ಚಿಕ್ಕೋಡಿ(ನ.25): ಬೆಳಗಾವಿ ಜಿಲ್ಲೆಯ ರಾಜಕೀಯ ಅಂದ್ರೇನೆ ಹಾಗೆ, ಯಾರಿಗಾದ್ರು ಒಂದು ಖಾತೆ ಅಥವಾ ಒಂದು ಹುದ್ದೆ ಬೇಕು ಅಂದ್ರೆ ಅದನ್ನ ಪಡೆಯದೆ ಹಿಂದೆ ಸರಿಯಲ್ಲ ಇಲ್ಲಿನ ರಾಜಕಾರಣಿಗಳು. ಈ ಹಿಂದೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ಹೆಸರುಗಳನ್ನ ಘೋಷಣೆ ಮಾಡಿದಾಗ ರಾಯಬಾಗ ಶಾಸಕ ದುರ್ಯೋಧನ ಐಹೊಳೆಗೆ ಖಾದಿ ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷರನ್ನಾಗಿ ಯಡಿಯೂರಪ್ಪ ಆದೇಶ ಮಾಡಿದ್ದರು. ಆದರೆ ಅದನ್ನ ಸುತಾರಾಮ ಒಪ್ಪದ ಐಹೊಳೆ ನಿಗಮದಿಂದಲೇ ದೂರ ಉಳಿದು ತಮ್ಮ ಮುನಿಸು ತೋರಿದ್ದರು. ಈಗ ಐಹೊಳೆ ಬೇಡಿಕೆಯಂತೆ ಇಷ್ಟದ ಖಾತೆಯನ್ನು ಯಡಿಯೂರಪ್ಪ ನೀಡಿ ಐಹೊಳೆ ಬೇಡಿಕೆಗೆ ಅಸ್ತು ಎಂದಿದ್ದಾರೆ.
ಹೌದು, ರಾಯಬಾಗ ಶಾಸಕ ದುರ್ಯೋಧನ ಐಹೊಳೆ ವ್ಯಕ್ತಿತ್ವವೇ ಹಾಗೆ. ಜಿಲ್ಲೆಯಲ್ಲಿ ಯಾರ ಉಸಾಬರಿಯು ಬೇಡವೆಂದು, ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತ ತಮ್ಮ ಶಾಂತ ಸ್ವಭಾವದದಿಂದಲೇ ಜನರ ಮನ ಗೆದ್ದಿರುವ ಶಾಸಕ. ಇವರು ಸದಾ ನಗುತ್ತಲೆ ರಾಯಬಾಗ ಕ್ಷೇತ್ರದಿಂದ ಮೂರು ಬಾರಿ ಬಿಜೆಪಿ ಶಾಸಕರಾಗಿ ಆಯ್ಕೆಯಾದ ವ್ಯಕ್ತಿ. ಈ ಮೊದಲು ಕಾಂಗ್ರೆಸ್ ಭದ್ರ ಕೋಟೆಯಾಗಿದ್ದ ರಾಯಬಾಗ ಕ್ಷೇತ್ರದಲ್ಲಿ ಪಾಟೀಲ ಕುಟುಂಬದ ಹಿಡಿತ ದೊಡ್ಡದು. ಸುಮಾರು ಮೂರು ದಶಕಗಳವರೆಗೂ ಪಾಟೀಲ್ ಕುಟುಂಬದವರೇ ಇಲ್ಲಿ ರಾಜಕೀಯ ಅಸ್ತಿತ್ವವನ್ನ ಹೊಂದಿದ್ದರು.
ಆದ್ರೆ ಕಾಂಗ್ರೆಸ್ ಭದ್ರ ಕೋಟೆಯನ್ನೇ ಭೇದಿಸಿ ಬಿಜೆಪಿಯಿಂದ ಸತತ ಮೂರು ಬಾರಿ ಆಯ್ಕೆಯಾಗುವ ಮುಲಕ ಬಿಜೆಪಿಯ ಹಿರಿಯ ಶಾಸಕ ಅನಿಸಿಕೊಂಡಿದ್ದಾರೆ ಐಹೊಳೆ. ಜಿಲ್ಲೆಯಲ್ಲಿ ಹಲವು ಘಟಾನುಘಟಿ ನಾಯಕರು ಮಂತ್ರಿ ಅಥವಾ ನಿಗಮ ಸ್ಥಾನಗಳಿಗೆ ಲಾಬಿ ಮಾಡಿದ್ದರೂ, ದುರ್ಯೋಧನ ಐಹೊಳೆ ಮಾತ್ರ ಅದರ ಗೋಜಿಗೆ ಹೋಗಿರಲಿಲ್ಲ.
ಹೆಂಡತಿ ಬಿಟ್ಟವನು ಗಂಡ ಬಿಟ್ಟವಳೊಂದಿಗೆ ಸಂಸಾರ; ಪೊಲೀಸ್ ಠಾಣೆ ಮುಂದೆ ನಡೀತು ಹೈಡ್ರಾಮಾ..!
ಹಿರಿಯರು ಮಂತ್ರಿ ಸ್ಥಾನ ಬೇಕಾ ಎಂದಾಗಲೆಲ್ಲಾ ನನಗೆ ಯಾವ ಮಂತ್ರಿಯು ಬೇಡಾ ಒಳ್ಳೆ ಅನುದಾನ ನೀಡಿ ಶಾಸಕನಾಗಿ ಕೆಲಸ ಮಾಡುತ್ತೇನೆ ಎನ್ನುತ್ತಲೇ, ಕ್ಷೇತ್ರದಲ್ಲಿ, ಜಿಲ್ಲೆಯಲ್ಲಿ ಶಾಂತ ಸ್ವಭಾವದ ಶಾಸಕರು ಅನಿಸಿಕೊಂಡಿದ್ದರು. ಇವರ ನಿಷ್ಠೆ ನೋಡಿದ್ದ ಯಡಿಯೂರಪ್ಪ ಕಳೆದ ಮೂರು ತಿಂಗಳ ಹಿಂದಷ್ಟೇ ಖಾದಿ ಗ್ರಾಮೋದ್ಯೋಗ ನಿಗಮದ ಅಧ್ಯಕ್ಷರನ್ನಾಗಿ ನೆಮೀಸಿ ಆದೇಶ ಮಾಡಿದ್ದರು. ಆದ್ರೆ ಇದಕ್ಕೆ ಒಪ್ಪದ ಶಾಸಕ ಐಹೊಳೆ, ಈ ನಿಗಮ ನನಗೆ ಬೇಡವೆ ಬೇಡಾ ಎಂದು ಪಟ್ಟು ಹಿಡಿದು ಅಧಿಕಾರ ಸ್ವೀಕಾರ ಮಾಡದೆ ದೂರವೇ ಉಳಿದು ಮುನಿಸು ತೋರಿದ್ದರು.
ನನಗೆ ಈ ನಿಗಮ ಬೇಡವೆ ಬೇಡ, ಕೊಡುವುದಾದರೆ ಕರ್ನಾಟಕ ಭೂಸೇನಾ ನಿಗಮ ಮಂಡಳಿ ಅಥವಾ ಅಂಬೇಡ್ಕರ್ ಅಭಿವೃದ್ಧಿ ನಿಗಮ ನೀಡಿ ಎಂದು ಯಡಿಯೂರಪ್ಪ ಬಳಿ ಪಟ್ಟು ಹಿಡಿದಿದ್ದರು. ಖಾದಿ ಗ್ರಾಮೋದ್ಯೋಗ ನಿಗಮದಲ್ಲಿ ಯಾವುದೇ ಅನುದಾನ ಬರುವುದಿಲ್ಲ, ಅದರಿಂದ ಅಭಿವೃದ್ಧಿ ಸಾಧ್ಯವಿಲ್ಲ. ಹಾಗಾಗಿ ಅನುದಾನ ಬರುವ ನಿಗಮ ಮಂಡಳಿಯೇ ಬೇಕು ಎಂದು ಬೇಡಿಕೆ ಇಟ್ಟಿದ್ದರು. ಸದ್ಯಕ್ಕೆ ದುರ್ಯೋಧನ ಐಹೊಳೆ ಬೇಡಿಕೆಗೆ ಯಡಿಯೂರಪ್ಪ ಅಸ್ತು ಎಂದಿದ್ದು, ಐಹೊಳೆಗೆ ಅಂಬೇಡ್ಕರ್ ನಿಗಮ ಮಂಡಳಿಯ ಅದ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿ ನಿನ್ನೆಯಷ್ಟೇ ಆದೇಶ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ