ಮಹಾತ್ಮಾ ಗಾಂಧಿ ಮಾಡಿದ ದೊಡ್ಡ ತಪ್ಪಿನಿಂದ ಅಯೋಗ್ಯ ನೆಹರು ಪ್ರಧಾನಿಯಾದ; ಯತ್ನಾಳ್ ವಿವಾದಾತ್ಮಕ ಹೇಳಿಕೆ

ದೇಶದ ಪ್ರಧಾನಿಯಾಗಲು ಸರ್ಧಾರ್ ವಲ್ಲಭಾಯಿ ಪಟೇಲ್ ಅವರಿಗೆ ಬಹುಮತ ಇತ್ತು. ಆದರೆ, ಮಹಾತ್ಮ ಗಾಂಧಿ ಮಾಡಿದ ತಪ್ಪಿನಿಂದ ನೆಹರು ಪ್ರಧಾನಿಯಾದರು. ಆತನೋರ್ವ ಅಯೋಗ್ಯ, ವಿಲಾಸಿ ಜೀವನ ನಡೆಸುತ್ತಿದ್ದ ವ್ಯಕ್ತಿ ಎಂದು ಬಿಜೆಪಿ ನಾಯಕ ಹಾಗೂ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ

ಬಸನಗೌಡ ಪಾಟೀಲ್ ಯತ್ನಾಳ

  • Share this:
ಬಾಗಲಕೋಟೆ (ಜನವರಿ 28); ಮಹಾತ್ಮ ಗಾಂಧಿ ಮಾಡಿದ ದೊಡ್ಡ ತಪ್ಪಿನಿಂದ ವಿಲಾಸಿ ಜೀವನ ನಡೆಸುತ್ತಿದ್ದ ನೆಹರು ಅಂತಹ ಓರ್ವ ಅಯೋಗ್ಯ ವ್ಯಕ್ತಿ ಈ ದೇಶದ ಮೊದಲ ಪ್ರಧಾನಿಯಾದರು ಎಂದು ವಿಜಾಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ವಿವಾದಾತ್ಮಕ ಸಿಎಎ ಕಾಯ್ದೆಯ ಪರವಾಗಿ ನಿನ್ನೆ ಬಾಗಲಕೋಟೆ ಜಿಲ್ಲೆಯ ತೆರದಾಳ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, “ದೇಶದ ಪ್ರಧಾನಿಯಾಗಲು ಸರ್ಧಾರ್ ವಲ್ಲಭಾಯಿ ಪಟೇಲ್ ಅವರಿಗೆ ಬಹುಮತ ಇತ್ತು. ಆದರೆ, ಮಹಾತ್ಮ ಗಾಂಧಿ ಮಾಡಿದ ತಪ್ಪಿನಿಂದ ನೆಹರು ಪ್ರಧಾನಿಯಾದರು. ಆತನೋರ್ವ ಅಯೋಗ್ಯ, ವಿಲಾಸಿ ಜೀವನ ನಡೆಸುತ್ತಿದ್ದ ವ್ಯಕ್ತಿ.

ಅವನಿಗೆ ಸಿಗರೇಟ್ ಲಂಡನ್​ನಿಂದ ಬರ್ತಾ ಇತ್ತು. ಬಟ್ಟೆ ಕ್ಲೀನ್ ಮಾಡಲು ಸಹ ದೋಬಿಗೆ ಲಂಡನ್ ಹೋಗ್ತಾ ಇದ್ವು. ಇವರು ಬಡತನದ ಬಗ್ಗೆ ಮಾತನಾಡುತ್ತಾರೆ” ಎಂದು ಏಕವಚನದಲ್ಲಿ ನೆಹರು ವಿರುದ್ಧ ಕಿಡಿಕಾರಿದ್ದಾರೆ. ಈ ಮೂಲಕ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

“ಸಿಎಎ ಕಾಯ್ದೆಯಿಂದ ದೇಶದ ಯಾವುದೇ ಮುಸಲ್ಮಾನನಿಗೂ ತೊಂದರೆ ಇಲ್ಲ. ಖುರ್ಚಿಗಾಗಿ ರಾಜಕಾರಣ ಮಾಡುವವರಿಗೆ ಇದು ತೊಂದರೆಯಾಗಿದೆ ಅಷ್ಟೆ. ಮಂಗಳೂರಿನಲ್ಲಿ ಗೋಲಿಬಾರ್ ಆದಾಗ ಸಿದ್ದರಾಮಯ್ಯ ತನ್ನ ಜೀವ ಹೋದರೂ ಪರವಾಗಿಲ್ಲ ನಾನು ಮಂಗಳೂರಿಗೆ ಹೋಗುತ್ತೇನೆ ಎಂದು ಹಠ ಹಿಡಿದಿದ್ದರು. ಆದರೆ, ಪ್ರವಾಹ ಸಂದರ್ಭದಲ್ಲಿ ಇವರು ಬಾದಾಮಿಗೆ ಬರೋದು ಬಿಟ್ಟು ಎಲ್ಲಿ ಮಲಗಿದ್ದರು” ಎಂದು ಕಿಡಿಕಾರಿದ್ದಾರೆ.

ಯಾವನವ ಸಿಎಂ ಇಬ್ರಾಹಿಂ? ಅವನ ಅಪ್ಪನ ಅಪ್ಪ ಮಲ್ಲಪ್ಪ; ಯತ್ನಾಳ್ ವ್ಯಂಗ್ಯ

ಇದೇ ಸಂದರ್ಭದಲ್ಲಿ ಮಾಜಿ ಸಚಿವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸಿಎಂ ಇಬ್ರಾಹಿಂ ವಿರುದ್ಧವೂ ಕಿಡಿಕಾರಿದ ಬಸನಗೌಡ ಪಾಟೀಲ್ ಯತ್ನಾಳ್, “ಯಾವನವ ಸಿಎಂ ಇಬ್ರಾಹಿಂ, ಆತ ಟಿಪ್ಪು ಸುಲ್ತಾನ್ ಕಾಲದಲ್ಲಿ ಸಾಬನಾದವ, ಅವರಪ್ಪನ ಅಪ್ಪನನ್ನು ಹೋಗಿ ಕೇಳಿ ಆತ ಮಲ್ಲಪ್ಪ ಆಗಿರಬೇಕು ಇಲ್ಲವೇ ಕಲ್ಲಪ್ಪ ಆಗಿರಬೇಕು, ಇವರೆಲ್ಲ ಕಂಟ್ರಿ ಮಂದಿ ಒರಿಜಿನಲ್ ಅಲ್ಲ. ನಾವು ಕುಂಕುಮ ಹಚ್ಚಿಕೊಂಡು ಏನು ಬದುಕೀವಿ ನಾವೆ ಒರಿಜಿನಲ್” ಎಂದು ವ್ಯಂಗ್ಯವಾಡಿದ್ದಾರೆ.

(ವರದಿ- ರಾಚಪ್ಪ ಬನ್ನಿದಿನ್ನಿ)

ಇದನ್ನೂ ಓದಿ : ನೆರೆ-ಬರ ಪರಿಹಾರ ಕಾರ್ಯಕ್ಕೆ 6 ತಿಂಗಳ ನಂತರ ಹಣ ಬಿಡುಗಡೆ; 14 ಜಿಲ್ಲೆಗಳಿಗೆ 112 ಕೋಟಿ ನೀಡಿದ ರಾಜ್ಯ ಸರ್ಕಾರ
First published: