ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರು ಬಹಿರಂಗ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 24 ಹಿಂದೂಗಳನ್ನು ಕೊಲೆ ಮಾಡಿದ್ದಾರೆ ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ಹರೀಶ್ ಪೂಂಜಾ ವಿವಾದಾತ್ಮಕ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಪುತ್ತೂರು ಮತ್ತು ಕಾರ್ಕಳದಲ್ಲಿ ಕಾಂಗ್ರೆಸ್ ಪಕ್ಷ ಪ್ರಕರಣವನ್ನೂ ದಾಖಲಿಸಿದೆ.
ಮೇ ತಿಂಗಳ 22ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದ ಬಿಜೆಪಿಯ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಶಾಸಕ ಹರೀಶ್ ಪೂಂಜಾ, 24 ಹಿಂದೂ ಕಾರ್ಯಕರ್ತರನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಹತ್ಯೆ ಮಾಡಿದ್ದಾರೆಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ತುಳು ಭಾಷೆಯಲ್ಲಿ ಮಾತನಾಡಿದ್ದ ಈ ಭಾಷಣದ ಕ್ಲಿಪ್ ಸಾಕಷ್ಟು ಕಡೆ ಹರಿದಾಡಿ ವೈರಲ್ ಕೂಡ ಆಗಿತ್ತು. ಇದರ ಬೆನ್ನಲ್ಲೇ ವಿವಾದಾತ್ಮಕ ಮತ್ತು ಸುಳ್ಳು ಹೇಳಿಕೆ ನೀಡಿರುವ ಶಾಸಕನ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ.
ಇದನ್ನೂ ಓದಿ: Puttur BJP: ಯತ್ನಾಳ್ ಸಮ್ಮುಖದಲ್ಲೇ ಪುತ್ತೂರಿನಲ್ಲಿ ಹಿಂದೂಪರ-ಬಿಜೆಪಿ ಕಾರ್ಯಕರ್ತರ ಮಧ್ಯೆ ತಳ್ಳಾಟ!
ಚುನಾವಣಾ ಫಲಿತಾಂಶ ಬರೋತನಕ ಸುಮ್ಮನಿದ್ದು, ಚುನಾವಣೆಯಲ್ಲಿ ಗೆದ್ದ ಬಳಿಕ ಹಿಂದುತ್ವಕ್ಕಾಗಿ ಅನೇಕ ವರ್ಷ ಹೋರಾಟ ಮಾಡಿ ಇತ್ತೀಚೆಗೆ ಸಂಘಪರಿವಾರದಿಂದ ಹೊರಬಂದಿದ್ದ ಬಿಲ್ಲವ ಸಮುದಾಯದ ಮುಖಂಡ ಸತ್ಯಜಿತ್ ಸುರತ್ಕಲ್ ವಿರುದ್ಧ ಕಿಡಿಕಾರಿದ್ದ ಶಾಸಕ ಹರೀಶ್ ಪೂಂಜಾ, ಸತ್ಯಣ್ಣ, 24 ಹಿಂದೂ ಕಾರ್ಯಕರ್ತರನ್ನ ಹತ್ಯೆ ಮಾಡಿದ ಸಿದ್ದರಾಮಯ್ಯ ಪರ ನೀವು ವೋಟ್ ಕೇಳಿದ್ದೀರ. ಬಜರಂಗದಳ ಬ್ಯಾನ್ ಮಾಡುತ್ತೇವೆ ಎಂದ ಕಾಂಗ್ರೆಸ್ ಪರ ವೋಟ್ ಕೇಳಿದ್ದೀರ. ನಿಮ್ಮದು ಯಾವ ರೀತಿಯ ಹಿಂದುತ್ವ ಎಂದು ಜನ ಕೇಳುತ್ತಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಇದನ್ನೂ ಓದಿ: Hindu Mahasabha: ತಾಕತ್ತಿದ್ರೆ ಮೋದಿ, ಯೋಗಿ ಹೆಸರು ಎತ್ತದೆ ಚುನಾವಣೆ ಎದುರಿಸಿ: ಬಿಜೆಪಿ ನಾಯಕರಿಗೆ ಹಿಂದೂ ಮಹಾಸಭಾ ಸವಾಲ್
ದೂರು ದಾಖಲು
ಈ ಮಧ್ಯೆ ಸಿದ್ದರಾಮಯ್ಯ ಅವರು 24 ಜನರನ್ನ ಹತ್ಯೆ ಮಾಡಿದ್ದಾರೆ ಎಂಬ ಸುಳ್ಳು ಆರೋಪ ಮಾಡಿದ ಶಾಸಕ ಹರೀಶ್ ಪೂಂಜಾ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ನಗರಸಭಾ ಸದಸ್ಯ ಮಹಮ್ಮದ್ ರಿಯಾಝ್ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಬೆಳ್ತಂಗಡಿಯಲ್ಲಿ ಹರೀಶ್ ಪೂಂಜಾ ವಿಜಯೋತ್ಸವದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಈ ರೀತಿಯ ಆರೋಪ ಮಾಡಿದ್ದು ಸರಿಯಲ್ಲ. ಈ ಬಗ್ಗೆ ತನಿಖೆ ಮಾಡಿ ಹರೀಶ್ ಪೂಂಜಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ