ಮಂಡ್ಯ(ಫೆ.26): ಕೆ.ಆರ್ ಪೇಟೆ ಬಿಜೆಪಿ ಶಾಸಕ ಮತ್ತು ನೂತನ ಸಚಿವ ನಾರಾಯಣಗೌಡ ಕಾರ್ಯಕ್ರಮವೊಂದರಲ್ಲಿ ಮಹಾರಾಷ್ಟ್ರಕ್ಕೆ ಜೈ ಎಂದು ಮರಾಠ ಪ್ರೇಮ ತೋರುವ ಮೂಲಕ ಸುದ್ದಿಯಾಗಿದ್ದಾರೆ. ಈ ಹಿಂದೆ ಫೆಬ್ರವರಿ 20ನೇ ತಾರೀಕಿನಂದು ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಆಯೋಜಿಸಲಾಗಿತ್ತು. ಇಲ್ಲಿನ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಮರಾಠಿಗರು ಇದ್ದ ಕಾರಣ ವೇದಿಕೆ ಮೇಲೆಯೇ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಇನ್ನು, ನಾನು ಏನೇ ಆಗಿದ್ದರು ಅದು ಮಹಾರಾಷ್ಟ್ರದಿಂದ ಮಾತ್ರ. ಕಳೆದ 35 ವರ್ಷಗಳಿಂದ ಹಿಂದೆ ಮುಂಬೈಗೆ ಹೋದ ನಾನು ಈಗ ಮಹಾರಾಷ್ಟ್ರದಿಂದ ದೊಡ್ಡ ಉದ್ಯಮಿ ಆಗಿದ್ದೇನೆ. ಹೋಟೆಲ್ ಉದ್ದಯಮಿಯಾಗಿ ನಂತರ ಬಿಲ್ಡರ್ ಆದ ನಾನು ಇಲ್ಲಿಗೆ ಬಂದು ರಾಜಕಾರಣಿ ಆಗಿದ್ದೇನೆ ಎಂದು ಬಿಜೆಪಿ ಶಾಸಕ ನಾರಾಯಣ ಗೌಡ ನಾಲಿಗೆ ಹರಿಬಿಟ್ಟಿದ್ದಾರೆ.
ನನ್ನ ದೇಹದಲ್ಲಿ ಏನಾದರೂ ತಾಕತ್ತಿದ್ದರೆ ಅದು ಮಹಾರಾಷ್ಟ್ರದಿಂದ ಮಾತ್ರ. ಹಾಗಾಗಿ ವೇದಿಕೆ ಮೇಲೆಯೇ ಜೈ ಶಿವಾಜಿ,
ಜೈ ಮಹಾರಾಷ್ಟ್ರದ ಎಂದು ಘೋಷಣೆ ಕೂಗುತ್ತೇನೆ. ಹೀಗೆ ತನ್ನ ಮರಾಠ ಪ್ರೇಮ ತೋರುವ ಮೂಲಕ ನಾರಾಯಣಗೌಡ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇದನ್ನೂ ಓದಿ: ದೆಹಲಿ ಹಿಂಸಾಚಾರ: ಮೃತ ಕಾನ್ಸ್ಟೇಬಲ್ ರತನ್ ಲಾಲ್ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ
ಈ ಹಿಂದೆ ಕಲಬುರಗಿ ಜಿಲ್ಲೆಯ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮೂಡ್ ಪತ್ನಿ ಕಾರ್ಯಕ್ರಮವೊಂದರಲ್ಲಿ ಮಹಾರಾಷ್ಟ್ರಕ್ಕೆ ಜೈ ಎಂದು ಹೇಳಿ ಸುದ್ದಿಯಾಗಿದ್ದರು. ಶಾಸಕ ಬಸಬರಾಜ್ ಮತ್ತಿಮೂಡ್ ಪತ್ನಿ ಜಯಶ್ರೀ ಮಹಾರಾಷ್ಟ್ರಕ್ಕೆ ಜೈಕಾರ ಹಾಕಿದ್ದರು. ಇತ್ತೀಚೆಗೆ ಕಲಬುರಗಿ ಗ್ರಾಮೀಣ ಮತಕ್ಷೇತ್ರ ವ್ಯಾಪ್ತಿಯ ಶಹಬಾದ್ ನಗರದಲ್ಲಿ ಮರಾಠ ಯುವಕ ಮಂಡಳಿ ವತಿಯಿಂದ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಆಯೋಜಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜಯಶ್ರೀ ಮತ್ತಿಮೂಡ ಪಾಲ್ಗೊಂಡಿದ್ದರು.
ಈ ವೇಳೆ ಕಾರ್ಯಕ್ರಮ ಉದ್ದೇಶಿಸಿ ಮರಾಠಿ ಭಾಷೆಯಲ್ಲಿ ಭಾಷಣ ಮಾಡಿದ್ದು, ಭಾಷಣದ ಕೊನೆಯಲ್ಲಿ ಜೈ ಶಿವಾಜಿ ಅಂತ ಹೇಳಿದ್ದಾರೆ. ಅದಾದ ಬಳಿಕ ಜೈ ಕರ್ನಾಟಕ ಅನ್ನೋ ಬದಲು ಜೈ ಮಹಾರಾಷ್ಟ್ರ ಎಂದು ಹೇಳುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಜೈ ಮಹಾರಾಷ್ಟ್ರ ಎಂಬ ಹೇಳಿಕೆ ವೀಡಿಯೋ ವೈರಲ್ ಆಗುತ್ತಿದ್ದಂತೆ, ನಾನು ಉದ್ದೇಶಪೂರ್ವಕವಾಗಿ ಅಂದಿಲ್ಲ. ಕಾರ್ಯಕ್ರಮದಲ್ಲಿ ಮರಾಠಿಯಲ್ಲಿ ಮಾತನಾಡುತ್ತಿದ್ದೆ. ಕೊನೆಯಲ್ಲಿ ಜೈ ಕರ್ನಾಟಕ ಅನ್ನೋ ಬದಲು ಬಾಯಿ ತಪ್ಪಿ ಜೈ ಮಹಾರಾಷ್ಟ್ರ ಅಂತ ಹೇಳಿದ್ದೇನೆ. ಈ ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ನಾನು ಎಲ್ಲಿ ಹೋದರೂ ಕನ್ನಡದಲ್ಲಿಯೇ ಮಾತನಾಡುತ್ತೇನೆ ಎಂದು ಜಯಶ್ರೀ ಮತ್ತಿಮೂಡ ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ