ವಿಜಯನಗರ ಪ್ರತ್ಯೇಕ ಜಿಲ್ಲೆ: ಹಂಪಿ ಉತ್ಸವ ಭಾಷಣದ ವೇಳೆ ತುಟಿ ಬಿಚ್ಚದ ಸಿಎಂ; ಆನಂದ್​​ ಸಿಂಗ್​​ ಆಸೆಗೆ ತಣ್ಣೀರು

ಸಿಎಂ ಭಾಷಣ ಮುಗಿಸಿ ವಾಪಾಸ್ ಹೋಗುವ ಸಂದರ್ಭದಲ್ಲಿ ನೂತನ ಜಿಲ್ಲೆ ಕುರಿತು ಕೇಳಿದ ಪತ್ರಕರ್ತರ ಪ್ರಶ್ನೆಗೂ ಉತ್ತರಿಸದೆ ಮೌನಕ್ಕೆ ಶರಣಾದರು. ಈ ಕುರಿತು ಮತ್ತೊಂದು ಸಭೆ ಕರೆಯುತ್ತೀರಾ? ಎಂಬುದಕ್ಕೂ ಸಿಎಂ ಏನೂ ಪ್ರತಿಕ್ರಿಯೆ ನೀಡದೇ ಕಾರು ಹತ್ತಿಯೇ ಬಿಟ್ಟರು‌.

ಆನಂದ್​​ ಸಿಂಗ್​, ಸಿಎಂ ಬಿ.ಎಸ್​​ ಯಡಿಯೂರಪ್ಪ​

ಆನಂದ್​​ ಸಿಂಗ್​, ಸಿಎಂ ಬಿ.ಎಸ್​​ ಯಡಿಯೂರಪ್ಪ​

  • Share this:
ಬಳ್ಳಾರಿ(ಜ.11): 2020ನೇ ಹಂಪಿ ಉತ್ಸವದಲ್ಲಿ ವಿಜಯನಗರ ನೂತನ ಜಿಲ್ಲೆಯಾಗಿ ಘೋಷಣೆಯಾಗುತ್ತದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೀಗ, ವಿಜಯನಗರ ಬಿಜೆಪಿ ಶಾಸಕ ಆನಂದ್​ ಸಿಂಗ್​​ ಆಸೆಗೆ ಬಿ.ಎಸ್​ ಯಡಿಯೂರಪ್ಪ ತಣ್ಣೀರು ಎರಚಿದ್ದಾರೆ. ನಿನ್ನೆ ಹಂಪಿ ಉತ್ಸವಕ್ಕೆ ಚಾಲನೆ ನೀಡಿದ ಸಿಎಂ ತಮ್ಮ ಭಾಷಣದಲ್ಲಿ ಎಲ್ಲಿಯೂ ವಿಜಯನಗರ ನೂತನ ಜಿಲ್ಲ ಎಂದು ಘೋಷಿಸುವ ಬಗ್ಗೆ ಮಾತಾಡಲೇ ಇಲ್ಲ. ಇದೀಗ ನೂತನ ಜಿಲ್ಲೆ ಸಂಬಂಧ ಯಡಿಯೂರಪ್ಪ ತುಟಿಬಿಚ್ಚದ ಕಾರಣ ಆನಂದ್​​ ಸಿಂಗ್​​ ಹೋರಾಟಕ್ಕೆ ಆರಂಭದಲ್ಲೇ ಹಿನ್ನಡೆಯಾಗಿದೆ ಎಂದೇಳಬಹುದು.

ಹೌದು, ವಿಜಯನಗರ ನೂತನ ಜಿಲ್ಲೆ ಘೋಷಣೆ ಸಂಬಂಧಿಸಿದಂತೆ ಸ್ಥಳೀಯ ಬಿಜೆಪಿ ಶಾಸಕ ಆನಂದ್ ಸಿಂಗ್ ಅವಿರತ ಪ್ರಯತ್ನ ಮಾಡುತ್ತಿದ್ದರೂ ಇನ್ನೂ ಸಕಾಲ ಕೂಡಿ ಬಂದಂತಿಲ್ಲ. ಈ ಬಾರಿಯ ವಿಶ್ವಪ್ರಸಿದ್ದ ಹಂಪಿ ಉತ್ಸವದಲ್ಲಿ ಘೋಷಣೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು‌. ಶ್ರೀಕೃಷ್ಣದೇವರಾಯ ಪಟ್ಟಾಭಿಷೇಕ ದಿನ ಘೋಷಣೆ ಮಾಡಿ ಎಂದು ಆನಂದ್ ಸಿಂಗ್ ಸಿಎಂಗೆ ಮನವಿ ಮಾಡಿಕೊಂಡಿದ್ದರು. ಆದರೆ ಹಂಪಿ ಉತ್ಸವ ಉದ್ಘಾಟನೆ ಮಾಡಿ ಮಾತಾಡಿದ ಸಿಎಂ ಯಡಿಯೂರಪ್ಪ ಅಪ್ಪ ತಪ್ಪಿ ವಿಜಯನಗರ ಜಿಲ್ಲೆ ಬಗ್ಗೆ ಒಂದು ಮಾತಾಡಲಿಲ್ಲ.

ಇನ್ನು, ಹಂಪಿ ಉತ್ಸವದ ವೇದಿಕೆ ಮೇಲೆ ನೂತನ ಜಿಲ್ಲೆ ಬಗ್ಗೆ ಬಾಯಿಬಿಚ್ಚದ ಸಿಎಂ ನಡೆ ಆನಂದ್​​ ಸಿಂಗ್​​ಗೆ ಬೇಸರ ತರಿಸಿತ್ತು. ಹಾಗಾಗಿಯೇ ಆನಂದ್ ಸಿಂಗ್ ತಮ್ಮ ಭಾಷಣದ ವೇಳೆ ನನಗೆ ಸಚಿವ ಸ್ಥಾನ ಮುಖ್ಯವಲ್ಲ. ವಿಜಯನಗರ ಜಿಲ್ಲೆ ಘೋಷಣೆಯಾಗಲಿ ಎಂದು ಸಿಎಂಗೆ ಮತ್ತೊಮ್ಮೆ‌ ಮನವಿ ಮಾಡಿಕೊಂಡರು.

ಇದನ್ನೂ ಓದಿ: ರಮೇಶ್ ಕುಮಾರ್ ವಿರುದ್ಧ 535 ಕೋಟಿ ರೂ. ಅಕ್ರಮದ ಗಂಭೀರ ಆರೋಪ ಹೊರಿಸಿದ ಜೆಡಿಎಸ್ ಮಾಜಿ​ ಶಾಸಕ

ಈ ಹಿಂದೆ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಬಾರದು ಎಂದು ರೆಡ್ಡಿ ಸಹೋದರರು ಸಿಎಂ ಎಚ್ಚರಿಕೆ ನೀಡಿದ್ದರು. ಒಂದು ವೇಳೆ ಜಿಲ್ಲೆ ಮಾಡಿದ್ದೇ ಆದಲ್ಲಿ ಬೆಂಕಿ ಹತ್ತಿ ಉರಿಯುತ್ತೆ ಎಂದು ಶಾಸಕ ಸೋಮಶೇಖರ ರೆಡ್ಡಿ ಕಿಡಿಕಾರಿದ್ದರು‌. ಉತ್ಸವದಲ್ಲಿ ತಮ್ಮ ಭಾಷಣದ ವೇಳೆ ಸಿಎಂ ನೂತನ ಜಿಲ್ಲೆ ಬಗ್ಗೆ ಮಾತನಾಡದಿದ್ದಾಗ ಮೊದಲು ಸಮಾಧಾನಪಟ್ಟವರು ಸೋಮಶೇಖರ್​​ ರೆಡ್ಡಿ.

ಸಿಎಂ ಭಾಷಣ ಮುಗಿಸಿ ವಾಪಾಸ್ ಹೋಗುವ ಸಂದರ್ಭದಲ್ಲಿ ನೂತನ ಜಿಲ್ಲೆ ಕುರಿತು ಕೇಳಿದ ಪತ್ರಕರ್ತರ ಪ್ರಶ್ನೆಗೂ ಉತ್ತರಿಸದೆ ಮೌನಕ್ಕೆ ಶರಣಾದರು. ಈ ಕುರಿತು ಮತ್ತೊಂದು ಸಭೆ ಕರೆಯುತ್ತೀರಾ? ಎಂಬುದಕ್ಕೂ ಸಿಎಂ ಏನೂ ಪ್ರತಿಕ್ರಿಯೆ ನೀಡದೇ ಕಾರು ಹತ್ತಿಯೇ ಬಿಟ್ಟರು‌.

ವಿಜಯನಗರ ಜಿಲ್ಲೆ ಘೋಷಣೆ ಬಗ್ಗೆ ಸಾಕಷ್ಟು ಆಸೆಯಿಟ್ಟುಕೊಂಡಿದ್ದ ಆನಂದ್ ಸಿಂಗ್ ಉತ್ಸವದಲ್ಲಿ ಆಸೆ ಈಡೇರಲಿಲ್ಲ. ಇದರಿಂದ ಸಿಂಗ್ ಬೇಸರಗೊಂಡ, ರೆಡ್ಡಿ ಸಹೋದರರು ಸಮಾಧಾನಪಟ್ಟುಕೊಂಡಿದ್ದಾರೆ. ಆದರೆ ಈ ಬಗ್ಗೆ ಛಲವಿಡದ ತ್ರಿವಿಕ್ರಮನಂತೆ ಸಿಂಗ್ ಹೊಸ ಜಿಲ್ಲೆ ಮಾಡಿಯೇ ತೀರುತ್ತೇನೆಂದು ಮುಂದಡಿಯಿಟ್ಟಿದ್ದಾರೆ.
Published by:Ganesh Nachikethu
First published: