ಧಾರವಾಡ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election) ಹತ್ತಿರವಾಗುತ್ತಿದ್ದಂತೆ ರಾಜಕೀಯ ನಾಯಕರಿಂದ ಭರವಸೆಗಳ ಮಹಾಪೂರ ಕೇಳಿಬರುತ್ತಿದೆ. ನಿನ್ನೆಯಷ್ಟೇ ಕಾಂಗ್ರೆಸ್ ನಾಯಕರು (Congress Leader) ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ (State) ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪಾಸ್ (Free Bus Pass) ನೀಡುವುದಾಗಿ ಘೋಷಿಸಿದ್ದರು. ಮೊದಲು ಬಿಜೆಪಿ (BJP) ಬೆಂಬಲಿಗರು ಇದನ್ನು ಟೀಕಿಸಿದ್ದರು. ಇದೀಗ ಬಿಜೆಪಿ ಕೂಡ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲು ಮುಂದಾಗಿದೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಅವರೇ ಈ ವಿಷಯ ಬಹಿರಂಗಪಡಿಸಿದ್ದು, ಇದರ ಬಗ್ಗೆ ನಾಳೆ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಧಾರವಾಡದ ಉಪ್ಪಿನಬೆಟಗೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಪರ ನಡೆದ ಪ್ರಚಾರ ಸಮಾವೇಶದಲ್ಲಿ ಬಿಎಸ್ವೈ ಈ ವಿಷಯವನ್ನು ಹೇಳಿದ್ದು, ಬೆಂಗಳೂರಿನಲ್ಲಿ ನಾಳೆ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ, ಈ ವೇಳೆ ಹೆಣ್ಣು ಮಕ್ಕಳಿಗೆ ಬಸ್‌ನಲ್ಲಿ ಉಚಿತ ಬಸ್ ಪಾಸ್ ಕೊಡುವ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಮಹಿಳೆಯರಿಗೆ ಬಿಜೆಪಿ ಮಹತ್ವ ಕೊಡುತ್ತದೆ
ಬಿಜೆಪಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಹಿಳೆಯರಿಗೆ ಯಾವ ರೀತಿ ಮಹತ್ವ ಕೊಟ್ಟಿದ್ದಾರೆ ಎನ್ನುವುದಕ್ಕೆ ದೇಶದ ರಾಷ್ಟ್ರಪತಿಯಾಗಿರುವ ದ್ರೌಪದಿ ಮುರ್ಮು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒಂದು ದೊಡ್ಡ ನಿದರ್ಶನ ಎಂದರು.
ಕಾಂಗ್ರೆಸ್ ಮುಳುಗುತ್ತಿರುವ ಹಡಗು
ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು. ಅದರ ನಾಯಕ ರಾಹುಲ್ ಗಾಂಧಿ ನಮ್ಮ ನಾಯಕರಾದ ಮೋದಿ, ಅಮಿತ್ ಶಾ ಎದುರು ನಿಲ್ಲುವುದಕ್ಕೆ ಸಾಧ್ಯ ಇದೆಯಾ? ಎಂದರು. ಮುಂದುವರಿದು ಮಾಜಿ ಸಿಎಂ ವಿರೇಂದ್ರ ಪಾಟೀಲರನ್ನು ಕಾಂಗ್ರೆಸ್ ಅಧಿಕಾರದಿಂದ ಕೆಳಗಿಳಿಸಿತ್ತು. ಇದೇ ರಾಜೀವ್ ಗಾಂಧಿ ವಿಮಾನ ನಿಲ್ದಾಣದಲ್ಲಿಯೇ ರಾಜೀನಾಮೆ ಕೊಡಿ ಅಂತಾ ಕೇಳಿದ್ದರು. ಯಾವ ಅಪರಾಧಕ್ಕಾಗಿ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದರು. ಇದಕ್ಕೆ ಕಾಂಗ್ರೆಸ್ ಉತ್ತರ ಕೊಡುತ್ತಾ ಎಂದರು.
ಕಾಂಗ್ರೆಸ್ ಎಲ್ಲಾ ರಾಜ್ಯದಲ್ಲೂ ಸೋತು ನೆಲಕಚ್ಚಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 130-140 ಸ್ಥಾನಗಳಲ್ಲಿ ಗೆಲ್ಲಲಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ದಿವಾಳಿಯಾಗಲಿದೆ ಎಂದರು.
ಬಿಜೆಪಿ ಸರ್ಕಾರದಿಂದ ಹಲವು ಸೌಲಭ್ಯ
18ರಿಂದ 20 ಲಕ್ಷ ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಕೊಟ್ಟಿದ್ದು ಯಡಿಯೂರಪ್ಪ. ರೈತರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಕೊಟ್ಟಿದ್ದು ಯಡಿಯೂರಪ್ಪ. ರೈತರಿಗಾಗಿ ಪ್ರತ್ಯೇಕ ಬಜೆಟ್ ಮಂಡನೆ ಮಾಡಿದ್ದು ನಾವು, ದೇಶದ ಮಠ ಮಂದಿರಗಳ ಅಭಿವೃದ್ಧಿ ಕೆಲಸ ಮೋದಿ ಮಾಡುತ್ತಿದ್ದಾರೆ. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದೇವೆ, ಭಾರತವನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ್ದು ಮೋದಿ. ಅಂತಹ ಮೋದಿಯವರ ಬಗ್ಗೆ ಕೆಲವರು ಹಗುರವಾಗಿ ಮಾತನಾಡುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಖರ್ಗೆ ಅವರು ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆಂದು ನಾನು ನಿರೀಕ್ಷೆ ಮಾಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಈ ಇದಕ್ಕೆಲ್ಲಾ ಜನರೇ ಉತ್ತರ ಕೊಡಬೇಕು,
ಕಾಂಗ್ರೆಸ್ ಅಡ್ರೆಸ್ ಇಲ್ಲದೆ ಓಡಬೇಕು, ಮತ ಎಣಿಕೆ ಕೇಂದ್ರದಿಂದ ಕಾಂಗ್ರೆಸ್ ಏಜೆಂಟರು ಓಡುವಂತಾಗಬೇಕು ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ