ಬೆಳಗಾವಿ: ಕುಂದಾ ನಗರಿ ರಾಜಕಾರಣದಲ್ಲಿ ಈ ಹಿಂದೆ ವಿಷಕನ್ಯೆಯ ಪ್ರಸ್ತಾಪ ಆಗಿತ್ತು. ಇದೀಗ ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ (Former MLA Sanjay Patil) ಸುದ್ದಿಗೋಷ್ಠಿ ನಡೆಸಿ ಬೆಳಗಾವಿ ಗ್ರಾಮೀಣ ಶಾಸಕಿ, ಲಕ್ಷ್ಮಿ ಹೆಬ್ಬಾಳ್ಕರ್ (MLA Laxmi Hebbalkar) ಅವರನ್ನು ರಾಮಾಯಣದ ಕೈಕೇಯಿ (Kaike) ಹೋಲಿಸಿ ವಾಗ್ದಾಳಿ ನಡೆಸಿದ್ದಾರೆ. ನಾನು ಶ್ರೀರಾಮಚಂದ್ರ ಅಲ್ಲ ಸಾಮಾನ್ಯ ವ್ಯಕ್ತಿ. ನಾನು ಲಕ್ಷ್ಮಿ, ಸರಸ್ವತಿ, ದುರ್ಗಾ ಮಾತೆಯ ಪೂಜೆ ಮಾಡುತ್ತೇನೆ. ರಾಮಾಯಣದ ಕೈಕೆಯನ್ನು ಯಾರೂ ಪೂಜೆ ಮಾಡಲ್ಲ. ಕೈಕೇಯಿ ಎರಡನೇ ಹೆಸರು ಲಕ್ಷ್ಮಿ ಹೆಬ್ಬಾಳ್ಕರ್. ಅಂದು ಕೈಕೆಯಿಂದಲೇ ರಾಮಾಯಣ ಆಯ್ತು. ಇಂದು ಈ ಕೈಕೆಯಿಂದ ರಮೇಶ್ ಜಾರಕಿಹೊಳಿ ಮನೆತನ (Ramesh Jarkiholi) ಹಾಳಾಗಿದೆ ಎಂದು ಆರೋಪಿಸಿದರು.
ಸುಮಾರು 20 ವರ್ಷಗಳ ಹಿಂದೆ ನಾನು ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ರಾಜಕೀಯದಲ್ಲಿ ಇರಲಿಲ್ಲ. ಅಂದು ಗೋಮಟೇಶ್ ವಿದ್ಯಾಪೀಠ ಸಂಸ್ಥೆಗೆ ನೀವು ಬಂದಿದ್ದೀರಿ. ನಾನು ಮತ್ತು ಅವರು ರಾಜಕೀಯದಲ್ಲಿ ಸಕ್ರಿಯವಾಗಿರಲಿಲ್ಲ. ನನ್ನ ಬಳಿ 50 ಸಾವಿರ ರೂಪಾಯಿ ಹೆಲ್ಪ ಮಾಡಿ ಎಂದು ಹೇಳಿ ಹಣ ಪಡೆದುಕೊಂಡಿದ್ದರು ಎಂಬ ವಿಷಯವನ್ನು ಸಂಜಯ್ ಪಾಟೀಲ್ ತಿಳಿಸಿದರು.
ಅಂದು ಪಡೆದ 50 ಸಾವಿರ ರೂಪಾಯಿ ಸಾಲವನ್ನು ಈವರೆಗೆ ಹೆಬ್ಬಾಳ್ಕರ್ ಹಿಂದಿರುಗಿಸಿಲ್ಲ. 50 ಸಾವಿರ ರೂಪಾಯಿ ಸಾಲ ಪಡೆಯುವಂತಹ ಸ್ಥಿತಿಯಲ್ಲಿದ್ದ ಹೆಬ್ಬಾಳ್ಕರ್ ಇಂದು ಕೋಟ್ಯಧೀಶೆ ಆಗಿದ್ದಾರೆ. 20 ವರ್ಷಗಳಲ್ಲಿ ನೂರಾರು ಕೋಟಿಯ ಮಾಲೀಕರು ಆಗಿದ್ದು ಹೇಗೆ ಎಂದು ಸಂಜಯ್ ಪಾಟೀಲ್ ಪ್ರಶ್ನೆ ಮಾಡಿದರು.
ನಾನು ಅಡ್ಡದಾರಿಯಲ್ಲಿ ಹಣ ಗಳಿಸಿಲ್ಲ
ಸಂಜಯ್ ಪಾಟೀಲ್ಗೆ ಮಣ್ಣು ಮಾರುವಂತಹ ಸ್ಥಿತಿ ಬಂದಿಲ್ಲ. ನನಗೆ ಯಾವುದೇ ಅಡ್ಡದಾರಿಯಲ್ಲಿ ದುಡ್ಡು ಗಳಿಸುವ ಅವಶ್ಯಕತೆ ಇಲ್ಲ. ನನಗೆ ಲಕ್ಷ್ಮಿ ಪುತ್ರ ಎನ್ನುವ ಗುರುತು ಇದೆ. ಮಣ್ಣು ಮಾರಲು ಅಲ್ಲ, ಶಿವಾಜಿ ಮಹಾರಾಜರನ್ನು ದೇವರು ಎಂದು ಪೂಜಿಸುತ್ತೇನೆ.ಶಿವಾಜಿ ಮಹಾರಾಜರ ಸ್ಮಾರಕ ಮಾಡಲು ಕೆಲಸ ಆರಂಭಿಸಿದೆ. ನಾನು ಕೊಟ್ಟು 50 ಸಾವಿರ ರೂಪಾಯಿ ಹೆಬ್ಬಾಳ್ಕರ್ ವಾಪಸ್ ಕೊಟ್ಟಿಲ್ಲ. ಮಳೆಕರಣಿ ದೇವಿ ಮುಂದೆ ಆಣೆ ಮಾಡಲು ಲಕ್ಷ್ಮಿ ಹೆಬ್ಬಾಳ್ಕರ್ ಬರಲಿ ಎಂದು ಸವಾಲು ಹಾಕಿದರು.
ಹೆಬ್ಬಾಳ್ಕರ್ ಅವರಿಗೆ ಯಾವ ದೇವರ ಮೇಲೆ ಭಕ್ತಿ ಇದೆ ಅಲ್ಲಿಗೆ ಬರಲಿ. ನನ್ನ ಕಚೇರಿಯಲ್ಲಿ ಎರಡು ಗಂಟೆ ಕುಳಿತು ಹಣ ತೆಗೆದುಕೊಂಡು ಹೋಗಿದ್ದಾರೆ ಎಂದು ಪುನರುಚ್ಚಿಸಿದರು.
ಇಂದು ರಮೇಶ್ ಜಾರಕಿಹೊಳಿ ಬಗ್ಗೆಯೂ ಹೆಬ್ಬಾಳ್ಕರ್ ಮಾತನಾಡಿದ್ದಾರೆ. ಘಾಟ್ಗೆ, ವೀರಕುಮಾರ ಪಾಟೀಲ್, ವಿವೇಕರಾವ್ ಪಾಟೀಲ್ ಅವರನ್ನು ಮನೆಗೆ ಕಳಿಸಿದ್ರು ಅಂತ. ವೀರಕುಮಾರ ಪಾಟೀಲ್ ಸೋಲಿಸಲು ಹೆಬ್ಬಾಳ್ಕರ್ ಹಣ ಹಂಚಿದ್ದರು ಎಂದು ಆರೋಪಿಸಿದರು.
ರಮೇಶ್ ಜಾರಕಿಹೊಳಿ ಜೊತೆ ಉತ್ತಮ ಸಂಬಂಧ
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜೊತೆ ಲಕ್ಷ್ಮಿ ಹೆಬ್ಬಾಳ್ಕರ್ 20 ವರ್ಷ ಬಹಳ ಒಳ್ಳೆಯ ಸಂಬಂಧ ಹೊಂದಿದ್ದರು. ಈ ಮಾತನ್ನು ಬೇಕಾದ್ರೆ ಒತ್ತು ಕೊಟ್ಟು ಹೇಳುತ್ತೇನೆ. ರಮೇಶ್ ಜಾರಕಿಹೊಳಿ ಅವರ ಕೈ ಹಿಡಿದು ಶಾಸಕಿಯಾಗಿ, ಇಂದು ಹಾಗೇ ಹೀಗೆ ಅಂತ ಮಾತನಾಡುತ್ತೀರಿ. ರಮೇಶ್ ಜಾರಕಿಹೊಳಿ ಇಲ್ಲ ಅಂದರೆ ಶಾಸಕಿ ಅಲ್ಲ ಗ್ರಾಪಂ ಸದಸ್ಯೆ ಸಹ ಆಗುತ್ತಿರಲಿಲ್ಲ ಎಂದು ಸಂಜಯ್ ಪಾಟೀಲ್ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: Laxmi Hebbalkar: ಸೀತಾಮಾತೆಗೂ ಅಗ್ನಿಪರೀಕ್ಷೆ ತಪ್ಪಲಿಲ್ಲ, ನಾನ್ಯಾವ ಲೆಕ್ಕ: ಹೆಬ್ಬಾಳ್ಕರ್ ಭಾವುಕ ಮಾತು
ಸತೀಶ್ ಜಾರಕಿಹೊಳಿ ಸೋಲಿಸಲು ಹೆಬ್ಬಾಳ್ಕರ್ ಸಭೆ!
ರಮೇಶ್ ಜಾರಕಿಹೊಳಿ ಸರಿ ಇಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳತ್ತಿದ್ರು ಅಂತಿರಾ ಎಂದು ಪ್ರಶ್ನಿಸಿದ ಸಂಜಯ್ ಪಾಟೀಲ್, ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಅವರನ್ನು ಸೋಲಿಸಲು ಎಲ್ಲಿ ಸಭೆ ಮಾಡಿದ್ರಿ ಅನ್ನೋ ವಿಷಯ ಗೊತ್ತು. ಸಮಯ ಬಂದಾಗ ಎಲ್ಲಿ ಸಭೆ ಮಾಡಿದ್ರು ಅನ್ನೋದನ್ನು ದಾಖಲೆ ಸಹಿತ ಬಿಡುಗಡೆ ಮಾಡುತ್ತೇನೆ ಎಂದು ಹೇಳಿಕೆ ನೀಡಿದರು.
ಹೆಬ್ಬಾಳ್ಕರ್ ಮತ್ತೊಂದು ಹೆಸರು ಸುಳ್ಳು ಮತ್ತು ಮೋಸ
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತೊಂದು ಹೆಸರು ಸುಳ್ಳು, ಮೋಸ. ತಮ್ಮ ಭಾಷಣದಲ್ಲಿ ಪದೇ ಪದೇ ನಾಚಿಕೆ ಬರಬೇಕು, ನಾಚಿಕೆ ಬರಬೇಕು ಅಂತಾರೆ. ನಾಚಿಕೆ ಬರುವಂತಹ ಕೆಲಸ ಮಾಡಿದವರಿಗೆ ಬರುತ್ತೆ ನಮಗ್ಯಾಕೆ ಬರುತ್ತೆ ಎಂದು ತಿರುಗೇಟು ನೀಡಿದರು. ಲಕ್ಷ್ಮಿ ಹೆಬ್ಬಾಳ್ಕರ್ ಹೆದರಿದ್ದಾರೆ ಹಾಗಾಗಿ ಏನೇನೊ ಮಾತನಾಡುತ್ತಿದ್ದಾರೆ. ನಿಮ್ಮದು ಯಾರ ಜೊತೆಗೆ ನಡುವಳಿಕೆ, ಸಂಬಂಧ ಇವೆ ಎಂಬುದು ಜಗತ್ತಿಗೆ ಗೊತ್ತು ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ