ಸರ್ಕಾರಕ್ಕೆ ಕಣ್ಣಿಲ್ಲ, ಕಿವಿಯಿಲ್ಲ; ಸರ್ಕಾರ ಉರುಳಿದರೆ ಬಿಜೆಪಿ ಕಾರಣವಲ್ಲ; ಕೋಟಾ ಶ್ರೀನಿವಾಸ ಪೂಜಾರಿ

news18
Updated:September 6, 2018, 1:26 PM IST
ಸರ್ಕಾರಕ್ಕೆ ಕಣ್ಣಿಲ್ಲ, ಕಿವಿಯಿಲ್ಲ; ಸರ್ಕಾರ ಉರುಳಿದರೆ ಬಿಜೆಪಿ ಕಾರಣವಲ್ಲ; ಕೋಟಾ ಶ್ರೀನಿವಾಸ ಪೂಜಾರಿ
news18
Updated: September 6, 2018, 1:26 PM IST
ಕೃಷ್ಣ ಜಿ.ವಿ., ನ್ಯೂಸ್​18 ಕನ್ನಡ

ಬೆಂಗಳೂರು (ಸೆ. 6): ಸರ್ಕಾರಕ್ಕೆ ಕಣ್ಣಿಲ್ಲ, ಕಿವಿಯಿಲ್ಲ. ಈ ಮೈತ್ರಿ ಸರ್ಕಾರ ಉರುಳಿದರೆ ಅದಕ್ಕೆ ಬಿಜೆಪಿ ಕಾರಣವಲ್ಲ. ಅಲ್ಪಸಂಖ್ಯಾತರಿಗೆ ಸರ್ಕಾರ ಮಾಡಿರುವ ದ್ರೋಹಕ್ಕೆ ಅವರು ಕೊಟ್ಟಿರುವ ಶಾಪಕ್ಕೆ ಸರ್ಕಾರ ಉರುಳಲಿದೆ ಎಂದು ವಿಧಾನಪರಿಷತ್​ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಭವಿಷ್ಯ ನುಡಿದಿದ್ದಾರೆ.

ವಕ್ಫ್​ ಆಸ್ತಿ ಕಬಳಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಆಗ್ರಹಿಸಿ ಬಿಜೆಪಿ ಶಾಸಕರು ಮತ್ತು ವಿಧಾನ ಪರಿಷತ್​ ಸದಸ್ಯರಿಂದ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಲಾಗುತ್ತಿದೆ.

ಈ ವೇಳೆ ಮಾತನಾಡಿದ ಅವರು, ಬಿಜೆಪಿ ಶಾಸಕರು ಧರಣಿ ನಡೆಸುತ್ತಿದ್ದರೂ ಸರ್ಕಾರದ ಯಾವ ಪ್ರತಿನಿಧಿಯೂ ಬಂದಿಲ್ಲ. ಶೇ. 50ರಷ್ಟು ವಕ್ಫ್​ ಆಸ್ತಿ ಕಬಳಿಕೆ ಮಾಡಿದ್ದಾರೆ. ಸರ್ಕಾರ ಎಲ್ಲಿ ಉರುಳಿ ಹೋಗುತ್ತದೋ ಎಂದು ಸದನದಲ್ಲಿ ವರದಿ ಮಂಡಿಸಿಲ್ಲ. 27 ಸಾವಿರ ಎಕರೆ ಜಮೀನು ಕಬಳಿಕೆಯಾಗಿದೆ. 2 ಲಕ್ಷ ಕೋಟಿಗೂ ಹೆಚ್ಚು ಆಸ್ತಿಯನ್ನು ಕೆಲ ನಾಯಕರು ಕಬಳಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.‘

ಸರ್ಕಾರ ಉಳಿಸುವಂತೆ ಸಿಎಂ ದೇವರ ಮೊರೆ:

ಈ ವೇಳೆ ಮಾತನಾಡಿದ ಶಾಸಕ ಆರ್​. ಅಶೋಕ್​, ಸಿಎಂ ಕುಮಾರಸ್ವಾಮಿ 51 ದೇಗುಲ ಸುತ್ತಿದಾಗಲೇ ಸರ್ಕಾರ ಬೀಳುವ ಅನುಮಾನ ಬಂದಿದೆ. ಅದಕ್ಕೇ ಹೆಚ್ಡಿಕೆ ಸರ್ಕಾರ ಉಳಿಸುವಂತೆ ದೇವರನ್ನು ಕೇಳುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಯಾವಾಗ ಬಿದ್ದು ಹೋಗುತ್ತದೋ ಗೊತ್ತಿಲ್ಲ. ಸಿಎಂ ಬರುವಷ್ಟರಲ್ಲಿ ವರದಿ ಮಂಡಿಸಿ ನೀವೇ ಕ್ರೆಡಿಟ್ ತೆಗೆದುಕೊಳ್ಳಿ ಎಂದು ವಕ್ಫ್ ಆಸ್ತಿ ಕಬಳಿಕೆ ಕುರಿತ ಮಾಣಿಪ್ಪಾಡಿ ವರದಿ ಮಂಡನೆಗೆ ಆಗ್ರಹ ಮಾಡಿದರು. ಮಾಣಿಪ್ಪಾಡಿಯವರಿಗೆ ಪಾಕಿಸ್ತಾನದಿಂದಲೂ ಬೆದರಿಕೆ ಕರೆ ಬಂದಿದೆ. ಅನ್ವರ್ ಮಾಣಿಪ್ಪಾಡಿಗೆ ತಕ್ಷಣ ಸರ್ಕಾರ ರಕ್ಷಣೆ ಕೊಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಡಿಸಿಎಂ ಆರ್. ಅಶೋಕ್ ಆಗ್ರಹ ಮಾಡಿದರು.

ಅಲ್ಪಸಂಖ್ಯಾತರು, ಬಡವರ ಹಣ ವಾಪಸ್ ಸಿಗಬೇಕು. ಇಂದು  ಅದರ ಬೆಲೆ 10 ಸಾವಿರ ಕೋಟಿಗೂ ಹೆಚ್ಚಾಗುತ್ತದೆ. ಆ ಹಣದಲ್ಲಿ 5 ವರ್ಷ ಎಲ್ಲ ಸಾಲಮನ್ನಾ ಬಾಕಿಯನ್ನು ತೀರಿಸಬಹುದಿತ್ತು. ಆದರೆ, ಆ ಹಣ ಕೆಲವೇ ಕೆಲವು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ಜೇಬಿಗೆ ಸೇರಿದೆ. ಸರ್ಕಾರಕ್ಕೆ ತಾಕತ್ತಿದ್ದರೆ, ಅವರ ಕಡೆಯವರು ಯಾರೂ ಭಾಗಿಯಾಗಿಲ್ಲ ಅನ್ನೋದಾದರೆ ಆ ಹಣವನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಿ. ಅದರಲ್ಲಿ ತಪ್ಪಿದ್ದರೆ ಮಾಣಿಪ್ಪಾಡಿಯವರಿಗೆ ಬೇಕಾದರೆ ಶಿಕ್ಷೆ ಕೊಡಿ. ಇಲ್ಲವಾದರೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಿ ಎಂದು ಅಶೋಕ್​ ಒತ್ತಾಯಿಸಿದ್ದಾರೆ.

ಬಕ್ರೀದ್, ರಂಜಾನ್, ಈದ್ ಮಿಲಾದ್ ಹಬ್ಬಗಳಲ್ಲಿ ಕಾಂಗ್ರೆಸ್, ಜೆಡಿಎಸ್ ನವರು ಟೋಪಿ ಹಾಕಿಕೊಳ್ಳುತ್ತಾರೆ. ಆದರೆ, ಆಮೇಲೆ ಅದೇ ಟೋಪಿಯನ್ನು ಅವರ ತಲೆ ಮೇಲೆ ಇಡುತ್ತಾರೆ.
ಅನ್ವರ್ ಮಾಣಪ್ಪಾಡಿ ವರದಿಯನ್ನು ಈಗಾಗಲೇ ಸರ್ಕಾರಕ್ಕೆ ಕೊಡಲಾಗಿದೆ. ಅದನ್ನು ವಿಧಾನಸಭೆಯಲ್ಲಿ ಮಂಡಿಸಿ. ಅದನ್ನು ಮಂಡಿಸಿದರೆ ಮುಖವಾಡ ಕಳಚಿ ಬೀಳುತ್ತೆ ಎಂಬ ಭಯ ಸರ್ಕಾರವನ್ನು ಕಾಡುತ್ತಿದೆ. ಅಲ್ಪಸಂಖ್ಯಾತರ ಬಗ್ಗೆ ನಿಮಗೆ ಕಾಳಜಿ ಇದ್ದರೆ ಅದನ್ನು ವಿಧಾನಸಭೆಯಲ್ಲಿ ಮಂಡಿಸಿ ಎಂದು ಬಿಜೆಪಿಯ ಶಾಸಕ ಸಿ ಟಿ ರವಿ ಆಗ್ರಹಪಡಿಸಿದರು.
First published:September 6, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ