನಲಾಗುತ್ತಿದೆ.
ಈಚೆಗೆ ನಡೆದ ವಿಧಾನಪರಿಷತ್ನ ಎರಡು ಶಿಕ್ಷಕರ ಕ್ಷೇತ್ರ ಹಾಗೂ ಎರಡು ಪದವೀಧರರ ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ ನಾಲ್ಕೂ ಸ್ಥಾನಗಳನ್ನ ಗೆದ್ದು ಸಂಖ್ಯಾಬಲ ವೃದ್ಧಿಸಿಕೊಂಡಿತ್ತು. ಅದರಂತೆ ಪರಿಷತ್ನಲ್ಲಿ ಬಿಜೆಪಿ 31, ಕಾಂಗ್ರೆಸ್ 29, ಜೆಡಿಎಸ್ 14 ಸದಸ್ಯರನ್ನ ಹೊಂದಿವೆ. ಒಬ್ಬ ಪಕ್ಷೇತರ ಸದಸ್ಯರಿದ್ದಾರೆ. ಅಧಿಕ ಸಂಖ್ಯೆಯ ಸದಸ್ಯರನ್ನ ಹೊಂದಿರುವ ಹಿನ್ನೆಲೆಯಲ್ಲಿ ಸಭಾಪತಿ ಸ್ಥಾನವನ್ನು ಪಡೆಯಲು ಬಿಜೆಪಿ ಹೊರಟಿದೆ.
ಸಂಪುಟ ಪುನಾರಚನೆ ಆದಾಗ ಒಂದು ವೇಳೆ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಸಚಿವ ಸ್ಥಾನದಿಂದ ಕೈಬಿಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೀಗಾದಲ್ಲಿ ಅವರನ್ನು ಸಭಾಪತಿ ಸ್ಥಾನ ನೀಡುವ ಯೋಜನೆ ಬಿಜೆಪಿಯದ್ದಾಗಿದೆ. ಸಚಿವ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಬಗ್ಗೆ ಪೂಜಾರಿ ಕೂಡ ಮಾನಸಿಕವಾಗಿ ಸಿದ್ಧವಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಇಂದು ವಿಧಾನಸೌಧದಲ್ಲಿ ಮಾಧ್ಯಮಗಳೊದಿಗೆ ಮಾತನಾಡಿದ ಕೋಟಾ ಶ್ರೀನಿವಾಸ ಪೂಜಾರಿ, ಸಂಪುಟ ಪುನಾರಚನೆ ವೇಳೆ ಕೆಲವರು ಸಚಿವ ಸ್ಥಾನ ಕಳೆದುಕೊಳ್ಳುವುದು ಸ್ವಾಭಾವಿಕ. ಏನೇ ನಿರ್ಧಾರ ತೆಗೆದುಕೊಳ್ಳಲು ಮುಖ್ಯಮಂತ್ರಿಗೆ ಪರಮಾಧಿಕಾರ ಇದೆ. ಸಿಎಂ ಮತ್ತು ಹೈಕಮಾಂಡ್ ನಿರ್ಧಾರಕ್ಕೆ ತಾನು ಬದ್ಧವಿರುವುದಾಗಿ ಹೇಳಿದ್ದಾರೆ.