ಸಿಎಂ ನೇತೃತ್ವದ ನಿಯೋಗದಿಂದ ರಾಜ್ಯಪಾಲರ ಭೇಟಿ; ಮತ್ತೆ ವಿಧಾನ ಪರಿಷತ್ ಕಲಾಪ ನಡೆಸಲು ಬಿಜೆಪಿ ಸಿದ್ಧತೆ

Karnataka Legislative Council Ruckus: ಅನಿರ್ದಿಷ್ಟಾವಧಿಗೆ ಕಲಾಪವನ್ನು ಮುಂದೂಡೋ ಅಧಿಕಾರ ಸಭಾಪತಿಗಿಲ್ಲ. ಉಪ ಸಭಾಪತಿಗಳ ಮೂಲಕ ವಿಧಾನ ಪರಿಷತ್ ಕಲಾಪ ನಡೆಸಲಿದ್ದೇವೆ. ಉಪಸಭಾಪತಿಗಳನ್ನು ಎಳೆದಾಡಿದ ಕಾಂಗ್ರೆಸ್ ಸದಸ್ಯರ ವರ್ತನೆ ಬಗ್ಗೆ ರಾಜ್ಯಪಾಲರಿಗೆ ದೂರು ಕೊಡುತ್ತೇವೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.

ವಿಧಾನ ಪರಿಷತ್​ನಲ್ಲಿ ನಡೆದ ಗಲಾಟೆಯ ದೃಶ್ಯ

ವಿಧಾನ ಪರಿಷತ್​ನಲ್ಲಿ ನಡೆದ ಗಲಾಟೆಯ ದೃಶ್ಯ

  • Share this:
ಬೆಂಗಳೂರು (ಡಿ. 15): ವಿಧಾನ ಪರಿಷತ್ ಕಲಾಪದ ವೇಳೆ ಕಾಂಗ್ರೆಸ್- ಬಿಜೆಪಿ ಸದಸ್ಯರು ಗಲಭೆ ಸೃಷ್ಟಿಸಿದರು. ಸಭಾಪತಿ ಪೀಠದಲ್ಲಿ ಕುಳಿತಿದ್ದ ಉಪಸಭಾಪತಿ ಧರ್ಮೇ ಗೌಡ ಅವರನ್ನು ಕಾಂಗ್ರೆಸ್ ಸದಸ್ಯರು ಎಳೆದಾಡಿ, ಕೆಳಗೆ ಕರೆದುಕೊಂಡು ಹೋದ ಘಟನೆಯೂ ನಡೆಯಿತು. ಜೊತೆಗೆ, ಸಭಾಪತಿ ಪೀಠದ ಗ್ಲಾಸ್​ಗಳನ್ನು ಒಡೆದು ಹಾಕುವ ಮೂಲಕ ದಾಂಧಲೆ ಎಬ್ಬಿಸಲಾಯಿತು. ಈಗಾಗಲೇ ಅವಿಶ್ವಾಸ ನಿರ್ಣಯ ಮಂಡನೆಯಾಗಿರುವ ಹಿನ್ನೆಲೆಯಲ್ಲಿ ಅತ್ತ ಬಿಜೆಪಿ ಸದಸ್ಯರು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರಿಗೆ ಕಲಾಪದ ಒಳಗೆ ಪ್ರವೇಶಿಸದಂತೆ ಬಾಗಿಲಿನಲ್ಲೇ ಅಡ್ಡ ಹಾಕಿದರು. ಇದೆಲ್ಲ ಗಲಭೆಯ ಹಿನ್ನೆಲೆಯಲ್ಲಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ಆದರೆ, ಈ ವಿಷಯ ಇಲ್ಲಿಗೇ ಮುಗಿದಿಲ್ಲ. ಈ ಕುರಿತು ರಾಜ್ಯಪಾಲರ ಮೊರೆ ಹೋಗಲು ನಿರ್ಧರಿಸಿರುವ ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು ಮತ್ತೆ ಯಾವುದೇ ಕ್ಷಣದಲ್ಲೂ ಕಲಾಪ ನಡೆಸಲು ಸಿದ್ಧತೆ ನಡೆಸಿದ್ದಾರೆ.

ನಾವು ಮತ್ತೆ ಕಲಾಪ ಆರಂಭಿಸುತ್ತೇವೆ. ಯಾವುದೇ ಘಳಿಗೆಯಲ್ಲಿ ಬೇಕಾದರೂ ಆರಂಭಿಸುತ್ತೇವೆ. ಅನಿರ್ದಿಷ್ಟಾವಧಿಗೆ ಕಲಾಪವನ್ನು ಮುಂದೂಡಿಲ್ಲ. ಹಾಗೆ ಕಲಾಪವನ್ನು ಮುಂದೂಡೋ ಅಧಿಕಾರ ಸಭಾಪತಿಗಿಲ್ಲ, ಅದು ಊರ್ಜಿತವೂ ಅಲ್ಲ. ಉಪ ಸಭಾಪತಿಗಳ ಮೂಲಕ ವಿಧಾನ ಪರಿಷತ್ ಕಲಾಪ ನಡೆಸಲಿದ್ದೇವೆ. ಅಲ್ಲಿ ಅವಿಶ್ವಾಸ ನಿರ್ಣಯ ಚರ್ಚೆ ನಡೆಯಲಿದೆ. ಕಾಂಗ್ರೆಸ್ ಸದಸ್ಯರ ವರ್ತನೆ, ಸಭಾಪತಿ ವರ್ತನೆ ಬಗ್ಗೆ ರಾಜ್ಯಪಾಲರಿಗೆ ದೂರು ಕೊಡುತ್ತೇವೆ. ಸದನದೊಳಗೆ ಗಲಾಟೆ ಮಾಡಿದ, ಉಪಸಭಾಪತಿಗಳನ್ನು ಎಳೆದಾಡಿದ ಕಾಂಗ್ರೆಸ್ ಎಂಎಲ್​ಸಿಗಳ ಅಮಾನತಿಗೆ ಒತ್ತಾಯ ಮಾಡುತ್ತೇವೆ ಎಂದು ಬಿಜೆಪಿ ಹಿರಿಯ ಎಂಎಲ್​ಸಿ ವೈ.ಎ ನಾರಾಯಣಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: ವಿಧಾನ ಪರಿಷತ್​ನಲ್ಲಿ ಹೈಡ್ರಾಮಾ; ಸಭಾಪತಿ ಪೀಠ ಧ್ವಂಸಕ್ಕೆ ಯತ್ನ; ಅನಿರ್ದಿಷ್ಟಾವಧಿಗೆ ಕಲಾಪ ಮುಂದೂಡಿಕೆ

ಈ ಬಗ್ಗೆ ಕಾನೂನು ಸಚಿವ ಜೆ.ಸಿ.‌ ಮಾಧುಸ್ವಾಮಿ ಕೂಡ ನ್ಯೂಸ್ 18 ಕನ್ನಡಕ್ಕೆ ಮಾಹಿತಿ ನೀಡಿದ್ದು, ಸಭಾಪತಿ ಪೀಠದಲ್ಲಿ ಮಾರ್ಷಲ್​ಗಳು ಇದ್ದಾರೆ. ವಿಧಾನ ಪರಿಷತ್ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿರುವುದೇ ತಪ್ಪು. ನಾವಿದನ್ನು ಒಪ್ಪುವುದಿಲ್ಲ. ಸಭಾಪತಿಗಳಿಗೆ ಸದನ‌ವನ್ನು ಮುಂದೂಡುವ ಅಧಿಕಾರವಿಲ್ಲ ಎನ್ನುವ ಮೂಲಕ ಮತ್ತೆ ಪರಿಷತ್ ಕಲಾಪ‌ ಆರಂಭಿಸೋ ಸುಳಿವು ನೀಡಿದ್ದಾರೆ.

ಇತ್ತ ಜೆಡಿಎಸ್​ ಕೂಡ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಪ್ರಸ್ತಾಪಕ್ಕೆ ಬೆಂಬಲ ನೀಡಿದೆ. ವಿಧಾನ ಪರಿಷತ್ ಕಾರ್ಯದರ್ಶಿಗೆ ಈ ಬಗ್ಗೆ 11 ಜೆಡಿಎಸ್​ ಎಂಎಲ್​ಸಿಗಳು, ಬಿಜೆಪಿಯ 14 ಸದಸ್ಯರು ಪತ್ರಕ್ಕೆ ಸಹಿ ಹಾಕಿ ನೀಡಿದ್ದಾರೆ. ಸಭಾಪತಿಗಳು ಸದನವನ್ನು ಮುಂದೂಡಿರುವ ಕುರಿತು ರಾಜ್ಯಪಾಲರನ್ನು ಭೇಟಿಯಾಗಲು ಬಿಜೆಪಿ ನಿರ್ಧರಿಸಿದೆ. ಕೂಡಲೇ ನಾವು ರಾಜ್ಯಪಾಲರನ್ನು ಭೇಟಿಯಾಗಿ ವಿಧಾನ ಪರಿಷತ್​ನಲ್ಲಿ ನಡೆದ ಘಟನೆಯ ಸಂಪೂರ್ಣ ಮಾಹಿತಿ ನೀಡಲಿದ್ದೇವೆ. ರಾಜ್ಯಪಾಲರು ಕಾನೂನು ಪ್ರಕಾರವಾಗಿ ಸೂಚನೆ ನೀಡಲಿದ್ದಾರೆ ಎಂಬ ನಂಬಿಕೆಯಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯಪಾಲರಿಗೆ ದೂರು ನೀಡಲು ಬಿಜೆಪಿ ನಿಯೋಗ ತೆರಳಲಿದೆ. ಈ ಹಿನ್ನೆಲೆಯಲ್ಲಿ ರಾಜಭವನದ ಆಸುಪಾಸಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್​ ವಹಿಸಲಾಗಿದೆ.

ಕಾಂಗ್ರೆಸ್​ ವರ್ತನೆ ವಿರುದ್ಧ ಹರಿಹಾಯ್ದಿರುವ ಸಚಿವ ಆರ್​. ಅಶೋಕ್, ಕಾಂಗ್ರೆಸ್ ಗೂಂಡಾಗಿರಿ ತೋರಿಸಿದೆ. ಜೆಡಿಎಸ್ ಬರವಣಿಗೆ ಮೂಲಕ ಪತ್ರ ಬರೆದಿದ್ದಾರೆ. ಪ್ರತಾಪ್ ಚಂದ್ರ ಶೆಟ್ಟಿ ಸಭಾಪತಿ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಬರೆದುಕೊಟ್ಟಿದ್ದಾರೆ. ಜೆಡಿಎಸ್​ನ 11ಎಂಎಲ್​ಸಿ‌ಗಳು ನಮಗೆ ಬೆಂಬಲ ಕೊಟ್ಟಿದ್ದಾರೆ. ಹಿಂದೆ ಶಂಕರ್ ಮೂರ್ತಿ ವಿರುದ್ಧ ಅವಿಶ್ವಾಸ ಬಂದಾಗ ಅವರು ಕೆಳಗಿಳಿದು ಬಂದು ಕುಳಿತಿದ್ದರು. ಕಾಂಗ್ರೆಸ್​ಗೂ, ಬಿಜೆಪಿಗೂ ಇರುವ ವ್ಯತ್ಯಾಸ ನೋಡಿ. ಕಲಾಪ ನಡೆದೇ ನಡೆಯುತ್ತದೆ. ಬಹುಮತ ಯಾರಿಗಿದೆಯೋ ಅವರು ಪೀಠದಲ್ಲಿ ಕೂರುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.
Published by:Sushma Chakre
First published: