news18-kannada Updated:February 27, 2020, 2:00 PM IST
ಸಚಿವ ನಾರಾಯಣಗೌಡ
ಮಂಡ್ಯ(ಫೆ.27): ಮಹಾರಾಷ್ಟ್ರಕ್ಕೆ ಜೈಕಾರ ಹಾಕಿ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದ ಕೆ.ಆರ್.ಪೇಟೆಯ ಬಿಜೆಪಿ ಸಚಿವ ಕೆ.ನಾರಾಯಣಗೌಡ ಇಂದು ಕನ್ನಡಿಗರಲ್ಲಿ ಕ್ಷಮೆ ಕೇಳಿದ್ದಾರೆ. ಕೆ.ಆರ್.ಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನನ್ನ ಹೇಳಿಕೆಯಿಂದ ನೋವಾಗಿದ್ದರೆ ಕನ್ನಡಿಗರಲ್ಲಿ, ಕರ್ನಾಟಕ ಜನರಲ್ಲಿ ಕ್ಷಮೆ ಕೋರುತ್ತೇನೆ. ಕನ್ನಡದ ಬಗ್ಗೆ ನನಗೆ ಗೌರವವಿದೆ, ನಾನು ಏನು ಹೇಳಿದ್ದೀನಿ ಅದು ಬಾಯಿ ತಪ್ಪಿ ಬಂದಿದೆ. ಅದರಿಂದ ಕನ್ನಡಿಗರಿಗೆ ನೋವಾಗಿದ್ದರೆ, ಖಂಡಿತಾ ಕ್ಷಮೆ ಕೋರಲು ಬಯಸುತ್ತೇನೆ. ನಾನು ಎಂದೆಂದಿಗೂ ಕನ್ನಡಿಗನೇ," ಎಂದು ನಾರಾಯಣಗೌಡ ಹೇಳಿದ್ದಾರೆ.
ಮುಂದುವರೆದ ಅವರು, "ನಾನು 35 ವರ್ಷಗಳಿಂದ ಮಹಾರಾಷ್ಟ್ರದಲ್ಲಿದ್ದದ್ದು ನಿಜ. ಆದರೆ ಇದು ನನ್ನ ಜನ್ಮಭೂಮಿ, ಇಲ್ಲಿ ಜನ್ಮ ಪಡೆದವನು. ಮಹಾರಾಷ್ಟ್ರದಲ್ಲಿ ಬ್ಯುಸಿನೆಸ್ ಮಾಡುತ್ತಿದ್ದೇನೆ. ಅಲ್ಲಿ 27 ಲಕ್ಷ ಜನ ಸೇರಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತೇವೆ. ಬೆಳಗ್ಗೆ, ಸಂಜೆ ಕನ್ನಡ ಭಾಷೆಯ ಬಗ್ಗೆಯೇ ಮಾತನಾಡುತ್ತೇವೆ. ಮಹಾರಾಷ್ಟ್ರದಲ್ಲೂ ಕನ್ನಡಿಗರ ಪರ ಹೋರಾಡುವವನು ನಾನು," ಎಂದರು.
ದಿಲ್ಲಿ ಪೊಲೀಸರಿಗೆ ಛೀಮಾರಿ ಹಾಕಿದ್ದ ನ್ಯಾ| ಮುರಳೀಧರ್ ದಿಢೀರ್ ವರ್ಗಾವಣೆ; ಬಿಜೆಪಿ-ಕಾಂಗ್ರೆಸ್ ವಾಕ್ಸಮರ
"ಮಹಾರಾಷ್ಟ್ರ ಕೂಡ ಭಾರತದ ಒಂದು ಅಂಗ. ನಾನೇನು ತಪ್ಪು ಮಾತನಾಡಲು ಹೋಗಿಲ್ಲ. ಮಹಾರಾಷ್ಟ್ರಕ್ಕೂ ನನಗೂ ಸಂಬಂಧ ಇದೆ. ಯಾಕೆಂದರೆ ಅಲ್ಲಿ ನಾನು ಬ್ಯುಸಿನೆಸ್ ಮಾಡುತ್ತೇನೆ. ಆದರೆ ನನ್ನನ್ನು ಗೆಲ್ಲಿಸಿರೋರು ಕನ್ನಡಿಗರು. ಕರ್ನಾಟಕದಲ್ಲೇ ಸಚಿವ ಆಗಿದ್ದೇನೆ. ನಾನು ಎಂದೆಂದಿಗೂ ಕನ್ನಡಿಗನೇ. ಆದರೆ ಕೆಲವರು ನನ್ನ ತೇಜೋವಧೆ ಮಾಡಲು ಈ ರೀತಿಯ ಕುತಂತ್ರ ಮಾಡುತ್ತಿದ್ದಾರೆ, ಮಾಡಿಕೊಳ್ಳಲಿ," ಎಂದು ಕಿಡಿಕಾರಿದರು.
ಸಚಿವ ನಾರಾಯಣಗೌಡ ಮಹಾರಾಷ್ಟ್ರಕ್ಕೆ ಜೈಕಾರ ಹಾಕಿದ ಹಿನ್ನೆಲೆ, ಕೆ.ಆರ್.ಪೇಟೆ ತಾಲೂಕು ರಕ್ಷಣಾ ವೇದಿಕೆ ಅಧ್ಯಕ್ಷ ವೇಣು ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದರು. "ರಾಜ್ಯದಲ್ಲಿದ್ದು, ಈ ಕ್ಷೇತ್ರದರಾಗಿದ್ದು ಕ್ಷೇತ್ರ ಮತದಾರರ ಮತ ಪಡೆದು ಮಹಾರಾಷ್ಟ್ರಕ್ಕೆ ಜೈಕಾರ ಹಾಕಿದ್ದು ತಪ್ಪು. ಕೆ.ಆರ್.ಪೇಟೆ ಏನು ಬೆಳಗಾವಿಯಲ್ಲಿಲ್ಲ, ಮಹಾರಾಷ್ಟ್ರ ಜೈ ಅನ್ನೋಕೆ. ಕೂಡಲೇ ಸಚಿವರು ಇದಕ್ಕೆ ಕ್ಷಮೆ ಯಾಚಿಸಬೇಕು. ಇನ್ನು ಮುಂದೆ ಈ ರೀತಿಯ ಹೇಳಿಕೆಯಿಂದ ಅಪಮಾನ ಮಾಡಬಾರದು" ಎಂದು ಆಗ್ರಹಿಸಿದ್ದರು.
ದೆಹಲಿಯಲ್ಲಿ ಉದ್ವಿಗ್ನ ಪರಿಸ್ಥಿತಿ: ಸಾವಿನ ಸಂಖ್ಯೆ 34ಕ್ಕೆ ಏರಿಕೆ; 200ಕ್ಕೂ ಹೆಚ್ಚು ಜನರಿಗೆ ಗಾಯ
First published:
February 27, 2020, 2:00 PM IST