ಶಿವಮೊಗ್ಗ: ಬಿಜೆಪಿಯಲ್ಲಿ (BJP) ಕುಟುಂಬ ರಾಜಕಾರಣ (Family Politics) ಇಲ್ಲವೇ ಇಲ್ಲ. ಪಕ್ಷದ ಕಾರ್ಯಕರ್ತರಾಗಿ ದುಡಿದವರಿಗೆ ಪಕ್ಷ ಟಿಕೆಟ್ ನೀಡಿದೆ. ಅದರಲ್ಲಿ ಕೆಲವರು ಕೆಲವರು ಮಗ ಸೊಸೆ ಆಗಿರಬಹುದು. ಆದರೆ ಒಂದು ಕುಟುಂಬಕ್ಕೆ ಒಬ್ಬರಿಗೆ ಮಾತ್ರ ಟಿಕೆಟ್ ನೀಡಲಾಗಿದೆ ಎಂದು ಬಿಜೆಪಿ ರಾಜ್ಯ ಸಹ ಉಸ್ತುವಾರಿ ಅಣ್ಣಾಮಲೈ (K Annamalai) ಹೇಳಿದರು.
ಪಕ್ಷದ ಅಭ್ಯರ್ಥಿಗಳ ಪ್ರಚಾರಕ್ಕಾಗಿ ತೀರ್ಥಹಳ್ಳಿಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ, ಬಿಜೆಪಿಯಲ್ಲಿ ರಿಜೆಕ್ಷನ್ ಮತ್ತು ಸೆಲೆಕ್ಷನ್ ಇಲ್ಲವೇ ಇಲ್ಲ. ಸುಳ್ಯದಲ್ಲಿ ಬಡ ಕುಟುಂಬದ ಭಾಗೀರಥಿಯವರಿಗೆ ಟಿಕೆಟ್ ನೀಡಲಾಗಿದೆ. ಯಾವುದೇ ಪಕ್ಷದಲ್ಲಿ ಇಂತಹ ಬಡ ಅಭ್ಯರ್ಥಿಗಳನ್ನು ಗುರುತಿಸುವುದಿಲ್ಲ. ಬಿಜೆಪಿ ಪಕ್ಷ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸುತ್ತದೆ. ಪಕ್ಷದಲ್ಲಿ ಸಂಘಟನೆ ಮಾಡಿದ ಹಿರಿಯ ನಾಯಕರನ್ನು ಗುರುತಿಸುತ್ತದೆ ಎಂದು ಹೇಳಿದರು.
ಇದನ್ನೂ ಓದಿ: Bhagirathi Murulya: ಹಾಲಿ ಸಚಿವ ಅಂಗಾರ ಜಾಗಕ್ಕೆ ಹೊಸ ಮುಖ ಎಂಟ್ರಿ! ಯಾರಿದು ಸುಳ್ಯ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ?
ರಾಜಕೀಯ ಕಲಿಯುತ್ತಿದ್ದೇನೆ
ಇನ್ನು, ನಾವೆಲ್ಲ ಸಾಮಾನ್ಯ ಕಾರ್ಯಕರ್ತರಂತೆ ಪಕ್ಷದ ಕೆಲಸ ಮಾಡುತ್ತಿದ್ದೇವೆ ಎಂದ ಅಣ್ಣಾಮಲೈ, ಬೆಳಗ್ಗೆ ಸುಳ್ಯದಲ್ಲಿ ಸದಾನಂದ ಗೌಡರ ಜೊತೆ ಸಮಾವೇಶದಲ್ಲಿ ಪಾಲ್ಗೊಂಡಿದ್ದೆ. ಜಗದೀಶ್ ಶೆಟ್ಟರ್ ಅವರು ಪಕ್ಷದ ಹಿರಿಯರು, ಅವರು ಪಕ್ಷ ಕಟ್ಟಿದ್ದಾರೆ. ಯಾವುದೋ ಒತ್ತಡದಲ್ಲಿ ಏನೋ ಹೇಳಿರಬಹುದು. ನಾವಿಂದು ಬಂದಿರುವುದು ಸಾಮಾನ್ಯ ಕಾರ್ಯಕರ್ತರ ಕೆಲಸ ಮಾಡಲು. ನಾನು ಶೆಟ್ಟರ್, ಬಿಎಸ್‌ವೈ, ಸದಾನಂದ ಗೌಡ, ಸಿಎಂ ಬೊಮ್ಮಾಯಿ ಮೊದಲಾದ ಹಿರಿಯ ರಾಜಕಾರಣಿಗಳಿಂದ ರಾಜಕೀಯ ಪಾಠ ಕಲಿಯುತ್ತಿದ್ದೇನೆ ಎಂದು ಹೇಳಿದರು.
ಜಗದೀಶ್ ಶೆಟ್ಟರ್ ಬಗ್ಗೆ ಬಹಳ ಗೌರವ ಹೊಂದಿದ್ದೇನೆ ಎಂದ ಅಣ್ಣಾ ಮಲೈ, ನಾನು ಪೊಲೀಸ್ ಇಲಾಖೆಯಲ್ಲಿ ಇದ್ದಾಗಲೂ ಕೂಡ ಶೆಟ್ಟರ್ ನನಗೆ ಪರಿಚಿತರು. ಅವರು ಯಾವುದೋ ಒಂದು ನಿರ್ಧಾರ ತೆಗೆದುಕೊಂಡಿದ್ದಾರೆ, ಅದರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ. ಶೆಟ್ಟರ್, ಸವದಿ ಮೊದಲಾದವರು ಕಾಂಗ್ರೆಸ್ ಸೇರ್ಪಡೆಯಾಗಿದ್ದರಿಂದ ಬಿಜೆಪಿಗೆ ಯಾವುದೇ ಹಿನ್ನಡೆಯಾಗಿಲ್ಲ. ಎಲ್ಲರಿಗೂ ಕೂಡ ಸೂಕ್ತ ಸ್ಥಾನಮಾನ ನೀಡುವ ಭರವಸೆಯನ್ನು ಪಕ್ಷ ನೀಡಿತ್ತು, ಆದರೂ ಪಕ್ಷ ಬಿಟ್ಟು ಹೋದರು ಎಂದು ಹೇಳಿದರು.
ಇದನ್ನೂ ಓದಿ: Dr K Annadani: ಗೆದ್ದೇ ಗೆಲ್ಲುವ ಛಲದಲ್ಲಿರುವ ಮಳವಳ್ಳಿ ಶಾಸಕ ಡಾ ಕೆ ಅನ್ನದಾನಿಯವರ ಬಗ್ಗೆ ನಿಮಗೆಷ್ಟು ಗೊತ್ತು?
ಪಕ್ಷ ಯಾರನ್ನೂ ತಿರಸ್ಕಾರ ಮಾಡಿಲ್ಲ
ಇನ್ನು, ಪ್ರಜಾಪ್ರಭುತ್ವದಲ್ಲಿ ಕೇವಲ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಮಾತ್ರ ಅಲ್ಲ ಎಂದ ಅಣ್ಣಾ ಮಲೈ, ರಾಜ್ಯಸಭೆ, ಎಂಎಲ್ಸಿ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಹಲವು ಸ್ಥಾನಮಾನಗಳು ಇದೆ. ಪಕ್ಷ ಯಾರನ್ನೂ ತಿರಸ್ಕಾರ ಮಾಡಿಲ್ಲ. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ದಾರಿಯನ್ನು ನೀಡಿತ್ತು. ಆರಗ ಜ್ಞಾನೇಂದ್ರ ತೀರ್ಥಹಳ್ಳಿ ಕ್ಷೇತ್ರದಲ್ಲಿ ಹತ್ತನೇ ಬಾರಿ ಸ್ಪರ್ಧೆ ಮಾಡುತ್ತಿದ್ದಾರೆ. ಇದು ಕೂಡ ಪಕ್ಷ ಮಾಡಿದ ನಿರ್ಧಾರ. ಶಿವಮೊಗ್ಗ ಮತ್ತು ಮಾನ್ವಿ ಕ್ಷೇತ್ರದ ಅಭ್ಯರ್ಥಿಗಳ ಬಗ್ಗೆ ಪಕ್ಷದ ಹಿರಿಯ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಇದೇ ವೇಳೆ, ಬಿಜೆಪಿ ಈ ಬಾರಿ ರಾಜ್ಯದಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದ ಅಣ್ಣಾಮಲೈ, ಬಿಜೆಪಿ 130 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರ ಪಡೆಯಲಿದೆ. ಕಿಚಡಿ ಸರ್ಕಾರ ಬೇಡ ಎಂದು ರಾಜ್ಯದ ಜನತೆ ತೀರ್ಮಾನಿಸಿದ್ದಾರೆ. ಶಿವಮೊಗ್ಗ ಕ್ಷೇತ್ರ ಈಶ್ವರಪ್ಪನವರಂತ ನಾಯಕರು ಇರುವ ಕ್ಷೇತ್ರ. ಅಲ್ಲಿ ಒಳ್ಳೆಯ ಅಭ್ಯರ್ಥಿಯನ್ನು ಬಿಜೆಪಿ ನೀಡಲಿದೆ. ಬಿಜೆಪಿ ಪಕ್ಷದಲ್ಲಿ ಎಲ್ಲರೂ ಕೂಡ ಸಾಮಾನ್ಯ ಕಾರ್ಯಕರ್ತರಂತೆ ಕೆಲಸ ಮಾಡಬೇಕಾಗಿದೆ. ನಾನು ಕೂಡ ಸಾಮಾನ್ಯ ಸಣ್ಣ ಕಾರ್ಯಕರ್ತನಂತೆ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ