ವಿಧಾನ ಪರಿಷತ್​ನಲ್ಲಿ ಗಲಾಟೆ ಪ್ರಕರಣ; ಸದನ ಸಮಿತಿಗೆ ಹೆಚ್​. ವಿಶ್ವನಾಥ್ ರಾಜೀನಾಮೆ

ಡಿ. 15ರಂದು ವಿಧಾನ ಪರಿಷತ್ ಕಲಾಪದಲ್ಲಿ ನಡೆದ ಗಲಾಟೆ ವಿಚಾರವಾಗಿ ವರದಿ ನೀಡಲು ಸದನ ಸಮಿತಿ ರಚನೆ ಮಾಡಲಾಗಿತ್ತು. ಆದರೆ, ಉಪ ಸಭಾಪತಿ ಧರ್ಮೇಗೌಡರ ಸಾವಿನ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಹೆಚ್​. ವಿಶ್ವನಾಥ್​ ಸದನ ಸಮಿತಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಹೆಚ್. ವಿಶ್ವನಾಥ್.

ಹೆಚ್. ವಿಶ್ವನಾಥ್.

  • Share this:
ಬೆಂಗಳೂರು (ಜ. 8): ಕಳೆದ ತಿಂಗಳು ವಿಧಾನ ಪರಿಷತ್​ ಒಳಗೆ ನಡೆದ ಗಲಾಟೆಯಿಂದ ಇಡೀ ರಾಜ್ಯವೇ ತಲೆತಗ್ಗಿಸುವಂತಾಗಿತ್ತು. ಕಲಾಪ ಆರಂಭಕ್ಕೂ ಮೊದಲು ಬಿಜೆಪಿ, ಕಾಂಗ್ರೆಸ್ ಎಂಎಲ್​ಸಿಗಳ ನಡುವೆ ನಡೆದ ಗಲಾಟೆ, ಕಿತ್ತಾಟ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಡಿ. 15ರಂದು ನಡೆದ ಆ ಘಟನೆಯ ವರದಿ ನೀಡಲು ಆಗ್ರಹಿಸಿ ಸದನ ಸಮಿತಿ ರಚಿಸಲಾಗಿತ್ತು. ಆ ಸದನ ಸಮಿತಿಗೆ ಎಂಎಲ್​ಸಿ ಹೆಚ್​. ವಿಶ್ವನಾಥ್ ಮತ್ತು ಸಂಕನೂರ್ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ವಿಧಾನ ಪರಿಷತ್​ನಲ್ಲಿ ನಡೆದ ಗಲಾಟೆಗೆ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.

ಡಿ. 15ರಂದು ವಿಧಾನ ಪರಿಷತ್ ಕಲಾಪದಲ್ಲಿ ನಡೆದ ಗಲಾಟೆ ವಿಚಾರವಾಗಿ ವರದಿ ನೀಡಲು ಸದನ ಸಮಿತಿ ರಚನೆ ಮಾಡಲಾಗಿತ್ತು. ಅದರಲ್ಲಿ ಹೆಚ್​ ವಿಶ್ವನಾಥ್ ಕೂಡ ಸದಸ್ಯರಾಗಿದ್ದರು. ಸದನ ಸಮಿತಿ ರಚಿಸಿದ್ದ ವಿಧಾನ ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ, ವಿಧಾನ ಪರಿಷತ್ ಹಿರಿಯ ಸದಸ್ಯ ಮರಿತಿಬ್ಬೇಗೌಡರನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದರು. ಬಿಜೆಪಿಯ ಹೆಚ್. ವಿಶ್ವನಾಥ್ ಹಾಗೂ ಸಂಕನೂರ್ ಸದನ ಸಮಿತಿಯ ಸದಸ್ಯರಾಗಿದ್ದರು.

ಇಂದು ಸದನ ಸಮಿತಿಯ ಸಭೆ ಕರೆಯಲಾಗಿದ್ದು, ಸದನ ಸಮಿತಿ ರಚನೆಗೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಭಾನಾಯಕರು ಹಾಗೂ ಸದನದಲ್ಲಿ ಚರ್ಚಿಸದೇ ಸದನ ಸಮಿತಿ ರಚನೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈಗಾಗಲೇ ಜೆಡಿಎಸ್‌ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೆ ಸದನ ಸಮಿತಿಯ ಬಿಜೆಪಿ ಸದಸ್ಯರು ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಸದನ ಸಮಿತಿ ರಚನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ವಿಧಾನ ಪರಿಷತ್​ ಸಭಾಪತಿ ಪ್ರತಾಪಚಂದ್ರ ಶೆಟ್ಟಿಗೆ ಭಾರೀ ಹಿನ್ನಡೆಯಾಗಿದೆ.

ಇದನ್ನೂ ಓದಿ: Karnataka Weather: ಕರ್ನಾಟಕದಲ್ಲಿ ಇನ್ನೆರಡು ದಿನ ಮಳೆ; ಕರಾವಳಿ, ಮಲೆನಾಡು, ಕೊಡಗಿನಲ್ಲಿ ಹಳದಿ ಅಲರ್ಟ್​ ಘೋಷಣೆ

ಸಭೆ ಬಹಿಷ್ಕರಿಸಿದ ಬಳಿಕ ನ್ಯೂಸ್ 18 ಕನ್ನಡದೊಂದಿಗೆ ಮಾತನಾಡಿರುವ ಎಂಎಲ್​ಸಿ ಹೆಚ್. ವಿಶ್ವನಾಥ್, ಡಿ. 15ರಂದು ವಿಧಾನ ಪರಿಷತ್​ನಲ್ಲಿ ನಡೆದ ಗಲಾಟೆಯಿಂದ ಇಡೀ ದೇಶವೇ ತಲೆ ತಗ್ಗಿಸುವಂತಾಗಿದೆ. ಅಂದಿನ ಗಲಾಟೆಯಲ್ಲಿ ಈಗಿನ ಸದನ ಸಮಿತಿ ಅಧ್ಯಕ್ಷರು, ಸದಸ್ಯರು ಕೂಡ ಇದ್ದರು. ಕಲಾಪದಲ್ಲಿ ನಡೆದ ಗಲಾಟೆಯಲ್ಲಿ ಸದನ ಸಮಿತಿ ಅಧ್ಯಕ್ಷ ಮರಿತಿಬ್ಬೇಗೌಡ ಕೂಡ ಭಾಗವಹಿಸಿದ್ದರು. ಈಗ ಅವರೇ ಹೇಗೆ ಸದನ ಸಮಿತಿಯನ್ನು ನಡೆಸುತ್ತಾರೆ? ಎಂದು ಪ್ರಶ್ನಿಸಿದ್ದಾರೆ.

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಉಪ ಸಭಾಪತಿ ಧರ್ಮೇಗೌಡರ ಸಾವಿನ ತನಿಖೆ ಮಾಡುವಂತೆ ಮನವಿ ಮಾಡಿದ್ದಾರೆ. ಆ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ಎಂದಿದ್ದಾರೆ. ಹಾಗಾಗಿ, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿ ರಾಜಿನಾಮೆ ನೀಡಿ, ಸಭೆ ಬಹಿಷ್ಕರಿಸಿದ್ದೇವೆ ಎಂದು ಹೆಚ್​. ವಿಶ್ವನಾಥ್ ಸ್ಪಷ್ಟಪಡಿಸಿದ್ದಾರೆ.

ಇಂದು ನಡೆದ ಸದನ ಸಮಿತಿ ಸಭೆಗೆ ಕಾಂಗ್ರೆಸ್ ಸದಸ್ಯರು ಮಾತ್ರ ಹಾಜರಾಗಿದ್ದರು. ಕಾಂಗ್ರೆಸ್​ ಎಂಎಲ್​ಸಿಗಳಾದ ಬಿ.ಕೆ‌ ಹರಿಪ್ರಸಾದ್ ಮತ್ತು ಆರ್.ಬಿ ತಿಮ್ಮಾಪೂರ್ ಮಾತ್ರ ಹಾಜರಾಗಿದ್ದರು. ಈ ವೇಳೆ ಸದನ ಸಮಿತಿ ಅಧ್ಯಕ್ಷ ಮರಿತಿಬ್ಬೇಗೌಡರು ಹೆಚ್​. ವಿಶ್ವನಾಥ್ ಅವರಿಗೆ ರಾಜೀನಾಮೆ ನೀಡಬೇಡಿ, ಕುಳಿತುಕೊಳ್ಳಿ ಸಭೆ ನಡೆಸೋಣ ಎಂದು ಮನವಿ ಮಾಡಿದರು. ಆದರೆ, ಮರಿತಿಬ್ಬೇಗೌಡರ ಮನವಿಯನ್ನು ತಿರಸ್ಕರಿಸಿದ ಹೆಚ್​ ವಿಶ್ವನಾಥ್​ ರಾಜೀನಾಮೆ ನೀಡಿ, ಸಭೆಯನ್ನು ಬಹಿಷ್ಕರಿಸಿ ಹೊರಗೆ ನಡೆದರು.
Published by:Sushma Chakre
First published: