ಬೆಂಗಳೂರು: ಬಿಜೆಪಿ ಉಚ್ಛಾಟಿತ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (MLA Madal Virupakshappa) ಅವರನ್ನು ಬಂಧನ ಮಾಡಿದ್ದ ಲೋಕಾಯುಕ್ತ ಪೊಲೀಸರು ಇಂದು ಅವರನ್ನು ಕೋರ್ಟ್ನಲ್ಲಿ ಹಾಜರುಪಡಿಸಿ 10 ದಿನಗಳ ಕಾಲ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು. ಇದರಂತೆ ನ್ಯಾಯಾಲಯ ಐದು ದಿನಗಳ ಲೋಕಾಯುಕ್ತ ಪೊಲೀಸರ ವಶಕ್ಕೆ ನೀಡಿ ಆದೇಶ ನೀಡಿದೆ. ಇನ್ನು ಚನ್ನಗಿರಿಯಿಂದ (Channagiri) ಬೆಂಗಳೂರಿಗೆ (Bengaluru) ಬರುವ ಮಾರ್ಗದಲ್ಲಿ ತುಮಕೂರು ಬಳಿಯ ಕ್ಯಾತ್ಸಂದ್ರ ಬಳಿ ಲೋಕಾಯುಕ್ತ ಪೊಲೀಸರು (Lokayukta Police) ಬಂಧಿಸಿದ್ದರು.
ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನವಾಗಿರುವ ಆರೋಪಿ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಇಂದು ಲೋಕಾಯುಕ್ತ ಪೊಲೀಸರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನ್ಯಾಯಮೂರ್ತಿ ಜಯಂತ್ ಕುಮಾರ್ ಅವರು ಮಾಡಾಳ್ ಅವರನ್ನು ಐದು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಲು ಆದೇಶ ನೀಡಿದ್ದಾರೆ.
ಇದನ್ನೂ ಓದಿ: Madal Virupakshappa: ಬಂಧನ ಬಳಿಕ ಎದೆನೋವು ಎಂದು ಹೈಡ್ರಾಮಾ: ಶಾಸಕರ ಮುಂದಿರುವ ಆಯ್ಕೆಗಳೇನು?
ನ್ಯಾಯಮೂರ್ತಿಗಳ ಎದುರು 10 ದಿನಗಳ ಕಾಲ ಕಸ್ಟಡಿಗೆ ನೀಡಲು ಲೋಕಾಯುಕ್ತ ಅಧಿಕಾರಿಗಳು ಮನವಿ ಮಾಡಿದ್ದರು. ಲೋಕಾಯುಕ್ತ ಪರ ವಾದ ಮಂಡಿಸಿದ್ದ ವಕೀಲ ಸಂತೋಷ್ ನಗರಾಳೆ ಅವರು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು.
ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ಮಾಡಾಳ್ ಪರ ವಕೀಲ ಸ್ವಾಮೀನಿ ಗಣೇಶ್ ಅವರು, ಈಗಾಗಲೇ 7 ದಿನಗಳ ಕಾಲ ವಿಚಾರಣೆಗೆ ಹಾಜರಾಗಿದ್ದರು. ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಈಗಾಗಲೇ ಆರೋಗ್ಯ ಸಮಸ್ಯೆ ಇದೆ. ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಿಗೆ ಸೂಕ್ತ ಚಿಕಿತ್ಸೆ ಅವಶ್ಯಕತೆ ಇದೆ ಎಂದು ತಿಳಿಸಿದ್ದರು. ಅಲ್ಲದೆ, ಅರ್ಜಿದಾರರು ಜನರ ನಡುವೆ ಇದ್ದವರು. ಈಗ ಏಕಾಏಕಿ ಒಂದು ಕಡೆ ಕೂರಿಸಿದರೆ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಆದ್ದರಿಂದ ಎರಡು ದಿನಕ್ಕೆ ಒಮ್ಮೆ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಅವಕಾಶ ನೀಡಿ ಎಂದು ನ್ಯಾಯಮೂರ್ತಿಗಳಿಗೆ ಮನವಿ ಮಾಡಿದ್ದರು.
ಲೋಕಾಯುಕ್ತ ಪೊಲೀಸರ ಪರ ವಕೀಲರ ವಾದ
ಲೋಕಾಯುಕ್ತ ಪರ ವಾದ ಮಂಡಿಸಿದ ವಕೀಲರು, ಪೊಲೀಸರ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು. ಅಲ್ಲದೆ, ಆರೋಪಿಗೆ ಅಗತ್ಯವಾದ ಚಿಕಿತ್ಸೆ ನೀಡಲಾಗುವುದು ಎಂದು ಕೋರ್ಟಿಗೆ ಸ್ಪಷ್ಟನೆ ನೀಡಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾ. ಜಯಂತ ಕುಮಾರ್ ಅವರು ಐದು ದಿನಗಳ ಕಾಲ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ನೀಡಿ ವಿಚಾರಣೆಯನ್ನು ನಾಳೆಗೆ ಮುಂದೂಡಿದರು. ಇನ್ನು ಕುಟುಂಬ ಸದಸ್ಯರ
ಭೇಟಿ ಕುರಿತು ಕೋರ್ಟ್ ನಾಳೆ ಆದೇಶ ನೀಡುವ ಸಾಧ್ಯತೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ