• Home
  • »
  • News
  • »
  • state
  • »
  • BL Santhosh: ಮಂಡ್ಯದಲ್ಲಿ ಕಮಲ ಅರಳಿಸಲು ಬಿಜೆಪಿ ಪಣ; ಹೈಕಮಾಂಡ್ ಸೂಚನೆಯಂತೆ ಸಕ್ಕರೆ ನಾಡಿಗೆ ಬಂದ ಬಿಎಲ್‌ ಸಂತೋಷ್‌!

BL Santhosh: ಮಂಡ್ಯದಲ್ಲಿ ಕಮಲ ಅರಳಿಸಲು ಬಿಜೆಪಿ ಪಣ; ಹೈಕಮಾಂಡ್ ಸೂಚನೆಯಂತೆ ಸಕ್ಕರೆ ನಾಡಿಗೆ ಬಂದ ಬಿಎಲ್‌ ಸಂತೋಷ್‌!

ಬಿಎಲ್‌ ಸಂತೋಷ್

ಬಿಎಲ್‌ ಸಂತೋಷ್

ಮಂಡ್ಯದಲ್ಲಿ ಬಿಜೆಪಿ ಗೆಲ್ಲಿಸಲು ಹೈಕಮಾಂಡ್‌ನಿಂದಲೇ ಆದೇಶ ಬಂದಿದ್ದು, ಇದರ ಭಾಗವಾಗಿಯೇ ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಮಂಡ್ಯದಲ್ಲಿ ಒಂದು ಸುತ್ತಿನ ಮತಬೇಟೆಯಾಡಿದ್ದಾರೆ. ಇದರ ಮುಂದುವರಿದ ಭಾಗವಾಗಿ ಇದೀಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್‌ ಸಂತೋಷ್ ಕೂಡ ಮಂಡ್ಯ ರಣಕಣಕ್ಕೆ ಎಂಟ್ರಿ ಕೊಟ್ಟಿದ್ದು ಜನರನ್ನು ಬಿಜೆಪಿಯತ್ತ ಸೆಳೆಯಲು ಪ್ರಯತ್ನಿಸಿದ್ದಾರೆ.

ಮುಂದೆ ಓದಿ ...
  • News18 Kannada
  • 2-MIN READ
  • Last Updated :
  • Mandya, India
  • Share this:

ಮಂಡ್ಯ: ಚುನಾವಣೆ ಘೋಷಣೆಗೂ (Karnataka Assembly Election) ಮುನ್ನವೇ ಮಂಡ್ಯದಲ್ಲಿ (Mandya) ರಾಜಕೀಯ ಕದನ ಅಬ್ಬರದಿಂದಲೇ ಶುರುವಾಗಿದೆ. ಈ ಬಾರಿ ಮಂಡ್ಯದಲ್ಲಿ ಕಮಲವನ್ನು ಅರಳಿಸಲೇಬೇಕೆಂದು ಬಿಜೆಪಿ (BJP) ಪಾಳಯದ ನಾಯಕರು ಪಣತೊಟ್ಟಿದ್ದು, ಶತಾಯಗತಾಯ ಬಿಜೆಪಿ ಅಭ್ಯರ್ಥಿ ಗೆಲ್ಲುವಂತೆ ನೋಡಿಕೊಳ್ಳಲೇಬೇಕೆಂದು ತಳಮಟ್ಟದಲ್ಲಿಯೇ ಕಾರ್ಯಾರಂಭ ಶುರು ಮಾಡಿದ್ದಾರೆ. ಮಂಡ್ಯದಲ್ಲಿ ಬಿಜೆಪಿ ಗೆಲ್ಲಿಸಲು ಹೈಕಮಾಂಡ್‌ನಿಂದಲೇ ಆದೇಶ ಬಂದಿದ್ದು, ಇದರ ಭಾಗವಾಗಿಯೇ ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಕೂಡ ಮಂಡ್ಯದಲ್ಲಿ ಒಂದು ಸುತ್ತಿನ ಮತಬೇಟೆಯಾಡಿದ್ದಾರೆ. ಅತ್ತ ಸಿಎಂ ಕೂಡ ಜನ ಸಂಕಲ್ಪಯಾತ್ರೆಯನ್ನು ಮಾಡಿ ಜನರನ್ನು ಬಿಜೆಪಿಯತ್ತ ಸೆಳೆಯಲು ಪ್ರಯತ್ನಿಸಿದ್ದಾರೆ.


ಇದರ ಮುಂದುವರಿದ ಭಾಗವಾಗಿ ಇದೀಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್‌ ಸಂತೋಷ್ ಕೂಡ ಮಂಡ್ಯ ರಣಕಣಕ್ಕೆ ಎಂಟ್ರಿ ಕೊಟ್ಟಿದ್ದು, ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸಿ ಚುನಾವಣೆ ವೇಳೆಗೆ ಮತವಾಗಿ ಪರಿವರ್ತಿಸಲು ಎಲ್ಲಾ ರೀತಿಯ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಹವಣಿಸುತ್ತಿದ್ದಾರೆ. ಬಿಜೆಪಿ ಹೈಕಮಾಂಡ್‌ನ ಸೂಚನೆಯ ಮೇರೆಗೆ ಮಂಡ್ಯ ಜಿಲ್ಲೆಗೆ ಬಿಎಲ್ ಸಂತೋಷ್ ಆಗಮಿಸಿದ್ದು, ಈಗಿನಿಂದಲೇ ಚುನಾವಣಾ ತಂತ್ರಗಾರಿಕೆಯನ್ನು ನಡೆಸಲು ಪಕ್ಷದ ಜಿಲ್ಲಾ ಮಟ್ಟದ ನಾಯಕರೊಂದಿಗೆ ಸಂಪರ್ಕದಲ್ಲಿ ಇದ್ದಾರೆ.


ಇದನ್ನೂ ಓದಿ: Amit Sha: ಹಳೇ ಮೈಸೂರು ಭಾಗದ ಮೇಲೆ ಬಿಜೆಪಿ ಕಣ್ಣು; ಮಂಡ್ಯದಲ್ಲಿ ಮೊಳಗಲಿದೆ ಚುನಾವಣಾ ರಣಕಹಳೆ!


ಇನ್ನು ಬಿಎಲ್‌ ಸಂತೋಷ್ ಬರುತ್ತಿದ್ದಂತೆ ಮಂಡ್ಯ ಬಿಜೆಪಿಯಲ್ಲಿ ಮೈಕೊಡವಿ ಏಳುವ ವಾತಾವರಣ ಸೃಷ್ಟಿಯಾಗಿದ್ದು, ಭಾನುವಾರ ಶ್ರೀರಂಗಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಕಾರ್ಯಕರ್ತರ ಜತೆ ಸಭೆಯನ್ನು ಬಿಎಲ್‌ ಸಂತೋಷ್ ಹಮ್ಮಿಕೊಂಡಿದ್ದಾರೆ. ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳ ಜೊತೆ ಸಂಕಲ್ಪ ಸಭೆ ನಡೆಸಿರುವ ಬಿಎಲ್ ಸಂತೋಷ್, ಬಿಜೆಪಿ ಕಾರ್ಯಕರ್ತರ ಜೊತೆ ಸಂಕಲ್ಪ ಅಭಿಯಾನ ಹೆಸರಿನಲ್ಲಿ ಮಾತುಕತೆ ನಡೆಸಿದ್ದಾರೆ.


ಟಿಕೆಟ್ ಆಕಾಂಕ್ಷಿಗಳ ಜೊತೆ ಮತ್ತು ಮಂಡ್ಯ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಜೊತೆ ಎರಡೆರಡು ಸಭೆ ನಡೆಸಿರುವ ಬಿಎಲ್ ಸಂತೋಷ್ ಮಂಡ್ಯ ಜಿಲ್ಲೆಯ ಚುನಾವಣಾ ಲೆಕ್ಕಾಚಾರ ಕುರಿತು ಪಕ್ಕಾ ಮಾಹಿತಿ ಕಲೆ ಹಾಕಿದ್ದು, ಮುಂಬರುವ ವಿಧಾನಸಭಾ ಚುನಾವಣೆಗೆ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನ ಬಲ ಪಡಿಸುವ ನಿಟ್ಟಿನಲ್ಲಿ ತಂತ್ರಗಾರಿಕೆ ರೂಪಿಸಿದ್ದಾರೆ. ಅಲ್ಲದೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಿಂದಲೂ ಅತೃಪ್ತ ನಾಯಕರು, ಕಾರ್ಯಕರ್ತರನ್ನು ಬಿಜೆಪಿಗೆ ಸೆಳೆಯಲು ಯಾವ ರೀತಿ ಪ್ಲಾನ್ ಮಾಡಬಹುದು, ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವ ಬಗ್ಗೆ ಏನೆಲ್ಲಾ ಅಂಶಗಳನ್ನು ಒಳಗೊಳ್ಳಬೇಕು ಇನ್ನಿತರ ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ.


ಇದನ್ನೂ ಓದಿ: Sumalatha Ambareesh: ಪಕ್ಷ ಸೇರುವ ಬಗ್ಗೆ ನಾನಿನ್ನೂ ನ್ಯೂಟ್ರಲ್ ಆಗೇ ಇದ್ದೀನಿ: ಸುಮಲತಾ ಅಂಬರೀಷ್


ಅತ್ತ ಬಿಜೆಪಿ ಈಗಿನಿಂದಲೇ ಚುನಾವಣಾ ಪ್ರಚಾರ ಆರಂಭಿಸುತ್ತಿದ್ದಂತೆ ಇತ್ತ ಮಾಜಿ ಸಂಸದ ಎಲ್‌ಆರ್‌ ಶಿವರಾಮೇ ಗೌಡ ಕೂಡ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಮಂಡ್ಯ ಸಂಸದೆ ಸುಮಲತಾ ಹಾದಿಯನ್ನೇ ಹಿಡಿದಿರುವ ಎಲ್ ಆರ್ ಶಿವರಾಮೇ ಗೌಡ, ಜೋಳಿಗೆ ಹಿಡಿದು ಮತ ಭಿಕ್ಷೆ ಕೇಳಿದ್ದಾರೆ. ಮಂಡ್ಯದ ಮದ್ದೂರಿನ ಕೊಪ್ಪದಲ್ಲಿ ನಡೆದ ಸ್ವಾಭಿಮಾನಿ ಪರ್ವ ಸಮಾವೇಶದಲ್ಲಿ ಎಲ್‌ಆರ್ ಶಿವರಾಮೇಗೌಡ ಈ ಬಾರಿಯ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದು, ಈಗಿನಿಂದಲೇ ಮತದಾರರ ಓಲೈಕೆಗೆ ಕಾರ್ಯಕ್ರಮ ಆರಂಭಿಸಿದ್ದಾರೆ.




ಜೋಳಿಗೆ ಹಿಡಿದು ಮತಕೇಳಿದ ಶಿವರಾಮೇಗೌಡ


ಕಳೆದ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರು ಸೆರಗೊಡ್ಡಿ ಮತಭಿಕ್ಷೆ ಕೇಳಿದ್ದರು. ಅನುಕಂಪದ ಆಧಾರದ ಮೇಲೆ ಪಕ್ಷೇತರವಾಗಿ ಸ್ಪರ್ಧಿಸಿದ್ದ ಸುಮಲತಾ ಅವರು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಭರ್ಜರಿ ಅಂತರದಿಂದ ಗೆದ್ದು ಸಂಸತ್ ಪ್ರವೇಶಿಸಿದ್ದರು. ಇದೀಗ ಮಾಜಿ ಸಂಸದ ಎಲ್ ಆರ್ ಶಿವರಾಮೇ ಗೌಡ ಕೂಡ ಸುಮಲತಾ ರೀತಿಯಲ್ಲೇ ಮತದಾರರ ಮನವೊಲಿಕೆಗೆ ಯತ್ನಿಸಿದ್ದು, ಮತದಾರರಲ್ಲಿ ಅನುಕಂಪ ಗಿಟ್ಟಿಸಿಕೊಳ್ಳಲು ಮುಂದಾಗಿದ್ದಾರೆ.

Published by:Avinash K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು