ಸದಾನಂದಗೌಡರು ದೈವಿ ಪುರುಷರು- ನನ್ನ ಮೇಲೆ ಪ್ರೀತಿ ಜಾಸ್ತಿ: ಯತ್ನಾಳ ತಿರುಗೇಟು

ಸದಾನಂದಗೌಡ ಅವರು ದೈವಿ ಪುರುಷರು. ಅವರು ಎಲ್ಲ ಅನುಭವಿಸಿದ್ದಾರೆ. ಅವರು ರಾಷ್ಟ್ರೀಯ ನಾಯಕರು. ನಮ್ಮಂತಹ ಸಾಮಾನ್ಯ ಶಾಸಕರ ಬಗ್ಗೆ ಅವರು ಮಾತನಾಡಬಾರದು

ಶಾಸಕ ಬಸನಗೌಡ ಪಾಟೀಲ ಯತ್ನಾಳ

ಶಾಸಕ ಬಸನಗೌಡ ಪಾಟೀಲ ಯತ್ನಾಳ

  • Share this:
ವಿಜಯಪುರ(ಡಿಸೆಂಬರ್​. 25): ಯತ್ನಾಳ ಯಾರು? ಅವರು ರಾಷ್ಟ್ರೀಯ ನಾಯಕರಲ್ಲ. ಅವರೊಬ್ಬ ಸಾಮಾನ್ಯ ಶಾಸಕ ಎಂದು ಕೇಂದ್ರ ಸಚಿವ ಡಿ. ವಿ. ಸದಾನಂದಗೌಡ ನೀಡಿರುವ ಹೇಳಿಕೆಗೆ ಯತ್ನಾಳ ತಮ್ಮದೇ ಶೈಲಿಯಲ್ಲಿ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿಯೇ ತಾವೊಬ್ಬ ಪ್ರಧಾನ ಸೇವಕ ಎಂದು ಹೇಳಿದ್ದಾರೆ. ನಾನೂ ಸಾಮಾನ್ಯ ಶಾಸಕ. ಕರ್ನಾಟಕ ಬಿಜೆಪಿಯಲ್ಲಿ ಸದಾನಂದಗೌಡ ಬುದ್ದಿ ಜೀವಿಗಳು. ಅವರಿಗೆ ಅಗಾಧವಾದ ಶಕ್ತಿಯಿದೆ. ಅವರು ನನ್ನ ಬಗ್ಗೆ ಸರಿಯಾಗಿಯೇ ಹೇಳಿದ್ದಾರೆ. ಈ ಹಿಂದೆ ನನ್ನನ್ನು ತಪ್ಪಿಸಿ ಅವರು ರಾಜ್ಯಾಧ್ಯಕ್ಷರಾಗಿದ್ದರು.  ಅಲ್ಲದೇ, ಆ ಸಮಯದಲ್ಲಿ ಅವರು ನನ್ನನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಿದ್ದರು. ನಾನು ಅವರ ಬಗ್ಗೆ ದ್ವೇಷ ಮಾಡಬೇಕಿತ್ತು. ಯಾವ ಯಾವ ಕಾರಣಕ್ಕೆ ನನ್ನನ್ನು ತಪ್ಪಿಸಿ ರಾಜ್ಯಾಧ್ಯಕ್ಷರಾಗಿದ್ದರು ಎಂಬುದನ್ನು ಅವರೇ ನನ್ನ ಬಳಿ ಹೇಳಿಕೊಂಡಿದ್ದಾರೆ. ಆ ಬಗ್ಗೆ ನಾನು ಹೊಟ್ಟೆಕಿಚ್ಚು ಪಟ್ಟುಕೊಳ್ಳಬೇಕಿತ್ತು. ಆದರೆ, ಈಗ ಅವರು ನನ್ನ ಬಗ್ಗೆ ಹೇಳುತ್ತಿರುವುದು ವಿಪರ್ಯಾಸವಾಗಿದೆ ಎಂದು ತಿಳಿಸಿದರು.

ಈಗ ಸದಾನಂದಗೌಡರು ಹಿರಿಯ ನಾಯಕರು, ರಾಷ್ಟ್ರೀಯ ನಾಯಕರು. ರಸ್ತೆಯ ಮೇಲೆ ಅವರು ಮಾತನಾಡುವುದಿಲ್ಲ. ಪಾರ್ಲಿಮೆಂಟ್ ಮೇಲೆ ಕುಳಿತು ಮಾತನಾಡುತ್ತಾರಾ?  ನಾನು ಪತ್ರಕರ್ತರು ಎಲ್ಲಿ ಸಿಗುತ್ತಾರೆ ಅಲ್ಲಿ ಮಾತನಾಡುತ್ತೇನೆ. ರಾಜಕಾರಣದಲ್ಲಿ ಹಿರಿಯರಿಗೆ ಬೆಲೆ ಇಲ್ಲ. ಸದಾನಂದಗೌಡರು ಎಲ್ಲರ ಬಗ್ಗೆ ಕೆಳಮಟ್ಟದಲ್ಲಿ ಮಾತನಾಡುವುದು ಸರಿಯಲ್ಲ. ನಾವು ಇರುವುದು ನಮ್ಮವರ ಜೊತೆ ಇರುತ್ತೇವೆ. ಅವರ ಬಗ್ಗೆ ಅವರು ಎಚ್ಚರಿಕೆ ವಹಿಸಿಕೊಳ್ಳಲಿ ಎಂದು ಹೇಳಿದರು.

ಸದಾನಂದಗೌಡರು ಬಹಳ ಹಿರಿಯರಿದ್ದಾರೆ. ಕೇಂದ್ರ ಮಂತ್ರಿಯಾಗಿ ಯಶಸ್ವಿ ಆಗಿದ್ದರಿಂದ ಅವರು ಈಗ ರಾಸಾಯನಿಕ ಗೊಬ್ಬರದ ಮಂತ್ರಿ ಆಗಿದ್ದಾರೆ. ಅದಕ್ಕೆ ಮಾತನಾಡುತ್ತಾರೆ.  ಅವರಿಗೆ ಮಾತನಾಡಲು ಹಕ್ಕಿದೆ. ನನ್ನ ಮೇಲೆ ಪ್ರೀತಿ ಇದೆ. ನಾವಿಬ್ಬರು 1992 ರಲ್ಲಿ ಒಟ್ಟಿಗೆ ಎಂಎಲ್ ಎ ಆಗಿದ್ದೇವೆ. ನನಗಿಂತಲೂ ಅವರು ಹಿರಿಯರೇನಲ್ಲ. ನಮ್ಮ ಹಿರಿಯರು ಯಡ್ಡಿಯೂರಪ್ಪ ಮತ್ತು ಅನಂತಕುಮಾರು. ಸದಾನಂದಗೌಡರು ನನ್ನ ಸಮಾನ ವಯಸ್ಕರರು. ಅವರಿಗೆ ನನ್ನ ಮೇಲೆ ಪ್ರೀತಿ ಮೊದಲಿನಿಂದಲು ಇದೆ ಎಂದರು.

ಸದಾನಂದಗೌಡ ಅವರು ದೈವಿ ಪುರುಷರು. ಅವರು ಎಲ್ಲ ಅನುಭವಿಸಿದ್ದಾರೆ. ಅವರು ರಾಷ್ಟ್ರೀಯ ನಾಯಕರು. ನಮ್ಮಂತಹ ಸಾಮಾನ್ಯ ಶಾಸಕರ ಬಗ್ಗೆ ಅವರು ಮಾತನಾಡಬಾರದು. ಅವರು ರಾಷ್ಟ್ರಮಟ್ಟದ ನಾಯಕರು. ನಾವು ವಾಜಪೇಯಿ ಅವರ ಮಂತ್ರಿ ಮಂಡಲದಲ್ಲಿ ಮಂತ್ರಿ ಆದವರು. ಹಿರಿಯತನವನ್ನು ನೀವೇ ಲೆಕ್ಕ ಹಾಕಿ ಎಂದು ಯತ್ನಾಳ ತಿರುಗೇಟು ನೀಡಿದರು.

ಏನು ಇರಲಾರದಾಗ ನಾವು ಕೇಂದ್ರ ಮಂತ್ರಿ ಆಗಿದ್ದೆವು. ಈಗ ನಾವು ಸಾಮಾನ್ಯ ಶಾಸಕ. ಅವರು ಈಗೀಗ ಮಂತ್ರಿ ಆಗಿದ್ದಾರೆ. ಅದಕ್ಕೆ ಅವರು ರಾಷ್ಟ್ರೀಯ ನಾಯಕರು ಎಂದು ಯತ್ನಾಳ ಕಿಡಿ ಕಾರಿದರು.

ಯಡಿಯೂರಪ್ಪ ಅವರಷ್ಟು ಸಮರ್ಥರು ರಾಜ್ಯದಲ್ಲಿ ಸಾಕಷ್ಟು ಜನ ಇದ್ದಾರೆ :

ಇದಕ್ಕೂ ಮೊದಲು ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಅವರು, ಸೂರ್ಯ ಅಧಿಕಾರದ ರಾಜ. ಸಂಕ್ರಮಣದ ನಂತರ ಪಥ ಬದಲಾಯಿಸುತ್ತಾನೆ. ಉತ್ತರ ಕರ್ನಾಟಕದ ಕಡೆ ಬರುತ್ತಾನೆ. ಯಡಿಯೂರಪ್ಪ ತಮಗೆ ಸಹಾಯ ಮಾಡಿದವರನ್ನು ಮೊದಲು ಸಚಿವರನ್ನಾಗಿ ಮಾಡಲಿ. ಆದಷ್ಟು ಬೇಗನೇ ಯಡಿಯೂರಪ್ಪ ತಮಗೆ ಬೇಕಾದವರಿಗೆ, ಮಾತು ಕೊಟ್ಟವರಿಗೆ ಸಚಿವ ಸ್ಥಾನ ನೀಡಲಿ. ಅವರು ಸಿಎಂ ಆಗಿರುವವರೆಗೆ ನಾನು ಸಚಿವನಾಗುವುದಿಲ್ಲ. ಅವರು ಸಿಎಂ ಆಗಲು ಯಾರು ಸಹಾಯ ಮಾಡಿದ್ದಾರೆ.  ಅವರಿಗೆ ಸಿಎಂ ಸಹಾಯ ಮಾಡಲಿ. ಇದನ್ನು ಮೀರಿ ದೇವರ ಇಚ್ಛೇ ಬೇರೆ ಇರುತ್ತೆ.  ನಾವು ನಿರೀಕ್ಷಿಸಿದಂತೆ ರಾಜಕಾರಣದಲ್ಲಿ ಎಲ್ಲವೂ ನಡೆಯುವುದಿಲ್ಲ. ಮುಂದೆ ಏನಾದರೂ ಆಗಬಹುದು ಎಂದು ಯತ್ನಾಳ ಹೇಳಿದರು.

ಇದನ್ನೂ ಓದಿ : ಎಂಜಿನಿಯರಿಂಗ್‌, ಪದವಿ ಶಿಕ್ಷಣ ಸಂಸ್ಥೆಗಳಿಗೆ ಪೂರ್ಣ ಸ್ವಾಯತ್ತತೆ ನೀಡಲು ಸರಕಾರ ಸಿದ್ಧವಿದೆ : ಡಿಸಿಎಂ ಅಶ್ವತ್ಹನಾರಾಯಣ

ಯಡಿಯೂರಪ್ಪ ಅವರಷ್ಟೇ ಸಾಕಷ್ಟು ಜನ ಸಮರ್ಥರು ರಾಜ್ಯದಲ್ಲಿದ್ದಾರೆ. ಎಲ್ಲದಕ್ಕೂ ಪರ್ಯಾಯ ಎನ್ನುವುದು ಇದೆ. ವಾಜಪೇಯಿ ನಂತರ ಯಾರು ಎಂಬ ಮಾತಿಗೆ ಮೋದಿ ಸಿಕ್ಕಿದ್ದಾರೆ. ಯಾರೋ ಒಬ್ಬರು ಹೋಗಿ ಬಿಟ್ಟರೆ ಎಲ್ಲವೂ ಮುಳುಗಿ ಬಿಡುವುದಿಲ್ಲ.

ಸಚಿವ ಸಂಪುಟ ವಿಸ್ತರಣೆ ಬಹಳ ದಿನಗಳ ಕಗ್ಗಂಟು. ಹೊಸ ವರ್ಷದಲ್ಲಿ ಏನಾದರೂ ನಿರ್ಣಯವಾದರೂ ಆಶ್ಚರ್ಯವಿಲ್ಲ. ಸಂಕ್ರಮಣದ ಬಳಿಕ ಒಳ್ಳೆಯದಾಗುತ್ತೆ. ಉತ್ತರಾಯಣ ಪ್ರಾರಂಭವಾದರೆ ಸೂರ್ಯ ಪಥ ಬದಲಿಸುತ್ತಾನೆ. ಜ್ಯೋತಿ ಶಾಸ್ತ್ರವೂ ಅದನ್ನೇ ಹೇಳುತ್ತಿದೆ ಎಂದು ಯತ್ನಾಳ ರಾಜ್ಯ ರಾಜಕಾರಣದ ಬಗ್ಗೆ ಮತ್ತೋಮ್ಮೆ ಭವಿಷ್ಯ ನುಡಿದರು.
Published by:G Hareeshkumar
First published: