News18 India World Cup 2019

ಹೆಚ್.ಡಿ. ದೇವೇಗೌಡರ ನಡೆಗಳಿಂದ ಬೆಚ್ಚಿಬೀಳುತ್ತಿದೆಯಾ ಬಿಜೆಪಿ?


Updated:September 4, 2018, 12:15 PM IST
ಹೆಚ್.ಡಿ. ದೇವೇಗೌಡರ ನಡೆಗಳಿಂದ ಬೆಚ್ಚಿಬೀಳುತ್ತಿದೆಯಾ ಬಿಜೆಪಿ?

Updated: September 4, 2018, 12:15 PM IST
- ಶ್ರೀನಿವಾಸ ಹಳಕಟ್ಟಿ, ನ್ಯೂಸ್18 ಕನ್ನಡ

ಬೆಂಗಳೂರು(ಸೆ. 04): ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು 24X7 ರಾಜಕಾರಣಿ ಎಂದು ಕರೆಯುವುದುಂಟು. ಅವರ ತಲೆಯಲ್ಲಿ ಯಾವಾಗಲೂ ರಾಜಕೀಯ ಲೆಕ್ಕಾಚಾರಗಳು ನಡೆಯುತ್ತಲೇ ಇರುತ್ತವೆ. ಸೀಮಿತ ಬಲದ ಜೆಡಿಎಸ್  ಪಕ್ಷವನ್ನಿಟ್ಟುಕೊಂಡು ಅಧಿಕಾರಕ್ಕೇರುವುದು ಸಾಮಾನ್ಯದ ಮಾತಲ್ಲ. ಈಗ ಲೋಕಸಭಾ ಚುನಾವಣೆ ಮುಂಬರುವ ಹಿನ್ನೆಲೆಯಲ್ಲಿ ದೇವೇಗೌಡರು ಹಿಂದೆಂದಿಗಿಂತಲೂ ಚುರುಕಾಗಿದ್ದಾರೆ, ಬದಲಾಗುತ್ತಿದ್ದಾರೆ. ದೇವೇಗೌಡರು ರಾಜ್ಯದಲ್ಲಿ ಅಧಿಕಾರ ಹಿಡಿದಂತೆ ಕೇಂದ್ರದಲ್ಲೂ ಬಿಜೆಪಿಗೆ ಚಳ್ಳೆಹಣ್ಣು ತಿನಿಸಲು ಅಣಿಯಾಗುತ್ತಿರುವಂತೆ ತೋರುತ್ತಿದೆ. ಇತ್ತೀಚಿನ ದಿನಗಳಲ್ಲಿ ದೇವೇಗೌಡರ ರಾಜಕೀಯ ನಡೆಗಳಿಂದ ಇಂಥದ್ದೊಂದು ಭಾವನೆ ಮೂಡುತ್ತದೆ. ಮಾಜಿ ಪ್ರಧಾನಿಗಳು ಒಂದೊಂದಾಗಿ ಉರುಳಿಸುತ್ತಿರುವ ದಾಳಕ್ಕೆ ಭಾರತೀಯ ಜನತಾ ಪಕ್ಷ ಬೆಚ್ಚಿಬೀಳುತ್ತಿದೆ.

ಎನ್​ಡಿಎ, ಯುಪಿಎಗೆ ಪರ್ಯಾಯವಾಗಿ ಮತ್ತೊಂದು ರಾಜಕೀಯ ಶಕ್ತಿ ಪ್ರದರ್ಶನಕ್ಕೆ ದೇವೇಗೌಡರು ಸಂಪನ್ಮೂಲ ಕ್ರೋಢೀಕರಣದ ಕೆಲಸ ಮಾಡುತ್ತಿದ್ದಾರೆನ್ನಲಾಗಿದೆ. ಜೆಡಿಎಸ್​ನಂತೆ ದೇಶದಲ್ಲಿನ ಪ್ರಾದೇಶಿಕ ಪಕ್ಷಗಳೆಲ್ಲವನ್ನೂ ಒಗ್ಗೂಡಿಸಿ ತೃತೀಯ ರಾಜಕೀಯ ಶಕ್ತಿ ಹು್ಟು ಹಾಕುವುದು ಹೆಚ್​ಡಿಡಿ ರಣತಂತ್ರವಾಗಿದೆ. ತೆಲಂಗಾಣದ ಸಿಎಂ ಕೆ. ಚಂದ್ರಶೇಖರ್ ರಾವ್, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರೊಂದಿಗೆ ದೇವೇಗೌಡರು ಸಾಕಷ್ಟು ಒಡನಾಡುತ್ತಿದ್ಧಾರೆ. ತಮಿಳುನಾಡಿನ ಡಿಎಂಕೆ ಪಕ್ಷದೊಂದಿಗೆ ಅವರಿಗೆ ಉತ್ತಮ ಬಾಂಧವ್ಯವಿದೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಜೊತೆಗೂ ಒಳ್ಳೆಯ ಸ್ನೇಹವಿದೆ.

ಹಾಗೆಯೇ, ಗುಜರಾತ್​ನ ಪಾಟೀದಾರ್ ಸಮುದಾಯದ ಹೋರಾಟಗಾರ ಹಾರ್ದಿಕ್ ಪಟೇಲ್ ಅವರನ್ನು ದೇವೇಗೌಡರು ಬೆಂಬಲಿಸುತ್ತಿರುವ ನಡೆಯೂ ಕುತೂಹಲ ಮೂಡಿಸಿದೆ. ತಮ್ಮಂಥ ಯುವ ಮುಖಂಡರ ಸೇವೆ ಈ ದೇಶಕ್ಕೆ ಬೇಕಿದೆ. ದಯವಿಟ್ಟು ಉಪವಾಸ ಸತ್ಯಾಗ್ರಹ ಕೈಬಿಡಿ ಎಂದೂ ಹಾರ್ದಿಪ್ ಪಟೇಲ್ ಅವರಿಗೆ ಗೌಡರು ಪ್ರೀತಿಯಿಂದ ಮನವಿ ಮಾಡಿದ್ದಾರೆ.

ಹಾರ್ದಿಕ್ ಪಟೇಲ್ ಅವರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ 11ನೇ ದಿನಕ್ಕೆ ಕಾಲಿಟ್ಟಿದೆ. ಕಳೆದ 2 ದಿನಗಳಿಂದ ಹಾರ್ದಿಕ್ ಅವರು ಅನ್ನ, ನೀರೂ ಬಾಯಿಗೆ ಹಾಕಿಲ್ಲ. ರೈತರ ಸಾಲ ಮನ್ನಾ ಮಾಡಬೇಕು ಮತ್ತು ಪಟೇಲ್ ಸಮುದಾಯಕ್ಕೆ ಮೀಸಲಾತಿ ಕೊಡಬೇಕೆಂಬುದು ಆ ಯುವ ಮುಖಂಡನ ಪ್ರಮುಖ ಆಗ್ರಹಗಳಾಗಿವೆ.

ದೇವೇಗೌಡರ ಅಧಿಕಾರಾವಧಿಯಲ್ಲಿ ಪಟೇಲ್ ಸಮುದಾಯಕ್ಕೆ ಮೀಸಲಾತಿ ತರುವ ಪ್ರಯತ್ನ ನಡೆದು ಕೋರ್ಟ್​ನಿಂದ ತಡೆ ಎದುರಿಸಬೇಕಾಗಿತ್ತಂತೆ. ಈ ಹಿನ್ನೆಲೆಯಲ್ಲಿ ದೇವೇಗೌಡರು ಹಾರ್ದಿಕ್ ಪಟೇಲ್ ಅವರಿಗೆ ನೈತಿಕ ಬೆಂಬಲ ನೀಡಿದ್ದಾರೆ. ಹಾರ್ದಿಕ್ ಪಟೇಲ್ ಅವರ ಬೇಡಿಕೆಗಳನ್ನ ಈಡೇರಿಸುವಂತೆ ಕೇಂದ್ರ ಸರಕಾರಕ್ಕೆ ದೇವೇಗೌಡರು ಪತ್ರ ಕೂಡ ಬರೆದಿದ್ದಾರೆ.
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...