Siddaramaiah- ಅವರ ಥರ ಕಮಿಟ್ಮೆಂಟ್ ಯಾರಿಗೂ ಇಲ್ಲ: ಸಿದ್ದರಾಮಯ್ಯರನ್ನ ಹೊಗಳಿದ ಬಿಜೆಪಿ ಶಾಸಕ

ಈ ದೇಶದಲ್ಲಿ ಹಿಂದುಳಿದ ವರ್ಗಗಳ ಏಕೈಕ ನಾಯಕರೆಂದರೆ ಅದು ಸಿದ್ದರಾಮಯ್ಯ ಮಾತ್ರ. ಅವರಿಗಿರುವ ಕಮಿಟ್ಮೆಂಟ್ ಯಾರಿಗೂ ಇಲ್ಲ. ಅವರನ್ನ ರಾಜಕೀಯ ಕಾರಣಕ್ಕೆ ತಾನು ಭೇಟಿ ಮಾಡಲಿಲ್ಲ ಎಂದು ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಹೇಳಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ

ವಿಪಕ್ಷ ನಾಯಕ ಸಿದ್ದರಾಮಯ್ಯ

  • Share this:
ಬೆಂಗಳೂರು, ಆ. 13: ನಿನ್ನೆ ಜನ್ಮದಿನ ಆಚರಿಸಿಕೊಂಡ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿತ್ತು. ವಿವಿಧ ಪಕ್ಷಗಳಿಂದ ಹಲವು ನಾಯಕರು ನೇರವಾಗಿ ಭೇಟಿ ಮಾಡಿಯೋ, ಟ್ವೀಟ್ ಮೂಲಕವೋ, ಟಿವಿಯಲ್ಲಿ ಹೇಳಿಕೆ ಮುಖಾಂತರವೋ ಸಿದ್ದರಾಮಯ್ಯ ಅವರನ್ನ ಹೊಗಳಿದ್ದಾರೆ. ನಿನ್ನೆ ಸಿದ್ದರಾಮಯ್ಯ ಅವರನ್ನ ಭೇಟಿಯಾಗಿ ಬಂದಿದ್ದ ಬಿಜೆಪಿ ಶಾಸಕ ಎಂ ಪಿ ಕುಮಾರಸ್ವಾಮಿ ಅವರು ತಮ್ಮ ನಡೆಯನ್ನ ಸಮರ್ಥಿಸಿಕೊಂಡಿದ್ಧಾರೆ. ನ್ಯೂಸ್18 ಕನ್ನಡದ ಜೊತೆ ಮಾತನಾಡಿದ ಮೂಡಿಗೆರೆ ಶಾಸಕ, ತಾನು ಸಿದ್ದರಾಮಯ್ಯ ಅವರನ್ನ ಹುಟ್ಟುಹಬ್ಬದ ದಿನ ಹೋಗಿ ವಿಶ್ ಮಾಡಿ ಬರುತ್ತೇನೆ. ಅದರಲ್ಲಿ ರಾಜಕೀಯ ಏನಿಲ್ಲ ಎಂದರು. ಹಾಗೆಯೇ ಸಿದ್ದರಾಮಯ್ಯ ಅವರನ್ನ ಕುಮಾರಸ್ವಾಮಿ ಮನದುಂಬಿ ಹೊಗಳಿಕೆ ಕೂಡ ಮಾಡಿದರು.

ಈ ದೇಶದಲ್ಲಿ ಹಿಂದುಳಿದ ವರ್ಗಗಳ ಏಕೈಕ ನಾಯಕ ಅಂತ ಇದ್ದರೆ ಅದು ಸಿದ್ದರಾಮಯ್ಯ ಮಾತ್ರ. ಅವರಿಗೆ ಇರುವ ಕಮಿಟ್ಮೆಂಟ್ ಯಾರಿಗೂ ಇಲ್ಲ. ಪ್ರತೀ ವರ್ಷ ಅವರ ಜನ್ಮದಿನಕ್ಕೆ ಶುಭ ಕೋರುತ್ತೇನೆ. ಈಗಲೂ ಶುಭಾಶಯ ಕೋರಿ ಬಂದಿದ್ದೇನೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ನನ್ನೂರಿಗೆ 5 ಕೋಟಿ ಸ್ಯಾಂಕ್ಷನ್ ಮಾಡಿದ್ರು. ಅಂಥವರಿಗೆ ಮನಸಾರೆ ಶುಭಾಶಯ ಕೋರಿದ್ದೇನೆ ಅಷ್ಟೇ ಎಂದು ಎಂ ಪಿ ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಶಾಸಕ ಎಂದರೆ ಕೇವಲ ಪಕ್ಷಾಂತರ ಮಾಡುವುದು ಅಲ್ಲ. ಸಿದ್ದರಾಮಯ್ಯ ಭೇಟಿ ಮಾಡಿದಾಕ್ಷಣ ನಾನು ಕಾಂಗ್ರೆಸ್ ಸೇರುತ್ತೇನೆ ಅಂತ ಅಲ್ಲ. ನಾನು ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿದ್ದನ್ನ ಕೆಲವರು ವಿರೋಧಿಸಬಹುದು. ಆದರೆ, ನನ್ನ ಪಕ್ಷ ಆ ರೀತಿ ಯೋಚಿಸುವುದಿಲ್ಲ. ನನ್ನ ಪಕ್ಷದ ಬಗ್ಗೆ ನನಗೆ ಗೊತ್ತಿದೆ. ಬಹುತೇಕ ನಾಯಕರು ಮತ್ತು ಕ್ಷೇತ್ರದ ಜನರು ನನ್ನ ಪರ ನಿಂತಿದ್ದಾರೆ. ಒಂದಿಬ್ಬರು ಮಾತ್ರ ವಿರೋಧ ಮಾಡಬಹುದು ಅಷ್ಟೇ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಚಿವುಟವ್ರೂ ಅವ್ರೇ ತಟ್ಟವ್ರೂ ಅವ್ರೇ; ನನಗೆ ಚಿವುಟಿದ್ರೆ ಕಪಾಳಕ್ಕೇ ಹೊಡೀತಿದ್ದೆ – ಯತ್ನಾಳ್ ಯಾರಿಗೆ ಹೇಳಿದ್ರು ಗೊತ್ತಾ?

ಭ್ರಷ್ಟರು ಮನೆಗೆ ಹೋಗ್ತಾರೆ:

ಸಚಿವಾಕಾಂಕ್ಷಿಗಳೂ ಆಗಿರುವ ಎಂ ಪಿ ಕುಮಾರಸ್ವಾಮಿ ಅವರು ಬಿಜೆಪಿಯೊಳಗಿನ ಭ್ರಷ್ಟಾಚಾರದ ಬಗ್ಗೆ ಮಾತನಾಡಿ ಅಚ್ಚರಿ ಮೂಡಿಸಿದರು. ಸರ್ಕಾರದಲ್ಲಿ ಬಹಳಷ್ಟು ಭ್ರಷ್ಟರಿದ್ದಾರೆ. ಇವರೆಲ್ಲಾ ಶೀಘ್ರದಲ್ಲೇ ಮನೆಗೆ ಹೋಗ್ತಾರೆ ನೋಡುತ್ತಿರಿ. ಬಿಜೆಪಿ ಒಳ್ಳೆಯವರನ್ನ ಯಾವತ್ತೂ ಕೈ ಬಿಡುವುದಿಲ್ಲ. ಸರ್ಕಾರದಲ್ಲಿ ಒಳ್ಳೆಯವರನ್ನ ಉಳಿಸಿಕೊಂಡು ಭ್ರಷ್ಟರನ್ನ ಮನೆಗೆ ಕಳುಹಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಮೂಡಿಗೆರೆ ಶಾಸಕ, ಸರ್ಕಾರದಲ್ಲಿ ಯಾರು ಭ್ರಷ್ಟರು ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.

MP Kumaraswamy
ಎಂಪಿ ಕುಮಾರಸ್ವಾಮಿ


ಈಗ ಸರ್ಕಾರದಲ್ಲಿ ತುಂಬಾ ಜನರು ಮಂತ್ರಿಗಳಿದ್ದಾರೆ. ಇವರು ಮಂತ್ರಿಗಳಾಗಿರುವುದು ಜನರಿಗೆ ಗೊತ್ತೇ ಇಲ್ಲ. ನಾನು ಗುಲ್ಬರ್ಗ ಬಸ್ ಸ್ಟ್ಯಾಂಡ್​ನಲ್ಲಿದ್ರೂ ಇವರೇ ಮೂಡಿಗೆರೆ ಕುಮಾರಸ್ವಾಮಿ ಅಂತ ಜನರು ಹೇಳುತ್ತಾರೆ. ಈಗ ಮಂತ್ರಿಗಳಾದವರು ಎಲ್ಲೇ ನಿಂತರೂ ಗೊತ್ತಾಗಲ್ಲ ಎಂದು ಎಂ ಪಿ ಕುಮಾರಸ್ವಾಮಿ ಟೀಕಿಸಿದರು.

ಇದನ್ನೂ ಓದಿ: Weekend Curfew- ಬೆಂಗಳೂರಿನಲ್ಲಿ ವೀಕೆಂಡ್ ಕರ್ಫ್ಯೂ ಸಾಧ್ಯತೆ; ಗಣೇಶ, ಮೊಹರಂ ಹಬ್ಬಗಳಿಗೆ ನಿರ್ಬಂಧ

ಸಿಟಿ ರವಿ ಟೀಕೆಗೆ ಕುಮಾರಸ್ವಾಮಿ ತಿರುಗೇಟು:

ತಮ್ಮದೇ ಜಿಲ್ಲೆಯವರಾದ ಮಾಜಿ ಸಚಿವ ಹಾಗೂ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ವಿರುದ್ಧ ಎಂ ಪಿ ಕುಮಾರಸ್ವಾಮಿ ಮತ್ತೊಮ್ಮೆ ವಾಗ್ದಾಳಿ ನಡೆಸಿದರು. ಸಿ ಟಿ ರವಿ ಮಂತ್ರಿಯಾಗಿದ್ದಾಗ ಕೋಟಿ ಕೋಟಿ ಗ್ರಾಂಟ್ ತೆಗೆದುಕೊಂಡಿದ್ದಾರೆ. ನಾವು ಏನು ಮಾಡಬೇಕು? ನಾವು ಮಂತ್ರಿಯಾಗಿದ್ದೇವಾ? ಅವ್ರು ರಾಜಕೀಯವಾಗಿ ಮಾತನಾಡುವುದನ್ನು ಬಿಟ್ಟು ನಮಗೆ ಅನುದಾನ ಕೊಡಿ ಎಂದು ಕೇಳಬೇಕಿತ್ತು. ಆಗ ಅವರು ದೊಡ್ಡ ಮನುಷ್ಯರಾಗುತ್ತಿದ್ದರು ಎಂದು ಮೂಡಿಗೆರೆ ಶಾಸಕರು ಅಭಿಪ್ರಾಯಪಟ್ಟರು.

ವರದಿ: ಕೃಷ್ಣ ಜಿ.ವಿ.
Published by:Vijayasarthy SN
First published: