ಇವರೆಲ್ಲಾ ಮಾಡುತ್ತಿದ್ದದ್ದು ಹಾಲಿನ ವ್ಯಾಪಾರ (Milk Business). ಆದ್ರೆ ಒಳಗೆ ನಡೀತಾ ಇದ್ದಿದ್ದು ಮಾತ್ರ ಬೇರೆನೇ ಕೆಲಸ. ಹೌದು, ಹುಬ್ಬಳ್ಳಿಯಲ್ಲಿ ನಕಲಿ ನೋಟು (Fake Note) ಚಲಾವಣೆ ಗ್ಯಾಂಗ್ನ್ನು (Gang) ಪೊಲೀಸರು ಭೇದಿಸಿದ್ದಾರೆ. ಈ ಕೇಸ್ನಲ್ಲಿ ತಗ್ಲಾಕೊಂಡ ವ್ಯಕ್ತಿಯ ಹಿನ್ನೆಲೆ ಕೇಳಿದ್ರೆ ಇನ್ನೂ ಶಾಕ್ ಆಗ್ತೀರಾ. ಯಾಕೆಂದರೆ ಆತ ಸ್ಥಳೀಯ ಬಿಜೆಪಿ ಮುಖಂಡ (BJP Leader). ಹೊರಗೆ ಈತ ಸೇರಿ ಉಳಿದ ಆರೋಪಿಗಳು (Accused) ನಡೆಸ್ತಿದ್ದದ್ದು ಹಾಲಿನ ವ್ಯಾಪಾರ. ಆದರೆ ಒಳಗೊಳಗೆ ನಕಲಿ ನೋಟು ಚಲಾವಣೆ ಮಾಡ್ತಿದ್ದರು. ಈಗ ಸ್ಥಳೀಯ ಬಿಜೆಪಿ ಮುಖಂಡ ಸಾಗರ್ ಕಾಶಪ್ಪನವರ್ ಸೇರಿ ಮೂವರನ್ನು ಪೊಲೀಸರು (Police) ಬಂಧಿಸಿದ್ದಾರೆ. ಜೊತೆಗೆ ನಕಲಿ ನೋಟುಗಳನ್ನು ಕೂಡ ವಶಪಡಿಸಿಕೊಂಡಿದ್ದಾರೆ.
ಬಿಜೆಪಿ ಮುಖಂಡನ ನಕಲಿ ದಂಧೆ!
ನಕಲಿ ನೋಟು ಚಲಾವಣೆ ಜಾಲವನ್ನು ಭೇದಿಸುವಲ್ಲಿ ಧಾರವಾಡ ಪೊಲೀಸರು ಯಶಸ್ವಿಯಾಗಿದ್ದಾರೆ. ಬಿಜೆಪಿ ಮುಖಂಡ ಸಾಗರ್ ಕಾಶಪ್ಪನವರ್ ಸೇರಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಾಗರ್ ಕಾಶಪ್ಪನವರ್ ಬಿಜೆಪಿ ಸಾಮಾಜಿಕ ಜಾಲತಾಣ ಸದಸ್ಯನೂ ಆಗಿದ್ದ. ಈಗ ಎಲ್ಲರನ್ನೂ ಕುಂದಗೋಳ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ನಕಲಿ ನೋಟುಗಳ ವಶ
ಹೊರಗೆ ನೋಡೋದಕ್ಕೆ ಹಾಲಿನ ವ್ಯಾಪಾರ ಮಾಡ್ತಿದ್ದ ಸಾಗರ್ ಕಾಶಪ್ಪನವರ್ ಒಳಗೊಳಗೆ ನಕಲಿ ನೋಟು ಚಲಾವಣೆ ಮಾಡುತ್ತಿದ್ದ. ಧಾರವಾಡ ಜಿಲ್ಲೆ ಕುಂದಗೋಳ ಪಟ್ಟಣದಲ್ಲಿ ನಕಲಿ ನೋಟು ಜಾಲ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತರಿಂದ 500 ರೂಪಾಯಿ ಮುಖಬೆಲೆಯ 23,500 ರೂಪಾಯಿಯ 47 ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಸಾಯಿ ಲೇಔಟ್ ಜಲಾವೃತ,10 ಸಾವಿರ ಪರಿಹಾರ; ಜನರು ಕೆಂಡಾಮಂಡಲ
ಹಾಲಿನ ವ್ಯಾಪಾರದ ಜೊತೆ ಡೀಲ್!
ಈ ಆರೋಪಿಗಳು ಹಾಲು ಮಾರುವ ಸೋಗಿನಲ್ಲಿ ಖೋಟಾ ನೋಟು ಸರಬರಾಜು ಮಾಡುತ್ತಿದ್ದರು ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ಕುಂದಗೋಳ ಸಿಪಿಐ ಮಾರುತಿ ಗುಳಾರಿ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ಬಿಜೆಪಿ ಮುಖಂಡ ಸಾಗರ್ ಕಾಶಪ್ಪನವರ್ ಸೇರಿ ಮೂವರನ್ನು ಬಂಧಿಸಲಾಗಿದೆ.
ಕುಂದಗೋಳದಲ್ಲಿ ಹಾಲಿನ ಅಂಗಡಿ ಇಟ್ಟುಕೊಂಡಿದ್ದ ಸಾಗರ್, ಬೇರೆ ಕಡೆಯಿಂದ ಖೋಟಾ ನೋಟು ತಂದು ಕುಂದಗೋಳ ಸುತ್ತಮುತ್ತ ಚಲಾವಣೆ ಮಾಡ್ತಿದ್ದ. ಹಾಲಿನ ವ್ಯಾಪಾರದ ಜೊತೆ ಈ ದಂಧೆ ನಡೆಸುತ್ತಿದ್ದು, ಇದರ ಹಿಂದೆ ಮತ್ತಷ್ಟು ಜನರ ಕೈವಾಡ ಇರೋ ಶಂಕೆ ವ್ಯಕ್ತವಾಗಿದೆ.
ಮೂವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿರೋ ಪೊಲೀಸರು, ಮತ್ತೋರ್ವ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದಾರೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮಹಿಳಾ ಡಾಕ್ಟರ್, ಮಗಳು ನಿಗೂಢ ಸಾವು
ತಾರಿಹಾಳ ಬ್ಲಾಸ್ಟ್ ಕೇಸ್ನಲ್ಲಿ ಸಾವಿನ ಸಂಖ್ಯೆ 6ಕ್ಕೇರಿಕೆ
ಹುಬ್ಬಳ್ಳಿಯ ತಾರಿಹಾಳ ಕಾರ್ಖಾನೆ ಬ್ಲಾಸ್ಟ್ ಪ್ರಕರಣದಲ್ಲಿ ಮೃತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ತಾರಿಹಾಳ ಕೈಗಾರಿಕಾ ವಸಾಹತು ಪ್ರದೇಶದ ಕಾರ್ಖಾನೆಯಲ್ಲಿ ಜು.23ರಂದು ಅಗ್ನಿ ದುರಂತ ಸಂಭವಿಸಿತ್ತು. ತೀವ್ರ ಸುಟ್ಟು ಗಾಯಗೊಂಡಿದ್ದ ಮತ್ತೋರ್ವ ಮಹಿಳೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಮೃತರನ್ನು ಚನ್ನವ್ವ ಮಂಜುನಾಥ ಅರಿವಾಳ (42) ಎಂದು ಗುರುತಿಸಲಾಗಿದೆ.
ತಾರಿಹಾಳ ಗ್ರಾಮದ ಬ್ಲಾಸ್ಟ್ನಲ್ಲಿ 8 ಜನ ಕಾರ್ಮಿಕರು ಗಾಯಗೊಂಡಿದ್ದರು. ಎಂಟೂ ಜನರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಆರು ಜನ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದು, ಇನ್ನಿಬ್ಬರಿಗೆ ಕಿಮ್ಸ್ನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಕಾರ್ಖಾನೆಯ ಮಾಲೀಕ ಅಬ್ದುಲ್ ಖಾದಿರ್ ಶೇಖ್ ಮತ್ತು ವ್ಯವಸ್ಥಾಪಕ ಮಂಜುನಾಥನನ್ನು ಬಂಧಿಸಲಾಗಿದೆ. ಇನ್ನು ಇಬ್ಬರು ಪಾಲುದಾರರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಗ್ರಾಮೀಣ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ