ಯಾದಗಿರಿ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ (Assembly Election) ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನುವುದು ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿತ್ತು. ಕಳೆದ ಕೆಲವು ದಿನಗಳ ಹಿಂದೆ ಸ್ವತಃ ಸಿದ್ದರಾಮಯ್ಯನವರೇ ತಾವು ಕೋಲಾರ (Kolar) ಕ್ಷೇತ್ರದಿಂದ ಕಣಕ್ಕಿಳಿಯಲು ತೀರ್ಮಾನಿಸಿದ್ದೇನೆ ಎಂದು ಹೇಳಿದ್ದರು. ಆದರೆ ಈ ಕ್ಷೇತ್ರಕ್ಕೆ ಇನ್ನೂ ಹೈಕಮಾಂಡ್ನಿಂದ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ದಾವಣಗೆರೆ, ಬಾದಾಮಿ, ವರುಣಾ ಸೇರಿದಂತೆ ಹಲವು ಕ್ಷೇತ್ರಗಳಿಂದ ಸಿದ್ದರಾಮಯ್ಯರಿಗೆ ಸ್ಪರ್ಧಿಸಲು ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಇದೀಗ ಸಿದ್ದರಾಮಯ್ಯನವರ ಅಭಿಮಾನಿ ಹಾಗೂ ಬಿಜೆಪಿ ಮುಖಂಡರೊಬ್ಬರು ಸಿದ್ದರಾಮಯ್ಯ ಯಾದಗಿರಿ (Yadagiri) ಕ್ಷೇತ್ರದಿಂದ ಸ್ಪರ್ಧಿಸಿದರೆ ದೇಣಿಗೆಯಾಗಿ ಒಂದು ಕೋಟಿ ರೂಪಾಯಿ ನೀಡುವುದಾಗಿ ದೊಡ್ಡ ಆಫರ್ ನೀಡಿದ್ದಾರೆ.
ಯಾದಗಿರಿಯ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಚಂದ್ರಯ್ಯ ನಾಗರಾಳ ಎಂಬುವವರು ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಈ ಆಫರ್ ನೀಡಿದ್ದಾರೆ. ನಮ್ಮ ಯಾದಗಿರಿ ಕ್ಷೇತ್ರ ಅಭಿವೃದ್ಧಿಯಾಗದೇ ಹಿಂದುಳಿದಿದೆ. ಜಿಲ್ಲಾ ಕೇಂದ್ರವಾದರೂ ಯಾದಗಿರಿ ಜಿಲ್ಲೆಯನ್ನು ಕಡೆಗಣಿಸಲಾಗುತ್ತಿದೆ. ಅದರಲ್ಲೂ ಹಯ್ಯಾಳ ಹೋಬಳಿ ಸ್ಥಿತಿ ದಯನೀಯವಾಗಿದೆ. ಒಂದು ವೇಳೆ ಸಿದ್ದರಾಮಯ್ಯ ಸ್ಪರ್ಧಿಸಿದರೆ ನಮ್ಮ ಕ್ಷೇತ್ರ ಅಭಿವೃದ್ಧಿಯಾಗುತ್ತದೆ ಎನ್ನುವುದು ನನ್ನ ಅಭಿಲಾಷೆ ಎಂದಿದ್ದಾರೆ.
ಜಮೀನು ಮಾರಿ ದುಡ್ಡು ಕೊಡುತ್ತೇನೆ
ಸಿದ್ದರಾಮಯ್ಯನವರು ಯಾದಗಿರಿ ಕ್ಷೇತ್ರದಿಂದ ಸ್ಪರ್ಧಿಸಲು ಒಪ್ಪಿದರೆ ನನ್ನ ಆಸ್ತಿ ಮಾರಿಯಾದರೂ ಸಿದ್ದರಾಮಯ್ಯಗೆ ಗಿಫ್ಟ್ ನೀಡುತ್ತೇನೆ. ನನ್ನ 7 ಎಕರೆ ಜಮೀನನ್ನು ಮಾರಾಟ ಮಾಡಿ ಒಂದು ಕೋಟಿ ರೂ ನೀಡುತ್ತೇನೆ. ಸಿದ್ದರಾಮಯ್ಯ ಬೇರೆ ರಾಜಕಾರಣಿಗಳಂತೆ ಹಣ ಕೊಳ್ಳೆ ಹೊಡೆದಿಲ್ಲ. ಅವರ ಹತ್ತಿರ ಹಣವಿಲ್ಲ. ಹೀಗಾಗಿ ಅವರು ಯಾದಗಿರಿ ಕ್ಷೇತ್ರದಿಂದ ಕಣಕ್ಕಿಳಿದರೆ, ನಾನು ಅವರಿಗೆ ಚುನಾವಣೆಯ ಖರ್ಚಿಗಾಗಿ ಒಂದು ಕೋಟಿ ರೂ ಹಣ ನೀಡುತ್ತೇನೆ. ಅವರಿಂದಾದರು ಯಾದಗಿರಿ ಕ್ಷೇತ್ರ ಅಭಿವೃದ್ಧಿಯಾಗಲಿ ಎಂದು ಯಾದಗಿರಿಯಲ್ಲಿ ಚಂದ್ರಯ್ಯ ನಾಗರಾಳ ಹೇಳಿದ್ದಾರೆ.
ಇದನ್ನೂ ಓದಿ: Siddaramaiah: ಆಲಿಬಾಬಾ ಮತ್ತು 40 ಕಳ್ಳರ ಪೈಕಿ ಸಚಿವ ಸುಧಾಕರ್ ಕೂಡ ಒಬ್ಬ: ಸಿದ್ದರಾಮಯ್ಯ ಕಿಡಿ
ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತೇನೆ
ಮಾಜಿ ಸಿಎಂ ಸಿದ್ದರಾಮಯ್ಯನವರು ಯಾದಗಿರಿಯಿಂದ ಸ್ಪರ್ಧಿಸುವುದಾದರೆ ನಾನು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತೇನೆ. ಅಲ್ಲದೆ ಅವರನ್ನು 50-60 ಸಾವಿರ ಮತಗಳಿಂದ ಗೆಲ್ಲಿಸುತ್ತೇವೆ. ಈ ಕುರಿತು ಮಾತನಾಡಲು ನಾನು ಬೆಂಗಳೂರಿಗೆ ತೆರಳಿ ಸಿದ್ದರಾಮಯ್ಯರನ್ನು ಕೈಮುಗಿದು ಕೇಳಿಕೊಳ್ಳುತ್ತೇನೆ ಎಂದು ಚಂದಯ್ಯ ನಾಗರಾಳ ತಿಳಿಸಿದ್ದಾರೆ.
ಕೋಲಾರದಲ್ಲಿ ವಿರೋಧವಿದೆ
ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಘೋಷಿಸಿದ ನಂತರ ಅಲ್ಲಿ ಕುರುಬ ಸಮೂದಾಯದ ಕೆಲವರು ಹಾಗೂ ದಲಿತ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಅವರು ಯಾದಗಿರಿ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಅವರನ್ನು ಗೆಲ್ಲಿಸುವ ಕೆಲಸ ನಮ್ಮದು. ನಾನೇನು ದೊಡ್ಡ ಉದ್ಯಮಿ ಅಲ್ಲ, ನಾನೊಬ್ಬ ಅವರ ಅಭಿಮಾನಿ. ಅವರು ಇಲ್ಲಿಗೆ ಬಂದರೆ ಅಭಿವೃದ್ಧಿಯಾಗುತ್ತದೆ ಎನ್ನುವ ಆಸೆಯಿದೆ. ನಮ್ಮ ಭಾಗದ ಜನರು ಸಿದ್ದರಾಮಯ್ಯ ಋಣದಲ್ಲಿದ್ದಾರೆ. ಅವರು ಬಂದರೆ ನಮ್ಮ ಜಿಲ್ಲೆ ಅಭಿವೃದ್ಧಿಯಾಗಲಿದೆ ಎಂದು ತಿಳಿಸಿದರು.
ಶರಣಬಸಪ್ಪಗೌಡ ಸ್ಪರ್ಧಿಸಿದ್ದರೆ 25 ಲಕ್ಷ ಆಫರ್
ಒಂದು ವೇಳೆ ಸಿದ್ದರಾಮಯ್ಯ ಸ್ಪರ್ಧಿಸದಿದ್ದರೆ ಶಹಾಪುರ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಸ್ಪರ್ಧಿಸಬೇಕು. ಅವರು ಸ್ಪರ್ಧೆ ಮಾಡಿದ್ರೆ ನಾನು 25 ಲಕ್ಷ ರೂ. ಕೊಡುತ್ತೇನೆ. ಒಂದು ವೇಳೆ ಇವರಿಬ್ಬರು ಸ್ಪರ್ಧಿಸದಿದ್ದರೆ ಕಾಂಗ್ರೆಸ್ ಮುಖಂಡರಾದ ಎ.ಸಿ ಕಾಡ್ಲೂರ್, ಭೀಮಣ್ಣ ಮೇಟಿ ಹಾಗೂ ಶರಣಪ್ಪ ಸಲಾದಪುರ ಸ್ಪರ್ಧೆ ಮಾಡಲಿ. ಒಟ್ಟಿನಲ್ಲಿ ಅಹಿಂದ ನಾಯಕರಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು. ಅವರ ಪ್ರಚಾರಕ್ಕೆ ಸಿದ್ದರಾಮಯ್ಯ ಬರಬೇಕು ಎಂದು ಬಿಜೆಪಿ ಮುಖಂಡ ಚಂದ್ರಾಯ ನಾಗರಾಳ ಒತ್ತಾಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ