• Home
  • »
  • News
  • »
  • state
  • »
  • ಅತಿಥಿ ಉಪನ್ಯಾಸಕರಿಗೆ ವೇತನ ವಿಳಂಬ; ಸರ್ಕಾರದ ನಡೆ ಖಂಡಿಸಿ ಆಯನೂರು ಮಂಜುನಾಥ್​ ಧರಣಿ

ಅತಿಥಿ ಉಪನ್ಯಾಸಕರಿಗೆ ವೇತನ ವಿಳಂಬ; ಸರ್ಕಾರದ ನಡೆ ಖಂಡಿಸಿ ಆಯನೂರು ಮಂಜುನಾಥ್​ ಧರಣಿ

ವಿಧಾನ ಪರಿಷತ್​ ಸದಸ್ಯ ಆಯನೂರು ಮಂಜುನಾಥ್

ವಿಧಾನ ಪರಿಷತ್​ ಸದಸ್ಯ ಆಯನೂರು ಮಂಜುನಾಥ್

ರಾಜ್ಯ ಸರ್ಕಾರ ವೇತನ ನೀಡದೇ ದುಡಿಸಿಕೊಂಡಿದೆ. ಈಗಾಗಲೇ ನಾಲ್ಕಾರು ಅತಿಥಿ ಉಪನ್ಯಾಸಕರು ಅತ್ಮಹತ್ಯೆ ಮಾಡಿಕೊಂಡಿದ್ದಾರೆ, ಬದುಕಲೂ ಕಷ್ಟವಾದ ಸ್ಥಿತಿಯಲ್ಲಿದ್ದಾರೆ, ಉಪವಾಸದಿಂದ ಇರುವ ಸ್ಥಿತಿ ಅವರಿಗೆ ಬಂದಿದೆ.

  • Share this:

ಬೆಂಗಳೂರು(ಸೆಪ್ಟೆಂಬರ್​. 22): ಅತಿಥಿ ಉಪನ್ಯಾಸಕರಿಗೆ ವೇತನ ನೀಡದ ಸರ್ಕಾರದ ನಿಲುವನ್ನು ಖಂಡಿಸಿ ಆಡಳಿತ ಪಕ್ಷದ ಸದಸ್ಯರೇ ಸದನದ ಬಾವಿಗಿಳಿದು ಧರಣಿ ನಡೆಸಿದ ಘಟನೆ ಇಂದು ವಿಧಾನ ಪರಿಷತ್ ನಲ್ಲಿ ನಡೆಯಿತು. ವಿಧಾನ ಪರಿಷತ್ ಕಲಾಪದ ಶೂನ್ಯವೇಳೆಯಲ್ಲಿ ಅತಿಥಿ ಉಪನ್ಯಾಸಕರ ವೇತನ ವಿಷಯ ಕುರಿತು ಪ್ರಸ್ತಾಪ ಮಾಡಿದ ಆಡಳಿತಾರೂಢ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್, ಸರ್ಕಾರಿ ಪದವಿ ಕಾಲೇಜಿನಲ್ಲಿ ಶೇ. 70 ರಷ್ಟು ಅತಿಥಿ ಉಪನ್ಯಾಸಕರಿದ್ದಾರೆ. ಮಾರ್ಚ್ ನಿಂದ ಅವರಿಗೆ ವೇತನವನ್ನೇ ಕೊಟ್ಟಿಲ್ಲ, ಸರ್ಕಾರವನ್ನು ಕೇಳಿದರೆ ಅವರನ್ನು 10 ತಿಂಗಳಿಗಾಗಿ ನೇಮಕಗೊಳಿಸಿರುವುದಾಗಿ ಹೇಳಿದೆ. ಆದರೆ, ಸರ್ಕಾರದ್ದೇ ಸುತ್ತೋಲೆ ಇದೆ. ಕೋವಿಡ್ ಸಮಯದಲ್ಲಿ ವೇತನ ಕಡಿತ ಮಾಡಬಾರದು ಎನ್ನುವ ಸೂಚನೆ ಇದೆ. ಆದರು, ಉಪನ್ಯಾಸಕರಿಗೆ ವೇತನ ನೀಡಿಲ್ಲ. ಈವರೆಗೂ ಕರ್ತವ್ಯದ ಕೊನೆಯ  ದಿನ ಘೋಷಣೆ ಮಾಡಿಲ್ಲ,‌ ಕೋವಿಡ್ ಸಮಯದಲ್ಲಿಯೂ ಕಾಲೇಜುಗಳ ಎಲ್ಲಾ ಕರ್ತವ್ಯಕ್ಕೂ ಅವರನ್ನು ಬಳಕೆ ಮಾಡಿಕೊಳ್ಳಲಾಗಿದೆ. ವೇತನ ಸಿಗದೆ ಅತಿಥಿ ಉಪನ್ಯಾಸಕರು ಕೂಲಿ ಕೆಲಸ, ಹಣ್ಣು ಮಾರಾಟ ಸೇರಿ ಇತರೆ ಕೆಲಸಗಳನ್ನು ಮಾಡುತ್ತಿದ್ದಾರೆ. ಸರ್ಕಾರ ಇವರ ಬಗ್ಗೆ ಗಮನ ಹರಿಸುತ್ತಿಲ್ಲಎಂದು ಬೇಸರ ವ್ಯಕ್ತಪಡಿಸಿದರು.


ರಾಜ್ಯ ಸರ್ಕಾರ ವೇತನ ನೀಡದೇ ದುಡಿಸಿಕೊಂಡಿದೆ. ಈಗಾಗಲೇ ನಾಲ್ಕಾರು ಅತಿಥಿ ಉಪನ್ಯಾಸಕರು ಅತ್ಮಹತ್ಯೆ ಮಾಡಿಕೊಂಡಿದ್ದಾರೆ, ಬದುಕಲೂ ಕಷ್ಟವಾದ ಸ್ಥಿತಿಯಲ್ಲಿದ್ದಾರೆ, ಉಪವಾಸದಿಂದ ಇರುವ ಸ್ಥಿತಿ ಅವರಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡ ಅತಿಥಿ ಉಪನ್ಯಾಸಕರ ಕುಟುಂಬಕ್ಕೆ ಸರ್ಕಾರ ಪರಿಹಾರವನ್ನು ನೀಡಿಲ್ಲ, ಆದರೂ ಸರ್ಕಾರ ವೇತನ ವಿಚಾರದಲ್ಲಿ ಸದನಕ್ಕೆ ತಪ್ಪು ಮಾಹಿತಿ ನೀಡಿದೆ. ಕೂಡಲೇ ವೇತನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.


ಇದಕ್ಕೆ ಸಭಾ ನಾಯಕ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಉನ್ನತ ಶಿಕ್ಷಣ ಸಚಿವರು ಆಗಿರುವ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ್ ಕಡೆಯಿಂದ ಉತ್ತರ ಕೊಡಿಸುವ ಭರವಸೆ ನೀಡಿದರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಯನೂರು ಮಂಜುನಾಥ್, ಆಡಳಿತ ಪಕ್ಷದ ಸದಸ್ಯರಾಗಿದ್ದರೂ ಸರ್ಕಾರದಿಂದ ಉತ್ತರ ಬರುವವರೆಗೂ ಧರಣಿ ನಡೆಸುವುದಾಗಿ ಘೋಷಿಸಿ ಸದನದ ಬಾವಿಗಿಳಿದು ಪ್ರತಿಭಟನೆ ಆರಂಭಿಸಿದರು.


ಆಡಳಿತ ಪಕ್ಷದ ಸದಸ್ಯರೇ ಧರಣಿ ನಡೆಸಿದ್ದರಿಂದ ಸರ್ಕಾರಕ್ಕೆ ಮುಜುಗರವುಂಟಾಯಿತು. ಕೋಟಾ ಶ್ರೀನಿವಾಸ ಪೂಜಾರಿ ಪದೇ ಪದೇ ಮಾಡಿದ ಮನವಿಗೂ ಆಯನೂರು ಮಂಜುನಾಥ್ ಸ್ಪಂದಿಸದೇ ಧರಣಿ ಮುಂದುವರೆಸಿದರು. ನಂತರ ಆಯನೂರು ಮಂಜುನಾಥ್ ಗೆ ಪ್ರತಿಪಕ್ಷ ಸದಸ್ಯರೂ ಸಾಥ್ ನೀಡಿ ಸದನದ ಬಾವಿಗಿಳಿದು ಧರಣಿ ನಡೆಸಿದರು. ಇದರಿಂದ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿ ಸದನ ಸಹಜ ಸ್ಥಿತಿಗೆ ಬಾರದ ಹಿನ್ನಲೆಯಲ್ಲಿ ಕಲಾಪವನ್ನು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ 20 ನಿಮಿಷಗಳ ಕಾಲ ಮುಂದೂಡಿದರು.


ಇದನ್ನೂ ಓದಿ : ಫೆಬ್ರವರಿಯಲ್ಲೇ ಕೇಂದ್ರ ಸರಿಯಾದ ಕ್ರಮ ಕೈಗೊಂಡಿದ್ದರೆ ಕೊರೋನಾ ಇಷ್ಟು ಹರಡುತ್ತಿರಲಿಲ್ಲ: ಸಿದ್ದರಾಮಯ್ಯ


ರಾಜ್ಯದ ವಿಧಾನಮಂಡಲ ಅಧಿವೇಶನದ ಎರಡನೇ ದಿನವಾದ ಇಂದು ಸರ್ಕಾರ ಲೋಕಾಯುಕ್ತ ಮಸೂದೆ ಸೇರಿದಂತೆ ಹತ್ತಕ್ಕೂ ಹೆಚ್ಚು ವಿಧೇಯಕಗಳನ್ನ ಮಂಡನೆ ಮಾಡಿದೆ. 2015ನೇ ಸಾಲಿನ ನಗರಪಾಲಿಕೆ ವಿಧೇಯಕವನ್ನು ಸರ್ಕಾರ ಈ ಸಂದರ್ಭದಲ್ಲಿ ಹಿಂಪಡೆಯಿತು. 2020ರ ಸಾಲಿನ ಬಿಬಿಎಂಪಿ ತಿದ್ದುಪಡಿ ವಿಧೇಯಕದ ಪರಿಶೀಲನಾ ವರದಿಯ ಮಂಡನೆ ಆಯಿತು.


ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಲೋಕಾಯುಕ್ತ ವಿಧೇಯಕ, ಪಟ್ಟಣ ಗ್ರಾಮಾಂತರ ವಿಧೇಯಕ, ಸಾರ್ವಜನಿಕ ನಾಗರಿಕ ಸೇವೆಗಳ ವಿಧೇಯಕಗಳನ್ನ ಮಂಡಿಸಿದರು. ಡಿಸಿಎಂ ಗೋವಿಂದ ಕಾರಜೋಳ, ಕಾನೂನು ಸಚಿವ ಮಾಧುಸ್ವಾಮಿ, ಕಂದಾಯ ಸಚಿವ ಆರ್ ಅಶೋಕ್, ಆರೋಗ್ಯ ಸಚಿವ ಬಿ ಶ್ರೀರಾಮುಲು, ಸಚಿವ ಜಗದೀಶ್ ಶೆಟ್ಟರ್ ಅವರು ಬೇರೆ ಬೇರೆ ವಿಧೇಯಕಗಳನ್ನ ಮಂಡನೆ ಮಾಡಿದರು.

Published by:G Hareeshkumar
First published: