ನಾನು ಸಿವಿಲ್ ಇಂಜಿನಿಯರ್, ಕಾಡಿನ ಇಂಜಿನಿಯರ್ ಅಲ್ಲ: ಖಾತೆ ಬಗ್ಗೆ ಅಸಮಾಧಾನ ಹೊರಹಾಕಿದ ಅರವಿಂದ ಲಿಂಬಾವಳಿ

ನನಗೆ  ನೀಡಿರುವ  ಎರಡು  ಹೊಸ ಖಾತೆಗಳನ್ನ ನಿಭಾಯಿಸಿಲು ದಿನದ 24 ಗಂಟೆ ಬೇಕು. ಕಾಡಿಗೆ ರಾತ್ರಿ ವೇಳೆ ಹೋದರೆ ಮಾತ್ರ ಅಲ್ಲಿನ ಪರಿಸ್ಥಿತಿ ಗೊತ್ತಾಗುತ್ತದೆ. ಪ್ರಾಣಿಗಳು ಓಡಾಡುವುದೆ ರಾತ್ರಿ ವೇಳೆ ಎಂದ ಅವರು,  ನಾನು ಮೂಲತಃ ಸಿವಿಲ್ ಎಂಜಿನಿಯರ್, ಕಾಡಿನ ಎಂಜಿನಿಯರ್ ಅಲ್ಲ.

Arvind Limbavali

Arvind Limbavali

  • Share this:
ಚಾಮರಾಜನಗರ (ಫೆ.07)  ಸಚಿವ ಸಂಪುಟ ವಿಸ್ತರಣೆ ನಂತರ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಎಲ್ಲವು ಸರಿಯಿಲ್ಲ ಎಂಬುದು ಮತ್ತೊಮ್ಮೆ ಬಹಿರಂಗಗೊಂಡಿದೆ. ಅರಣ್ಯ ಖಾತೆ ನೀಡಿರುವುದಕ್ಕೆ ಸಚಿವ ಅರವಿಂದ ಲಿಂಬಾವಳಿ ಪರೋಕ್ಷವಾಗಿ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ. 

ಚಾಮರಾಜನಗರದಲ್ಲಿ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಮುಖ್ಯಮಂತ್ರಿಗಳು ನನಗೆ ಎರಡು ಖಾತೆ ಕೊಟ್ಟಿದ್ದಾರೆ. ರಾತ್ರಿ ಹೊತ್ತು ಕಾಡಿನಲ್ಲಿ ಇರಬೇಕು, ಹಗಲು ವೇಳೆ ನಾಡಿಗೆ ಬರಬೇಕು, ಕಾಡು ನಾಡು ಎರಡನ್ನೂ ನೋಡಿಕೊಳ್ಳುವ ಜವಬ್ದಾರಿಯನ್ನು ಹೊರಿಸಿದ್ದಾರೆ. ನಾನು ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಇಲಾಖೆಯ ಸುರೇಶ್ ಕುಮಾರ್ ಅವರ ಜೊತೆಗೆ ಶಿಕ್ಷಣ ಸಚಿವನಾಗುತ್ತೇನೆ ಎಂದುಕೊಂಡಿದ್ದೆ. ಅವರ ಜೊತೆಗಾರನಾಗಿ ಕಳುಹಿಸುತ್ತಾರೆ ಎಂದುಕೊಂಡಿದ್ದೆ ಎನ್ನುವ ಮೂಲಕ ಉನ್ನತ ಶಿಕ್ಷಣ ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಇದ್ದುದ್ದನ್ನು ವ್ಯಕ್ತಪಡಿಸಿದರು.

ನನಗೆ  ನೀಡಿರುವ  ಎರಡು  ಹೊಸ ಖಾತೆಗಳನ್ನ ನಿಭಾಯಿಸಿಲು ದಿನದ 24 ಗಂಟೆ ಬೇಕು. ಕಾಡಿಗೆ ರಾತ್ರಿ ವೇಳೆ ಹೋದರೆ ಮಾತ್ರ ಅಲ್ಲಿನ ಪರಿಸ್ಥಿತಿ ಗೊತ್ತಾಗುತ್ತದೆ. ಪ್ರಾಣಿಗಳು ಓಡಾಡುವುದೆ ರಾತ್ರಿ ವೇಳೆ ಎಂದ ಅವರು,  ನಾನು ಮೂಲತಃ ಸಿವಿಲ್ ಎಂಜಿನಿಯರ್, ಕಾಡಿನ ಎಂಜಿನಿಯರ್ ಅಲ್ಲ. ಸಾಮಾನ್ಯ ಜನರಿಗೆ  ಕಾಡಿನ ಬಗ್ಗೆ  ಇರುವಷ್ಟು ತಿಳುವಳಿಕೆಯು ನನಗೆ ಇಲ್ಲ, ಎಂದು ಅಸಮಧಾನ ತೋಡಿಕೊಂಡರು.

ಸಮಾರಂಭ ಮುಗಿದ ನಂತರ ವೇದಿಕೆಯಿಂದ ಹೊರಬಂದ ಸಚಿವ ಅರವಿಂದ ಲಿಂಬಾವಳಿ ಅವರನ್ನು ಖಾತೆ ಅಸಮಾಧನದ ಬಗ್ಗೆ ಪ್ರಶ್ನಿಸಿದಾಗ,   ಥ್ಯಾಂಕ್ಸ್ ಎಂದಷ್ಟೇ ಹೇಳಿ ಕೋಪಿಸಿಕೊಂಡು ಹೊರಡುವ ಮೂಲಕ ಮತ್ತೊಮ್ಮ ತಮ್ಮ ಅತೃಪ್ತಿ ಹೊರಹಾಕಿದರು

ಜಾನಪದ ಅಕಾಡೆಮಿಯ ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ ಮಾಡಿದ ಸಚಿವ ಲಿಂಬಾವಳಿ:

ಚಾಮರಾಜನಗರದಲ್ಲಿ ಇದೇ ಮೊದಲ ಬಾರಿಗೆ ಜಾನಪದ ಅಕಾಡೆಮಿಯ 2020ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು.  ನಗರದ ಅಂಬೇಡ್ಕರ್ ಭವನದಲ್ಲಿನ ವೇದಿಕೆಗೆ   ಪ್ರಶಸ್ತಿ ಪುರಸ್ಕೃತರನ್ನು ಆಕರ್ಷಕ ಜಾನಪದ ಕಲಾತಂಡಗಳೊಂದಿಗೆ ಕರತರಲಾಯ್ತು. ಅರಣ್ಯ , ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಅರವಿಂದ ಲಿಂಬಾವಳಿ ಡಮರುಗ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮಂಗಳೂರಿನ ಡಾ.ಗಾಯತ್ರಿ ನಾವಡ ಅವರಿಗೆ ಡಾ.ಜಿಶಂಪ ಜಾನಪದ ತಜ್ಷ ಪ್ರಶಸ್ತಿ ಹಾಗು ಕಲಬುರ್ಗಿಯ ಪ್ರೊ ಬಸವರಾಜ ಸಬರದ ಅವರಿಗೆ ಡಾ.ಬಿ.ಎಸ್. ಗದ್ದಗಿಮಠ ಜಾನಪದ ತಜ್ಷ ಪ್ರಶಸ್ತಿ ಪ್ರಧಾನ ಮಾಡಲಾಯ್ತು.  ಮೂವತ್ತು ಜಿಲ್ಲೆಯ 30 ಹಿರಿಯ ಜಾನಪದ ಕಲಾವಿದರಿಗೆ ವಾರ್ಷಿಕ ಗೌರವ ಪ್ರಶಸ್ತಿಗಳನ್ನು ಸಚಿವ ಅರವಿಂದ ಲಿಂಬಾವಳಿ  ಪ್ರಧಾನ ಮಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ, ನಾನು ಗಂಡಾಗದಿದ್ದರು ಚಿಂತೆಯಿಲ್ಲ, ಹೆಣ್ಣಾಗದಿದ್ದರೂ ಪರವಾಗಿಲ್ಲ, ಮಕ್ಕಳನ್ನು ಹೆರದಿದ್ದರೂ ಚಿಂತೆಯಿಲ್ಲ. ಆದರೆ ಕನ್ನಡ ತಾಯಿಯ ಕೋಟಿ ಕೋಟಿ ಮಕ್ಕಳ ಪ್ರೀತಿ ವಿಶ್ವಾಸ ತಮ್ಮ ಮೇಲಿದೆ, ಎಂದು ಭಾವುಕರಾಗಿ ನುಡಿದರು.

ಇದೇ ವೇಳೆ 2018ನೇ ಸಾಲಿನ  ಪುಸ್ತಕ ಬಹುಮಾನವನ್ನು  ಡಾ.ಮುಮ್ತಾಜ್ ಬೇಗಂ ಅವರ ಜನಪದ ಸಾಹಿತ್ಯದಲ್ಲಿ ತವರುಮನೆ ಹಾಗು 2019ನೇ ಸಾಲಿನ ಪುಸ್ತಕ ಬಹುಮಾನವನ್ನು ಡಾ.ಹೆಚ್.ಡಿ.ಪೋತೆ ಅವರ ಜಾನಪದ ಜ್ಷಾನವಿಜ್ಷಾನ ಪುಸ್ತಕಕ್ಕೆ  ನೀಡಲಾಯ್ತು. ಬಹುಮಾನ ನೀಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಿಂದೆ ಯಾವುದೆ ಪ್ರಶಸ್ತಿ ಪಡೆಯಲು ಶಿಫಾರಸ್ಸು ಬೇಕಿತ್ತು. ಆದರೆ ನರೆಂದ್ರ ಮೋದಿ ಸರ್ಕಾರ ಯಾವುದೆ ಶಿಫಾರಸ್ಸು ಇಲ್ಲದೆ ಅರ್ಹರಿಗೆ ಪ್ರಶಸ್ತಿಗಳನ್ನು ನೀಡುತ್ತಿದೆ ಎಂದು ಪದ್ಮಶ್ರೀ ಪಡೆದ ಮಂಜಮ್ಮ ಜೋಗತಿ ಅವರನ್ನು ಉದಾಹರಿಸಿದರು.

ವರದಿ: ಎಸ್.ಎಂ.ನಂದೀಶ್, ಚಾಮರಾಜನಗರ
Published by:zahir
First published: