ಚಿಕ್ಕಮಗಳೂರು(ಜ.03): 20 ವರ್ಷಗಳಿಂದ ಕಾಫಿನಾಡಲ್ಲಿ ಎದುರಾಳಿಯೇ ಇಲ್ಲದೆ ಇರೋ ಶಾಸಕ ಸಿ. ಟಿ. ರವಿಗೆ (CT Ravi) ಮೊದಲ ಬಾರಿ ಎದುರಾಳಿ ಹುಟ್ಟಿಕೊಂಡಿದ್ದಾರೆ. 15 ವರ್ಷದಿಂದ ಬಾವುಟ ಕಟ್ಟಿದ್ದೇನೆ, ಪಕ್ಷ ಕಟ್ಟಿದ್ದೇನೆ. ನಗರಸಭೆ ಅಧ್ಯಕ್ಷನಾಗಿ ನಾಲ್ಕು ಬಾರಿ ಸದಸ್ಯನಾಗಿದ್ದೇನೆ. ನಮಗೂ ಒಂದು ಅವಕಾಶ ನೀಡಿ ಎಂದು ಜಿಲ್ಲಾಧ್ಯಕ್ಷರಿಗೆ ಬಿಜೆಪಿ ಮುಖಂಡರೊಬ್ಬರು (BJP Leader) ಮನವಿ ಮಾಡಿದ್ದಾರೆ.
ಚಿಕ್ಕಮಗಳೂರಲ್ಲಿ ಬಿಜೆಪಿ ಅಂದ್ರೆ ಸಿ. ಟಿ. ರವಿ. ಸಿ. ಟಿ. ರವಿ ಅಂದ್ರೆ ಬಿಜೆಪಿ ಎಂಬಂತಿತ್ತು. ಆದ್ರೆ, ಈ ಬಾರಿ ಶಿಸ್ತಿನ ಪಕ್ಷದಲ್ಲಿ ಎಲ್ಲವೂ ಸರಿ ಇಲ್ವಾ ಎಂಬ ಪ್ರಶ್ನೆ ಮೂಡಿದೆ. ಇನ್ನು ಟಿಕೆಟ್ ಕೇಳ್ತಿರೋದು ಬೇರಾರೂ ಅಲ್ಲ, ಬಿಜೆಪಿ ಮುಖಂಡ ತಮ್ಮಯ್ಯ. ಲಿಂಗಾಯುತ ಸಮುದಾಯದ ಮುಖಂಡ. 15 ಸಾವಿರ ಮತವಿರುವ ಒಕ್ಕಲಿಗ ಸಮುದಾಯದ ಸಿ.ಟಿ.ರವಿಯೇ ನಾಲ್ಕು ಬಾರಿ ಶಾಸಕರಾದ್ರೆ, 40 ಸಾವಿರಕ್ಕೂ ಹೆಚ್ಚು ಮತವಿರುವ ಲಿಂಗಾಯಿತ ಸಮುದಾಯ ವ್ಯಕ್ತಿ ಏಕೆ ಶಾಸಕರಾಗಬಾರದು ಎಂಬ ಕಾರಣಕ್ಕೋ ಏನೋ ಗೊತ್ತಿಲ್ಲ. ಆದ್ರೆ, 15 ವರ್ಷಗಳಿಂದ ಸಿ.ಟಿ.ರವಿಯ ಜೊತೆಗೇ ಇರುವ ಹೆಚ್. ಡಿ. ತಮ್ಮಯ್ಯ ಈ ಬಾರಿ ನಾನೂ ಟಿಕೆಟ್ ಆಕಾಂಕ್ಷಿ, ನನಗೇ ಟಿಕೆಟ್ ನೀಡಬೇಕೆಂದು ಜಿಲ್ಲಾಧ್ಯಕ್ಷರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Mahadayi: ಬಿಜೆಪಿಯಲ್ಲಿ ಮತ್ತೆ ಭಿನ್ನಮತ? ಶೆಟ್ಟರ್, ಜೋಶಿ ಮುಸುಕಿನ ಗುದ್ದಾಟ?
ಸೋಮವಾರ ಲಿಂಗಾಯುತ ಸಮುದಾಯದ ಮುಖಂಡರು, ನೂರಾರು ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಜೊತೆ ಬಿಜೆಪಿ ಕಚೇರಿ ಪಾಂಚಜನ್ಯಕ್ಕೆ ಬಂದ ಹೆಚ್. ಡಿ. ತಮ್ಮಯ್ಯ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪನನ್ನ ಭೇಟಿಯಾಗಿ ಮನವಿ ಮಾಡಿದ್ದಾರೆ. ನಾನು 15 ವರ್ಷದಿಂದ ಪಕ್ಷ ಕಟ್ಟಿ ಬೆಳೆಸಿದ್ದೇನೆ, ವಿವಿಧ ಹುದ್ದೆ ನಿಭಾಯಿಸಿದ್ದೇನೆ. ಈ ಬಾರಿ ನನಗೆ ಟಿಕೆಟ್ ನೀಡಬೇಕೆಂದು ಮನವಿ ಮಾಡಿದ್ದಾರೆ. ಈ ವೇಳೆ, ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ತಮ್ಮಯ್ಯನನ್ನ ಹೊತ್ತುಕೊಂಡು ಕುಣಿದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ, ನಮ್ಮಲ್ಲಿ ಅರ್ಜಿ ತೆಗೆದುಕೊಳ್ಳುವ ವ್ಯವಸ್ಥೆ ಇಲ್ಲ. ಜಿಲ್ಲಾ ಕೋರ್ ಕಮಿಟಿ ಹಾಗೂ ರಾಜ್ಯ ತಂಡ ಚರ್ಚೆ ಮಾಡುತ್ತೆ. ಅಂತಿಮವಾಗಿ ಟಿಕೆಟ್ ಫೈನಲ್ ಮಾಡೋದು ಪಾರ್ಲಿಮೆಂಟರಿ ಬೋರ್ಡ್. ಆದರೆ, ನಾನು ಆಕಾಂಕ್ಷಿ, ನನ್ನನ್ನ ಬಿಟ್ಟು ಬೇರೆ ಯಾರಿಗೆ ಟಿಕೆಟ್ ನೀಡಿದರೂ ನಾನು ಕೆಲಸ ಮಾಡುವುದಾಗಿ ಹೇಳಿದ್ದಾರೆ. ಮನುಷ್ಯನ ಮನಸ್ಸು ನಿರಂತರವಾಗಿ ಹರಿಯುವ ನೀರು. ಅವರ ಅಪೇಕ್ಷೆಯೂ ತಪ್ಪಲ್ಲ. ಬಿಜೆಪಿಯಲ್ಲಿ ಆಂತರಿಕ ಬೇಗುದಿ ಅನ್ನೋದಿಲ್ಲ. ಫೈನಲ್ ಪಾರ್ಲಿಮೆಂಟರಿ ಬೋರ್ಡ್ ತೀರ್ಮಾನ ಮಾಡುತ್ತೆ ಎಂದಿದ್ದಾರೆ.
ಒಟ್ಟಾರೆ, ಚಿಕ್ಕಮಗಳೂರಲ್ಲಿ 20 ವರ್ಷದಿಂದ ನಾಲ್ಕು ಬಾರಿ ಗೆದ್ದು ಐದನೇ ಬಾರಿಗೆ ಸಿಎಂ ಆಕಾಂಕ್ಷಿಯಾಗಿ ಚುನಾವಣೆ ಎದುರಿಸಲು ಸನ್ನದ್ಧರಾಗಿರೋ ಸಿ. ಟಿ. ರವಿಗೆ ಈಗ ಎದುರಾಳಿ ಹುಟ್ಟಿಕೊಂಡಿರೋದು ಬಿಜೆಪಿ ವಲಯದಲ್ಲಿ ತೀವ್ರ ಸಂಚಲನದ ಜೊತೆ ಆತಂಕ ಕೂಡ ಮೂಡಿಸಿದೆ. ಅದರಲ್ಲೂ ಪ್ರಬಲ ಸಮುದಾಯ ವ್ಯಕ್ತಿಯೇ ಟಿಕೆಟ್ ಕೇಳ್ತಿರೋದು ಮತ್ತೊಂದಿಷ್ಟು ಚರ್ಚೆಗೂ ಗ್ರಾಸವಾಗಿದೆ. ಆದರೆ, ಸಿ. ಟಿ. ರವಿ ಬಿಟ್ಟು ಬೇರ್ಯಾರಿಗೆ ಟಿಕೆಟ್ ನೀಡಿದರೂ ಕಷ್ಟ ಎಂಬ ಮಾತುಗಳು ಇವೆ. ಫೈನಲಿ ಪಾರ್ಲಿಮೆಂಟರ್ ಬೋರ್ಡ್ ಏನು ತೀರ್ಮಾನ ಮಾಡುತ್ತೋ ಕಾದು ನೋಡ್ಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ