HOME » NEWS » State » BJP MLA BASANAGOUDA PATL YATNAL TALKS ABOUT CM YEDIYURAPPA CABINET EXPANSION HK

ಸಂಕ್ರಾಂತಿ ವೇಳೆ ಸಂಪುಟ ವಿಸ್ತರಣೆ ಅಷ್ಟೇ ಅಲ್ಲ, ಏನು ಬೇಕಾದರೂ ಆಗಬಹುದು: ಯತ್ನಾಳ

ಸಚಿವ ಸಂಪುಟ ಮತ್ತು ಶಾಸಕರ ಭಾವನೆಗಳು, ಸಾರ್ವಜನಿಕರು, ಮಾಧ್ಯಮಗಳ ಭಾವನೆಗಳನ್ನು ಪರಿಗಣಿಸಲಿ. ನಂತರ ಸೂಕ್ತ ನಿರ್ಧಾರ ಕೈಗೊಳ್ಳಿ. ಯಾರೋ ಒಬ್ಬರ ಮಾತು ಕೇಳಿ ದಿಢೀರ್ ನಿರ್ಣಯ ಕೈಗೊಳ್ಳಬಾರದು

news18-kannada
Updated:December 25, 2020, 3:57 PM IST
ಸಂಕ್ರಾಂತಿ ವೇಳೆ ಸಂಪುಟ ವಿಸ್ತರಣೆ ಅಷ್ಟೇ ಅಲ್ಲ, ಏನು ಬೇಕಾದರೂ ಆಗಬಹುದು: ಯತ್ನಾಳ
ಶಾಸಕ ಬಸನಗೌಡ ಪಾಟೀಲ ಯತ್ನಾಳ
  • Share this:
ವಿಜಯಪುರ(ಡಿಸೆಂಬರ್​. 25): ಸಂಕ್ರಮಣಕ್ಕೆ ಸಚಿವ ಸಂಪುಟ ವಿಸ್ತರಣೆಯಾಗುತ್ತೋ, ಬದಲಾವಣೆಯಾಗುತ್ತೋ ಗೊತ್ತಿಲ್ಲ. ಮತ್ತೇನಾದರೂ ಆಗಬಹುದು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸದಾಗಿ ರಾಜಕೀಯ ಬಾಂಬ್ ಸಿಡಿಸಿದ್ದಾರೆ. ವಿಜಯಪುರದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ, ಬದಲಾವಣೆ ಬಗ್ಗೆ ನೀವು ಮಾಧ್ಯಮದವರೇ ಅದನ್ನು ಎಬ್ಬಿಸಿದ್ದೀರಿ. ನೀವು ಯಾವಾಗ ಯಾರ ಪರವಾಗಿ ಸುದ್ದಿ ಬಿತ್ತರಿಸುತ್ತಿರೋ ಗೊತ್ತಿಲ್ಲ. ಎಲ್ಲವೂ ಗೋಡಾರ್ಥವಿದೆ, ಇದೆಲ್ಲದಕ್ಕೂ ಮಕರ ಸಂಕ್ರಮಣದಲ್ಲಿ ಐತಿಹಾಸಿಕವಾಗಿ ಬದಲಾವಣೆಗಳಾಗಲಿವೆ. ಸಂಕ್ರಮಣದ ಬಳಿಕ ಉತ್ತರಾಯಣ ಕಾಲ ಆರಂಭವಾಗಲಿದೆ. ಸೂರ್ಯ ಉತ್ತರ ಪಥದಿಂದ ಬರುತ್ತಾನೆ, ಈ ವೇಳೆ ಉತ್ತರ ಕರ್ನಾಟಕಕ್ಕೆ ಉತ್ತರಾಯಣ ಆಗಲಿದೆ. ಸಚಿವ ಸಂಪುಟ ವಿಸ್ತರಣೆಯಾಗುತ್ತೆ ಎಂಬುದನ್ನು ನಾನು ಹೇಳುವುದಿಲ್ಲ, ನಾನು ಅದರಲ್ಲಿ ಇಲ್ಲ. ದಯವಿಟ್ಟು ಯತ್ನಾಳರ ಹೆಸರು ಇದೆ ಎಂದು ಸುದ್ದಿ ಬಿತ್ತರಿಸಬೇಡಿ. ನಾನು ಮಂತ್ರಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನನಗೆ ಮಂತ್ರಿಯಾಗಲು ಮನಸ್ಸಿಲ್ಲ ಎಂದು ಹೇಳಿದ ಅವರು ಮಂತ್ರಿಯಾಗುವ ಬದಲು ಮುಖ್ಯಮಂತ್ರಿಯಾಗಬಹುದು ಎಂಬ ಪ್ರಶ್ನೆಗೆ ಮುಂದೆ ಹಣೆಬರಹ ಯಾರದ್ದೂ ಯಾರಿಗೂ ಗೊತ್ತಿಲ್ಲ. ಹಣೆಬರಹದಲ್ಲಿ ಇದ್ದರೆ ಸಿಎಂ ಆಗಬಹುದು. ಆಗಬಾರದು ಅಂತೆಲ್ಲಿದೆ? ಕೇಂದ್ರ ಹೈಕಮಾಂಡ್ 100ಕ್ಕೆ 100ರಷ್ಟು ಒಳ್ಳೆಯ ನಿರ್ಣಯ ತೆಗೆದುಕೊಳ್ಳುತ್ತೆ ಎಂಬ ವಿಶ್ವಾಸವಿದೆ. ವಿಜಯಪುರ ಜಿಲ್ಲೆಗೆ ಇಷ್ಟು ದಿನ ಆದ ಅನ್ಯಾಯಕ್ಕೆ ನ್ಯಾಯ ಕೊಡುವ ಕೆಲಸ ಕೇಂದ್ರ ಮಾಡಲಿದೆ ಎಂದು ಅವರು ತಿಳಿಸಿದರು.

ರಿಮೋಟ್ ನಿಮ್ಮ ಬಳಿಯೇ(ಮಾಧ್ಯಮಗಳ) ಇವೆ. ಯಾವಾಗ ಯಾರನ್ನು ಹೊಗಳುತ್ತಿರೋ ಯಾವಾಗ ಯಾರನ್ನು ಮಣ್ಣಲ್ಲಿ ಇಡುತ್ತಿರೋ ಗೊತ್ತಿಲ್ಲ. ಅಮಿತ್ ಶಾ ಜನವರಿ 16ಕ್ಕೆ ವಿಜಯಪುರಕ್ಕೂ ಬರುತ್ತಿದ್ದಾರೆ. ಅವರು ಬರುವ ಮುಂಚೆಯೇ ರಾಜಕೀಯ ವಿದ್ಯಮಾನಗಳು ನಡೆಯಬಹುದು ಎಂದು ಯತ್ನಾಳ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ಸಿಎಂ ಗೆ ಮತ್ತೆ ತಿರುಗೇಟು ನೀಡಿದ ಯತ್ನಾಳ

ನಿನ್ನೆ ಸಿಎಂ ರಾತ್ರಿ ಕರ್ಫ್ಯೂ ಹಿಂಪಡೆದಿದ್ದು ಸ್ವಾಗತಾರ್ಹ, ಇನ್ನು ಮುಂದಾದರೂ ಯಾವುದೇ ನಿರ್ಧಾರ ಕೈಗೊಳ್ಳುವಾಗ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೈಗೊಳ್ಳಲಿ. ಸಚಿವ ಸಂಪುಟ ಮತ್ತು ಶಾಸಕರ ಭಾವನೆಗಳು, ಸಾರ್ವಜನಿಕರು, ಮಾಧ್ಯಮಗಳ ಭಾವನೆಗಳನ್ನು ಪರಿಗಣಿಸಲಿ. ನಂತರ ಸೂಕ್ತ ನಿರ್ಧಾರ ಕೈಗೊಳ್ಳಿ. ಯಾರೋ ಒಬ್ಬರ ಮಾತು ಕೇಳಿ ದಿಢೀರ್ ನಿರ್ಣಯ ಕೈಗೊಳ್ಳಬಾರದು ಎಂದು ತಿಳಿಸಿದರು.

ಇದನ್ನೂ ಓದಿ : Vaikunta Ekadasi: ವೈಕುಂಠ ಏಕಾದಶಿಯ ದಿನ ತ್ರಿರಂಗ ದರ್ಶನ: ಗ್ರಹಗತಿಗಳ ದೋಷ ಪರಿಹಾರದ ನಂಬಿಕೆ

ಇದೇ ವೇಳೆ, ಶಾಲೆಗಳ ಆರಂಭ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾನೂ ಓರ್ವ ಶಿಕ್ಷಣ ಸಂಸ್ಥೆಯ ಅಧ್ಯಕ್ಷನಾಗಿದ್ದೇನೆ. ಮಕ್ಕಳ ಆರೋಗ್ಯ, ಭವಿಷ್ಯ ಮುಖ್ಯ. ನಾನು ಶಿಕ್ಷಣ ಸಂಸ್ಥೆಯ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ. ಒಂದು ವರ್ಷ ಶಿಕ್ಷಣ ಸಂಸ್ಥೆಗಳಿಗೆ ಹಾನಿಯಾದರೆ ನಾವು ಸಹಿಸಿಕೊಳ್ಳಬಹುದು. ಆದರೆ, ಶಾಲೆಗಳ ಆರಂಭದಿಂದ ಮಕ್ಕಳ ಮೇಲೆ ಯಾವುದೇ ರೀತಿಯಲ್ಲಿ ದುಷ್ಪರಿಣಾಮ ಆಗಬಾರದು. ಇಂದಿನ ಕಾಲದಲ್ಲಿ ಪೋಷಕರಿಗೆ ಒಂದು, ಎರಡೋ ಮಕ್ಕಳು ಮಾತ್ರ ಇವೆ. ಹಿಂದಿನ ಕಾಲದಲ್ಲಿ ನಾಲ್ಕೈದರಿಂದ ಹತ್ತರ ವರೆಗೆ ಮಕ್ಕಳಿರುತ್ತಿದ್ದವು. ಹೀಗಾಗಿ ಪಾಲಕರು ಅತ್ಯಂತ ಜೋಪಾನವಾಗಿ ಮಕ್ಕಳನ್ನು ಬೆಳೆಸಿರುತ್ತಾರೆ ಎಂದರು.

ಕೋವಿಡ್ ನಿಂದ ಮಕ್ಕಳಿಗೆ ಯಾವುದೇ ತೊಂದರೆ ಇಲ್ಲ ಎಂಬುದನ್ನು ವೈದ್ಯರಿಂದ ಎಲ್ಲ ಮಾಹಿತಿ ತೆಗೆದುಕೊಂಡು ನಿರ್ಣಯ ಮಾಡಬೇಕು. ಈ ವಿಚಾರದಲ್ಲಿ ಅವಸರ ಮಾಡುವ ಅವಶ್ಯಕತೆ ಇಲ್ಲ. ಆ ಕುರಿತು ಚಿಂತನೆ ಮಾಡುವ ಅಗತ್ಯವಿದೆ ಎಂದು ತಿಳಿಸಿದರು.
Published by: G Hareeshkumar
First published: December 25, 2020, 3:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories