ಚಿಕ್ಕಮಗಳೂರು: ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ (Mekedatu Padayatra)ವಿಚಾರವಾಗಿ ಟೀಕಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ(CT Ravi), ಸುಲಭದ ಕೆಲಸಕ್ಕೆ ಕಾಂಗ್ರೆಸ್ಸಿಗರು ಕಷ್ಟ ಪಡುತ್ತಿದ್ದಾರೆ. ಮೇಕೆದಾಟುವಿಗೆ ಬಿಜೆಪಿ(BJP) ಅಡ್ಡಿಯಾಗಿಲ್ಲ, ಕೇಂದ್ರವೂ ಒಪ್ಪಿಗೆ ನೀಡಿದೆ. ಮೇಕೆದಾಟುವಿಗೆ ಅಡ್ಡಿಯಾಗಿರೋದು ತಮಿಳುನಾಡು ಸರ್ಕಾರ(Tamil Nadu Government), ಡಿಎಂಕೆ ನೇತೃತ್ವದ ಸರ್ಕಾರದಲ್ಲಿ ಕಾಂಗ್ರೆಸ್ ಪಾಲುದಾರಿಕೆಯೂ ಇದೆ. ಕಾಂಗ್ರೆಸ್ ನಾಯಕರು, ತಮಿಳುನಾಡು ಸರ್ಕಾರದ ಕಾಂಗ್ರೆಸ್ ನಾಯಕರ ಮನವೊಲಿಸಲಿ ಎಂದು ಸವಾಲೆಸೆದರು.
ಸುಲಭದಲ್ಲಿ ಆಗುವ ಕೆಲಸಕ್ಕೆ ಕೊಡಲಿ ಏಕೆ
ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಮಾತನ್ನ ತಮಿಳುನಾಡಿನವರು ಕೇಳುತ್ತಾರೆ. ಒಂದು ಕಾಲದಲ್ಲಿ ಸಿದ್ದರಾಮಯ್ಯ ಹೆಸರು ಪ್ರಧಾನಿ ಹುದ್ದೆಗೆ ಕೇಳಿ ಬಂದಿತ್ತು. ಡಿ.ಕೆ.ಶಿವಕುಮಾರ್ ಅವರು ಕೇಂದ್ರದ ನಾಯಕರುಗಳಿಗೆ ಸಹಾಯ ಮಾಡಿದ್ದಾರೆ. ತಮಿಳುನಾಡು ಸರ್ಕಾರದ ಮನವೊಲಿಸಿದ್ರೆ ಪಾದಯಾತ್ರೆ ನಡೆಸುವ ಅಗತ್ಯವೇ ಇಲ್ಲ. ನಿಯಮ ಉಲ್ಲಂಘಿಸೋದು, ಕೊರೋನಾ ಬರಿಸಿಕೊಳ್ಳುವುದು ಎಲ್ಲವೂ ತಪ್ಪುತ್ತೆ. ಹೂ ಎತ್ತಿದ್ದಷ್ಟು ಸುಲಭದಲ್ಲಿ ಆಗುವ ಕೆಲಸಕ್ಕೆ, ಕೊಡಲಿ ಏಕೆ ತೆಗೆದುಕೊಳ್ಳುತ್ತಿದ್ದಾರೆ ಗೊತ್ತಿಲ್ಲ ಎಂದು ವ್ಯಂಗ್ಯವಾಗೇ ತಿರುಗೇಟು ನೀಡಿದರು.
ಇದನ್ನೂ ಓದಿ: ನಾವ್ಯಾರಾದ್ರೂ ಬಿದ್ದು ಹೋದ್ರೆ ಹೊತ್ಕೊಂಡು ಬರೋಕೆ ನೀವ್ಯಾರಾದ್ರೂ ಇರ್ತೀರಾ? DK Shivakumar ಪ್ರಶ್ನೆ
ಚಂಡಿ ಹಠ ಹಿಡಿದ್ರೆ ಏನು ಮಾಡೋಣ
ಶಿವಮೊಗ್ಗದಲ್ಲಿ ಮೇಕೆದಾಟು ಪಾದಯಾತ್ರೆ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಅಪ್ಪಾ ಸಾಯಬೇಡ್ರಿ ಅಂತೀವಿ, ಇಲ್ಲ ನಾವು ಸಾಯೋರೇ ಅಂತಾ ಚಂಡಿ ಹಠ ಹಿಡಿದ್ರೆ ಏನು ಮಾಡೋಣ. ಇಬ್ಬರೇ ಯಾಕ್ ಹೋಗಿ ಸಾಯ್ತಿರಿ..? . ನೀವು ಇಬ್ಬರೇ ಪಾದಯಾತ್ರೆ ಹೋಗ್ತೀವಿ ಅಂತೀರಾ? ಸಿದ್ದರಾಮಯ್ಯ, ಡಿಕೆಶಿ ಅವರಿಗಾಗಿ ಪ್ರಾರ್ಥನೆ ಮಾಡ್ತೀನಿ. ನೀವು ಇಬ್ಬರೇ ಹೋಗ್ತೀವಿ ಅಂದ್ರೆ ನಿಮ್ಮ ಕಾರ್ಯಕರ್ತರು ಬಿಡುವುದಿಲ್ಲ. ಸುಮ್ಮ ಸುಮ್ಮನೆ ನೀವು ಏಕೆ ಸಾಯ್ತೀರಾ, ಅವರನ್ನು ಏಕೆ ಸಾಯಿಸುತ್ತೀರಾ? ನಾವು, ನೀವು ಒಟ್ಟಿಗೆ ಸಂತೋಷವಾಗಿ ಜೀವನ ಮಾಡೋಣ ಅಂತಾ ಪ್ರಾರ್ಥನೆ ಮಾಡ್ತಿನಿ ಎಂದು ತಿರುಗೇಟು ನೀಡಿದರು.
ರಾಜಕಾರಣಕೋಸ್ಕರ ಕಾಂಗ್ರೆಸ್ ಪಾದಯಾತ್ರೆ
ರಾಜಕಾರಣ ಮಾಡುವ ಸಲುವಾಗಿ ಮಾಡಲೇ ಬೇಕು ಅಂತಾ ಹಠ ಹಿಡಿದರೇ ನನ್ನ ಅಭ್ಯಂತರ ಏನಿಲ್ಲ. ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಕ್ಕೆ ಹೋರಾಟ ಮಾಡುವ ಅವಕಾಶ ಇದೆ. ರಾಜಕಾರಣಕೋಸ್ಕರ ಕಾಂಗ್ರೆಸ್ ಇದನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ರಾಜ್ಯದ ಜನ ಯೋಚನೆ ಮಾಡ್ತಿದ್ದಾರೆ. ಅಧಿಕಾರದಲ್ಲಿ ಇದ್ದಾಗ ಏಕೆ ಕೃಷ್ಣ, ಕಾವೇರಿ, ಮೇಕೆದಾಟು ಎಲ್ಲಾ ಮರೆತು ಹೋಗಿತ್ತು. ಕೇಂದ್ರದಲ್ಲಿ ಸಾಕಷ್ಟು ವರ್ಷ ಅಧಿಕಾರದಲ್ಲಿ ಇದ್ರಿ, ರಾಜ್ಯದಲ್ಲಿ ಆಡಳಿತ ನಡೆಸಿದವರು ನೀವೇ.
ಇದನ್ನೂ ಓದಿ: Janatha Jaladhare: ಕಾಂಗ್ರೆಸ್ಗೆ ಟಕ್ಕರ್ ಕೊಡಲು ಮುಂದಾದ ಎಚ್ಡಿಕೆ; ಜ. 26ರಿಂದ ಜನತಾ ಜಲಧಾರೆ ಯಾತ್ರೆ
ಪೌರುಷದ ಮಾತು ಬೇಡ
ಮೇಕೆದಾಟು ವಿಷಯದಲ್ಲಿ ನಮ್ಮ ಕಣ್ಣು ತೆರೆಸಿದ್ದೀರ, ಖಂಡಿತ ಕೇಂದ್ರದಿಂದ ಏನೇನು ಮಾಡಬೇಕು ಅದನ್ನು ಮಾಡುತ್ತೇವೆ. ಆದರೆ, ಬದುಕಿದ್ದು ಹೋರಾಟ ಮಾಡ್ರಿ, ನೀವು ಬಿಗಿ ಮಾಡಿದ್ರೆ ಇಬ್ಬರು ಪಾದಯಾತ್ರೆ ಮಾಡ್ತೀವಿ ಅಂತೀರಾ, ನಾವೇಕೆ ಬಿಗಿ ಮಾಡಬೇಕು. ನೀವು ಮುಖ್ಯಮಂತ್ರಿ ಆಗಿದ್ದವರು, ಸರಕಾರ ನಡೆಸಿರುವವರು. ಆ ಸಂದರ್ಭದಲ್ಲಿ ಈ ರೀತಿ ನಡೆದಿತ್ತಾ. ಮುಖ್ಯಮಂತ್ರಿ ಆಗಿದ್ದಂತಹ ಸಂದರ್ಭದಲ್ಲಿ, ಲಾಕ್ ಡೌನ್ ಇದ್ದಾಗ, ಕರ್ಪ್ಯೂ ಇದ್ದಾಗ ನೀವು ಏನೇನು ಮಾಡಿದ್ರಿ ನೆನಪಿದೆಯಾ ನಿಮಗೆ. ನೀವು ಜೈಲಿಗೆ ಬೇಕಾದ್ರೂ ಕಳುಹಿಸಿ, ನಾವು ಮಾಡೇ ಮಾಡುವವರು ಅಂದ್ರೆ, ಇಂತಹ ಪದಗಳನ್ನು ನಾವು ಬಹಳ ಕೇಳಿದ್ದೀವಿ. ಇದು ಪೌರುಷದ ಮಾತುಗಳು. ಕೋವಿಡ್ ಸಂದರ್ಭದಲ್ಲಿ ಪೌರುಷದ ಮಾತು ಬೇಡ. ಕೋವಿಡ್ ಹೋದ ಮೇಲೆ ಪೌರುಷದ ಮಾತು ಹೇಳಿ ನಾವು ಬೇಡ ಅನ್ನುವುದಿಲ್ಲ ಎಂದರು.
ಎಲ್ಲಾ ಹಿರಿಯರು ನಮ್ಮ ರಾಜ್ಯದ ಆಸ್ತಿ. ದೇವೇಗೌಡರು, ಯಡಿಯೂರಪ್ಪ, ಸಿದ್ದರಾಮಯ್ಯ ಇವರೆಲ್ಲಾ ನಮ್ಮ ರಾಜ್ಯದ ಆಸ್ತಿ. ಇವರು ಯಾರೂ ಕೂಡಾ ಜನರ ವಿರೋಧ ಮಾಡಿದವರು ಅಲ್ಲ. ನಮ್ಮ ರಾಜ್ಯದ ಆಸ್ತಿ ಕಳೆದುಕೊಳ್ಳಲು ನಮಗೆ ಇಷ್ಟವಿಲ್ಲ. ಕೋವಿಡ್ ಸಂದರ್ಭದಲ್ಲಿ ನಿಮ್ಮ ಹೋರಾಟ ನಿಲ್ಲಿಸಿ ಎಂದು ಕೈ ಮುಗಿದು ಪ್ರಾರ್ಥನೆ ಮಾಡ್ತೀನಿ ಅಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ