news18-kannada Updated:October 28, 2020, 4:20 PM IST
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
ಹುಬ್ಬಳ್ಳಿ(ಅ. 28): ಹುಬ್ಬಳ್ಳಿಯಲ್ಲಿ ತಡರಾತ್ರಿ ಬಿಜೆಪಿ ನಾಯಕರ ರಹಸ್ಯ ಸಭೆ ನಡೆದಿದೆ. ಉತ್ತರ ಕರ್ನಾಟಕದ ರಾಜಕೀಯ ವಿದ್ಯಮಾನಗಳ ಕುರಿತು ಗಂಭೀರ ಚರ್ಚೆಗಳಾಗಿವೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಆಯ್ಕೆ, ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಗಳ ಕುರಿತು ಚರ್ಚೆಗಳಾಗಿವೆ. ಮಸ್ಕಿ ಕ್ಷೇತ್ರದಲ್ಲಿನ ಬಿಜೆಪಿ ಮುಖಂಡರ ಭಿನ್ನಾಭಿಪ್ರಾಯ ಶಮನಕ್ಕೆ ಸಂಧಾನ ನಡೆದಿದೆ. ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗಳ ಬಗ್ಗೆಯೂ ವಿಮರ್ಶೆ ನಡೆದಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಉಮೇಶ್ ಕತ್ತಿ, ರಮೇಶ್ ಕತ್ತಿ, ಮಹಾಂತೇಶ್ ಕೌಟಗಿಮಠ, ಆನಂದ ಮಹಾಮನಿ, ಬಾಲಚಂದ್ರ ಜಾರಕಿಹೋಳಿ, ಸಂಗಣ್ಣ ಕರಡಿ, ಪ್ರತಾಪ್ಗೌಡ ಪಾಟೀಲ್, ಮಹೇಶ್ ತೆಂಗಿನಕಾಯಿ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದಾರೆ. ಗೋಕುಲ ರಸ್ತೆಯ ಡೆನಿಸನ್ಸ್ ಹೊಟೆಲ್ನಲ್ಲಿ ನಡೆದಿರುವ ಎರಡು ಸುತ್ತಿನ ಸಭೆಯಲ್ಲಿ ಹಲವು ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ಧಾರವಾಡ, ಗದಗ, ಹಾವೇರಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ರಾಯಚೂರು ಸೇರಿದಂತೆ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳ ಬಿಜೆಪಿ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದಾರೆ. ತಮ್ಮ ಕ್ಷೇತ್ರಗಳಲ್ಲಿನ ಭಿನ್ನಾಭಿಪ್ರಾಯ ಮತ್ತು ಸಮಸ್ಯೆಗಳ ಕುರಿತು ಬಿಜೆಪಿ ರಾಜ್ಯಾಧ್ಯಕ್ಷರ ಗಮನಕ್ಕೆ ತಂದಿದ್ದಾರೆ. ಹೊಸಬರು ಮತ್ತು ಬಿಜೆಪಿ ಹಳಬರ ನಡುವಿನ ಸಂಘರ್ಷಗಳು ಸಭೆಯಲ್ಲಿ ಮಾರ್ದನಿಸಿವೆ. ಹೊಂದಾಣಿಕೆ ಮಾಡಿಕೊಂಡು ಚುನಾವಣೆಗಳನ್ನು ಎದುರಿಸಿ. ಪಕ್ಷಕ್ಕೆ ಮುಜುಗುರ ತರದಂತೆ ನಡೆದುಕೊಳ್ಳಿ ಎಂದು ಪ್ರಮುಖರು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಲತಾ ರಜನಿಕಾಂತ್ ವಿರುದ್ಧ ಬೆಂಗಳೂರಿನ ಕೋರ್ಟ್ನಲ್ಲಿ ನ್ಯಾಯಾಂಗ ನಿಂದನೆ ದೂರು
ಗೌಪ್ಯ ಸಭೆಯ ಕುರಿತು ಪ್ರತಿಕ್ರಿಯೆ ನೀಡಿರುವ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಪ್ರಮುಖ ನಾಯಕರು ಸಭೆ ನಡೆಸಿದ್ದು ನಿಜ. ಕಾರ್ಯಕರ್ತರ ಸಮಸ್ಯೆಗಳ ಕುರಿತು ಚರ್ಚಿಸಲು ಸಭೆ ಸೇರಿದ್ದೆವು. ಬೆಳಗಾವಿ ಮತ್ತು ಮಸ್ಕಿ ರಾಜಕೀಯ ವಿಚಾರಗಳು ಚರ್ಚೆಗೆ ಬಂದಿವೆ.ಪ್ರತಾಪ್ಗೌಡರಿಗೆ ಟಿಕೆಟ್ ಕೊಡುವುದಾಗಿ ಪ್ರಾಮಿಸ್ ಮಾಡಿದ್ದೇವೆ. ಹೊಂದಾಣಿಕೆಯಿಂದ ಹೋಗುವಂತೆ ಸ್ಥಳೀಯ ನಾಯಕರಿಗೆ ಸೂಚಿಸಿದ್ದೇವೆ. ಯತ್ನಾಳ್ ಹೇಳಿಕೆ ಬಗ್ಗೆ ಪಕ್ಷ ತಲೆ ಕೆಡಿಸಿಕೊಂಡಿಲ್ಲ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ನನ್ನ ಮಗನಿಗೆ ಟಿಕೆಟ್ ಕೊಡಿಸುವ ವಿಚಾರ ಪ್ರಸ್ತಾಪವಾಗಿಲ್ಲ. ಬೆಳಗಾವಿ ಚುನಾವಣೆ ಘೋಷಣೆಯಾದ ನಂತರ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚಿಸುತ್ತೇವೆ. ಬಿಜೆಪಿ ರಾಜ್ಯಾಧ್ಯಕ್ಷರ ಬಳಿ ಪ್ರಮುಖರು ಅಹವಾಲು ಹೇಳಿಕೊಂಡಿದ್ದಾರೆ. ತಮ್ಮ ಕ್ಷೇತ್ರದ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ ಎಂದು ತಿಳಿಸಿದ್ದಾರೆ.
ವರದಿ: ಪರಶುರಾಮ ತಹಶೀಲ್ದಾರ
Published by:
Vijayasarthy SN
First published:
October 28, 2020, 4:20 PM IST