ರಾಮನಗರ(ಡಿ.11): ಚನ್ನಪಟ್ಟಣದಲ್ಲಿ ಸದ್ಯ ರಾಜಕೀಯ ಯುದ್ಧ ಶುರುವಾಗಿದೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ-ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಎಂಎಲ್ಸಿ ಸಿ.ಪಿ.ಯೋಗೇಶ್ವರ್ ಏಕವಚನದಲ್ಲಿ ವಾಗ್ದಾಳಿ ನಡೆಸುವ ಮೂಲಕ ಇಬ್ಬರಿಗೂ ರಾಜಕೀಯ ರಣರಂಗದ ಯುದ್ಧಕ್ಕೆ ಆಹ್ವಾನಿಸಿದ್ದಾರೆ. ಇಬ್ಬರು ನಾಯಕರ ವಿರುದ್ಧ ಯೋಗೇಶ್ವರ್ ಏಕವಚನದಲ್ಲಿ ಮಾತನಾಡಿರುವ ಆಡಿಯೋ ಈಗ ನ್ಯೂಸ್ 18 ಗೆ ಲಭ್ಯವಾಗಿದೆ. ಗ್ರಾ.ಪಂ ಚುನಾವಣೆ ಹಿನ್ನೆಲೆ ಕಳೆದ ಎರಡು ದಿನಗಳ ಹಿಂದೆ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿರುವ ಯೋಗೇಶ್ವರ್ ಸಭೆಯಲ್ಲಿ ಹೆಚ್.ಡಿ.ಕೆ - ಡಿ.ಕೆ.ಶಿ ವಿರುದ್ಧ ಹೀನಾಮಾನವಾಗಿ ಏಕವಚನದಲ್ಲಿ ಕಿಡಿಕಾರಿದ್ದಾರೆ. ಚನ್ನಪಟ್ಟಣದಲ್ಲಿ ಹೆಚ್ಡಿಕೆ - ಡಿಕೆಶಿ ಒಂದಾಗಿ ನನ್ನನ್ನ ಸೋಲಿಸಿದರು. ಅವರನ್ನ ಜನ ಜೋಡೆತ್ತು ಅಂತಿದ್ದರು, ಇವತ್ತು ಇಬ್ಬರು ಬೇರೆಯಾಗಿದ್ದಾರೆ. ನನ್ನ ನೀರಾವರಿ ಯೋಜನೆಯನ್ನ ಕುಮಾರಸ್ವಾಮಿ ನನ್ನದು ಅಂತಿದ್ದಾರೆ. ನಾನು ಬೇಕಾದರೆ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ, ಅವರು ಪೇಪರ್ ನೋಡದೇ ಚನ್ನಪಟ್ಟಣದ 10 ಊರಿನ ಹೆಸರು ಹೇಳಲಿ ಎಂದು ಹೆಚ್ಡಿಕೆ ಗೆ ಏಕವಚನದಲ್ಲಿಯೇ ತಿರುಗೇಟು ಕೊಟ್ಟಿದ್ದಾರೆ.
ಇನ್ನು ರಾಜ್ಯದ ಜನ ದೇವೇಗೌಡರ ಕುಟುಂಬವನ್ನ, ಡಿಕೆಶಿ ಕುಟುಂಬವನ್ನ ಕೈ ಬಿಟ್ಟಿದ್ದಾರೆ.ಹ ಳೇ ಮೈಸೂರು ಭಾಗದಲ್ಲಿ ಜನ ಅವರನ್ನ ತಿರಸ್ಕಾರ ಮಾಡಿದ್ದಾರೆ. ದೇವೇಗೌಡರನ್ನ ಹಾಗೂ ನಿಖಿಲ್ ಕುಮಾರಸ್ವಾಮಿಯನ್ನ ಜನ ಸೋಲಿಸಿದ್ದಾರೆ, ಈಗ ನಡೆದ ಉಪಚುನಾವಣೆಯಲ್ಲಿ ಡಿಕೆ ಅಣ್ಣ-ತಮ್ಮನಿಗೆ ಸರಿಯಾಗಿ ಪಾಠ ಕಲಿಸಿದ್ದಾರೆಂದು ವ್ಯಂಗ್ಯವಾಡಿದ್ದಾರೆ.
ಕುಮಾರಸ್ವಾಮಿ ಸಿಎಂ ಆಗಿದ್ದಾಗ ತಾಜ್ ವೆಸ್ಟೆಂಡ್ ನಲ್ಲಿ ಕುಳಿತು ಅಧಿಕಾರ ಮಾಡಿದ್ದರು. ಅಲ್ಲಿಂದ ಸರ್ಕಾರದಲ್ಲಿ ಅಪಸ್ವರ ಶುರುವಾಯಿತು. ನಾನು ಕಾಯ್ದು ಬೆಂಗಳೂರಿನಲ್ಲೇ ಕೂತ್ಕೊಂಡು ಸ್ಕೆಚ್ ಹಾಕಿ ಕುಮಾರಸ್ವಾಮಿಯವರನ್ನು ಅಧಿಕಾರದಿಂದ ಕೆಳಗಿಳಿಸಿದೆ. ಇವನಿಗೆ ಮಾಡಿ ತೋರಿಸಬೇಕೆಂದೇ ಸಿಎಂ ಸ್ಥಾನದಿಂದ ಇಳಿಸಿದೆ. ಕುಮಾರಸ್ವಾಮಿಯವರನ್ನು ನಾನೇ ಇಳಿಸಿದೆ ಎನ್ನುವ ಮೂಲಕ ಮೈತ್ರಿ ಸರ್ಕಾರ ಕೆಡವಿದ್ದು ನಾನೇ ಎಂದಿದ್ದಾರೆ.
ಗ್ರಾಮ ಪಂಚಾಯತ್ ಚುನಾವಣೆ; ರೌಡಿ ಶೀಟರ್ಗಳಿಗೆ ಪೊಲೀಸರಿಂದ ಖಡಕ್ ವಾರ್ನಿಂಗ್
ಇನ್ನು ಅವನ್ಯಾವನೋ ಎಂಪಿ ಡಿ.ಕೆ ಸುರೇಶ್ ಒಂದುಕಡೆ ಮಾತನಾಡಿ, ಯೋಗೇಶ್ವರ್ ಯಾರು ಅಂತ ಗೊತ್ತಿಲ್ಲ ಅಂದಿದ್ದರು. ಆದರೆ ಈಗ ಚನ್ನಪಟ್ಟಣದವರ ಶಕ್ತಿ ಏನೆಂದು ಗೊತ್ತಾಗಿದೆ. ಅಣ್ಣ-ತಮ್ಮನಿಗೆ, ದೇವೇಗೌಡರ ಮನೆಯವರಿಗೆ ನನ್ನ ಬಗ್ಗೆ ಅರ್ಥ ಆಗಿದೆ. ಯಾಕಪ್ಪ ಯೋಗೇಶ್ವರ್ ಸಹವಾಸಕ್ಕೆ ಹೋದೆವೂ ಎಂದು ಅನಿಸಿದೆ. ಸರ್ಕಾರ ಹೋಗ್ತಿದ್ದಂಗೆ ಶಿವಕುಮಾರ ತಿಹಾರ್ ಜೈಲಿಗೆ ಹೋದ. ಆ ಜೈಲಿಗೆ ಹೋದ ಕರ್ನಾಟಕದವನು ಒಬ್ಬನೆ ಶಿವಕುಮಾರ. ಆದರೆ ಅವನು ಈಗ ಕೆ.ಪಿ.ಸಿ.ಸಿ ಅಧ್ಯಕ್ಷ, ಅವನ ತಮ್ಮ ಎಂಪಿ ಸುರೇಶ ಎಂದು ಲೇವಡಿ ಮಾಡಿದ್ದಾರೆ.
ಈಗ ಕುಮಾರಸ್ವಾಮಿಗೆ ರಾಜಕೀಯ ಭಯ ಶುರುವಾಗಿದೆ. ಪಕ್ಷ ಮುಳುಗುವ ಹಂತಕ್ಕೆ ತಲುಪಿದೆ. ಅದಕ್ಕಾಗಿ ಸಿಎಂ ಯಡಿಯೂರಪ್ಪ ಜೊತೆಗೆ ರಾಜಕೀಯವಾಗಿ ಚೆನ್ನಾಗಿದ್ದಾರೆ. ಮುಂದೆ ನಾನು ಚನ್ನಪಟ್ಟಣವನ್ನ ನನ್ನ ಕಂಟ್ರೋಲ್ ಗೆ ತೆಗೆದುಕೊಳ್ತೇನೆಂದು ಚನ್ನಪಟ್ಟಣದಲ್ಲಿ ಹೆಚ್.ಡಿ.ಕೆ - ಡಿ.ಕೆ.ಶಿ ವಿರುದ್ಧ ಏಕವಚನದಲ್ಲಿಯೇ ಯೋಗೇಶ್ವರ್ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ಈ ಇಬ್ಬರನ್ನು ಜನ ನಂಬುತ್ತಿಲ್ಲ, ಮುಂದೆ ಯೋಗೇಶ್ವರ್ ಏನು ಅಂತಾ ಎಲ್ಲರಿಗೂ ಗೊತ್ತಾಗಲಿದೆ. ನಾನು ಚನ್ನಪಟ್ಟಣಕ್ಕೆ ಸೀಮಿತವಾಗಬಾರದೆಂದೇ ಇವರಿಬ್ಬರು ಸೇರಿ ಮಾಡಿದ್ದ ಸರ್ಕಾರ ತೆಗೆದೆ. ಈಗ ನಾನ್ಯಾರು ಎಂದು ಇಬ್ಬರಿಗೂ ಗೊತ್ತಾಗಿದೆ. ಮುಂದೆ ಇನ್ನು ಬಾಕಿಯಿದೆ ಎಂದು ಅಬ್ಬರಿಸಿದ್ದಾರೆ.
(ವರದಿ : ಎ.ಟಿ.ವೆಂಕಟೇಶ್) ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ