HOME » NEWS » State » BJP MLC H VISHWANATH ANGRY ON CM BS YEDIYURAPPA FOR ALLOTTING MINISTER POST TO CP YOGEESHWARA SCT SBR

ಮಗನ ಒತ್ತಡದಿಂದ ಸಿಎಂ ಯಡಿಯೂರಪ್ಪ ಭ್ರಷ್ಟನಿಗೆ ಸಚಿವ ಸ್ಥಾನ ನೀಡಿದ್ದಾರೆ; ಹೆಚ್. ವಿಶ್ವನಾಥ್ ಆರೋಪ

H Vishwanath: ಸಿಎಂ ಯಡಿಯೂರಪ್ಪ ತಮ್ಮ ಮಗ ವಿಜಯೇಂದ್ರನ ಒತ್ತಡಕ್ಕೆ ಮಣಿದು ಸಿ.ಪಿ. ಯೋಗೀಶ್ವರನಂತಹ ಭ್ರಷ್ಟ, ದಲ್ಲಾಳಿಗೆ ಸಚಿವ ಸ್ಥಾನ ನೀಡಿದ್ದಾರೆ. ಹೈಕಮಾಂಡ್ ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಕುಟುಂಬ ರಾಜಕಾರಣದಿಂದ ಬಿಜೆಪಿಗೂ ಜೆಡಿಎಸ್​ ರೀತಿಯ ದುರ್ಗತಿ ಬರಲಿದೆ ಎಂದು ಎಂಎಲ್​ಸಿ ಹೆಚ್. ವಿಶ್ವನಾಥ್ ಎಚ್ಚರಿಸಿದ್ದಾರೆ.

news18-kannada
Updated:January 14, 2021, 1:59 PM IST
ಮಗನ ಒತ್ತಡದಿಂದ ಸಿಎಂ ಯಡಿಯೂರಪ್ಪ ಭ್ರಷ್ಟನಿಗೆ ಸಚಿವ ಸ್ಥಾನ ನೀಡಿದ್ದಾರೆ; ಹೆಚ್. ವಿಶ್ವನಾಥ್ ಆರೋಪ
ಹೆಚ್. ವಿಶ್ವನಾಥ್.
  • Share this:
ರಾಯಚೂರು (ಜ. 14): ಮಕ್ಕಳ ಒತ್ತಡಕ್ಕೆ ಮಣಿದು ಸಿಎಂ ಯಡಿಯೂರಪ್ಪ ತಮ್ಮ ಸಂಪುಟಕ್ಕೆ ಮೆಗಾ ಸಿಟಿ ಯೋಜನೆ ಅಡಿ ಜನಸಾಮಾನ್ಯರ ಹಣ ವಂಚಿಸಿದ ಯೋಗೀಶ್ವರ್​ನನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ. ಪ್ರಧಾನ ಮಂತ್ರಿಗಳು ಈಗಾಗಲೇ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದ್ದಾರೆ. ಕರ್ನಾಟಕದಿಂದಲೇ ಸನ್​ ಸ್ಟ್ರೋಕ್ ತಡೆಯಲು ಆರಂಭಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ ಹೇಳಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಅವರು, ಸಿಎಂ ಪುತ್ರ ರಾಘವೇಂದ್ರ ಸಭ್ಯ. ಆದರೆ, ಇನ್ನೋರ್ವ ಮಗ ವಿಜಯೇಂದ್ರ ಅವರಿಂದ ಯೋಗೀಶ್ವರ್​ಗೆ ಸಚಿವ ಸ್ಥಾನ ಸಿಕ್ಕಿದೆ. ಪ್ರಧಾನಿ ಮೋದಿ ಭ್ರಷ್ಟಾಚಾರ ಮುಕ್ತ ಆಡಳಿತದ ಭರವಸೆ ನೀಡಿದ್ದಾರೆ. ಆದರೆ, ಕರ್ನಾಟಕದಲ್ಲಿ  ಪ್ರಧಾನಿ ಆಶಯಕ್ಕೆ ವಿರುದ್ಧವಾದ ಆಡಳಿತವಿದೆ ಎಂದು ನೇರವಾಗಿ ಯಡಿಯೂರಪ್ಪನವರ ಕುಟುಂಬ ರಾಜಕಾರಣದ ವಿರುದ್ಧ ಕಿಡಿಕಾರಿದ್ದಾರೆ.

ಯೋಗೀಶ್ವರ್ ಒಬ್ಬ ದಲ್ಲಾಳಿ. ಅಂಥವರಿಗೂ ಸಚಿವ ಸ್ಥಾನ ನೀಡಿದ್ದು ಬೇಸರ ತಂದಿದೆ. ಮುನಿರತ್ನ ಸೇರಿ ನಾವೆಲ್ಲರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದು ಯಡಿಯೂರಪ್ಪನವರ ಮೇಲಿನ ಭರವಸೆಯಿಂದ. ಆದರೆ, ಆ ಭರವಸೆ ಹುಸಿಯಾಗಿದೆ. ಮಕ್ಕಳ ಒತ್ತಡಕ್ಕೆ ಮಣಿದು ಸಿಎಂ ಯಡಿಯೂರಪ್ಪ ಭ್ರಷ್ಟರಿಗೆ ಮಣೆ ಹಾಕಿದ್ದು ಸರಿಯಲ್ಲ ಎಂದರು. ಸಿಎಂ ಮಾತು ತಪ್ಪಿದ ನಾಯಕ. ರಾಜ್ಯದಲ್ಲಿ ಬಿಜೆಪಿ ಸರಕಾರ ಬರಲು ಕಾರಣರಾದವರನ್ನು ಮರೆತಿದ್ದೇ ಬೇಸರದ ಸಂಗತಿ. ನಾಗೇಶ್ ಅವರಂತಹ ದಲಿತರನ್ನು ಸಂಪುಟದಿಂದ ಕೈ ಬಿಡಲಾಗಿದೆ. ಮುನಿರತ್ನ ಸಿದ್ದರಾಮಯ್ಯ ವಿರುದ್ಧ ನಿರಂತರ ಹೋರಾಟ ಮಾಡಿ ಗೆದ್ದಿದ್ದಾರೆ. ಅವರಂಥ ಹಿಂದುಳಿದ ವರ್ಗದ ನಾಯಕರನ್ನೂ ಮರೆತಿದ್ದಾರೆ ಎಂದು ಹೆಚ್. ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.

ಸಂಪುಟ ವಿಸ್ತರಣೆಯ ನಂತರ ಕೇಳಿಬಂದಿರುವ ಸಿಡಿ ಬಗ್ಗೆ ಪ್ರತಿಕ್ರಿಯಿಸಿದ ಹೆಚ್. ವಿಶ್ವನಾಥ್, ಎಲ್ಲರ ಬಳಿ ಸಿಡಿ ಇವೆ. ನನ್ನಲ್ಲೂ ಇದೆ. ಆದರೆ ಯತ್ನಾಳ್ ಸಿಡಿ ಬಿಡುಗಡೆ ಮಾಡಲಿದ್ದಾರೆ. ಕುಟುಂಬ ರಾಜಕೀಯಕ್ಕೆ ಹಿಂದೆ ಅನೇಕ ಸರಕಾರಗಳು ಉರುಳಿವೆ. ಪಕ್ಷಗಳು ನಾಶವಾಗಿ  ಜನಮನ್ನಣೆ ಕಳೆದುಕೊಂಡಿವೆ. ಜೆಡಿಎಸ್ ಗೆ ಈಗ ಒದಗಿರುವ ಗತಿ ನೋಡಿಯಾದರೂ ಬಿಜೆಪಿ ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲವಾದರೆ ಕುಟುಂಬ ರಾಜಕೀಯ ಮಾಡಿದ ಎಲ್ಲ ನಾಯಕರಿಂದ ಪಕ್ಷಗಳು ಹಾಳಾದಂತೆ ಬಿಜೆಪಿಗೂ ದುರ್ಗತಿ ಒದಗಲಿದೆ. ಬಿಜೆಪಿಯ ರಾಷ್ಟ್ರೀಯ ನಾಯಕರು ಎಚ್ಚೆತ್ತು ಕೊಳ್ಳಬೇಕಿದೆ ಎಂದಿದ್ದಾರೆ.

ಇದನ್ನೂ ಓದಿ: MP Renukacharya: ನಾಯಕತ್ವ ಬದಲಾವಣೆಗೆ ಪ್ರಯತ್ನಿಸಿದವರೇ ಈಗ ಸಚಿವರಾಗಿದ್ದಾರೆ!; ಎಂ.ಪಿ ರೇಣುಕಾಚಾರ್ಯ ಆಕ್ರೋಶ

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದ ಹೆಚ್. ವಿಶ್ವನಾಥ್,  ಸಿದ್ದರಾಮಯ್ಯ ಕುರುಬರ ಹೆಸರಲ್ಲಿ ರಾಜಕೀಯ ಮಾಡಿದ್ದಾರೆ. ಆದರೆ,‌ ಕುರುಬರಿಗೆ ಏನೂ ಮಾಡಿಲ್ಲ. ಉತ್ತರ ಕರ್ನಾಟಕದಲ್ಲಿರುವ ಕುರುಬರ ಬಗ್ಗೆ ಸಿದ್ದರಾಮಯ್ಯನವರಿಗೆ ಗೊತ್ತಿಲ್ಲ. ಹಾಗಾಗಿ, ಎಸ್ಟಿ ಮೀಸಲಾತಿಗೆ ಬೆಂಬಲಿಸದೇ ದೂರ ಉಳಿಯುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ದೇವೇಗೌಡರು, ರಾಮಕೃಷ್ಣ ಹೆಗಡೆ ಸೇರಿದಂತೆ ಅವರನ್ನು ಮೇಲಕ್ಕೆ ತಂದವರ ಬಗ್ಗೆ ಕೃತಜ್ಞತೆ ಇಲ್ಲ. ಕುರುಬ ಸಮಾಜದಲ್ಲಿ ಯಾರನ್ನೂ ಬೆಳೆಸಲಿಲ್ಲ. ತಾವೊಬ್ಬರೇ ಬೆಳೆಯಬೇಕೆಂದು ಬಯಸುವ ರಾಜಕೀಯ ನಾಯಕ ಸಿದ್ದರಾಮಯ್ಯ. ಸಿದ್ದರಾಮಯ್ಯ ನಿಜವಾಗಿಯೂ ಅಹಿಂದ ಬಗ್ಗೆ ಕಳಕಳಿ ಹೊಂದಿದ್ದರೆ ಸಾಮಾಜಿಕ ಆರ್ಥಿಕ ಸಮೀಕ್ಷೆಯ ಮಾಹಿತಿ ಬಹಿರಂಗ ಪಡಿಸಬೇಕಿತ್ತು. ಸಿದ್ದರಾಮಯ್ಯನವರ ಸಂಪುಟದಲ್ಲಿ ಕುರುಬರಿಗೆ ಸಚಿವ ಸ್ಥಾನ ನೀಡಲಿಲ್ಲ. ಅವರಿಗಿಂತ ಈಗಿನ ಸಿಎಂ ಯಡಿಯೂರಪ್ಪ ಅವರೇ ಮೇಲು. ಅನೇಕರಿಗೆ ಅವಕಾಶ ನೀಡಿದ್ದಾರೆ. ಸಿಎಂ ಯಡಿಯೂರಪ್ಪನವರ ಬಗ್ಗೆ ನನಗೆ ಅಭಿಮಾನವಿದೆ. ಆದರೆ ಅವರು ಮಗ ವಿಜಯೇಂದ್ರನ ಮಾತು ಕೇಳಿ ಉಳಿದವರ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆಂದು ವಿಶ್ವನಾಥ ಆರೋಪಿಸಿದರು.

ನನಗೆ ಬಿಜೆಪಿ ಪಕ್ಷದ ಬಗ್ಗೆ ಗೌರವ ಇದೆ. ಹೈಕಮಾಂಡ್ ರಾಜ್ಯದಲ್ಲಾಗುತ್ತಿರುವ ಬೆಳವಣಿಗೆ ಗಮನಿಸಬೇಕಿದೆ. ಸಂಪುಟ ವಿಸ್ತರಣೆ ಸಿಎಂ ಪರಮಾಧಿಕಾರ. ಆದರೆ ಅಧಿಕಾರ ಸರಿಯಾಗಿ ಬಳಕೆಯಾಗಲಿಲ್ಲ. ಅರ್ಹರಿಗೆ ಸ್ಥಾನ ಸಿಗಲಿಲ್ಲ ಎಂಬುದು ನನ್ನ ಅಳಲು ಎಂದ ಮಾಜಿ ಸಚಿವ ವಿಶ್ವನಾಥ್, ಯೋಗೀಶ್ವರ್​ಗೆ ನಿನ್ನೆ ಸೈನಿಕ ಎಂದು ಸಂಬೋಧಿಸಿದ್ದೆ. ಅದಕ್ಕೆ ವಿಷಾದಿಸುವೆ. ಸೈನಿಕ ಪದ ಬಳಕೆ ಮಾಡಬಾರದಿತ್ತು. ಸೈನಿಕರು ದೇಶ ಕಾಯುವ ಮಹಾನ್ ವ್ಯಕ್ತಿಗಳು. ಯೋಗೀಶ್ವರ್ ಸಾರ್ವಜನಿಕರಿಗೆ ವಂಚಿಸಿದ ದಲ್ಲಾಳಿ ಎಂದು ವಿಶ್ವನಾಥ  ಟೀಕಿಸಿದರು.
Published by: Sushma Chakre
First published: January 14, 2021, 1:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories