ಚಿತ್ರದುರ್ಗ (ಜ. 24): ರೆಸಾರ್ಟ್ನಲ್ಲಿ ಅಸಮಾಧಾನಿತ ಶಾಸಕರು ನನ್ನನ್ನು ಬಿಟ್ಟು ಸಭೆ ಸೇರಿರಬಹುದು, ಇದೆಲ್ಲವೂ ಪವರ್ ಪಾಲಿಟಿಕ್ಸ್. ಯಾರಿಗೆ ಗಟ್ಟಿ ಧ್ವನಿ ಇರುತ್ತದೋ ಅವರು ಒಂಟಿಯಾಗುತ್ತಾರೆ. ನನಗೆ ಗಟ್ಟಿ ಧ್ವನಿ ಇದೆ, ಹೀಗಾಗಿ ನಾನು ಒಂಟಿಯಾಗಿದ್ದೇನೆ. ಆದರೆ, ನನ್ನ ಜೊತೆ ಜನರಿದ್ದಾರೆ, ಅವರು ಉಘೇ ಉಘೇ ಎನ್ನುತ್ತಿದ್ದಾರೆ ಎಂದು ಚಿತ್ರದುರ್ಗದಲ್ಲಿ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ತಮ್ಮ ಬೇಸರ ಹೊರಹಾಕಿದ್ದಾರೆ. ಚಿತ್ರದುರ್ಗದಲ್ಲಿ ಕುರುಬ ಸಮುದಾಯದ ಎಸ್ಟಿ ಮೀಸಲು ಪಾದಯಾತ್ರೆಯಲ್ಲಿ ಭಾಗವಹಿಸಲು ಬಂದಿದ್ದ ಹೆಚ್. ವಿಶ್ವನಾಥ್, ಬಾಂಬೆ ಟೀಂಗೆ ಬಿಜೆಪಿ ತಾಳಿ ಕಟ್ಟಿದೆ. ಹೀಗಾಗಿ, ಮಾತನಾಡಲು ಆಗುತ್ತಿಲ್ಲ ಎಂಬ ಸಚಿವ ಬಿ.ಸಿ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಬಿಜೆಪಿಯಿಂದ ತಾಳಿ ಕಟ್ಟಿಸಿಕೊಂಡು ಮದುವೆಯಾಗಿ ಶಾಸಕರಾದ ಮೇಲೆ ನಮ್ಮದು ಬಾಂಬೆ ಟೀಮೂ ಇಲ್ಲ, ಯಾವ ಟೀಮೂ ಇಲ್ಲ. ನಮ್ಮಲ್ಲಿರೋದು ಒಂದೇ ಟೀಮು; ಅದು ಬಿಎಸ್ವೈ ಟೀಂ, ಬಿಜೆಪಿ ಟೀಂ ಎಂದು ಸಚಿವ ಬಿ.ಸಿ. ಪಾಟೀಲ್ ನಿನ್ನೆ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಎಂಎಲ್ಸಿ ಹೆಚ್. ವಿಶ್ವನಾಥ್, ನಾವು ಬಿಜೆಪಿಯಿಂದ ತಾಳಿ ಪಾಳಿ ಕಟ್ಟಿಸಿಕೊಂಡಿಲ್ಲ. ಬಿ.ಸಿ. ಪಾಟೀಲ್ ಅವರಿಗೆ ವಸ್ತು ಸ್ಥಿತಿಯನ್ನು ಹೇಳಲು ಬಂದಿಲ್ಲ ಎಂದಿದ್ದಾರೆ.
ರೆಸಾರ್ಟ್ನಲ್ಲಿ ಅಸಮಾಧಾನಿತ ಶಾಸಕರುಗಳ ಸಭೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್. ವಿಶ್ವನಾಥ್, ಇದೆಲ್ಲವೂ ಪವರ್ ಪಾಲಿಟಿಕ್ಸ್. ಯಾರಿಗೆ ಗಟ್ಟಿ ಧ್ವನಿ ಇರುತ್ತದೋ ಅವನು ಒಂಟಿಯಾಗುತ್ತಾನೆ ನನಗೆ ಗಟ್ಟಿ ಧ್ವನಿ ಇದೆ. ನನ್ನ ಸ್ನೇಹಿತರು ನನ್ನನ್ನು ಒಂಟಿ ಮಾಡಿ ಹೋದರೂ ನನ್ನ ಜೊತೆ ಜನರಿದ್ದಾರೆ. ನಾನು ತೆಗೆದುಕೊಂಡ ತೀರ್ಮಾನಕ್ಕೆ ಜನರು ಜೈ ಎನ್ನುತ್ತಾರೆ. ನಮ್ನ ಸ್ನೇಹಿತರನ್ನು ಬಿಡಿ, ಯಾರು ಮಂತ್ರಿಯಾಗ್ತಾರೋ ಅವರು ಅಷ್ಟಕ್ಕೇ ಸೀಮಿತರಾಗುತ್ತಾರೆ. ನಾನು ಉದ್ದಕ್ಕೂ ವಾಸ್ಥವ ಸ್ಥಿತಿಯನ್ನು ಹೇಳುತ್ತಾ ಬಂದಿದ್ದೇನೆ. ನನಗೆ ಮಂತ್ರಿ ಸ್ಥಾನ ಸಿಗುತ್ತೋ, ಬಿಡುತ್ತೋ ಗೊತ್ತಿಲ್ಲ. ಆದರೆ, ರಾಜ್ಯ ರಾಜಕಾರಣ ಸಾರ್ವಜನಿಕ ಜೀವನದಲ್ಲಿ ಒಬ್ಬ ಸಾಕ್ಷಿ ಪ್ರಜ್ಞೆಯಾಗಿ ಉಳಿಯುತ್ತೇನೆ ಎಂಬ ತೃಪ್ತಿಯಿದೆ ಎಂದು ಹೆಚ್. ವಿಶ್ವನಾಥ್ ಹೇಳಿದ್ದಾರೆ.
ಇದನ್ನೂ ಓದಿ: ಯಾವ ಬಾಂಬೆ ಟೀಮೂ ಇಲ್ಲ, ಈಗಿರೋದು ಯಡಿಯೂರಪ್ಪನವರ ಟೀಂ ಮಾತ್ರ; ಸಚಿವ ಬಿ.ಸಿ ಪಾಟೀಲ್
ಖಾತೆ ಹಂಚಿಕೆಯಲ್ಲಿ ಅಸಮಾಧಾನದ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್. ವಿಶ್ವನಾಥ್, ಎಲ್ಲ ಖಾತೆಯಲ್ಲೂ ಕೆಲಸವಿದೆ, ಮಾಡಬೇಕು ಅಷ್ಟೇ. 17 ಜನರ ಟೀಂ ಮುನ್ನಡೆಸಿದ್ದೂ ನಾನೇ, ನಾನು ಅದೇ ಟೀಂ. ಪವರ್ ಪಾಲಿಟಿಕ್ಸ್ನಿಂದಾಗಿ ಜನತಂತ್ರ ವ್ಯವಸ್ಥೆಯಲ್ಲಿ ರಾಜಕೀಯ ಜೀವನದಲ್ಲಿ ಗಟ್ಟಿ ಧ್ವನಿ ಏಕಾಂಗಿಯಾಗುತ್ತದೆ. ಆದರೆ, ಆ ಗಟ್ಟಿ ಧ್ವನಿ ಇಡೀ ರಾಜ್ಯದಲ್ಲಿ ಪ್ರತಿಧ್ವನಿಸುತ್ತದೆ. ಹೇಡಿಗಳ ಧ್ವನಿಯ ರೀತಿಯಲ್ಲ ಗಟ್ಟಿ ಧ್ವನಿ ಎಂದು ಹೇಳಿದ್ದಾರೆ.
17 ಜನ ಶಾಸಕರು ಶಾಸಕಾಂಗ ಪಕ್ಷದ ನಾಯಕರ ನಡವಳಿಕೆಗಳ ವಿರುದ್ದ ಸಿಪಾಯಿ ದಂಗೆಯ ರೀತಿ ದಂಗೆ ಎದ್ದು ಬಂದೆವು. ನಾವು ಅಧಿಕಾರಕ್ಕಾಗಿ ಬಂದವರಲ್ಲ. ಪರಸ್ಪರ ಕತ್ತಿ ಮಸೆಯುತ್ತಿದ್ದ ಕಾಂಗ್ರೆಸ್- ಜೆಡಿಎಸ್ ಸೇರಿ ಸಮ್ಮಿಶ್ರ ಸರ್ಕಾರ ಮಾಡಿದರು. ಬಳಿಕ ಮತ್ತೆ ಪರಸ್ಪರ ಕತ್ತಿ ಮಸೆಯುತ್ತಿದ್ದರು. ಇದರಿಂದ ರಾಜ್ಯಕ್ಕೆ ಒಳಿತಾಗುವ ಲಕ್ಷಣಗಳು ಕಾಣಲಿಲ್ಲ. ಆ ಕಾರಣಕ್ಕೆ ನಾವು 17 ಶಾಸಕರು ಹೊರಬಂದೆವು. ಇದು ಪಾರ್ಟಿ ವಿರುದ್ದವಲ್ಲ, ನಮ್ಮ ಶಾಸಕಾಂಗ ಪಕ್ಷದ ನಾಯಕರ ವಿರುದ್ದ ಕ್ಷಿಪ್ರ ಕ್ರಾಂತಿ ಎಂದು ಹೇಳಿದ್ದಾರೆ.
(ವರದಿ : ವಿನಾಯಕ ತೊಡರನಾಳ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ