ಮಂಗಳೂರು: ಮಂಗಳೂರಿನಲ್ಲಿ ಸಂಭವಿಸಿದ್ದ ಕುಕ್ಕರ್ ಬಾಂಬ್ ಬ್ಲಾಸ್ಟ್ (Cooker Bomb Blast) ಪ್ರಕರಣದಲ್ಲಿ ಗಾಯಗೊಂಡಿದ್ದ ಸಂತ್ರಸ್ತ ಆಟೋ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ (Purushottam Pujari) ಅವರಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ ಎಂಬ ವರದಿಗಳು ಹೊರ ಬೀಳುತ್ತಿದ್ದಂತೆ ಸರ್ಕಾರ ಎಚ್ಚೆತ್ತುಕೊಂಡಿದೆ. ಮಂಗಳವಾರ ಶಾಸಕ ವೇದವ್ಯಾಸ ಕಾಮತ್ (Vedavyasa Kamath) ಪುರುಷೋತ್ತಮ್ ಬಿಜೆಪಿ (BJP) ವತಿಯಿಂದ ₹5 ಲಕ್ಷ ನೆರವು ನೀಡಿದ್ದಾರೆ. ಅಲ್ಲದೆ ಪುರುಷೋತ್ತಮ್ ಅವರಿಗೆ ತಮ್ಮ ವತಿಯಿಂದ ಹೊಸ ಆಟೋರಿಕ್ಷಾ ಕೊಡಿಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ. ಶನಿವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡು ಬಂದಿದ್ದ ಪುರುಷೋತ್ತಮ್ ಸರ್ಕಾರದಿಂದ ಘೋಷಣೆ ಮಾಡಿದ್ದ ಪರಿಹಾರ ಇನ್ನೂ ತಲುಪಿಲ್ಲ, ಮಗಳ ವಿವಾಹವಿದ್ದು ಪರಿಸ್ಥಿತಿ ಕಠಿಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.
2022, ನವೆಂಬರ್ 19ರಂದು ಮಂಗಳೂರಿನ ನಾಗುರಿಯಲ್ಲಿ ಚಲಿಸುತ್ತಿದ್ದ ಆಟೋದಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಸಂಭವಿಸಿತ್ತು. ಈ ಘಟನೆಯಲ್ಲಿ ಶಂಕಿತ ಉಗ್ರ ಮೊಹಮ್ಮದ್ ಶಾರಿಕ್ ಹಾಗೂ ಚಾಲಕ ಪುರುಷೋತ್ತಮ ಪೂಜಾರಿ ಗಾಯಗೊಂಡಿದ್ದರು. 56 ದಿನಗಳ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅವರು ಕಳೆದ ಶನಿವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದಿದ್ದರು. ನಂತರ ಮಾಧ್ಯಮದ ಜೊತೆ ಮಾತನಾಡಿದ್ದ ಅವರು ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದರು. ಇದೀಗ ಮಾಧ್ಯಮಗಳ ವರದಿಗಳ ಬೆನ್ನಲ್ಲೇ ಶಾಸಕ ವೇದವ್ಯಾಸ ಕಾಮತ್ ಪುರುಷೋತ್ತಮ್ ಪೂಜಾರಿ ಆರೋಗ್ಯ ವಿಚಾರಿಸಿದರು.
ಇದನ್ನೂ ಓದಿ: Mangaluru Cooker Bomb Blast: ಪರಿಹಾರ ಸಿಕ್ಕಿಲ್ಲ, ಆಟೋನೂ ಇಲ್ಲ, ಮುಂದಿನ ಜೀವನಕ್ಕೆ ದೇವರೇ ಗತಿ! ಗಾಯಾಳು ಗೋಳು ಕೇಳೋರಾರು?
2 ವಾರದೊಳಗೆ ಹೊಸ ಆಟೋ ಹಸ್ತಾಂತರ
ಕಳೆದ 20 ವರ್ಷಗಳಿಂದ ಆಟೋ ಓಡಿಸಿಯೇ ಜೀವನ ಸಾಗಿಸುತ್ತಿದ್ದ ಪುರುಷೋತ್ತಮ್ ಮುಂದಿನ ಜೀವನ ನಿರ್ವಹಣೆ ಮಾಡುವ ಬಗ್ಗೆ ಚಿಂತೆಯಲ್ಲಿದ್ದರು. ಇವಾಗ ಶಾಸಕರು ಆ ಚಿಂತೆಯನ್ನು ಹೋಗಲಾಡಿಸಿದ್ದಾರೆ. ಹೊಸ ಟಿವಿಎಸ್ ಆಟೋ ರಿಕ್ಷಾವನ್ನು ಇನ್ನು 12 ದಿನಗಳಲ್ಲೇ ಪುರುಷೋತ್ತಮ ಅವರಿಗೆ ಹಸ್ತಾಂತರ ಮಾಡುತ್ತೇವೆ. ಆ ದಿನವೇ ಪಕ್ಷದಿಂದ ನೀಡುತ್ತಿರುವ 5 ಲಕ್ಷ ರೂಪಾಯಿಗಳನ್ನು ನೀಡಲಿದ್ದೇವೆ ಎಂದು ವೇದವ್ಯಾಸ ಕಾಮತ್ ತಿಳಿಸಿದರು.
ಇಎಸ್ಐ ಹಣ ಉಪಯೋಗ
ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಪುರುಷೋತ್ತಮ ಗಾಯಗೊಂಡಾಗ ಆಸ್ಪತ್ರೆಗೆ ಭೇಟಿ ನೀಡಿದ್ದ ಶಾಸಕರು, ಸಚಿವರು ಚಿಕಿತ್ಸಾ ವೆಚ್ಚವನ್ನು ಸರ್ಕಾರದಿಂದ ಭರಿಸುವುದಾಗಿ ತಿಳಿಸಿದ್ದರು. ಆದರೆ ಚಿಕಿತ್ಸೆಯ ವೆಚ್ಚವನ್ನು ಅವರ ಮಗಳ ಇಎಸ್ಐ ಹಣದಿಂದ ಭರಿಸಲಾಗಿತ್ತು. ಇದರ ಬಗ್ಗೆ ಸ್ಪಷ್ಟನೆ ನೀಡಿದ ಶಾಸಕ, ಆಸ್ಪತ್ರೆಯ ಬಿಲ್ ನೀವು ಕಟ್ಟುವುದು ಬೇಡ, ನಾವು ಅದಕ್ಕೆ ವ್ಯವಸ್ಥೆ ಮಾಡುತ್ತೇವೆ ಎಂದು ನಾವು ಭರವಸೆ ನೀಡಿದ್ದು ನಿಜ. ಆದರೆ ಅವರ ಮಗಳ ಇಎಸ್ಐ ಹಣ ವ್ಯರ್ಥವಾಗುವುದು ಬೇಡ ಎಂಬ ಕಾರಣಕ್ಕೆ ಕುಟುಂಬಸ್ಥರು ಬಿಲ್ ಪಾವತಿ ಮಾಡಿದ್ದಾರೆ ಎಂದರು.
ಪರಿಹಾರ ತಡವಾಗಿರುವುದಕ್ಕೆ ಕಾರಣ
ಪುರುಷೋತ್ತಮ್ಗೆ ಪರಿಹಾರ ಘೋಷಣೆ ಮಾಡಿ ಇನ್ನೂ ಕುಟುಂಬಕ್ಕೆ ತಲುಪಿಸದಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದೊಂದು ಹೊಸ ಪ್ರಕರಣವಾಗಿದ್ದು, ಜಿಲ್ಲಾಧಿಕಾರಿ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸರ್ಕಾರಕ್ಕೆ ಕಳುಹಿಸಿದ್ದಾರೆ. ಈ ಬಗ್ಗೆ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಮಾತನಾಡಲಿದ್ದಾರೆ. ಆ ಪರಿಹಾರದ ಹಣವೂ ಸಂತ್ರಸ್ತ ಕುಟುಂಬಕ್ಕೆ ಸೇರಿಸುವ ಕಾರ್ಯವನ್ನು ಮಾಡುತ್ತೇವೆ ಎಂದು ಕಾಮತ್ ಭರವಸೆ ನೀಡಿದರು.
ಒಂದು ವರ್ಷ ವಿಶ್ರಾಂತಿಗೆ ಸಲಹೆ
ಕುಕ್ಕರ್ ಬ್ಲಾಸ್ಟ್ನಿಂದ ಶೇ. 33ರಷ್ಟು ಸುಟ್ಟ ಗಾಯಗಳಿಗೆ ಒಳಗಾಗಿರುವ ಪುರುಷೋತ್ತಮ್ ಪೂಜಾರಿ ಅವರಿಗೆ ವೈದ್ಯರು ಒಂದು ತಿಂಗಳು ಮನೆಯಿಂದ ಆಚೆ ಓಡಾಡದಂತೆ ಹಾಗೂ ಒಂದು ವರ್ಷದವರೆಗೆ ಆಟೋ ಓಡಿಸದಂತೆ ಸಲಹೆ ನೀಡಿದ್ದಾರೆ. ಅಲ್ಲದೆ 10 ದಿನಗಳಿಗೊಮ್ಮೆ ಚಿಕಿತ್ಸೆಗೆ ಬರಬೇಕೆಂದು ಸೂಚನೆ ನೀಡಿದ್ದಾರೆ ಎಂದು ಪುರುಷೋತ್ತಮ್ ತಿಳಿಸಿದ್ದಾರೆ. ಮಾರ್ಚ್ನಲ್ಲಿ ಮಗಳ ವಿವಾಹವಿದ್ದು ಅಷ್ಟರಲ್ಲಿ ಪರಿಹಾರದ ಹಣ ಕೈಸೇರಿದರೆ ಒಳ್ಳೆಯದಾಗುತ್ತದೆ ಎಂದು ಬಯಸಿದ್ದರು. ಶಾಸಕರು ಭೇಟಿ ನೀಡಿ ಭರವಸೆ ನೀಡಿರುವುದು ಪುರುಷೋತ್ತಮ್ ಕುಟುಂಬಕ್ಕೆ ಕೊಂಚ ನೆಮ್ಮದಿ ತಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ