ಸಿದ್ದರಾಮಯ್ಯರಂತೆ ಪಾದಯಾತ್ರೆ ಮೂಲಕ ಜಿಂದಾಲ್​ ಭೂ ಪರಭಾರೆ ವಿರೋಧಿಸಿ ಪಕ್ಷದ ವರ್ಚಸ್ಸು ವೃದ್ಧಿಗೆ ಸಜ್ಜಾದ ಬಿಜೆಪಿ

ಜಿಂದಾಲ್​ ಭೂಮಿ ಹಂಚಿಕೆ ವಿಚಾರವಾಗಿ ಬಿಜೆಪಿ ಎರಡು ದಿನ ಅಹೋರಾತ್ರಿ ಪ್ರತಿಭಟನೆ ನಡೆಸಿದೆ. ಇದರಿಂದ ಮೈತ್ರಿ ಸರ್ಕಾರ ಮುಜುಗರಕ್ಕೆ ಈಡಾಗಿದ್ದು, ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿರುವ ಬಿಜೆಪಿ ಈ  ಪ್ರತಿಭಟನೆಯನ್ನು ಮತ್ತೊಂದು ಸ್ವರೂಪಕ್ಕೆ ಕೊಂಡೊಯ್ಯಲು ಮುಂದಾಗಿದೆ.

Seema.R | news18
Updated:June 18, 2019, 2:41 PM IST
ಸಿದ್ದರಾಮಯ್ಯರಂತೆ ಪಾದಯಾತ್ರೆ ಮೂಲಕ ಜಿಂದಾಲ್​ ಭೂ ಪರಭಾರೆ ವಿರೋಧಿಸಿ ಪಕ್ಷದ ವರ್ಚಸ್ಸು ವೃದ್ಧಿಗೆ ಸಜ್ಜಾದ ಬಿಜೆಪಿ
ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಬಿ.ಎಸ್​​ ಯಡಿಯೂರಪ್ಪ
  • News18
  • Last Updated: June 18, 2019, 2:41 PM IST
  • Share this:
ಬೆಂಗಳೂರು (ಜೂ.18): ಜಿಂದಾಲ್​ ಕಂಪನಿಗೆ ಅಗ್ಗದ ದರದಲ್ಲಿ ಭೂಮಿ ಪರಭಾರೆ ಮಾಡಲು ಮುಂದಾಗಿರುವ ಸರ್ಕಾರದ ನಿರ್ಧಾರದ ವಿರುದ್ಧ ಮೈತ್ರಿ ನಾಯಕರಲ್ಲಿಯೇ ಜಟಾಪಟಿ ಮೂಡಿದೆ. ಇನ್ನು ಈ ಬಗ್ಗೆ ಬಿಜೆಪಿ ಕೂಡ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದು, ಪರಿಸ್ಥಿತಿ  ಲಾಭ ಪಡೆಯಲು ಸಜ್ಜಾಗಿದೆ.

ಜಿಂದಾಲ್‌ ಸಂಸ್ಥೆಗೆ 3600 ಎಕರೆಗೂ ಮೇಲ್ಪಟ್ಟ ಅದಿರು ಭೂಮಿಯನ್ನು ಸರ್ಕಾರ ಪರಭಾರೆ ಮಾಡಲು ಮುಂದಾಗಿತ್ತು. ಸರ್ಕಾರದ ಈ ನಿರ್ಧಾರಕ್ಕೆ ಎಲ್ಲೆಡೆಯಿಂದ ವಿರೋಧ ವ್ಯಕ್ತವಾದ ಬಳಿಕ ಈ ತೀರ್ಮಾನವನ್ನು ಸಂಪುಟ ಸಭೆಯಲ್ಲಿ ಮರುಪರಿಶೀಲನೆ ನಡೆಸುವುದಾಗಿ ಸರ್ಕಾರ ಹೇಳಿದೆ. ಏತನ್ನಧ್ಯೆ ಈ ವಿಚಾರವಾಗಿ ಬಿಜೆಪಿ ಎರಡು ದಿನ ಅಹೋರಾತ್ರಿ ಪ್ರತಿಭಟನೆಯನ್ನು ನಡೆಸಿದೆ. ಇದರಿಂದ ಸರ್ಕಾರ ಮುಜುಗರಕ್ಕೆ ಈಡಾಗಿದ್ದು, ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿರುವ ಬಿಜೆಪಿ ಈ  ಪ್ರತಿಭಟನೆಯನ್ನು ಮತ್ತೊಂದು ಸ್ವರೂಪಕ್ಕೆ ಕೊಂಡೊಯ್ಯಲು ಮುಂದಾಗಿದೆ. ಮತ್ತೊಂದು ಸ್ವರೂಪ ಎಂದರೆ, ಅದು 2013ರಲ್ಲಿ ಸಿದ್ದರಾಮಯ್ಯ ಮಾಡಿದ್ದ ರೀತಿಯಲ್ಲಿನ ಪಾದಯಾತ್ರೆ.

ಇತಿಹಾಸ ಮರುಕಳಿಸಲು ಮುಂದಾದ ಬಿಜೆಪಿ ನಾಯಕರು

ಈ ಹಿಂದೆ 2010ರಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಬಳ್ಳಾರಿ ಗಣಿಧಣಿಗಳ ವಿರುದ್ಧ ಮಾಜಿ ಸಿದ್ದರಾಮಯ್ಯ ತೊಡೆ ತಟ್ಟಿದ್ದರು. ಯಡಿಯೂರಪ್ಪ ಆಡಳಿತದಲ್ಲಿದ್ದರೂ ಅಧಿಕಾರ ಬಳ್ಳಾರಿಯ ಗಣಿಧಣಿಗಳ ಕೈಯಲ್ಲಿದೆ. ಇವರು ಬಳ್ಳಾರಿಯನ್ನು ರಿಪಬ್ಲಿಕ್​ ಆಫ್​ ಬಳ್ಳಾರಿ ಮಾಡಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಸದನದಲ್ಲಿ ಗುಡುಗಿದ್ದರು.

ಅಲ್ಲದೇ, ಬಳ್ಳಾರಿಗೆ ಬನ್ನಿ ಎಂಬ ಜನಾರ್ದನಾ ರೆಡ್ಡಿ ಸವಾಲನ್ನು ಸ್ವೀಕರಿಸಿದ ಸಿದ್ದರಾಮಯ್ಯ 2013ರಲ್ಲಿ ಗಣಿ ಜಿಲ್ಲೆಗೆ ಪಾದಯಾತ್ರೆ ನಡೆಸುವ ಮೂಲಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದರು. ಈ ಮೂಲಕ 2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದರು. ಅಂದು ಸಿದ್ದರಾಮಯ್ಯ ನಡೆಸಿದ 320 ಕಿ.ಮೀ. ಪಾದಯಾತ್ರೆ ನಡೆಸಿದರ ಪರಿಣಾಮ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದು, ಗೆದ್ದು ಬೀಗಿತ್ತು.

ಅಂದು ಬಳ್ಳಾರಿ ಗಣಿಧಣಿಗಳ ವಿರುದ್ಧ ಕಾಂಗ್ರೆಸ್​ ನಾಯಕರು ನಡೆಸಿದ ಪಾದಯಾತ್ರೆ ತಂತ್ರವನ್ನು ಬಿಜೆಪಿ ನಾಯಕರು ಇಂದು ಮೈತ್ರಿ ಸರ್ಕಾರದ ವಿರುದ್ಧ ಬಳಸಲು ಮುಂದಾಗಿದ್ದಾರೆ. ಜಿಂದಾಲ್​ ಭೂಮಿ ಹಂಚಿಕೆ ವಿಚಾರ ಕುರಿತು ರಾಜ್ಯದ ಜನರ ಗಮನ ಸೆಳೆಯಲು ಬಿಜೆಪಿಗೆ ಕಾಣುತ್ತಿರುವ ಏಕೈಕ ಮಾರ್ಗ ಇದಾಗಿದ್ದು, ಪರಿಸ್ಥಿತಿಯ ಲಾಭ ಪಡೆಯಲು ಕಮಲ ನಾಯಕರು ಸಜ್ಜಾಗಿದ್ದಾರೆ ಎನ್ನಲಾಗಿದೆ.

ಈಗಾಗಲೇ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ನಾಯಕರು ಜಿಂದಾಲ್​ ಭೂಮಿ ಪರಭಾರೆ ವಿಚಾರದಲ್ಲಿ ಸಿದ್ದರಾಮಯ್ಯಗೆ ಪಾದಯಾತ್ರೆ ನೆನಪಿಸುವ ಮೂಲಕ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ  ಕಾಂಗ್ರೆಸ್​ ನಾಯಕರ ಪಾದಯಾತ್ರೆ ತಂತ್ರವನ್ನು ತಾವು ಅನುಸರಿಸಿದರೆ ತಮಗೆ ಲಾಭವಾಗಲಿದೆ ಎಂಬ ಸಲಹೆಯನ್ನು ಹಲವು ನಾಯಕರು ಬಿಜೆಪಿ ರಾಜ್ಯಾಧ್ಯಕ್ಷರಿಗೆ  ನೀಡಿದ್ದಾರೆ.ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಮೈತ್ರಿ ಸರ್ಕಾರದ ವಿರುದ್ಧ ಪಾದಯಾತ್ರೆ ಆರಂಭಿಸುವ ಚಿಂತನೆ ನಡೆಸಿದ್ದಾರೆ. ಈಗಾಗಲೇ ಲೋಕಸಭಾ ಚುನಾವಣೆಯ ಯಶಸ್ಸಿನ ಸಂಭ್ರಮದಲ್ಲಿರುವ ಬಿಜೆಪಿ ನಾಯಕರು ವಿಧಾನಸಭೆ ರಚನೆ ವೇಳೆ ಆದ ಡ್ಯಾಮೇಜ್​ ಕಂಟ್ರೋಲ್​ಗೆ ಮುಂದಾಗಿದ್ದಾರೆ. ಈ ಮೂಲಕ ಪಕ್ಷದ ವರ್ಚಸ್ಸನ್ನು ಇನ್ನಷ್ಟು ಹೆಚ್ಚಿಸಬಹುದು ಎಂಬ ಲೆಕ್ಕಾಚಾರ ನಡೆಸಿದ್ದಾರೆ.

ಇದನ್ನು ಓದಿ: ಜಿಂದಾಲ್​ನಿಂದ 20 ಕೋಟಿ ಕಿಕ್​ಬ್ಯಾಕ್​ ವಿಚಾರ; ಹೊಣೆಗೇಡಿತನದಿಂದ ಮಾತನಾಡುವುದು ಸರಿಯಲ್ಲ; ಸಿಎಂ ಗೆ ಟಾಂಗ್ ಕೊಟ್ಟ ಯಡ್ಡಿ!

ಈ ಪಾದಯಾತ್ರೆ ಮೂಲಕ ಪಕ್ಷ ಸಂಘಟನಾತ್ಮಕವಾಗಿ ಇನ್ನಷ್ಟು ಬಲಗೊಳ್ಳಲಿದೆ. ಜೊತೆಗೆ ಮಧ್ಯಂತರ ಚುನಾವಣೆ ಎದುರಾದರೆ ತಮಗೆ ಲಾಭವಾಗಲಿದೆ ಎಂಬ ಮಾತು ಕಮಲ ನಾಯಕರಲ್ಲಿ ಕೇಳಿ ಬರುತ್ತಿದೆ.

ಒಂದು ವೇಳೆ ರಾಜಧಾನಿಯಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸಲು ಸಾಧ್ಯವಾಗದಿದ್ದಲ್ಲಿ, ಬಳ್ಳಾರಿ ಜಿಲ್ಲೆಯಲ್ಲಿಯೇ ಪಾದಯಾತ್ರೆ ನಡೆಸಿ ಮೈತ್ರಿ ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸುವಂತೆ ಕೂಡ ಸಲಹೆ ನೀಡಿದ್ದಾರೆ. ಈ ಮೂಲಕ ಮೈತ್ರಿ ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಯೋಜನೆಗೆ ಕಮಲ ನಾಯಕರು ಮುಂದಾಗಿದ್ದಾರೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.

(ವರದಿ: ಚಿದಾನಂದ ಪಟೇಲ್​)

First published:June 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ