ಅಯೋಧ್ಯೆ ಆಯ್ತು, ಕಾಶಿ, ಮಥುರಾಗಳಲ್ಲಿನ್ನು ಮಂದಿರ ನಿರ್ಮಾಣ ಬಾಕಿ ಇದೆ; ಬಸನಗೌಡ ಯತ್ನಾಳ್

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ.  ಆದರೆ, ಈಗ ಕಾಶಿಯಲ್ಲಿ ವಿಶ್ವನಾಥ ಮಂದಿರ ನಿರ್ಮಾಣವಾಗಬೇಕಿದೆ.  ಮಥುರಾದಲ್ಲಿ ಶ್ರೀಕೃಷ್ಣನ ಜನ್ಮಸ್ಥಳವನ್ನು ಮುಕ್ತ ಮಾಡಬೇಕಿದೆ.  ಇದಕ್ಕೆ ಅಯೋಧ್ಯೆಯಷ್ಟು ಹೋರಾಟ ಬೇಕಾಗಿಲ್ಲ ಎಂದು ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು. 

ಬಸನಗೌಡ ಪಾಟೀಲ್ ಯತ್ನಾಳ್

ಬಸನಗೌಡ ಪಾಟೀಲ್ ಯತ್ನಾಳ್

  • Share this:
ವಿಜಯಪುರ (ಫೆ. 7): ರಾಮ ಮಂದಿರ ನಿರ್ಮಾಣದ ಕನಸು ಇದೀಗ ನನಸಾಗುತ್ತಿದೆ.  ಇನ್ನು ಕಾಶಿ ಮತ್ತು ಮಥುರಾಗಳಲ್ಲಿ ಮಂದಿರ ನಿರ್ಮಾಣ ಬಾಕಿ ಇದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ. ವಿಜಯಪುರದಲ್ಲಿ ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಚ್ ಪರವಾಗಿ ಆಯೋಜಿಸಲಾಗಿದ್ದ ನಿಧಿ ಸಮರ್ಪಣಾ ಮಹಾ ಅಭಿಯಾನದ ಸಭೆಯಲ್ಲಿ ಅವರು ರಾಮ ಮಂದಿರ ನಿರ್ಮಾಣಕ್ಕೆ ರೂ. 5 ಲಕ್ಷ ದೇಣಿಗೆ ನೀಡಿ ಮಾತನಾಡಿದರು.

ಎಲ್ಲವೂ ಅಂದುಕೊಂಡಂತೆ ಈಗ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ.  ಆದರೆ, ಈಗ ಕಾಶಿಯಲ್ಲಿ ವಿಶ್ವನಾಥ ಮಂದಿರ ನಿರ್ಮಾಣವಾಗಬೇಕಿದೆ.  ಮಥುರಾದಲ್ಲಿ ಶ್ರೀಕೃಷ್ಣನ ಜನ್ಮಸ್ಥಳವನ್ನು ಮುಕ್ತ ಮಾಡಬೇಕಿದೆ.  ಇದಕ್ಕೆ ಅಯೋಧ್ಯೆಯಷ್ಟು ಹೋರಾಟ ಬೇಕಾಗಿಲ್ಲ.  ಈಗ ಇಡೀ ದೇಶದಲ್ಲಿ ಕೇಂದ್ರ ಸರಕಾರದಿಂದ ಹಿಡಿದು ರಾಷ್ಟ್ರಪತಿಯ ವರೆಗೆ ಎಲ್ಲರೂ ನಮ್ಮವರೇ ಇದ್ದಾರೆ.  ಹೀಗಾಗಿ ಕಾಶಿ ಮತ್ತು ಮಥುರಾಗಳಲ್ಲಿಯೂ ಮಂದಿರ ನಿರ್ಮಾಣವಾಗಬೇಕಿದೆ ಎಂದು ಯತ್ನಾಳ್ ತಿಳಿಸಿದರು.

2006ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ನಡೆದ ಬಾಬರಿ ಮಸೀದಿ ಧ್ವಂಸ ಪ್ರಕರಣವನ್ನು ಸ್ಮರಿಸಿದ ಯತ್ನಾಳ್, ಅಂದು ನಾನೂ ಅಯೋಧ್ಯೆಗೆ ತೆರಳಿದ್ದೆ. ಬಾಬರಿ ಮಸೀದಿ ಬೀಳುವ ಕ್ಷಣಗಳನ್ನು ಕಣ್ಣಾರೆ ಕಂಡಿದ್ದೇನೆ. ರಾಮ ಮಂದಿರ ನಿರ್ಮಿಸುವ ನಿಟ್ಟಿನಲ್ಲಿ ಪೇಜಾವರ ವಿಶ್ವೇಶ ತೀರ್ಥ ಶ್ರೀಗಳು ನಿರಂತರವಾಗಿ ಶ್ರಮಿಸಿದ್ದಾರೆ.  ದಲಿತರು, ಲಿಂಗಾಯಿತರು ಎಂಬ ಭೇದ ಭಾವವಿಲ್ಲದೇ ಹಿಂದೂ ಸಮಾಜ ಸಂಘಟನೆ ಮಾಡಿದ್ದಾರೆ.  ಅಂದು ಅಯೋಧ್ಯೆಗೆ ಹೋಗಿ ಬಂದವರು ಇಂದು ಶಾಸಕರು, ಸಂಸದರು, ಗ್ರಾ. ಪಂ. ಸದಸ್ಯರಾಗಿದ್ದಾರೆ.  ಕಳೆದ ಹಲವಾರು ವರ್ಷಗಳಲ್ಲಿ ರಾಮ‌ ಮಂದಿರ ನಿರ್ಮಾಣದ ಬಗ್ಗೆ ಜನರಲ್ಲಿ ಸಂಶಯವಿತ್ತು.  ಬಿಜೆಪಿ ಇದನ್ನು ಚುನಾವಣೆಗೆ ಬಳಸಿಕೊಳ್ಳುತ್ತಿದೆ ಎಂದು ಜನ ಆರೋಪಿಸಿ, ಯಾವಾಗ ರಾಮ ಮಂದಿರ ನಿರ್ಮಿಸುತ್ತೀರಾ ಎಂದು ಬಿಜೆಪಿಯ ಜನಪ್ರತಿನಿಧಿಗಳನ್ನು ಕೇಳುತ್ತಿದ್ದರು.  ಆದರೆ, ಅಂದು ಅಶೋಕ ಸಿಂಘಾಲ, ಲಾಲಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಶಿ ಅವರಿಂದ ಆರಂಭವಾದ ರಾಮ ಮಂದಿರ ನಿರ್ಮಾಣ ಹೋರಾಟ ಈಗ ಫಲಪ್ರದವಾಗಿದ್ದು, ನರೇಂದ್ರ ಮೋದಿ ಪ್ರಧಾನಿಯಾದ ಸಂದರ್ಭದಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ ಎಂದು ತಿಳಿಸಿದರು.

ಹನುಮ ಜನ್ಮಭೂಮಿಯೂ ಅಭಿವೃದ್ಧಿಯಾಗಲಿ:
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ.  ಈಗ ಹನುಮ ಜನಿಸಿದ ಆಂಜನೇಯ ಬೆಟ್ಟ ಪ್ರದೇಶದ ಅಭಿವೃದ್ಧಿಯಾಗಬೇಕಿದೆ.  ಇದನ್ನು ರಾಮ ಮಂದಿರ ನಿರ್ಮಾಣದ ಟ್ರಸ್ಟ್ ವ್ಯಾಪ್ತಿಯಲ್ಲಿ ಸೇರಿಸಿ ಅಭಿವೃದ್ಧಿ ಪಡಿಸಿ ಎಂದು ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಚ್ ನ ಟ್ರಸ್ಟಿಯೂ ಆಗಿರುವ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಗಳಿಗೆ ಯತ್ನಾಳ ಮನವಿ ಮಾಡಿದರು.

ಆಂಜನಾದ್ರಿ ಬೆಟ್ಟವನ್ನು ಅಭಿವೃದ್ಧಿ ಪಡಿಸುವುದರಿಂದ ರಾಮ ಮತ್ತು ರಾಮಭಕ್ತ ಹನುಮನ ನಡುವಿನ ಸಂಬಂಧಕ್ಕೆ ಮತ್ತಷ್ಟು ಮೆರಗು ಸಿಗಲಿದೆ ಎಂದು ಯತ್ನಾಳ ತಿಳಿಸಿದರು. ಇದೇ ವೇಳೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಯತ್ನಾಳ ವೈಯಕ್ತಿಕವಾಗಿ ರೂ. 5 ಲಕ್ಷ ಚೆಕ್ ನೀಡಿದರು.

(ವರದಿ: ಮಹೇಶ ವಿ. ಶಟಗಾರ)
Published by:Sushma Chakre
First published: