ಮತ ಎಣಿಕೆಗೂ ಮುನ್ನ ನಡೆಯಿತು ಬಿಜೆಪಿ ಮುಖಂಡನ ಬರ್ಬರ ಹತ್ಯೆ


Updated:September 3, 2018, 2:42 PM IST
ಮತ ಎಣಿಕೆಗೂ ಮುನ್ನ ನಡೆಯಿತು ಬಿಜೆಪಿ ಮುಖಂಡನ ಬರ್ಬರ ಹತ್ಯೆ

Updated: September 3, 2018, 2:42 PM IST
ಶಿವರಾಮ ಅಸುಂಡಿ, ನ್ಯೂಸ್ 18 ಕನ್ನಡ

ಕಲಬುರ್ಗಿ(ಸೆ.03): ಮಾರಕಾಸ್ತ್ರಗಳಿಂದ ಕೊಚ್ಚಿ ಮಾಜಿ ತಾ ಪಂ‌ ಉಪಾಧ್ಯಕ್ಷ ಪುತ್ರನ ಬರ್ಬರ ಹತ್ಯೆ ಮಾಡಿದ ಘಟನೆ ಕಲಬುರ್ಗಿ ಜಿಲ್ಲೆ ಆಳಂದ ತಾಲೂಕಿನ ಜಿಡಗಾ ಕ್ರಾಸ್ ಬಳಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಬಿಜೆಪಿ ಮುಖಂಡ ರಾಹುಲ್ ಬೀಳಗಿ (25) ಎಂದು ಗುರುತಿಸಲಾಗಿದೆ. ಗೆಳೆಯರ ಜೊತೆಗೂಡಿ ಬೈಕ್ ಮೇಲೆ ಭೂಸನೂರು ಗ್ರಾಮದಿಂದ ಆಳಂದ ಪಟ್ಟಣಕ್ಕೆ ತೆರಳುತ್ತಿದ್ದಾಗ ದುಷ್ಕರ್ಮಿಗಳು ಏಕಾಏಕಿ ದಾಳಿ ಮಾಡಿ ಹತ್ಯೆಗೈದಿದ್ದಾರೆ. ಪುರಸಭೆ ಮತ ಎಣಿಕೆ ಕಾರ್ಯಕ್ಕೆ ಹೋಗಲೆಂದು ತೆರಳುತ್ತಿದ್ದಾಗ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಮತ ಎಣಿಕೆ ಕಾರ್ಯದ ಹಿನ್ನೆಲೆಯಲ್ಲಿ ಆಳಂದದಲ್ಲಿ ಯಾವುದೇ ಗೊಂದಲವಾಗಬಾರದೆಂದು ಯುವಕನ ಶವವನ್ನು ಪೊಲೀಸರು ಕಲಬುರ್ಗಿ ಜಿಲ್ಲಾ ಆಸ್ಪತ್ರೆಗೆ ತಂದರು. ಸ್ಥಳಕ್ಕೆ ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಮತ್ತು ಎಸ್.ಪಿ. ಶಶಿಕುಮಾರ್ ಭೇಟಿ ನೀಡಿದ್ದು, ದಲಿತ ಮುಖಂಡರು ಘಟನೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರ ಸ್ಥಳೀಯ ಸಂಸ್ಥೆ ಚುನಾವಣೆ ಮತ ಎಣಿಕೆಯ ಸಂದರ್ಭದಲ್ಲಿಯೇ ರಾಜಕೀಯ ದ್ವೇಷಕ್ಕೆ ಬಿಜೆಪಿ ಮುಖಂಡರ ಬರ್ಬರ ಹತ್ಯೆಯಾಗಿದೆ. ತಾಲೂಕು ಪಂಚಾಯ್ತಿ ಮಾಜಿ ಸದಸ್ಯನ ಪುತ್ರ ರಾಹುಲ್ ಬೀಳಗಿ ಎಂಬಾತನನ್ನು ಬರ್ಬರವಾಗಿ ಹತ್ಯೆಗೈಯಲಾಗಿದೆ. ಕಲಬುರ್ಗಿ ಜಿಲ್ಲೆ ಆಳಂದ ತಾಲೂಕಿನ ಜಿಡಗಾ ಕ್ರಾಸ್ ಬಳಿ ಘಟನೆ ನಡೆದಿದೆ. ಭೂಸನೂರು ಗ್ರಾಮದಿಂದ ಆಳಂದ ಪಟ್ಟಣಕ್ಕೆ ಬೈಕ್ ಮೇಲೆ ತೆರಳುತ್ತಿದ್ದ ಸಂದರ್ಭದಲ್ಲಿ ಬೊಲೆರೊ ವಾಹನದಲ್ಲಿ ಬಂದ ದುಷ್ಕರ್ಮಿಗಳು, ಬೈಕ್ ಗೆ ಢಿಕ್ಕಿ ಹೊಡೆದಿದ್ದಾರೆ. ನಂತರ ಕೆಳಗೆ ಬಿದ್ದಿದ್ದ ರಾಹುಲ್ ಮೇಲೆ ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ದೇಹದ ಮೇಲೆ ಮನಬಂದಂತೆ ಇರಿತು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ರಾಹುಲ್ ನನ್ನು ತಕ್ಷಣ ಆಳಂದ ಆಸ್ಪತ್ರೆಗೆ ಕರೆತಂದರು ಯಾವುದೇ ಪ್ರಯೋಜನವಾಗಿಲ್ಲ.

ಕೊಲೆಯಾದ ರಾಹುಲ್, ಆಳಂದ ತಾ ಪಂ ಮಾಜಿ ಉಪಾಧ್ಯಕ್ಷ ಲಕ್ಷ್ಮಣ್ ಬಿಳಗಿ ಪುತ್ರನಾಗಿದ್ದು, ಆಳಂದ ಶಾಸಕ ಸುಭಾಷ್ ಗುತ್ತೇದಾರ ಕಟ್ಟಾ ಬೆಂಬಲಿಗನಾಗಿದ್ದ. ಆಳಂದ ಪುರಸಭೆಯಲ್ಲಿ ತನ್ನ ಸಹೋದರ ಸ್ಪರ್ಧಿಸಿದ್ದರಿಂದಾಗಿ, ಮತ ಎಣಿಕೆಗಾಗಿ ಆಳಂದ ಕಡೆ ಬೈಕ್ ಮೇಲೆ ಬರುತ್ತಿದ್ದ. ಈ ವೇಳೆ ದುಷ್ಕರ್ಮಿಗಳ ದಾಳಿಗೆ ಬಲಿಯಾಗಿದ್ದಾನೆ. ಕಾಂಗ್ರೆಸ್ ಮುಖಂಡ ಬಾಬಾಗೌಡ ಪಾಟೀಲ ಮತ್ತವರ ಬೆಂಬಲಿಗರ ಹತ್ಯೆ ಮಾಡಿದ್ದಾರೆ ಎಂದು ರಾಹುಲ್ ತಂದೆ ಲಕ್ಷ್ಮಣ ಆರೋಪಿಸಿದ್ದಾನೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಕಲಬುರ್ಗಿ ಎಸ್.ಪಿ. ಎನ್.ಶಶಿಕುಮಾರ್ ಘಟನಾ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದರು. ಮರಣೋತ್ತರ ಪರೀಕ್ಷೆಗಾಗಿ ರಾಹುಲ್ ಶವವನ್ನು ಕಲಬುರ್ಗಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ವೇಳೆ ಶವಾಗಾರದ ಬಳಿ ಆಗಮಿಸಿದ ದಲಿತ ಸಂಘಟನೆಗಳ ಮುಖಂಡರು, ಜಿಲ್ಲಾಧಿಕಾರಿಗಳನ್ನು ಸ್ಥಳಕ್ಕೆ ಭೇಟಿ ನೀಡುವಂತೆ ಆಗ್ರಹಿಸಿದರು. ಸಂಘಟನೆಗಳ ಒತ್ತಡಕ್ಕೆ ಮಣಿದ ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಮತ್ತು ಎಸ್.ಪಿ. ಶಶಿಕುಮಾರ್ ಶವಾಗಾರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಎಸ್.ಪಿ. ಎನ್.ಶಶಿಕುಮಾರ್, ಕೊಲೆ ಮತ್ತು ಅಟ್ರಾಸಿಟಿ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಕಲಬುರ್ಗಿ ಎಸ್.ಪಿ. ಎನ್.ಶಶಿಕುಮಾರ್ ತಿಳಿಸಿದರು.

ಜಿಲ್ಲೆಯಲ್ಲಿ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿದ್ದರೂ ಜಿಲ್ಲಾಧಿಕಾರಿ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿಯೇ ರಾಜಕೀಯ ದ್ವೇಷಕ್ಕಾಗಿ ದಲಿತ ಮುಖಂಡನ ಹತ್ಯೆಯಾಗಿದೆ ಎಂದು ಈ ವೇಳೆ ದಲಿತ ಸಂಘಟನೆಗಳ ಮುಖಂಡರು ಆರೋಪಿಸಿದರು. ಕೂಡಲೇ ರಾಹುಲ್ ಕುಟುಂಬಕ್ಕೆ 8.50 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ರಾಹುಲ್ ಕುಟುಂಬದ ಸದಸ್ಯನೋರ್ವನಿಗೆ ಸರ್ಕಾರಿ ನೌಕರಿ ನೀಡಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ದಲಿತ ಸೈನ್ಯ ಸಂಘಟನೆ ರಾಜ್ಯಾಧ್ಯಕ್ಷ ಹನುಮಂತ ಯಳಸಂಗಿ ಆಗ್ರಹಿಸಿದ್ದಾರೆ.

ಮತ ಎಣಿಕೆಗೆ ಮುಂಚಿತನವಾಗಿ ನಡೆದ ಬಿಜೆಪಿ ಮುಖಂಡನ ಬರ್ಬರ ಹತ್ತ್ಯೆ ಜಿಲ್ಲೆಯಲ್ಲಿ ಒಂದಷ್ಟು ಆತಂಕ ಸೃಷ್ಟಿಸಿತ್ತು. ಮತ ಎಣಿಕೆಯ ಮೇಲೆ ಪರಿಣಾಮ ಬೀರಬಾರದೆಂದು, ಯಾವುದೇ ಗದ್ದಲವಾಗಬಾರದೆಂದು ರಾಹುಲ್ ಶವವನ್ನು ಕಲಬುರ್ಗಿಗೆ ತರುವ ಮೂಲಕ ಪೊಲೀಸರು ಮುನ್ನೆಚ್ಚರಿಕೆ ವಹಿಸಿದರು. ಅಲ್ಲದೆ ಆಳಂದ ಮತ ಎಣಿಕೆಯ ಕೇಂದ್ರದ ಬಳಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಈ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಳ್ಳಲಾಗಿದೆ.
First published:September 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ