ಬೆಂಗಳೂರು: ಯಡಿಯೂರಪ್ಪ (Yediyurappa) ಮುಖ್ಯಮಂತ್ರಿಯಾಗಿದ್ದಾಗ ಸದಾ ಅವರ ವಿರುದ್ಧ ಹೇಳಿಕೆ ನೀಡುತ್ತಿದ್ದ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ನಂತರ ವಿಜಯೇಂದ್ರ ವಿರುದ್ಧವೂ ಕೆಲವು ದಿನಗಳು ವಾಗ್ದಾಳಿ ಮುಂದುವರಿಸಿದ್ದರು. ಇದೀಗ ಸಚಿವ ಮುರುಗೇಶ್ ನಿರಾಣಿ (Murugesh Nirani) ಸೇರಿದಂತೆ ಮುಖ್ಯಮಂತ್ರಿ ವಿರುದ್ಧವೂ ಸಾರ್ವಜನಿಕವಾಗಿ ಹೇಳಿಕೆ ನೀಡಿ ಬಿಜೆಪಿ ಪಕ್ಷಕ್ಕೆ ಮುಜುಗರ ತಂದಿದ್ದರು. ಈ ಕಾರಣದಿಂದ ರಾಜ್ಯ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಲ್ಲದೆ ಸಾರ್ವಜನಿಕವಾಗಿ ಪಕ್ಷದ ನಾಯಕರಿಗೆ ಹೇಳಿಕೆ ನೀಡುತ್ತಿರುವ ಬಸನಗೌಡ ಪಾಟೀಲ್ಗೆ ಕೇಂದ್ರ ಶಿಸ್ತು ಸಮಿತಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ಪಂಚಮಸಾಲಿ 2ಎ ಮೀಸಲಾತಿ ವಿಚಾರದಲ್ಲಿ ಪಕ್ಷ ಹಾಗೂ ಪಕ್ಷದ ನಾಯಕರು, ಮುಖ್ಯಮಂತ್ರಿ, ಸರ್ಕಾರ ಸಚಿವರ ವಿರುದ್ದ ಹೇಳಿಕೆ ನೀಡುತ್ತಿರುವ ಹಿನ್ನಲೆ ಬಿಜೆಪಿ ಹೈಕಮಾಂಡ್ ಕೆಂಡಾಮಂಡಲವಾಗಿದ್ದು, ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ. ಈ ಹಿನ್ನಲೆಯಲ್ಲಿ 15 ದಿನಗಳೊಳಗೆ ಉತ್ತರ ನೀಡುವಂತೆ ತಿಳಿಸಿದೆ ಎಂದು ತಿಳಿದುಬಂದಿದೆ.
ಎಚ್ಚರಿಕೆಗೂ ಬಗ್ಗದ ಯತ್ನಾಳ್
ಸಾರ್ವಜನಿಕ ಸಭೆಗಳಲ್ಲೇ ರಾಜ್ಯದ ನಾಯಕರನ್ನು ಹಿಗ್ಗಾಮುಗ್ಗಾ ಜಾಡಿಸುತ್ತಿದ್ದ ಯತ್ನಾಳ್ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕೆಂದು ಮೂರು ದಿನಗಳ ಹಿಂದೆ ರಾಜ್ಯ ಶಿಸ್ತು ಸಮಿತಿ ಶಿಫಾರಸು ಮಾಡಿತ್ತು. ಹಿಂದೆಯೂ ಕೇಂದ್ರ ಶಿಸ್ತು ಸಮಿತಿ ಪಕ್ಷದ ಹಿತದೃಷ್ಟಿಯಿಂದ ಮುಜುಗರ ತರುವಂತಹ ಯಾವುದೇ ಹೇಳಿಕೆ ನೀಡದಿರುವಂತೆ ಎಚ್ಚರಿಕೆ ನೀಡಿತ್ತು. ಆದರೆ ಇದಕ್ಕೆಲ್ಲಾ ಯತ್ನಾಳ್ ಸೊಪ್ಪು ಹಾಕದೇ ತಮ್ಮ ಟೀಕಾ ಪ್ರಹಾರ ಮುಂದುವರಿಸುತ್ತಿದ್ದರು.
ವೈಯಕ್ತಿಕ ಟೀಕೆ ಮಾಡದಂತೆ ಸೂಚನೆ
ಪಕ್ಷ ಹಾಗೂ ಪಕ್ಷದ ಮುಖಂಡರಿಗೆ ಮುಜುಗರ ತರುವಂತಹ ಹಾಗೂ ಯಾವುದೇ ನಾಯಕನ ವಿರುದ್ಧ ವೈಯಕ್ತಿಕವಾಗಿ ಟೀಕಿಸದಂತೆ ಸೂಚನೆ ನೀಡಲಾಗಿದೆ. ವಿಶೇಷವಾಗಿ ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಪಕ್ಷದ ವಿರುದ್ಧ ಹೇಳಿಕೆ ನೀಡಬಾರದು. ಒಂದು ವೇಳೆ ನೋಟಿಸ್ಗೆ ಸ್ಪಂದಿಸದಿದ್ದರೆ ಕ್ರಮದ ಎಚ್ಚರಿಕೆ ನೀಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ನೋಟಿಸ್ ಬಂದಿಲ್ಲ, ಊಹಪೂಹವಷ್ಟೇ
ಇನ್ನು ಕೇಂದ್ರ ಶಿಸ್ತುಸಮಿತಿಯಿಂದ ನೋಟಿಸ್ ಬಂದಿದೆ ಎನ್ನುವ ವಿಚಾರಕ್ಕೆ ವಿಜಯಪುರದಲ್ಲಿ ಪ್ರತಿಕ್ರಿಯಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ " ನನಗೆ ಈವರೆಗೆ ಯಾವುದೇ ನೋಟಿಸ್ ಬಂದಿಲ್ಲ, ಸುಮ್ಮನೇ ಊಹಾಪೂಹ ಹರಡಿಸುತ್ತಿದ್ದಾರೆ. ನಾನು ನೋಟಿಸ್ ಕೊಡುವಂತಹ ಯಾವುದೇ ಪಕ್ಷ ವಿರೋಧಿ ಹೇಳಿಕೆ ಅಥವಾ ಚಟುವಟಿಕೆ ನಡೆಸಿಲ್ಲ" ಎಂದು ತಿಳಿಸಿದ್ದಾರೆ.
ಊಹಾಪೂಹ ಹರಡಿಸುತ್ತಿದ್ದಾರೆ
ನಾನು ಭ್ರಷ್ಟಾಚಾರ ನಡೆಸುತ್ತಿರುವವರ ವಿರುದ್ಧ ಹಾಗೂ ವಂಶ ಪಾರಂಪರೆ ರಾಜಕೀಯ ಮುಂದುವರೆಸುವವರ ಬಗ್ಗೆ ಮಾತನಾಡಿದ್ದೇನೆ ಅಷ್ಟೆ. ನನಗೆ ನೋಟಿಸ್ ನೀಡಿದ್ದರೆ ಇಷ್ಟೊತ್ತಿಗೆ ಬಂದಿರುತ್ತಿತ್ತು. ಯತ್ನಾಳ್ ಇಷ್ಟೆಲ್ಲಾ ಮಾತನಾಡಿದ್ದಾನೆ ನೋಟಿಸ್ ಯಾಕೆ ನೀಡಿಲ್ಲ ಎಂದು ಕೆಲವರಿಗೆ ಕಾಡುತ್ತಿದೆ. ಅದಕ್ಕೆ ಇಂತಹ ಊಹಾಪೂಹ ಹರಡಿಸುತ್ತಿದ್ದಾರೆ ಎಂದರು.
ಇದನ್ನೂ ಓದಿ:Basanagowda Patil Yatnal: ಜೋಕರ್ ಮಾತನ್ನು ಜೋಕ್ ಆಗಿ ತೆಗೆದುಕೊಳ್ಳಿ; ಯತ್ನಾಳ್ಗೆ ವಚನಾನಂದ ಸ್ವಾಮೀಜಿ ತಿರುಗೇಟು
ವಾಜಪೇಯಿ ಇದ್ದಾಗಲೂ ನೋಟಿಸ್
ನೋಟಿಸ್ ವಿಚಾರ ನನಗೆ ಹೊಸದೇನಲ್ಲ. ಹಿಂದೆ ವಾಜಪೇಯಿ ಇದ್ದಾಗಲೂ ನನಗೆ ನೋಟಿಸ್ ನೀಡಿದ್ದರು. ನೋಟಿಸ್ ನೀಡಿದ ಮೂರು ತಿಂಗಳಿಗೆ ಕೇಂದ್ರ ಮಂತ್ರಿಯಾಗಿದ್ದೆ. ಇದೆಲ್ಲಾ ರಾಜಕೀಯ ವಿರೋಧಿಗಳ ಷಡ್ಯಂತ್ರ. ಹೈಕಮಾಂಡ್ನಲ್ಲಿ ನನಗೆ ನೋಟಿಸ್ ಕೊಡುವ ಯಾವುದೇ ವಾತಾವರಣ ಇಲ್ಲ. ಕೆಲವು ಜನ ಆ ರೀತಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಭಯಪಡುವಂತದ್ದು, ಅಂಜುವಂತದ್ದು ಏನಿಲ್ಲ ಎಂದರು.
150 ಸೀಟು ಬರಬೇಕೆನ್ನುವ ದೃಷ್ಟಿಯಲ್ಲಿ ಮಾತನಾಡಿದ್ದೇನೆ
ನಾನು ಏನೇ ಮಾತನಾಡಿದರೂ ಪಕ್ಷದ ಹಿತದೃಷ್ಟಿಯಿಂದ ಮಾತನಾಡಿದ್ದೇನೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 150 ಸೀಟ್ ಗೆಲ್ಲಬೇಕು ಎನ್ನುವ ಉದ್ದೇಶದಿಂದ ಮಾತನಾಡಿದ್ದೇನೆ. ನನ್ನ ಹೇಳಿಕೆಗಳಿಂದ ನನ್ನ ವಿರೋಧಿಗಳಿಗೆ ಭಯ ಉಂಟಾಗಿದೆ. ಅದಕ್ಕಾಗಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಯಾವ ಭಯಕ್ಕೂ ಅಂಜುವ ಮಗ ನಾನಲ್ಲ. ನಿನ್ನೆ ವರಿಷ್ಠರೇ ಮಾತನಾಡಿದ್ದಾರೆ. ರಾಷ್ಟ್ರೀಯ ಕಾರ್ಯಕಾರಣಿಯಲ್ಲೇ ಬಹುದೊಡ್ಡ ನಿರ್ಣಯಗಳು ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಮುಂದಿನ ಚುನಾವಣೆಗಳ ದೃಷ್ಟಿಯಿಂದ ಬಹಳಷ್ಟು ಬದಲಾವಣೆ ಮಾಡುವ ಸಾಧ್ಯತೆ ಇವೆ. ನನ್ನ ಪರವಾಗಿಯೇ ಒಳ್ಳೆಯ ನಿರ್ಣಯ ಆಗಲಿದೆ ಎಂದು ತಿಳಿಸಿದರು.
ನಿರಾಣಿಯನ್ನು ಪಿಂಪ್ ಸಚಿವ ಎಂದಿದ್ದ ಯತ್ನಾಳ್
ನಿರಾಣಿಯನ್ನು ಪಿಂಪ್ ಸಚಿವ ಎಂದಿದ್ದ ಯತ್ನಾಳ್ ಪಂಚಮಸಾಲಿಗೆ 2ಎ ಮೀಸಲಾತಿ ವಿಚಾರವಾಗಿ ಮಾತನಾಡುವ ವೇಳೆ ಮುರುಗೇಶ್ ನಿರಾಣಿಯನ್ನು ಪಿಂಪ್ ಸಚಿವ ಎಂದು ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ನಿರಾಣಿ ಬಿಜೆಪಿ ಸಂಸ್ಕೃತಿ ಹೊಂದಿರುವ ಪಕ್ಷ, ನಮ್ಮ ಸಮುದಾಯದವೂ ಸಂಸ್ಕೃತಿ ಹೊಂದಿದೆ. ಶಾಸಕ ಯತ್ನಾಳ ಅಸಂವಿಧಾನಿಕ ಮಾತುಗಳನ್ನು ಆಡುತ್ತಾರೆ. ಸಿದ್ದೇಶ್ವರ ಸ್ವಾಮೀಜಿ ಅವರ ಸನ್ನಿಧಿಯಲ್ಲಿ ಬೆಳೆದವರು ನಾವು. ಸ್ವಾಮೀಜಿ ಅವರ ಗುಣಗಳ ಶೇ.0.5 ರಷ್ಟು ನಾವು ಅನುಕರಣೆ ಮಾಡಿಕೊಂಡರೆ ಸಾಕು.
ಯತ್ನಾಳ್ ಎಲ್ಲಾ ನಾಯಕರ ಬಗ್ಗೆಯೂ ಹಗುರವಾಗಿ ಮಾತನಾಡುತ್ತಲೇ ಇದ್ದಾರೆ. ಆದರೆ ಜೆಡಿಎಸ್ಗೆ ಹೋಗಿ ಮುಸ್ಲಿಂ ಟೋಪಿ ಹಾಕಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಯತ್ನಾಳ್ ಡೋಂಗಿ ರಾಜಕಾರಣ ಮಾಡುತ್ತಿದ್ದಾರೆ. ನಾವು ಕೃಷ್ಣಾ, ಘಟಪ್ರಭಾ ನದಿಯ ನೀರು ಕುಡಿದು ಬೆಳೆದಿದ್ದೇವೆ. ನಾವು ಸುಮ್ಮನೆ ಇದ್ದೀವಿ ಅಂದರೆ ದೌರ್ಬಲ್ಯ ಅಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ಏನೂ ಸತ್ಯ ಹರಿಶ್ಚಂದ್ರ ಅಲ್ಲ. ದೊಡ್ಡ ಸಮುದಾಯದಲ್ಲಿ ಹುಟ್ಟಿದ್ದೀರಿ ಗೌರವದಿಂದ ಮಾತಾಡಿ ಎಂದು ನಿರಾಣಿ ತಿರುಗೇಟು ನೀಡಿದ್ದರು. ಇದಾದ ಒಂದೆರಡು ದಿನಗಳಲ್ಲಿ ನೋಟಿಸ್ ಯತ್ನಾಳ್ ಮನೆಗೆ ತಲುಪಿದೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ